ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಎಂಬ ‘ಆಲಂಕಾರಿಕ ವಸ್ತು’

Last Updated 20 ಜುಲೈ 2015, 19:41 IST
ಅಕ್ಷರ ಗಾತ್ರ

‘ದೇಶವಾಸಿಗಳೇ ಇದೆಂತಹ ಪತನ?’- ಶೇಕ್‌್ಸಪಿಯರ್‌ನ ನಾಟಕವೊಂದರಲ್ಲಿ ಬರುವ ಈ ಪ್ರಸಿದ್ಧ ಉದ್ಗಾರವು ಇಂದಿನ ಲೋಕಾಯುಕ್ತ ಸಂಸ್ಥೆ, ಅದರ ಒಳಗೂ ಹೊರಗೂ ನಡೆಯುತ್ತಿರುವ ವಿದ್ಯಮಾನಗಳ ಬಗೆಗಿನ ಜನರ ಭಾವನೆಗಳನ್ನು ಬಿಂಬಿಸುವಂತಿದೆ.

ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರದಾದಿಯಿಂದ ಇತರರೆಲ್ಲರೂ ಮೀನಮೇಷ ಮಾಡುತ್ತಿದ್ದಾಗ ಕರ್ನಾಟಕ ಝಳಪಿಸಿದ ಅಸ್ತ್ರವೇ ಲೋಕಾಯುಕ್ತ. ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಗೆ ಇದು ಸಿಂಹಸ್ವಪ್ನವಾಗಿ, ದೇಶಕ್ಕೊಂದು ಮಾದರಿಎಂಬ ಹೆಗ್ಗಳಿಕೆ ಗಳಿಸಿದೆ.

ಇದರ ಹರಿತವೆಷ್ಟಿದೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಒಂದು ಕಾಲದ ಬಂಟರಾಗಿದ್ದ, ಬಳ್ಳಾರಿಯ ಗಣಿ ದೊರೆ ಎಂದು ಕರೆಯಲಾಗುತ್ತಿದ್ದ ಜನಾರ್ದನ ರೆಡ್ಡಿ ಅವರನ್ನೇ ಕೇಳಬೇಕು. ಅವರ ರಾಜಕೀಯ ಜೀವನವೇ ಮೂರಾಬಟ್ಟೆ ಆಗಿದೆ. ಅವರು ಕಟ್ಟಿಕೊಂಡ ಸಾಮ್ರಾಜ್ಯ ಕುಸಿದಿದೆ. ಜೈಲು ವಾಸ ಅನುಭವಿಸಿದ್ದಾರೆ. ಅವರ  ಮೇಲೆ ಹಾಕಲಾಗಿದ್ದ ಕೇಸುಗಳ ಕತ್ತಿ ಅವರ ಕತ್ತಿನ ಮೇಲೆ ತೂಗುತ್ತಿದೆ.

ಆದರೀಗ, ಬಹಳ ದಿನ ಬಳಸದೇ ಅಸ್ತ್ರ ಮೊಂಡಾಗಿದೆ ಮತ್ತು ತುಕ್ಕು ಹಿಡಿದಿದೆ. ಭ್ರಷ್ಟಾಚಾರಕ್ಕೆ ರಾಮಬಾಣವೆಂದೇ ಹೆಸರಾದ ಲೋಕಾಯುಕ್ತವೇ ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಕಳವಳಕಾರಿ ಅಂಶವೆಂದರೆ, ಭ್ರಷ್ಟಾಚಾರದ ಗೆದ್ದಲು ಕೆಳ ಮಟ್ಟದಲ್ಲಿ ಹಿಡಿಯದೆ ಮೇಲ್ಮಟ್ಟದಲ್ಲಿ ಆಗಿದೆ ಎಂಬ ದೂರಿನ ತನಿಖೆ ನಡೆದಿದೆ. ಕೇಂದ್ರ ಬಿಂದು ಮತ್ತೆ ಯಾರೂ ಅಲ್ಲ. ಸ್ವತಃ ಲೋಕಾಯುಕ್ತರ ಪುತ್ರ. ಇದೆಲ್ಲ ನಡೆದದ್ದು ಲೋಕಾಯುಕ್ತರ ಮನೆಯಲ್ಲಿ. ದಿನಗಳು ಕಳೆದಂತೆ ಸಂಶಯದ ಮುಳ್ಳು ಲೋಕಾಯುಕ್ತರ ಸುತ್ತ ತಿರುಗುತ್ತಿರುವುದರಿಂದ ಅವರ ರಾಜೀನಾಮೆಯ ಕೂಗಿಗೆ, ಸಿಬಿಐ ತನಿಖೆಗೆ ಸಾರ್ವಜನಿಕ ಒತ್ತಡ ಹೆಚ್ಚುತ್ತಿದೆ.

