ಭಾನುವಾರ, ಜನವರಿ 19, 2020
25 °C

ಲಕ್ಷ್ಮಣರೇಖೆಯಲ್ಲಿ ಅನಿಶಾ!

–ಅಮಿತ್‌ ಎಂ.ಎಸ್‌. Updated:

ಅಕ್ಷರ ಗಾತ್ರ : | |

ಆಗಾಗ್ಗೆ ಒಂದಷ್ಟು ಸಿನಿಮಾಗಳನ್ನು ನೋಡುತ್ತಿದ್ದದ್ದು ಬಿಟ್ಟರೆ ಚಿತ್ರರಂಗದ ಕುರಿತು ಅಲ್ಪಮಟ್ಟದ ಜ್ಞಾನವೂ ಇರಲಿಲ್ಲ ಈ ಚೆಲುವೆಗೆ. ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನದೇ ಲೋಕದಲ್ಲಿ ಮುಳುಗಿರುತ್ತಿದ್ದ ಈಕೆಗೆ ನಟಿಯಾಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಅಚಾನಕ್ಕಾಗಿ ಬಂದ ಅವಕಾಶ, ನೋಡೋಣ ಎಂದು ಕ್ಯಾಮೆರಾ ಎದುರಿಸಿದರು.ನಟಿಸಬಲ್ಲೆ ಎಂಬ ಭರವಸೆ ಮೂಡಿತು. ಈಗ ಅವರ ವೃತ್ತಿ ಬದಲಾಗಿದೆ. ಕೈತುಂಬಾ ಸಂಬಳ ನೀಡುತ್ತಿದ್ದ ಉದ್ಯೋಗಕ್ಕೆ ಬೆನ್ನುಮಾಡಿ ಕ್ಯಾಮೆರಾಕ್ಕೆ ಮುಖಮಾಡಿರುವ ಈಕೆ ನೆರೆಯ ತೆಲುಗು ನಾಡಿನಿಂದ ಕರುನಾಡಿನ ನೆಲಕ್ಕೆ ಕಾಲಿರಿಸಿದ್ದಾರೆ.‘ಎರಡು’ ಎಂಬ ಪದಕ್ಕೂ ಅವರಿಗೂ ಈಗ ವಿಶೇಷ ಸಂಬಂಧ. ಇದು ಅವರ ಎರಡನೇ ಚಿತ್ರ. ಎರಡನೇ ಭಾಷೆಯ ಸಿನಿಮಾ. ಚಿತ್ರದಲ್ಲಿ ‘ಎರಡನೇ ಪ್ರೇಯಸಿ’!ರಾಘವ ಮರಸೂರ್ ನಿರ್ದೇಶನದ ‘ಎ ಸೆಕೆಂಡ್‌ ಹ್ಯಾಂಡ್‌ ಲವರ್’ ಚಿತ್ರ ವಿಶಾಖಪಟ್ಟಣದ ಬೆಡಗಿ ಅನಿಶಾ ಆ್ಯಂಬ್ರೋಸ್‌ಗೆ ಕನ್ನಡ ಚಿತ್ರರಂಗದ ಪರಿಚಯ ಮಾಡಿಸಿದೆ. ತೆಲುಗಿನಲ್ಲಿ ‘ಅಲೈಸ್‌ ಜಾನಕಿ’ ಎಂಬ ಚಿತ್ರದಲ್ಲಿ ನಟಿಸಿ ಗುರ್ತಿಸಿಕೊಂಡ ಅನಿಶಾ ಮತ್ತೊಂದು ಒಳ್ಳೆಯ ಕಥೆಗಾಗಿ ಕಾದಿದ್ದರು. ‘ಎ ಸೆಕೆಂಡ್‌ ಹ್ಯಾಂಡ್‌ ಲವರ್‌’ ಅವರು ಬಯಸುತ್ತಿದ್ದ ಕಥೆಯ ಜೊತೆಗೆ ಮತ್ತೊಂದು ಭಾಷೆಯಲ್ಲಿ ಹೆಸರು ಮಾಡುವ ಅವಕಾಶವನ್ನೂ ಕಲ್ಪಿಸಿದೆ.ಕನ್ನಡ ಭಾಷೆ, ಚಿತ್ರರಂಗ ಎಲ್ಲವೂ ಹೊಸತು ಎನ್ನುವ ಅವರಿಗೆ, ತೆಲುಗಿನಲ್ಲಿಯೂ ಇಂಥದ್ದೇ ಅನುಭವ ಆಗಿದೆ. ಆಂಧ್ರಪ್ರದೇಶದಲ್ಲಿ ಹುಟ್ಟಿ, ಬೆಳೆದು ಅಲ್ಲಿಯೇ ಉದ್ಯೋಗಿಯಾಗಿದ್ದರೂ ಅನಿಶಾರಿಗೆ ತೆಲುಗು ಭಾಷೆಯ ಮೇಲಿನ ಹಿಡಿತ ಅಷ್ಟಕಷ್ಟೇ.

