ಶುಕ್ರವಾರ, ಜೂನ್ 25, 2021
22 °C

ವಿದ್ಯುತ್ ಪ್ರವಹಿಸಿ ಆಹಾರ ನಿರೀಕ್ಷಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯ ಕಟ್ಟಡದ ಆವರಣದಲ್ಲಿದ್ದ ತೆಂಗಿನ ಮರದ ಸೋಗೆಯನ್ನು (ಗರಿ) ಕೀಳುವ ಯತ್ನದಲ್ಲಿ ನಗರದ ಉತ್ತರ ವಲಯ ಆಹಾರ ನಿರೀಕ್ಷಕ ಆರ್.ಹನುಮಯ್ಯ (55) ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕಾಮಾಕ್ಷಿಪಾಳ್ಯ ಬಳಿಯ ಎಚ್‌ವಿಆರ್ ಲೇಔಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ನಗರದ ಹೊರ ವಲಯದಲ್ಲಿರುವ ಕುಂಬಳಗೋಡು ಸಮೀಪದ ಚಿನ್ನಕುರ್ಸಿ ಗ್ರಾಮದವರಾದ ಹನುಮಯ್ಯ ಪತ್ನಿ ರಾಧಮ್ಮ ಮತ್ತು ಪುತ್ರ ರಜಿತ್ ಜತೆ ಎಚ್‌ವಿಆರ್ ಲೇಔಟ್ ಮೂರನೇ ಅಡ್ಡರಸ್ತೆಯ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಅವರ ಪುತ್ರಿ ಮೋನಿಕಾ ಅವರ ವಿವಾಹವಾಗಿದ್ದು, ಪತಿಯ ಮನೆಯಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹನುಮಯ್ಯ ಅವರ ಮನೆಯ ಕಟ್ಟಡದ ಆವರಣದಲ್ಲಿರುವ ತೆಂಗಿನ ಮರವೊಂದರ ಸೋಗೆ ಒಣಗಿ ಬೀಳುವಂತಿತ್ತು. ಸೋಗೆ ಸಾರ್ವಜನಿಕರ ಮೇಲೆ ಬಿದ್ದು ಅನಾಹುತವಾದೀತು ಎಂದು ಭಾವಿಸಿದ ಅವರು ಆ ಸೋಗೆಯನ್ನು ಕೀಳಲು ಮುಂದಾದಾಗ ಈ ದುರ್ಘಟನೆ ನಡೆದಿದೆ. ಅವರು ಮನೆಯ ಮಹಡಿಯಲ್ಲಿ ನಿಂತು ಸೋಗೆಯನ್ನು ಎಳೆಯುತ್ತಿದ್ದಂತೆ ಸೋಗೆ, ಕಟ್ಟಡದ ಸಮೀಪವೇ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿತು. ಈ ವೇಳೆ ಸೋಗೆಯ ಮೂಲಕ ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಳ್ಳೆಯ ವ್ಯಕ್ತಿ: `ಸೌಮ್ಯ ಸ್ವಭಾವದ ಹನುಮಯ್ಯ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರು ಸಂಬಂಧಿಕರು ಮತ್ತು ನೆರೆಹೊರೆಯವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.

ಪರೋಪಕಾರಿಯಾಗಿದ್ದ ಅವರು ಸಾವನ್ನಪ್ಪಿರುವುದರಿಂದ ತುಂಬಾ ದುಃಖವಾಗುತ್ತಿದೆ~ ಎಂದು ಮೃತರ ಸಂಬಂಧಿಕರಾದ ಗೋವಿಂದರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.