ಲೋಕಾಯುಕ್ತರು ರಾಜೀನಾಮೆ ಕೊಡಲು ಒಪ್ಪುತ್ತಿಲ್ಲ. ಅವರ ವರ್ತನೆ ಲೋಕಾಯುಕ್ತದ ಮೇಲಿನ ಕಳಂಕವನ್ನು ತೆಗೆದು ಹಾಕುವುದಕ್ಕಿಂತ  ತಮ್ಮ ಪುತ್ರನ ರಕ್ಷಣೆಗೆ ಪ್ರಾಶಸ್ತ್ಯ ಕೊಟ್ಟಿರುವರೆಂಬ ಭಾವನೆ  ಬರುವಂತಿದೆ. ರಾಜ್ಯ  ಸರ್ಕಾರ ಇದರಲ್ಲಿ ಅಸಹಾಯಕ ಎಂದು ಮುಖ್ಯಮಂತ್ರಿ ಕೈಚೆಲ್ಲಿ ಕುಳಿತಿದ್ದಾರೆ. ವಿಧಾನ ಮಂಡಲದಲ್ಲಿನ ಚರ್ಚೆ ಬರೀ ತೌಡು ಕುಟ್ಟುವ ಕೆಲಸವಾಗಿದೆ. ವಿಷಯ ದಿನೇ ದಿನೇ ಕಗ್ಗಂಟಾಗುತ್ತಲಿದೆ.

ಲೋಕಾಯುಕ್ತದ ಒಳಗೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಪ್ರಕರಣದ ತನಿಖೆ ಹೇಗೆ ಮಾಡಬೇಕು ಎನ್ನುವುದೂ ವಿವಾದಾಸ್ಪದವಾಗಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನಡುವೆ ಭಿನ್ನಾಭಿಪ್ರಾಯ ಇರುವುದು ಬೆಳಕಿಗೆ ಬಂದಿದೆ. ಒಬ್ಬ ಉಪಲೋಕಾಯುಕ್ತರು ಹೊರಡಿಸಿದ ಆಜ್ಞೆಯ ವಿರುದ್ಧ ಲೋಕಾಯುಕ್ತರು ಇನ್ನೊಂದು ಆದೇಶ ಹೊರಡಿಸುತ್ತಾರೆ. ವಿಷಯವು ಮುಖ್ಯ ನ್ಯಾಯಾಲಯದ ಕಟ್ಟೆ ಏರಿದೆ. ಸಿಬಿಐ ತನಿಖೆಗೆ ಒಪ್ಪದ ಸರ್ಕಾರ ತನಿಖೆಗೆ ವಿಶೇಷ ತಂಡವನ್ನು ರಚಿಸಿದೆ. ಎಲ್ಲವೂ ಗೊಂದಲ. ಅಯೋಮಯ.

ಈ ಗೊಂದಲದ ಗೂಡಿನ ವಿವಿಧ ಆಯಾಮಗಳನ್ನು ಗಮನಿಸಿದರೆ ಮನಸ್ಸಿಗೆ ರೇಜಿಗೆಯಾಗುತ್ತದೆ. ಒಂದು ವೇಳೆ ಆರೋಪಕ್ಕೆ ಒಳಗಾದವರು ನಿರ್ದೋಷಿಗಳು ಎಂದು ಪಾರಾದರೂ, ಲೋಕಾಯುಕ್ತ ಸಂಸ್ಥೆ ಕಳೆದುಕೊಂಡ ವಿಶ್ವಾಸವನ್ನು ತಿರುಗಿ ಗಳಿಸಲು ಸಾಧ್ಯವಿಲ್ಲ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಂದೀತೆ? ಭ್ರಷ್ಟಾಚಾರದ ತಡೆಗೆ ಕಟ್ಟಿದ ಗೋಡೆಯೇ ಶಿಥಿಲವಾದುದರಿಂದ  ಭ್ರಷ್ಟಾಚಾರಿಗಳು ಇನ್ನು ತಮ್ಮ ಕಾಯಕವನ್ನು ಯಾರ ಹೆದರಿಕೆ ಬೆದರಿಕೆಯೂ ಇಲ್ಲದೇ ಪುನರಾರಂಭಿಸಲು ವೇದಿಕೆ ಸಿದ್ಧವಾದಂತಿದೆ. ಇದೊಂದು ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಸಾರ್ವಜನಿಕ ಜೀವನದ ದುರಂತವೆನ್ನದೇ  ವಿಧಿಯಿಲ್ಲ.

