ಶನಿವಾರ, ಜೂನ್ 19, 2021
27 °C

ವಿದೇಶಿ ವಿದ್ಯಾರ್ಥಿಗಳ ಸಡಗರದ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಉತ್ಸವವನ್ನು ಇತ್ತೀಚೆಗೆ ದಯಾನಂದ ಸಾಗರ್‌ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಇಂಟರ್‌ನ್ಯಾಷನಲ್‌ ಜಂಟಿಯಾಗಿ ಆಯೋಜಿಸಿದ್ದವು. ಮೂರು ದಿನಗಳ ಈ ಉತ್ಸವದಲ್ಲಿ ವಿದೇಶಿ ವಿದ್ಯಾರ್ಥಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಆಫ್ಘಾನಿಸ್ತಾನದ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ ಅವರು ಮುಖ್ಯ ಅತಿಥಿಯಾಗಿ ಹಾಗೂ ರ್‍ವಾಂಡದ ರಾಯಭಾರ ಕಚೇರಿಯ ಉಪ ಹೈ ಕಮಿಷನರ್ ಜೋಸೆಫ್ ಕಬಾಕೆಜಾ ಅವರು ಈ ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾದರು.‘ಭಯೋತ್ಪಾದನೆ ವಿರುದ್ಧ ಹೊರಾಡಲು ಶಿಕ್ಷಣ ಎಂಬ ಆಯುಧ ಇರಬೇಕಾದ್ದು ಕಡ್ಡಾಯ. ಇಂಥ ಪರಿಸ್ಥಿತಿ ಎಲ್ಲೆಡೆಯೂ ಇದೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವುದೇ ಸಾಕ್ಷಿ. ಹೀಗಾಗಿ ನಮ್ಮ ರಾಷ್ಟ್ರವನ್ನು ಅಭಿವೃದ್ಧಿಶೀಲ ಹಾಗೂ ಸುರಕ್ಷಿತ ರಾಷ್ಟ್ರವನ್ನಾಗಿಸುವುದರ ಜತೆಗೆ ಸದೃಢವನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕಾರ್ಯಕ್ಕಾಗಿ ಭಾರತಕ್ಕೆ ನಾವು ವಂದನೆಗಳನ್ನು ಸಲ್ಲಿಸಬೇಕು. ಭಾರತದ ಜತೆಗೆ ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜಗತ್ತಿನ ಇತರ ರಾಷ್ಟ್ರಗಳ ನೆರವೂ ಸಹ ಇದೆ. ಇದರಿಂದಾಗಿ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇಂದು ಶಾಲೆಗೆ ಸೇರುತ್ತಿದ್ದಾರೆ. ಇವರಲ್ಲಿ ಶೇ 40ರಷ್ಟು ಬಾಲಕಿಯರು ಇರುವುದು ದೊಡ್ಡ ಸಂಗತಿ. ಹತ್ತು ಸಾವಿರ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತದ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಆಫ್ಘಾನಿಸ್ತಾನ ಬದಲಾದ ಚಿತ್ರಣವಿದು. ಇದು ಆಫ್ಘಾನಿಸ್ತಾನದಲ್ಲಿ ಶಾಂತಿ ಹಾಗೂ ಪ್ರಜಾಪ್ರಭುತ್ವ ಸ್ಥಾಪಿಸಲು ಅನುಕೂಲವಾಗಿದೆ' ಎಂದು ಆಫ್ಘಾನಿಸ್ತಾನದ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ ತಿಳಿಸಿದರು.ದಯಾನಂದ ಸಾಗರ್‌ ಕಾಲೇಜು ಸೇರಿದಂತೆ ನಗರದ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕ್ರೀಡೆ, ಕಲೆ, ಸಂಗೀತ, ನೃತ್ಯ, ಸಾಂಸ್ಕೃತಿಕ, ಅಡುಗೆ, ಚರ್ಚೆ, ರಾಷ್ಟ್ರವನ್ನು ಪ್ರತಿನಿಧಿಸುವುದು, ಆಹಾರ, ರಾಷ್ಟ್ರ ಧ್ವಜ ಇತ್ಯಾದಿ ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಿ ಅದರಲ್ಲಿ ಗಮನ ಸೆಳೆದರು.ಇರಾನ್- ಹೈದರಾಬಾದ್‌ನ ಕಾನ್ಸುಲೇಟ್ ಜನರಲ್ ಹುಸೈನ್ ನೂರಿಯನ್, ಇರಾನ್- ನವ ದೆಹಲಿಯ ವಿಜ್ಞಾನ, ಸಂಶೋಧನೆ ಹಾಗೂ ತಂತ್ರಜ್ಞಾನ ಕೌನ್ಸಲರ್ ಡಾ. ಅಲಿ ಆಝಂ ಖಸ್ರವಿ, ಆಫ್ಘಾನಿಸ್ತಾನದ ಕೌನ್ಸಲರ್ ಪ್ರೊ. ಅಬ್ದುಲ್ ಖಾಲಿಕ್ ರಷ್ದಿ ಹಾಗೂ ರೋಟರಿ ಇಂಟರ್‌ನ್ಯಾಷನಲ್‌ನ ಜಿಲ್ಲಾ ಗೌರ್ನರ್ ಕೆ.ಎಸ್. ನಾಗೇಂದ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.