ಶನಿವಾರ, ಜೂಲೈ 4, 2020
22 °C

ರೈತರ ಮೇಲೆ ಲಾಠಿ: ಕೊಪ್ಪಳ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಮೇಲೆ ಲಾಠಿ: ಕೊಪ್ಪಳ ಬಂದ್

ಕೊಪ್ಪಳ:ಉದ್ಯೋಗ ಖಾತರಿ ಯೋಜನೆಯ ಕೂಲಿ ಹಣ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಘಟನೆಯನ್ನು ಖಂಡಿಸಿ ಬುಧವಾರ ಕರೆ ನೀಡಲಾಗಿದ್ದ ಕೊಪ್ಪಳ ಬಂದ್ ಶಾಂತಯುತವಾಗಿತ್ತು.ಉದ್ಯೋಗ ಖಾತರಿ ಭ್ರಷ್ಟಾಚಾರ ವಿರೋಧಿ ಒಕ್ಕೂಟ ಬಂದ್ ಕರೆ ನೀಡಿತ್ತು. ಬಹುತೇಕ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ತೆರೆಯದೇ ಇರುವ ಮೂಲಕ ಬಂದ್‌ಗೆ ಬೆಂಬಲ ನೀಡಿದರು. ಒಕ್ಕೂಟದ ಪದಾಧಿಕಾರಿಗಳು ಮೊದಲೇ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಅಲ್ಲದೆ ದ್ವಿತೀಯ ಪಿ.ಯು.ಸಿ ಪರೀಕ್ಷೆ ಸಹ ಅಬಾಧಿತವಾಗಿತ್ತು.ಬೆಳಿಗ್ಗೆಯಿಂದಲೇ ಕೇಂದ್ರೀಯ ಬಸ್ ನಿಲ್ದಾಣ, ಜವಾಹರ್ ರಸ್ತೆ ಹಾಗೂ ಗಡಿಯಾರ ಕಂಬದಿಂದ ಗವಿಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಅಂಗಡಿಗಳು ಮುಚ್ಚಿದ್ದವು. ಆದರೆ, ಸಾಲಾರ್‌ಜಂಗ್ ರಸ್ತೆಯಲ್ಲಿನ ಅಂಗಡಿಗಳು ವ್ಯಾಪಾರದಲ್ಲಿ ನಿರತವಾಗಿದ್ದುದು ಕಂಡು ಬಂದಿತು. ಆಸ್ಪತ್ರೆ ಮತ್ತು ಔಷಧ ಅಂಗಡಿಗಳನ್ನು ಹೊರತುಪಡಿಸಿ ಚಿತ್ರಮಂದಿರ, ಖಾಸಗಿ ಕಚೇರಿಗಳು ಸಂಪೂರ್ಣ ಬಂದಾಗಿದ್ದವು.ರಾಜ್ಯ ಹಾಗೂ ಕೇಂದ್ರದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.ಮುಂಜಾಗ್ರತಾ ಕ್ರಮವಾಗಿ ನೆರೆಯ ರಾಯಚೂರು ಜಿಲ್ಲೆಯಿಂದ ಪೊಲೀಸ್ ಪಡೆಯನ್ನು ಕರೆಸಲಾಗಿತ್ತು. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಕೆ.ಎಸ್.ಆರ್.ಪಿ.ಯ ತುಕಡಿ ಸಹ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿತ್ತು.ನಗರದ ತಹಸೀಲ ಕಚೇರಿಯಿಂದ ಆರಂಭವಾದ ಮೆರವಣಿಗೆ ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತ, ಗವಿಮಠದ ಮೂಲಕ ಬಸವೇಶ್ವರ ವೃತ್ತ ತಲುಪಿ ಬಹಿರಂಗ ಸಭೆಯಾಗಿ ಪರಿವರ್ತನೆಗೊಂಡಿತು. ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.