ಕರ್ನಾಟಕದಲ್ಲಿನ ಲೋಕಾಯುಕ್ತದ ರೂವಾರಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ (ಅವರ ಎರಡು ಕ್ರಾಂತಿಕಾರಿ ಹೆಜ್ಜೆಗಳು- ಲೋಕಾಯುಕ್ತ  ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಪಂಚಾಯತ್‌ ವ್ಯವಸ್ಥೆ. ಇವು ಇಂದು ಅವನತಿಯ ಹಾದಿ ಹಿಡಿದಿರುವುದು  ಹೆಗಡೆ ಅವರ ದೂರದರ್ಶಿತ್ವವನ್ನು, ನಂತರ ಅವರ ಸ್ಥಾನ ಆಕ್ರಮಿಸಿದ ಇತರರ ಬೌದ್ಧಿಕ ಕುಬ್ಜತೆಯನ್ನು ತೋರಿಸುತ್ತದೆಂಬುದು ಬೇರೆ ವಿಷಯ).

ಕರ್ನಾಟಕ ಲೋಕಾಯುಕ್ತದ ಮೂರು ದಶಕಗಳ ಕಾಲಘಟ್ಟವನ್ನು ಹೀಗೆ ವಿಂಗಡಿಸಬಹುದು: ಮೊದಲನೆಯ ಹದಿನೈದು ವರ್ಷಗಳು ಅಜ್ಞಾತ ಪರ್ವ. ಪದವಿ ನಿರ್ವಹಿಸಿದ ಮೂವರು ಲೋಕಾಯುಕ್ತರದು ಮರೆಯ ಕಾಯಿಯಂತಿನ ಅಸ್ತಿತ್ವ. ಅವರ ಬಗೆಗೂ ಆ ಹುದ್ದೆಯ ಬಗೆಗೂ ಜನರಿಗೆ ಯಾವ ತರಹದ ಅರಿವೂ ಇರಲಿಲ್ಲ.

ಎರಡನೆಯ ಹತ್ತು ವರ್ಷ (2001-2010) ಸುವರ್ಣಯುಗ. ಜವಾಬ್ದಾರಿ ನಿರ್ವಹಿಸಿದ ಇಬ್ಬರೂ ಲೋಕಾಯುಕ್ತರು- ವೆಂಕಟಾಚಲ ಮತ್ತು ಸಂತೋಷ ಹೆಗ್ಡೆ ಅವರ  ಕ್ರಿಯಾಶೀಲತೆಯಿಂದ ಲೋಕಾಯುಕ್ತದ ಉಪಯುಕ್ತತೆ ಮನೆಮಾತಾಗಿ ದೇಶದ ತುಂಬೆಲ್ಲ ಅದರ ಕಂಪು ಹರಡಿ, ಇದೊಂದು ಮಾದರಿ ವ್ಯವಸ್ಥೆ ಎಂಬ ಹೆಗ್ಗಳಿಕೆ ರಾಜ್ಯದ ಪಾಲಾಯಿತು. ಅವರು ಅಧಿಕಾರಸ್ಥ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಬಹಿರಂಗ ಸಮರಕ್ಕಿಳಿದು ಅವರಿಗೆ ಚಳಿ ತರಿಸಿದರು.

