ವಾಡಾ ನಿಯಮದಲ್ಲಿ ಸಡಿಲಿಕೆ

7

ವಾಡಾ ನಿಯಮದಲ್ಲಿ ಸಡಿಲಿಕೆ

Published:
Updated:

ನವದೆಹಲಿ (ಪಿಟಿಐ): ಬಿಸಿಸಿಐ ಹೇರಿದ ಒತ್ತಡಕ್ಕೆ ಮಣಿದಿರುವ ಕೇಂದ್ರ ಕ್ರೀಡಾ ಸಚಿವಾಲಯವು ಕ್ರಿಕೆಟ್‌ಗೆ ಸಂಬಂಧಿಸಿದಂತೆ ವಿಶ್ವ ಉದ್ದೀಪನ ಮದ್ದು ತಡೆ ಘಟಕದ (ವಾಡಾ) ಕೆಲ ನಿಯಮಗಳಲ್ಲಿ ವಿನಾಯಿತಿ ನೀಡಲು ಒಪ್ಪಿಕೊಂಡಿದೆ.ಪರಿಷ್ಕೃತ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಈ ಹಿಂದೆ ವಾಡಾದ ಕೆಲ ನಿಯಮಗಳಿಗೆ ಬಿಸಿಸಿಐ ಹಾಗೂ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ವಾಡಾದ `ಎಲ್ಲಿರುತ್ತೇವೆ~ ಎಂಬ ವಿಷಯ ಸೇರಿದಂತೆ ಪ್ರಮುಖ ನಿಯಮಗಳಿಂದ ಕ್ರಿಕೆಟ್‌ಗೆ ವಿನಾಯಿತಿ ನೀಡಲಾಗಿದೆ. ವಾಡಾದ ಉದ್ದೀಪನ ತಡೆ ನಿಯಮದ ಪ್ರಕಾರ `ಎಲ್ಲಿರುತ್ತೇವೆ~ ಎಂದು ಮೂರು ತಿಂಗಳು ಮೊದಲೇ ಆಟಗಾರರು ಮಾಹಿತಿ ನೀಡಬೇಕು. ಈ ಸಮಯದಲ್ಲಿ ವಾಡಾ ಅಧಿಕಾರಿಗಳು ಯಾವುದೇ ಆಟಗಾರರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಬಹುದು. `ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕ್ರಿಕೆಟ್‌ಗೆ ಸಂಬಂಧಿಸಿದಂತೆ  ವಾಡಾದ ಕೆಲ ನಿಯಮಗಳಲ್ಲಿ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಐಸಿಸಿ ಕೂಡ ವಾಡಾದ ಕೆಲ ನಿಯಮಗಳನ್ನು ಪಾಲಿಸುವುದಿಲ್ಲ~ ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ಸೋಮವಾರ ತಿಳಿಸಿದರು.ಈ ಮೊದಲು ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆಯನ್ನು ತಿರಸ್ಕರಿಸಲಾಗಿತ್ತು. ಈಗ ಅದರಲ್ಲಿ 14 ಬದಲಾವಣೆ ಮಾಡಿ ಮತ್ತೆ ಸಚಿವ ಸಂಪುಟದ ಮುಂದಿಡಲಾಗುತ್ತಿದೆ. ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry