ಭಾನುವಾರ, ಜನವರಿ 26, 2020
28 °C
ವರ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಆಗ್ರಹ

ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಿ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌: ‘ರಾಹುಲ್‌­ಗಾಂಧಿ­ಯವರ ಆಶಯದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕ­­ರಿಗೆ ಆದ್ಯತೆ ನೀಡ­ಬೇಕು’ ಎಂದು ವರ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಮರೆಡ್ಡಿ ಹೇಳಿದರು. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ವಾರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಆಗಿ ಸ್ಪರ್ಧಿಸಲು ಸ್ಥಳೀಯ ಮುಖಂಡ ಗಫಾರ್‌ಬೇಗ್‌ ಅವರಿಗೆ ಅವಕಾಶ ಕಲ್ಪಿಸುವಂತೆ ಪಕ್ಷದ ವರಿಷ್ಠರನ್ನು ಕೋರಲು  ನಿರ್ಧರಿಸಲಾಗಿದೆ’ ಎಂದರು.



‘ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್‌, ಬಿದರಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ  ಕೆಂಪಣ್ಣ, ಬಿಬಿಎಂಪಿ ಸದಸ್ಯರಾದ ಶ್ರೀನಿವಾಸ್‌, ಪಕ್ಷದ ಮುಖಂಡರಾದ ನಲ್ಲೂರಹಳ್ಳಿ ನಾಗೇಶ್‌, ವೆಂಕಟರ­ಮಣ, ತಾ.ಪಂ. ಮಾಜಿ ಸದಸ್ಯ ನಾರಾಯಣ ಮೊದಲಾದವರ ಸಮ್ಮುಖ­ದಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.



ಮುಖಂಡ ನಲ್ಲೂರಹಳ್ಳಿ ನಾಗೇಶ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ­ವಿದ್ದು, ಬಡವರು, ಅಲ್ಪಸಂಖ್ಯಾತರು ಮತ್ತು  ಹಿಂದುಳಿ­ದವರ ಕಲ್ಯಾಣಕ್ಕಾಗಿ ಹಿಂದೆಂದೂ ಕಾಣದಷ್ಟು ಕಾರ್ಯಕ್ರಮ­ಗಳು ಜಾರಿಯಾಗಿವೆ. ಅವುಗಳ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಮೂಲಕ ಮತದಾರರ ಮನಗೆಲ್ಲಬೇಕು’ ಎಂದರು.



ಕೆಪಿಸಿಸಿ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ‘ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಸದ್ಯದಲ್ಲೇ ವಾರ್ಡ್‌ವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಎಂ. ವೇಣುಗೋಪಾಲ್, ತಾ.ಪಂ. ಮಾಜಿ ಉಪಾಧ್ಯಕ್ಷೆ ಪ್ರಮೀಳಾ ಶರಣ್ಯ ಮೊದಲಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)