ಇಬ್ಬರ ಉದ್ದೇಶ ಒಂದೇ ಆಗಿದ್ದರೂ, ಕಾರ್ಯವೈಖರಿ ಮಾತ್ರ ಭಿನ್ನ. ವೆಂಕಟಾಚಲ ಅವರು ಬಹು ಗಡಸು.  ಹೆಗ್ಡೆ ಅವರು ಮೃದು. ವೆಂಕಟಾಚಲ ಅವರ ಕಾಲದಲ್ಲಿ ದಾಳಿ ಮತ್ತು ಕಚೇರಿ ಪರಿಶೀಲನೆಗೆ ಪ್ರಾಶಸ್ತ್ಯ. ಹೆಗ್ಡೆ ಅವರ ಕಣ್ಣು ರಾಜಕಾರಣಿಗಳ ಮೇಲೆ. ವೆಂಕಟಾಚಲ ಅವರ ನೇಮಕವಾದದ್ದು ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ. ಮೇಲ್ನೋಟಕ್ಕೆ ಕೃಷ್ಣ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಮನಸ್ಸಿನಲ್ಲಿ ಇಣುಕಿದ ಸಂಶಯವನ್ನು ವೆಂಕಟಾಚಲ ಬೇಗನೇ ಹೊಡೆದು ಹಾಕಿದರು.

ವಿವಿಧ ಕಚೇರಿಗಳಿಗೆ ಭೇಟಿ ಇತ್ತು, ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಆಗುವ ವಿಳಂಬಕ್ಕೆ ಚಾಟಿ ಏಟು ಕೊಟ್ಟು ಕೆಳಮಟ್ಟದ ಕಚೇರಿಗಳ ಕಾರ್ಯವೈಖರಿಯಲ್ಲಿ ಒಂದು ತರಹದ ಚುರುಕುತನ ತಂದರು. ಕಾನೂನು ಪ್ರಕಾರ ಲೋಕಾಯುಕ್ತರಿಗಿಂತಲೂ ಉಪಲೋಕಾಯುಕ್ತರಿಗೆ ಜಾಸ್ತಿ ಅಧಿಕಾರ ಇರುವುದರಿಂದ, ಉಪಲೋಕಾಯುಕ್ತರು ನೇಮಕವಾಗದಿದ್ದ ಆ ಕಾಲದಲ್ಲಿ, ಉಪಲೋಕಾಯುಕ್ತರಿಗಿರುವ ಅಧಿಕಾರವನ್ನೂ ತಾವು ಚಲಾಯಿಸಲು ಹಿಂಜರಿಯಲಿಲ್ಲ.

ನಂತರ ಬಂದ ಸಂತೋಷ ಹೆಗ್ಡೆ ಅದಕ್ಕೊಂದು ಹೊಸ ಆಯಾಮವನ್ನು ಕೊಡುವುದರಲ್ಲಿ ಯಶಸ್ವಿಯಾದರು. ಅವರು ಮಾಡಿದ ಅತ್ಯುತ್ತಮ ಕೆಲಸವೆಂದರೆ ಭೂಮಿ ಡಿನೋಟಿಫಿಕೇಶನ್ ಮತ್ತು ಅಕ್ರಮ ಗಣಿ ವ್ಯವಹಾರವನ್ನು ಬಯಲಿಗೆಳೆದು ಕಡಿವಾಣ ಹಾಕಿದ್ದು. ಅದರಲ್ಲಿಯೂ ಗಣಿಗಳ ಆಗರವಾದ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಬಯಲಿಗೆ ಎಳೆದು ಈ ಕಪ್ಪುಹಣದ ಕಬಂಧಬಾಹುಗಳಿಂದ ರಾಜ್ಯದ ರಾಜಕೀಯವನ್ನು ಪಾರು ಮಾಡಿದ್ದು. ಲೋಕಾಯುಕ್ತದ ತನಿಖಾ ವರದಿಯಿಂದ ಎಷ್ಟು ಜನರ ಮೇಲೆ ಕೇಸಾಗಿದೆ? ಯಡಿಯೂರಪ್ಪ, ಜನಾರ್ದನ ರೆಡ್ಡಿ ಮತ್ತು ಶಾಸಕ ಸಮೂಹ ಜೈಲಿನ ಕಂಬಿ ಎಣಿಸಿದ್ದು ಮತ್ತು ಕೇಸುಗಳ ಕುಣಿಕೆಯಿಂದ ಹೊರಬರಲಾಗದೇ ಪರಿತಪಿಸುತ್ತಿರುವುದು ಇತ್ತೀಚಿನ ಇತಿಹಾಸವಾದುದರಿಂದ ಅದನ್ನು ಪುನರುಚ್ಚರಿಸುವ ಅವಶ್ಯಕತೆ ಇಲ್ಲ.

ಕಳೆದ ಐದು ವರ್ಷಗಳಿಂದ, ಅಂದರೆ ಸಂತೋಷ ಹೆಗ್ಡೆ ಅವರ ಅವಧಿ ಮುಗಿದ ನಂತರ ನಡೆಯುತ್ತಿರುವುದು ಅಧಃಪತನದ ಪರ್ವ. ಸೂಕ್ತ ವ್ಯಕ್ತಿ ಸಿಗುತ್ತಿಲ್ಲವೆಂಬ ಕಾರಣದಿಂದ ಹಿಂದಿನ ಬಿಜೆಪಿ ಸರ್ಕಾರ ಲೋಕಾಯುಕ್ತ ಹುದ್ದೆಯನ್ನು ತುಂಬದೇ ಖಾಲಿ ಉಳಿಸಿತ್ತು. ಸೂಕ್ತ ವ್ಯಕ್ತಿ ಸಿಗಲಿಲ್ಲವೆಂಬುದು ನೆವ ಮಾತ್ರ. ಹೆಗ್ಡೆ ಅವರು ಕೊಟ್ಟ ತನಿಖಾ ವರದಿಯ ಮೇಲೆ  ಕ್ರಮ ಕೈಗೊಳ್ಳಬೇಕಾದ ಮಹತ್ವದ ಸಮಯದಲ್ಲಿ ಲೋಕಾಯುಕ್ತದಂಥ ಹುದ್ದೆಯನ್ನು ತುಂಬದಿರುವುದರಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂಬ ಸಂಶಯವೂ ಬರದೇ ಇಲ್ಲ.

ಅಂತೂ ಇಂತೂ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರು 2011ರ ಜುಲೈನಲ್ಲಿ   ಪದಗ್ರಹಣ ಮಾಡಿದರೂ, ಅವರು ತಿಂಗಳೂ ಈ ಹುದ್ದೆಯಲ್ಲಿ ಉಳಿಯಲಿಲ್ಲ.  ಬೆಂಗಳೂರಿನಲ್ಲಿ ಅವರಿರುವ ಮನೆ ಖರೀದಿಯ ಬಗ್ಗೆ ಕೇಳಿ ಬಂದ ಅಪಶಬ್ದಗಳಿಂದ ಮನನೊಂದ ಪಾಟೀಲರು ಪದತ್ಯಾಗ ಮಾಡಿದರು. ನಂತರ ಪ್ರಸಕ್ತ ಲೋಕಾಯುಕ್ತರಾದ  ವೈ.ಭಾಸ್ಕರ ರಾವ್‌ ಅವರ ನೇಮಕ 2013ರಲ್ಲಿ ಆಗುವ ತನಕ, ಲೋಕಾಯುಕ್ತ ಹುದ್ದೆ ಖಾಲಿಯಾಗಿಯೇ ಇತ್ತು.

ಈಗಲಾದರೂ ಲೋಕಾಯುಕ್ತವು ಮೊದಲಿನಂತೆ ಕಾರ್ಯಶೀಲವಾಗುವುದೆಂದು   ಆಶಿಸಿದ್ದವರಿಗೆ ಆಗಿದ್ದು ಆಘಾತ. ಲೋಕಾಯುಕ್ತವು ಭ್ರಷ್ಟಾಚಾರದ ಕೂಪವಾಗಿರುವುದು, ಲೋಕಾಯುಕ್ತರ ಪುತ್ರನ ವಿರುದ್ಧ ಕೇಳಿಬಂದಿರುವ ಆರೋಪ ಹಾಗೂ ಮಗನ ಹಿತರಕ್ಷಿಸಲು ಹೋರಾಡುತ್ತಿದ್ದಾರೆಂಬ ಭಾವನೆ ನೀಡುವ ಲೋಕಾಯುಕ್ತರ ನಡತೆಯಂತಹ ಬೆಳವಣಿಗೆಗಳು.

