ಮಂಗಳವಾರ, ಏಪ್ರಿಲ್ 20, 2021
29 °C

ಲಾರಾ ಬಂದರು ಹಾಲೂಡಿಸಿ ಎಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರಾ ಬಂದರು ಹಾಲೂಡಿಸಿ ಎಂದರು

ಯಾವಾಗಲೂ ಅನಾರೋಗ್ಯ ಪೀಡಿತರು ಹಾಗೂ ಅವರ ಸಂಬಂಧಿಕರಿಂದಲೇ ತುಂಬಿರುತ್ತಿದ್ದ ಮಣಿಪಾಲ ಆಸ್ಪತ್ರೆಗೆ ಮಂಗಳವಾರ ತಾರಾ ಮೆರುಗು. ಅಲ್ಲಿ ನೆರೆದಿದ್ದವರಲ್ಲಿ ಮಾಡೆಲ್, ಬಾಲಿವುಡ್ ತಾರೆ ಲಾರಾದತ್ತ ಅವರನ್ನು ನೋಡುವ ಕಾತರ.ಸಿನಿಮಾ ಚಿತ್ರೀಕರಣಕ್ಕೋ, ಅದರ ಪ್ರಚಾರಕ್ಕಾಗಿಯೋ ಬಾಲಿವುಡ್ ಬೆಡಗಿಯರು ಬೆಂಗಳೂರಿಗೆ ಬರುವುದು ಇತ್ತೀಚೆಗೆ ಸಾಮಾನ್ಯ. ಆದರೆ ಲಾರಾ ದತ್ತ ಆಗಮನಕ್ಕೆ ವಿಶೇಷ ಕಾರಣವಿತ್ತು. ಮಣಿಪಾಲ ಆಸ್ಪತ್ರೆ ಕೈಗೊಂಡಿರುವ `ವಿಶ್ವ ಸ್ತನ್ಯಪಾನ ಮಾಸಾಚರಣೆ~ಯ ಉದ್ಘಾಟನೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರೇ ಕೇಂದ್ರಬಿಂದು.ಸದಾ ತುಂಡುಡುಗೆಯಲ್ಲಿ ಮಿಂಚುತ್ತಿದ್ದ ಲಾರಾ ಮೊನ್ನೆ ಥೇಟ್ ಅಮ್ಮನ ಗೆಟಪ್ಪಿನಲ್ಲಿದ್ದರು. ಗುಲಾಬಿ ಬಣ್ಣದ ಟಾಪ್, ಹಾಲು ಬಿಳುಪಿನ ದೊಗಳೆ ಪ್ಯಾಂಟು ಹಾಗೂ ಅದೇ ಬಣ್ಣದ ದುಪಟ್ಟಾ ತೊಟ್ಟು ಮಿಂಚಿದರು.ಹೌದು, ಲಾರಾ ಈಗ ನಿಜಜೀವನದಲ್ಲೂ ಅಮ್ಮನ ಪಟ್ಟಕ್ಕೇರಿದ್ದಾರೆ. ಏಳು ತಿಂಗಳ ಹಿಂದಷ್ಟೇ ಹೆಣ್ಣುಮಗುವಿಗೆ ತಾಯಿಯಾಗಿರುವ ಇವರು ತಾಯ್ತನವನ್ನೂ ಅತ್ಯಂತ ಮುತುವರ್ಜಿಯಿಂದ ಹಾಗೂ ಪ್ರೀತಿಯಿಂದ ನಿಭಾಯಿಸುತ್ತಿರುವುದು ಬಿ-ಟೌನ್‌ನಲ್ಲೂ ಮಾಡೆಲಿಂಗ್ ಲೋಕದಲ್ಲೂ ಸುದ್ದಿಯಾಗಿದೆ. ಸ್ತನ್ಯಪಾನ ಮಾಸಾಚರಣೆಗೆ ಚಾಲನೆ ನೀಡಿದವರು ಮಾತಿಗೆ ಮುನ್ನುಡಿ ಹಾಕಿದ್ದೂ ತಮ್ಮ ತಾಯ್ತನದ ವಿಚಾರದ ಮೂಲಕವೇ.`ನನ್ನ ಬದುಕಿನ ಅತ್ಯಂತ ಖುಷಿಯ ಕ್ಷಣಗಳನ್ನು ನನ್ನ ಮಗಳು ಸಾಯಿರಾ ಜತೆ ಕಳೆಯುತ್ತಿದ್ದೇನೆ. ಎದೆಹಾಲೂಡಿಸುವುದು ತಾಯಿಯಾದವಳ ಆದ್ಯ ಕರ್ತವ್ಯ. ನಗರ ಪ್ರದೇಶಗಳಲ್ಲಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಸ್ತನ್ಯಪಾನ ಮಾಡಿಸುವುದರಿಂದ ಸೌಂದರ್ಯ ಮಾಸುತ್ತದೆ ಎಂಬುದು ತಪ್ಪು ಕಲ್ಪನೆ. ಎದೆಹಾಲಿನಿಂದ ಮಗುವಿನ ಆರೋಗ್ಯ ಉತ್ತಮವಾಗುವುದಲ್ಲದೆ ತಾಯಿಯ ದೇಹದಲ್ಲಿ ಶೇಖರಣೆಗೊಂಡಿರುವ ಕ್ಯಾಲರಿ ಕರಗಿ ದೇಹ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ಹೊಸದಾಗಿ ತಾಯಿಯಾಗುತ್ತಿರುವವರಲ್ಲಿ ಈ ಬಗ್ಗೆ ಕಾಳಜಿ ಮೂಡಿಸುವ ಅವಶ್ಯಕತೆ ಇದೆ~ ಎಂದು ನುಡಿದರು, ಈ ಮಾಜಿ ಮಿಸ್ ಯೂನಿವರ್ಸ್.ತಾಯಿಯಾದ ನಂತರ ತಮ್ಮ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ ಅವರು ಐದೇ ತಿಂಗಳ ನಂತರ ಹೊಸದೊಂದು ಸಿನಿಮಾ ಶೂಟಿಂಗ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಅದರ ನಡುವೆಯೂ ಮಗುವಿನ ಆರೈಕೆಯನ್ನು ಮಾತ್ರ ಮರೆತಿಲ್ಲ ಎನ್ನುವ ಲಾರಾದತ್ತ ಸ್ಟೆಮ್‌ಸೆಲ್ ಬ್ಯಾಂಕಿಂಗ್ ಮಾಡಿಸಲು ಮರೆತಿಲ್ಲವಂತೆ. ಇವಿಷ್ಟನ್ನು ಮೈಕ್ ಹಿಡಿದು ಹೇಳಿಕೊಂಡ ಲಾರಾಗೆ ಮಾಧ್ಯಮದವರ ಪ್ರಶ್ನೆ, ಅಭಿಮಾನಿಗಳ ಕಾತರಕ್ಕೆ ಸ್ಪಂದಿಸಲೂ ಸಮಯವಿರಲಿಲ್ಲ. ಇದರಿಂದ ನೆರೆದವರಿಗೆ ಅಸಮಾಧಾನವಾಗಿದ್ದಂತೂ ನಿಜ.

