ಬುಧವಾರ, ಮೇ 25, 2022
24 °C

ಲಿಬಿಯಾದಲ್ಲಿ ಮಧ್ಯಂತರ ಸರ್ಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮ್ಮಾನ್ (ಐಎಎನ್‌ಎಸ್): ಲಿಬಿಯಾದಲ್ಲಿ ಸರ್ವಾಧಿಕಾರದ ಆಡಳಿತ ಕೊನೆಗೊಂಡಿದ್ದು, ಮುಂದಿನ ಎಂಟು ತಿಂಗಳಲ್ಲಿ ನಡೆಯುವ ಚುನಾವಣೆಯ ನಂತರ ಮಧ್ಯಂತರ ಸರ್ಕಾರ ರಚನೆಗೆ ರಾಷ್ಟ್ರೀಯ ಸಂಧಿಕಾಲ ಮಂಡಳಿಯು ಅವಕಾಶ ಕಲ್ಪಿಸುವುದು ಎಂದು ಮಂಡಳಿಯ ಮುಖ್ಯಸ್ಥ ಮಹಮ್ಮದ್ ಜಿಬ್ರಿಲ್ ಹೇಳಿದ್ದಾರೆ.ರಾಷ್ಟ್ರೀಯ ಕಾಂಗ್ರೆಸ್ ಪರ ಮತ ಚಲಾವಣೆಯಾದ ನಂತರ, ನಾವು ಹೊಸ ಸಂವಿಧಾನದ ಕರಡು ರೂಪಿಸುತ್ತೇವೆ. ಆಗ ಮಧ್ಯಂತರ ಸರ್ಕಾರ ಆಡಳಿತ ನಿರ್ವಹಣೆ ಮಾಡಬೇಕು. ನೂತನ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡುವವರೆಗೂ ಮಧ್ಯಂತರ ಸರ್ಕಾರ ಅಧಿಕಾರ ನಿರ್ವಹಿಸಬೇಕು ಎಂದು  ಮೊಹ್ಮದ್ ಜಿಬ್ರಿಲ್ ಜೋರ್ಡಾನ್‌ನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಈಗಾಗಲೇ ದೇಶದಲ್ಲಿ ಹತ್ತಾರು ಸಶಸ್ತ್ರ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇವುಗಳನ್ನೆಲ್ಲಾ ಒಲಿಸಿ, ಪ್ರಜಾಸತ್ತೆಯ ದಿಕ್ಕಿನಲ್ಲಿ ಕೊಂಡೊಯ್ಯುವ ಮಹತ್ವದ ಕಾರ್ಯಕ್ಕೆ ಚಾಲನೆ ಸಿಗಬೇಕಿದೆ ಎಂದೂ ಅವರು ನುಡಿದರು. ಗಡಾಫಿ ಹತ್ಯೆ ಮತ್ತು ನ್ಯಾಟೊ ಪಡೆ ಹಿಂದೆ ಸರಿಯಲು ತೀರ್ಮಾನಿಸಿರುವುದರಿಂದ ದೇಶದಲ್ಲಿ ಆಡಳಿತಾತ್ಮಕವಾಗಿ ಶೂನ್ಯವನ್ನು ಸೃಷ್ಟಿಸಿದ್ದು, ಅದನ್ನು ಸರಿಪಡಿಸಬೇಕಾದ ಅಗತ್ಯ ಇವತ್ತಿನ ತುರ್ತು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.ಒಬಾಮಾ ಸಂತಸ (ವಾಷಿಂಗ್ಟನ್ ವರದಿ): ಗಡಾಫಿ ಹತ್ಯೆ ಜಗತ್ತಿನ ಮರೆಯಲಾಗದ ಕ್ಷಣಗಳಲ್ಲಿ ಒಂದು ಎಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಸಂತಸ ವ್ಯಕ್ತ ಪಡಿಸಿದ್ದಾರೆ.ಗಡಾಫಿ ಪುತ್ರಿಗೆ ಆಘಾತ (ಅಲ್ಜಿರೀಸ್ ವರದಿ): ಲಿಬಿಯಾದಲ್ಲಿ 42 ವರ್ಷಗಳ ಕಾಲ ಆಡಳಿತ ನಡೆಸಿದ್ದ  ಗಡಾಫಿಯನ್ನು ಗುರುವಾರ ಹತ್ಯೆ ಮಾಡಿದ ದೃಶ್ಯಗಳನ್ನು ಟಿ.ವಿಗಳಲ್ಲಿ ನೋಡಿದ ಗಡಾಫಿ ಪುತ್ರಿ ಆಯೇಷಾ ಆಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಡಾಫಿ ವಿರುದ್ಧ ನಾಗರಿಕರು ದಂಗೆ ಏಳುತ್ತಿದ್ದಂತೆಯೇ ಆಗಸ್ಟ್ 30ರಂದು ಆಯೇಷಾ ತನ್ನ ಇಬ್ಬರು ಸಹೋದರರು ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಉತ್ತರ ಆಫ್ರಿಕಾದ ಅಲ್ಜಿರಿಯಾಕ್ಕೆ ಪಲಾಯನ ಮಾಡಿದ್ದರು. ಸದ್ಯ ಅಲ್ಜಿರಿಯಾದಲ್ಲಿ ಗಡಾಫಿ ಕುಟುಂಬಕ್ಕೆ ಆಶ್ರಯ ನೀಡಲಾಗಿದೆ.ಶಸ್ತ್ರಾಸ್ತ್ರಗಳ ಬಗ್ಗೆ ರಷ್ಯ ಆತಂಕ (ಮಾಸ್ಕೊ ವರದಿ): ಗಡಾಫಿ ಕಾಲದಲ್ಲಿ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳುವ ಸಲುವಾಗಿ ವಿಶ್ವಸಂಸ್ಥೆಯ ಪರವಾಗಿ ರಷ್ಯ ಕರಡು ಮಸೂದೆ ರೂಪಿಸಲು ಮುಂದಾಗಿದೆ.ವಿಶ್ವಸಂಸ್ಥೆಯಲ್ಲಿ ರಷ್ಯ ಪ್ರತಿನಿಧಿ ವಿಟ್ಲೆ ಚುರ್ಕಿನ್ ಈ ವಿಷಯ ತಿಳಿಸಿದ್ದು, ಈ ಕರಡು ಮಸೂದೆ ವಿಶ್ವಸಂಸ್ಥೆ ಯಲ್ಲಿ ಮುಂದಿನ ವಾರ ಮಂಡಿಸಲಾ ಗುವುದು ಎಂದು  ತಿಳಿಸಿದ್ದಾರೆ. ಲಿಬಿಯಾದಲ್ಲಿ ಗಡಾಫಿ ಸಂಗ್ರಹಿಸಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ಮುಂದೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಜುಮಾ ಖಂಡನೆ (ಜೋಹಾನ್ಸ್‌ಬರ್ಗ್ ವರದಿ): ಗಡಾಫಿ ಅವರನ್ನು ಹತ್ಯೆ ಮಾಡಿದ ಕ್ರಮವನ್ನು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಖಂಡಿಸಿದ್ದಾರೆ.`ಮರಣೋತ್ತರ ಪರೀಕ್ಷೆ ಇಲ್ಲ~

ಮಿಸ್ರತ್ (ಎಎಫ್‌ಪಿ): ಗಡಾಫಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ಸೇನಾ ಕಮಾಂಡರ್‌ಗಳು ತಿಳಿಸಿದ್ದಾರೆ.ಗಡಾಫಿ ಸಾವು ಹೇಗೆ ಸಂಭವಿಸಿತು ಎನ್ನುವ ಕುರಿತು ಊಹಾಪೋಹಗಳು ಎದ್ದಿದ್ದರೂ ಸಹ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಎಂದು ಮಿಸ್ರತ್‌ನ ಮಿಲಿಟರಿ ಕೌನ್ಸಿಲ್‌ನ ವಕ್ತಾರ ಫತಿ ಅಲ್ ಬಶಾಘಾ ಅವರು ಸ್ಪಷ್ಟಪಡಿಸಿದ್ದಾರೆ.ನ್ಯಾಟೊ ಕಾರ್ಯಾಚರಣೆ ಅಂತ್ಯ

ಬ್ರಸ್ಸೆಲ್ಸ್ (ಎಎಫ್‌ಪಿ): ಲಿಬಿಯಾದಲ್ಲಿ ಕಳೆದ ಏಳು ತಿಂಗಳಿಂದ ಕೈಗೊಂಡಿರುವ ತನ್ನ ವಾಯು ಮತ್ತು ಜಲ ಕಾರ್ಯಾಚರಣೆಯನ್ನು ಈ ತಿಂಗಳ 31ರಂದು ಅಂತ್ಯಗೊಳಿಸಲು ಯೋಜಿಸಿರುವ ನ್ಯಾಟೊ, ಈ ಸಂಬಂಧದ ಔಪಚಾರಿಕ ನಿರ್ಧಾರವನ್ನು ಮುಂದಿನ ವಾರ ಅಮೆರಿಕ ಮತ್ತು ಲಿಬಿಯಾದ ಮಧ್ಯಂತರ ಆಡಳಿತದ ಜೊತೆ ಸಮಾಲೋಚಿಸಿದ ನಂತರ ಪ್ರಕಟಿಸಲಿದೆ ಎಂದು ಈ ಪಡೆಗಳ ಮುಖ್ಯಸ್ಥ ಆಂಡರ್ಸ್‌ ರಾಸ್‌ಮುಸ್ಸೆನ್ ತಿಳಿಸಿದ್ದಾರೆ.ಸೇನಾ ಕಾರ್ಯಾಚರಣೆಯನ್ನು ಯಾವಾಗ ಮತ್ತು ಹೇಗೆ ಕೊನೆಗೊಳಿಸಬೇಕೆಂಬುದರ ಕುರಿತು ಶುಕ್ರವಾರ ಇಲ್ಲಿ 28 ಸದಸ್ಯ ಮೈತ್ರಿಕೂಟ ರಾಷ್ಟ್ರಗಳ ರಾಯಭಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಅವರು ಶನಿವಾರ ಸುದ್ದಿಗಾರರಿಗೆ ಹೇಳಿದ್ದಾರೆ.ಈಗ ಪ್ರಾಥಮಿಕ ತೀರ್ಮಾನವನ್ನು ಮಾಡಲಾಗಿದ್ದು, ಮುಂದೆ ವಿಶ್ವಸಂಸ್ಥೆ ಮತ್ತು ಲಿಬಿಯಾದಲ್ಲಿ ಮಧ್ಯಂತರ ಸರ್ಕಾರ ನಡೆಸುತ್ತಿರುವ ರಾಷ್ಟ್ರೀಯ ಸಂಧಿಕಾಲ ಮಂಡಳಿ (ಎನ್‌ಟಿಸಿ) ಜೊತೆಗೂ ಸಮಾಲೋಚಿಸಲಾಗುತ್ತದೆ ಎಂದು ಹೇಳಿದರು.ಮುಅಮ್ಮರ್ ಗಡಾಫಿ ಪಡೆಗಳ ವಿರುದ್ಧ ನಡೆಸಿದ ಈ ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಅವರು ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.