ಪ್ರಖ್ಯಾತಿಯ ಶೃಂಗದಿಂದ ಅಪಖ್ಯಾತಿಯ ಕೂಪಕ್ಕೆ ಲೋಕಾಯುಕ್ತ ವ್ಯವಸ್ಥೆ ಬಿದ್ದಿದ್ದಾದರೂ ಹೇಗೆ ಎನ್ನುವುದು ಇಲ್ಲಿ ಉದ್ಭವವಾಗುವ ಮುಖ್ಯ ಪ್ರಶ್ನೆ. ಅದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು. ಇದರಲ್ಲಿ ಪ್ರಮುಖವಾದದ್ದು ಸರ್ಕಾರದ  ಸೂತ್ರ ಹಿಡಿದಿರುವ ರಾಜಕೀಯ ನಾಯಕರು ಮತ್ತು ಅಧಿಕಾರಶಾಹಿಗೆ ಲೋಕಾಯುಕ್ತದ ಜೊತೆಗೆ ಎಂದೂ ಮಧುರ ಸಂಬಂಧ ಇರಲಿಲ್ಲ.

ಲೋಕಾಯುಕ್ತವನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಮತ್ತು ಒಂದು ಮುಖ್ಯ ಹೊಣೆ ನಿರ್ವಹಿಸಲು ಕಾನೂನಿನ ಮೂಲಕ ಜನ್ಮ ತಾಳಿದ ಸಂಸ್ಥೆ ಎಂದು  ಭಾವಿಸದೆ, ತಮ್ಮ ನಿರಂಕುಶ ಪ್ರಭುತ್ವಕ್ಕೆ ಅಡ್ಡಗಾಲು ಹಾಕಲು ಬಂದ ಹೊರಗಿನ ಸಂಸ್ಥೆ ಎಂಬ ಅಪನಂಬಿಕೆ ಅವರಲ್ಲಿ ಮನೆ ಮಾಡಿತ್ತು. ಆಡಳಿತ ಸೂತ್ರ ಹಿಡಿದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯಲ್ಲಿ ಯಾವ ರಾಜಕೀಯ ಪಕ್ಷವೂ ಈ ಅಪನಂಬಿಕೆಯ ಭಾವನೆಯಿಂದ ಹೊರತಾಗಿರಲಿಲ್ಲ. ಅವರಲ್ಲಿ ಮಡುಗಟ್ಟಿದ್ದ ಅವಜ್ಞೆ, ಅಸಹನೆಗಳು ಕಾಲಕಾಲಕ್ಕೆ ವ್ಯಕ್ತವಾಗುತ್ತಲೇ ಬಂದಿವೆ.

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುವ ವಿಷಯದಲ್ಲಿ ಇದು ಸ್ಪಷ್ಟವಾಗಿ ವ್ಕಕ್ತವಾಗುತ್ತಿತ್ತು. ಲೋಕಾಯುಕ್ತ ಕಾನೂನು ಜಾರಿಯಾಗುವ ಮುನ್ನವೇ ಸದ್ದು ಗದ್ದಲವಿಲ್ಲದೇ ಕಾನೂನು ತಿದ್ದುಪಡಿಯ ಮೂಲಕ, ಲೋಕಾಯುಕ್ತ ಪರಿಧಿಯಿಂದ   ಆಡಳಿತದಲ್ಲಿನ ಕೆನೆಪದರದ ವರ್ಗವನ್ನು ಹೊರ ತರಲಾಯಿತು. ಪರಿಣಾಮಕಾರಿ ಅನುಷ್ಠಾನಕ್ಕೆ ಲೋಕಾಯುಕ್ತ ಸೂಚಿಸಿದ ಆಡಳಿತಾತ್ಮಕ ವ್ಯವಸ್ಥೆ, ಸೂಕ್ತ ಕಾನೂನು ತಿದ್ದುಪಡಿ ಸಲಹೆಗಳಿಗೆ ಸರ್ಕಾರ ಕಿವಿಗೊಡಲೇ ಇಲ್ಲ.

ಈಗಿರುವ ಕಾನೂನಿನ ಪ್ರಕಾರ ಲೋಕಾಯುಕ್ತರಿಗೆ ಲಿಖಿತ ದೂರು ಬರುವ ತನಕ  ವಿಚಾರಣೆ ಪ್ರಾರಂಭಿಸಲು ಅಧಿಕಾರವಿಲ್ಲ. ಈ ಅಧಿಕಾರ ಇರುವುದು ಉಪಲೋಕಾಯುಕ್ತರಿಗೆ ಮಾತ್ರ. ಇದರಿಂದ ಉಂಟಾಗುವ ತೊಡಕನ್ನು ಪರಿಹರಿಸಲು ತಮಗೂ ಸ್ವತಃ ಕ್ರಮ ಕೈಗೊಳ್ಳುವ ಅಧಿಕಾರ ಕೊಡಬೇಕೆಂದು ವೆಂಕಟಾಚಲ ಮತ್ತು ಸಂತೋಷ ಹೆಗ್ಡೆ ಅವರು ಪದೇ ಪದೇ ಮಾಡಿದ ಮನವಿಗೆ ಸರ್ಕಾರ  ಕೊನೆ ತನಕವೂ ಕ್ಯಾರೇ ಅನ್ನಲಿಲ್ಲ.