ಮನೆಭಾಷೆ ಹಿಂದಿ. ತಂದೆ ವಿಶಾಖಪಟ್ಟಣದವರಾದರೆ, ತಾಯಿ ರಾಜಸ್ತಾನದವರು. ಇಬ್ಬರದೂ ಪ್ರೇಮವಿವಾಹ. ತಂದೆ ತಾಯಿ ಇಬ್ಬರೂ ಕೂಡಿ ದೇಶದ ಹಲವೆಡೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅನಿಶಾ 12ನೇ ತರಗತಿಯವರೆಗೆ ಓದಿದ್ದು ಒಡಿಶಾದಲ್ಲಿ. ಅಲ್ಲಿಂದ ವಿಶಾಖಪಟ್ಟಣಕ್ಕೆ ಹಿಂದಿರುಗಿದವರು ಗಳಿಸಿದ್ದು ಎಂಬಿಎ ಪದವಿ. ಐಟಿ ಕಂಪೆನಿಯ ಉದ್ಯೋಗದ ಗುರಿಯನ್ನು ಡೆಲ್‌ ಕಂಪೆನಿ ಸೇರುವ ಮೂಲಕ ಈಡೇರಿಸಿಕೊಂಡರು. ನಟಿಯಾಗಬೇಕೆಂಬ ಆಸೆ ಅವರಲ್ಲಿ ಒಮ್ಮೆಯೂ ಮೂಡಿರಲಿಲ್ಲ.ಆದರೆ ತೆಲುಗಿನಲ್ಲಿ ‘ಅಲೈಸ್‌ ಜಾನಕಿ’ ಚಿತ್ರದ ಅವಕಾಶ ಬಂದಾಗ ಯಾಕೆ ಪ್ರಯತ್ನಿಸಬಾರದು ಎನಿಸಿತು. ಕಟ್ಟುನಿಟ್ಟಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಅದಕ್ಕೆ ಒಪ್ಪಿಗೆ ಸಿಗುವುದು ಅನುಮಾನವಿತ್ತು. ಆದರೆ ಅಚ್ಚರಿಯೆಂಬಂತೆ ತಂದೆ ಮರುಮಾತನಾಡದೆ ಒಪ್ಪಿಗೆ ಸೂಚಿಸಿದರು. ಉದ್ಯೋಗಕ್ಕೆ ಗುಡ್‌ಬೈ ಹೇಳಿ ಬಣ್ಣಹಚ್ಚಿದರು.ಅಭಿನಯಕ್ಕೆಂದು ಯಾವ ತರಬೇತಿಯನ್ನು ಪಡೆಯದೆಯೇ ಕ್ಯಾಮೆರಾ ಮುಂದೆ ನಿಂತ ಅವರಿಗೆ ನಟನೆ ಕಷ್ಟ ಎನಿಸಿಲ್ಲ. ನದಿಗೆ ಇಳಿದಾಗ ಈಜು ತಾನಾಗಿಯೇ ಬರುತ್ತದೆ ಎಂಬ ನಂಬಿಕೆ ಅವರದು. ತೆಲುಗಿನ ಮೊದಲ ಚಿತ್ರದ ಬಳಿಕ ಹಲವಾರು ಅವಕಾಶಗಳು ಸಾಲುಗಟ್ಟಿ ನಿಂತರೂ ಕಥೆ ಮೆಚ್ಚುಗೆಯಾಗದ ಕಾರಣಕ್ಕೆ ಎಲ್ಲವನ್ನೂ ಒಲ್ಲೆ ಎಂದರಂತೆ ಅನಿಶಾ. ಸುಮ್ಮನೆ ಮರಸುತ್ತುವ ಪಾತ್ರಗಳು ನನಗಿಷ್ಟವಿಲ್ಲ. ಕಥೆಯಲ್ಲಿ ಹೊಸತನ, ಗಟ್ಟಿತನವಿರಬೇಕು. ಮಿಗಿಲಾಗಿ ಮೊದಲು ಅದರ ಬಗ್ಗೆ ಗೌರವ ಭಾವನೆ ಮೂಡುವಂತಿಬೇಕು. ಹಾಗಿದ್ದಾಗ ಮಾತ್ರ ಒಪ್ಪಿಕೊಳ್ಳುವೆ ಎನ್ನುವ ಅನಿಶಾ ಆರಂಭದಲ್ಲೇ ಚೂಸಿಯಾಗಿರುವ ಸೂಚನೆ ನೀಡುತ್ತಾರೆ.ಅಪ್ಪ ಅಮ್ಮ ಒಪ್ಪಿದ ಸಿನಿಮಾದಲ್ಲಿ ಮಾತ್ರ ಅವರು ನಟಿಸುವುದು. ಕುಟುಂಬದ ಗೌರವ ಮುಖ್ಯವಾಗಿರುವುದರಿಂದ ಅವರ ಇಚ್ಛೆಗೆ ವಿರುದ್ಧ ನಡೆಯುವುದಿಲ್ಲ ಎಂಬ ನಿಯಮ ಹಾಕಿಕೊಂಡಿದ್ದಾರೆ. ಹೀಗಾಗಿ ಗ್ಲಾಮರ್‌ ಪಾತ್ರಗಳಿಂದ ಅವರು ತುಂಬಾ ದೂರವಂತೆ. ‘ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ನಟಿಯರನ್ನು ಮೆಚ್ಚಿಕೊಳ್ಳುತ್ತೇನೆ. ಆದರೆ ನಾನು ಅವರಂತೆ ಆಗಲಾರೆ. ಗ್ಲಾಮರಸ್‌ ಪಾತ್ರಗಳಿಗೆ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆ ನನಗಿಲ್ಲ’ ಎನ್ನುತ್ತಾರೆ.ಸಿನಿಮಾ ಮಾಧ್ಯಮ ಬಹುಪ್ರಭಾವಶಾಲಿ. ಅದರಲ್ಲೂ ಯುವಜನತೆ ಸಿನಿಮಾವನ್ನು ಬದುಕಿಗೆ ತಂದುಕೊಳ್ಳುತ್ತಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ನಾನು ನಟಿಸುವ ಸಿನಿಮಾಗಳು 5ರಿಂದ 50 ವರ್ಷ ದಾಟಿದ ಎಲ್ಲರೂ ನೋಡುವಂತಹ ಅಂಶಗಳನ್ನು ಹೊಂದಿರಬೇಕು. ನನ್ನ ಸಿನಿಮಾಗಳು ಬೀರುವ ಪ್ರಭಾವ ಗುಣಾತ್ಮಕವಾಗಿರಬೇಕು ಎನ್ನುವ ‘ಸಿನಿಮಾ ಸಂಹಿತೆ’ ಅವರದು.

ಪ್ರತಿಕ್ರಿಯಿಸಿ (+)