ಬುಧವಾರ, ಜುಲೈ 15, 2020
22 °C

ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ಗೈರು- ರಾಮದಾಸ್ ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ಗೈರು- ರಾಮದಾಸ್ ತೀವ್ರ ಅಸಮಾಧಾನ

ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಗೆ ವೈದ್ಯಕೀಯ ಸಚಿವ ಎಸ್.ಎ. ರಾಮದಾಸ್ ಅವರು ಸೋಮವಾರ ದಿಢೀರ್ ಭೇಟಿ ನೀಡಿದಾಗ ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಗೈರುಹಾಜರಾಗಿರುವುದು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಹಾಗೂ ವೈದ್ಯಕೇತರ ಸಿಬ್ಬಂದಿ ಸೇರಿ ಒಟ್ಟು 311 ಸಿಬ್ಬಂದಿ ಇದ್ದರೆ, ಕರ್ತವ್ಯಕ್ಕೆ ಹಾಜರಾದವರ ಸಂಖ್ಯೆ ಕೇವಲ 132 ಸಿಬ್ಬಂದಿ.

ಸುಮಾರು ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೈರುಹಾಜರಿಯಾಗಿರುವುದನ್ನು ಕಂಡು ಸಚಿವರು ಆಸ್ಪತ್ರೆಯ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಆಡಳಿತದ ವಿರುದ್ಧ ಬಂದ ದೂರುಗಳ ನಿವಾರಣೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲ.

 ಅಲ್ಲದೇ ಇಲ್ಲಿನ ಸಿಬ್ಬಂದಿ ಲಂಚಕ್ಕಾಗಿ ಪೀಡಿಸುತ್ತಿರುವ ಕುರಿತು ಹಲವು ರೋಗಿಗಳು ದೂರು ದಾಖಲಿಸಿರುವುದು ಗಮನಕ್ಕೆ ಬಂದಿತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ರಾಮದಾಸ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮಾನತು?

ವೈದ್ಯರ ಅನಧಿಕೃತ ಗೈರುಹಾಜರು ಹಾಗೂ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಆಸ್ಪತ್ರೆಯ ಅಧೀಕ್ಷಕ ಡಾ.ಸೋಮೆಗೌಡ ಅವರನ್ನು ಅಮಾನತು ಮಾಡಲು ವೈದ್ಯಕೀಯ ಸಚಿವ ಎಸ್.ಎ. ರಾಮದಾಸ್ ಸೂಚನೆ ನೀಡಿದ್ದಾರೆ.

‘ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ   ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಧೀಕ್ಷಕರನ್ನು ಅಮಾನತುಗೊಳಿಸುವಂತೆ ಮೌಖಿಕವಾಗಿ ಸೂಚನೆ ನೀಡಿದ್ದು ನಿಜ’  ಎಂದು ಬೆಂಗಳೂರು ಮೆಡಿಕಲ್   ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.