ನಂತರ ಮಾಡಿದ್ದೇನು? ಕೇಳಿದ ಅಧಿಕಾರ ಕೊಡಲಿಲ್ಲ. ಕೇಳದೇ ಇದ್ದರೂ ತರಾತುರಿಯಿಂದ ಎರಡು ಉಪಲೋಕಾಯುಕ್ತ ಹುದ್ದೆಗಳನ್ನು ಸೃಷ್ಟಿಸಿತು. ಚುನಾವಣಾ ಆಯುಕ್ತರಾಗಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಟಿ.ಎನ್‌.ಶೇಷನ್ ಅವರನ್ನು ನಿಯಂತ್ರಿಸಲು ಒಬ್ಬರಿಗಿಂತ ಹೆಚ್ಚು ಚುನಾವಣಾ ಆಯುಕ್ತರನ್ನು ಸೃಷ್ಟಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಇದು ನೆನಪಿಗೆ ತರುತ್ತದೆ.

ಲೋಕಾಯುಕ್ತದ ದಾಳಿಗಳಲ್ಲಿ ಸಿಕ್ಕಿಬಿದ್ದವರ ಮೇಲೆ ಮುಂದಿನ ಕ್ರಮ ಕೈಗೊಳ್ಳುವಲ್ಲಿ ತೋರಿಸುತ್ತಿದ್ದ ಅನಾಸಕ್ತಿ ಊಹಿಸಲು ಅಸಾಧ್ಯ. ಇದರ ಬದಲಾಗಿ, ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಬಡ್ತಿ ಕೊಟ್ಟು ಅತಿ ಮುಖ್ಯ ಹುದ್ದೆಗಳಿಗೆ ನಿಯೋಜಿಸಲಾದ ನಿದರ್ಶನಗಳಿಗೂ ಕಡಿಮೆ ಏನಿಲ್ಲ. ಲೋಕಾಯುಕ್ತ ದಾಳಿಗೆ ಬೆದರದಿರಿ, ಸರ್ಕಾರ ನಿಮ್ಮ ಬೆಂಬಲಕ್ಕಿದೆ ಎಂದು ಭ್ರಷ್ಟ ಅಧಿಕಾರಿಗಳಿಗೆ ಸಂದೇಶ ನೀಡುವುದು ಬೇಕಿತ್ತೆ?

ಬಹುಶಃ  ಕಾನೂನು ಮಾಡಿದಾಗ ರಾಜಕೀಯ ಪಕ್ಷಗಳು ಬಯಸಿದ್ದು ಡ್ರಾಯಿಂಗ್‌ ರೂಮಿನಲ್ಲಿ ಇಡಬಹುದಾದಂಥ ಆಲಂಕಾರಿಕ ವಸ್ತುವಿನಂಥ ಲೋಕಾಯುಕ್ತವನ್ನು. ಇದನ್ನು ಅರಿಯದೇ ವೆಂಕಟಾಚಲ ಮತ್ತು ಹೆಗ್ಡೆ ಅವರು ಲೋಕಾಯುಕ್ತವನ್ನು  ಸಕ್ರಿಯ ಮಾಡಿದ್ದು  ಅಪರಾಧ. ಪಾಪ ಇದರಲ್ಲಿ ಸರ್ಕಾರದ ತಪ್ಪೇನು? ಲೋಕಾಯುಕ್ತವು ಒಳಗಿನಿಂದ ಗೆದ್ದಲು ತಿನ್ನುವಂತೆ ಆಗಿದ್ದು,  ಲೋಕಾಯುಕ್ತರ ನೇಮಕದಲ್ಲಿ ಅತಿಯಾದ ವಿಳಂಬದ ವಿಷಯದಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT