ಶುಕ್ರವಾರ, ಜನವರಿ 17, 2020
22 °C
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಧಿಕಾರಿ ಅಂಜನಕುಮಾರ್‌ ಭರವಸೆ

ವಿಜೇತರಿಗೆ ‘ದಾವಣಗೆರೆ ಉತ್ಸವ’ದಲ್ಲಿ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಣಣಗೆರೆ: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಂಬರುವ ‘ದಾವಣಗೆರೆ ಉತ್ಸವ’ದಲ್ಲಿ  ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಭರವಸೆ ನೀಡಿದರು.ನಗರದ ಸೇಂಟ್‌ ಫಾಲ್ಸ್‌ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ, ಶೈಕ್ಷಣಿಕ ವಿಕಸನ ಮತ್ತು ‘ಸಕಾಲ’ ಅನುಷ್ಠಾನದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಯೊಂದು ಪ್ರಮುಖ ಕಾರ್ಯಕ್ರಮ. ಮಕ್ಕಳ ಬಾಹ್ಯ ಹಾಗೂ ಆಂತರಿಕ ಬೆಳವಣಿಗೆಗೆ ಕಾರಂಜಿ ವೇದಿಕೆ ಆಗಲಿ. ಮಕ್ಕಳ ವೈಯಕ್ತಿಕ ಬೆಳವಣಿಗೆ ಆಗದಿದ್ದರೆ ಸರ್ವತೋಮುಖ ಅಭಿವೃದ್ಧಿ ಅಸಾಧ್ಯ. ಸಾಮರ್ಥ್ಯ, ಕ್ರಿಯಾಶೀಲತೆ ಎಲ್ಲರಲ್ಲೂ ಇರಲಿದೆ. ಅದಕ್ಕೆ ಉತ್ತಮ ವೇದಿಕೆ ದೊರೆತರೆ ಸಾಹಿತಿ, ಕವಿ, ರಂಗಕರ್ಮಿ, ನಟನಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಭವಿಷ್ಯದಲ್ಲಿ ದಾರಿ ದೀಪವಾಗಲಿದೆ. ಕಲೆ, ಸಾಹಿತ್ಯ ಉಳಿಸಿ; ಬೆಳೆಸಬೇಕಾದ ಅನಿವಾರ್ಯತೆ ಇಂದು ಕಾಣುತ್ತಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಎ.ಬಿ.ಹೇಮಚಂದ್ರ ಮಾತನಾಡಿ, ಶಿಕ್ಷಕರು ನಿರಂತರವಾಗಿ ಕಲಿಕೆಗೆ ಒತ್ತು ನೀಡಬೇಕು. ಹೊಸ ಆವಿಷ್ಕಾರ ಹಾಗೂ ಬದಲಾವಣೆಗೆ ತೆರೆದುಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಕಲಿಕೆಗೆ ನಾಯ್ಯ ಕೊಡಿಸಲು ಸಾಧ್ಯ. ನಿತ್ಯ ಶಾಲೆಯಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಆಗ ಪಠ್ಯೇತರ ಚಟುವಟಿಕೆಗಳ ಸಾಧನೆಯಲ್ಲೂ ಸ್ಥಿರತೆ ಪ್ರದರ್ಶಿಸಲು ಸಾಧ್ಯ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಸದಸ್ಯೆ ಸಹನಾ ರವಿ ಮಾತನಾಡಿ, ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಬೇಕಿದೆ. ಗ್ರಾಮೀಣ ಮಕ್ಕಳಿಗೆ ಸೂಕ್ತ ತರಬೇತಿ ಇಲ್ಲ. ಆದರೂ, ನಗರ ಮಟ್ಟದ ಮಕ್ಕಳಷ್ಟೇ ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣರಿಗೂ ತರಬೇತಿ ನೀಡುವ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ನಾಗರಾಜ್‌, ಪ್ರೇಮಾ ಸಿದ್ದೇಶ್‌, ಶಾರದಾ ಉಮೇಶ ನಾಯ್ಕ, ಡಿ.ಕೆ.ಶಿವಕುಮಾರ್‌, ಎಚ್‌.ಪ್ರೇಮಾ, ಡಿ.ಲಕ್ಷ್ಮೀದೇವಿ, ಸಿದ್ದಪ್ಪ ಹಾಜರಿದ್ದರು.ಶಾಲಾ ಆವರಣದಲ್ಲಿ ಮಕ್ಕಳ ಕಲರವ...!

ದಾವಣಗೆರೆ:
ಅಲ್ಲಿ ಮಕ್ಕಳ ಕಲರವವೇ ಮೇಳೈಸಿತ್ತು. ಬೆಳಿಗ್ಗೆಯೇ ಮಕ್ಕಳು ವಿವಿಧ ವೇಷಭೂಷಣದ ಜತೆಗೆ ಆಗಮಿಸಿದ್ದರು. ವೀರಗಾಸೆ, ಜಾನಪದ ಕಲೆ, ನಮ್ಮ ಸಂಸ್ಕೃತಿಯ ಚಿತ್ತಾರವೇ ಅಲ್ಲಿ ಅನಾವರಣಗೊಂಡಿತ್ತು.ಈ ದೃಶ್ಯಗಳು ಕಂಡು ಬಂದಿದ್ದು ನಗರದ ಸೇಂಟ್‌ ಪಾಲ್ಸ್‌ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧೆಗಳು ನಡೆದವು.7 ಶೈಕ್ಷಣಿಕ ವಲಯಗಳಲ್ಲಿ ಪ್ರಥಮ ಸ್ಥಾನ ಪಡೆದ 685 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟು 36 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ತೋರಿದರು.

ಪ್ರತಿಕ್ರಿಯಿಸಿ (+)