`ಸ್ತನ್ಯಪಾನ ಮಾಡಿಸುವುದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಸ್ತನ ಕ್ಯಾನ್ಸರ್, ಅಸ್ತಮಾ ಮುಂತಾದ ರೋಗಗಳು ಬರುವುದಿಲ್ಲ. ಮಗುವಿಗೆ ಎರಡು ವರ್ಷ ಆಗುವವರೆಗೆ ಎದೆಹಾಲು ಕುಡಿಸುವುದು ಸೂಕ್ತ. ಈ ಬಗ್ಗೆ ಹೊಸದಾಗಿ ತಾಯಿ ಆಗುತ್ತಿರುವವರಲ್ಲಿ ಕಾಳಜಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಈ ತಿಂಗಳನ್ನು ಜಾಗೃತಿ ಮೂಡಿಸಲು ಮೀಸಲಿಟ್ಟಿದ್ದೇವೆ~ ಎಂದು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ವೈದ್ಯಕೀಯ ನಿರ್ದೇಶಕ ಡಾ. ಎಚ್. ಸುದರ್ಶನ ಬಲ್ಲಾಳ ಹೇಳಿದರು.`ಎದೆಹಾಲು ಮಗುವಿಗೆ ಮೊದಲ ಲಸಿಕೆಯಂತೆ. ಎಷ್ಟೋ ಸೋಂಕುಗಳಿಂದ ರಕ್ಷಿಸುವ ಜತೆಗೆ ಮೆದುಳಿನ ಸಮರ್ಪಕ ಬೆಳವಣಿಗೆಗೂ ಇದು ಸಹಕಾರಿ. ಆರು ತಿಂಗಳವರೆಗೆ ಮಗುವಿಗೆ ನೀಡುವ ಏಕೈಕ ಆಹಾರ ಇದಾಗಿರುವುದರಿಂದ ತಾಯಂದಿರು ಈ ಬಗ್ಗೆ ನಿರ್ಲಕ್ಷ ತೋರಬಾರದು~ ಎಂದರು ಅಸ್ಪತ್ರೆಯ ಲೆಕ್ಟೇಷನ್ ಕನ್ಸಲ್ಟೆಂಟ್ ಡಾ. ರವನೀತ್ ಜೋಶಿ.

ಆಸ್ಪತ್ರೆಯ ತುಂಬಾ ಸ್ತನ್ಯಪಾನದ ಬಗ್ಗೆ ಅರಿವು ಮೂಡಿಸುವ ಪೋಸ್ಟರ್‌ಗಳಿದ್ದವು. ಅಂತಹ ಒಂದು ಬೃಹತ್ ಭಿತ್ತಿಚಿತ್ರವನ್ನು ಲಾರಾ ಅನಾವರಣ ಮಾಡುವ ಮೂಲಕ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯವಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.