ಶುಕ್ರವಾರ, ಮಾರ್ಚ್ 5, 2021
29 °C

ವಿವಿಧತೆಯಲ್ಲಿ ಏಕತೆ ಸಾರಿದ ‘ಭಾರತ ದರ್ಶನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧತೆಯಲ್ಲಿ ಏಕತೆ ಸಾರಿದ ‘ಭಾರತ ದರ್ಶನ’

ಬೆಂಗಳೂರು: ಸಮವಸ್ತ್ರಧಾರಿಗಳಾಗಿದ್ದ ಸಿಪಾಯಿಗಳ ಸಮೂಹದ ಶಿಸ್ತಿನ ಪಥಸಂಚಲನ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ತೆರೆದಿಟ್ಟ ನೃತ್ಯರೂಪಕಗಳು ಅಲ್ಲಿ ನೆರೆದಿದ್ದ ಜನರಿಗೆ ಮುದ ನೀಡಿದವು.ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಸೋಮವಾರ 70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ಚಿತ್ರಣವಿದು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸುವುದಕ್ಕೂ ಮುನ್ನ ಆಗಸದಿಂದ ಹೆಲಿಕಾಪ್ಟರ್ ಸುರಿಸಿದ ಪುಷ್ಪವೃಷ್ಟಿ ಕ್ಷಣಕಾಲ ಕಾರ್ಯಕ್ರಮಕ್ಕೆ  ಗುಲಾಬಿಯ ರಂಗು ತುಂಬಿತ್ತು.ತೆರೆದ ಜೀಪಿನಲ್ಲಿ ಗೌರವ ರಕ್ಷೆ ಸ್ವೀಕರಿಸಲು ಹೊರಟಮುಖ್ಯಮಂತ್ರಿ ಅವರತ್ತ ಕೈಬೀಸಿದ ಸಭಿಕರು, ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಪರೇಡ್‌ ಕಮಾಂಡರ್‌ ಪಿ.ಪಾಪಣ್ಣ ನೇತೃತ್ವದಲ್ಲಿ ಬಹು ಶಿಸ್ತಿನಲ್ಲಿ ಸಾಗಿದ 54 ಕವಾಯತು ತುಕಡಿಗಳಿಗೆ (ಶಾಲೆ, ಕಾಲೇಜು ವಿದ್ಯಾರ್ಥಿಗಳು ಒಳಗೊಂಡು) ಭರಪೂರ ಕರತಾಡನದ ಹರ್ಷೋದ್ಗಾರ ದೊರೆಯಿತು.ಕೇರಳ ರಾಜ್ಯದ ಸಶಸ್ತ್ರ ಪಡೆಯ ತುಕಡಿಯೂ ಪಥ ಸಂಚಲನದಲ್ಲಿ ಪಾಲ್ಗೊಂಡಿತ್ತು. ನಂತರ ನಡೆದದ್ದೆಲ್ಲವೂ ಮನದ ಮೂಲೆಯಲ್ಲಿ ಅಡಗಿದ್ದ ದೇಶಭಕ್ತಿಯನ್ನು ಬಡಿದೇಳಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.ಆಡುಗೋಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ವಿಐಪಿ ಶಾಲೆ, ಮುನಿಚಿನ್ನಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಒಟ್ಟು 680 ವಿದ್ಯಾರ್ಥಿಗಳು ಆರಂಭದಲ್ಲಿ ಪ್ರದರ್ಶಿಸಿದ ‘ಶಾಂತಿ ಕ್ರಾಂತಿ’ ನೃತ್ಯರೂಪಕ, ಸತ್ಯ, ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಗೆಯನ್ನು ಕಟ್ಟಿಕೊಟ್ಟಿತು. ಭಗತ್‌ ಸಿಂಗ್‌, ಸುಭಾಷ್‌ ಚಂದ್ರ ಬೋಸ್‌ ಅವರ ಕ್ರಾಂತಿಕಾರಿ ಹೋರಾಟ, ಅಹಿಂಸೆ, ಅಸಹಕಾರ ಚಳವಳಿಯ ಮೂಲಕ ಗಾಂಧಿ ನಡೆಸಿದ ಹೋರಾಟದ ವಿವಿಧ ಮಜಲುಗಳನ್ನು ಸಾದರಪಡಿಸಿತು.ಬೆಂಗಳೂರು ಉತ್ತರ ವಲಯದ ಬಾಗಲಗುಂಟೆಯ ತ್ರಿವೇಣಿ ಪಬ್ಲಿಕ್‌ ಸ್ಕೂಲ್‌, ಸೇಂಟ್‌ ಥೆರೇಸಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ 750 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭಾರತ ದರ್ಶನ’ ರೂಪಕ,  ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.ತ್ರಿವರ್ಣ ಧ್ವಜ ಸಾರುವ ಸಂದೇಶ, ರಾಷ್ಟ್ರ ಪಕ್ಷಿ, ರಾಷ್ಟ್ರಹೂವಿನ ಮಹತ್ವವನ್ನು ದೃಶ್ಯ ರೂಪಕದಲ್ಲಿ ಕಟ್ಟಿಕೊಡಲಾಯಿತು. ಕಮಲ ದಳದ ವೇಷಧಾರಿಗಳಾಗಿದ್ದ ವಿದ್ಯಾರ್ಥಿನಿಯರು ಅದನ್ನು ಅರಳಿಸಿದ ಬಗೆ ಹಾಗೂ ತಮ್ಮ ಬೆನ್ನ ಹಿಂದೆ ಅಡಗಿಸಿಕೊಂಡಿದ್ದ ನವಿಲಿನ ಗರಿಗಳನ್ನು ಅರಳಿಸಿ ಕುಣಿದ ರೀತಿ ಸಭಿಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 700 ವಿದ್ಯಾರ್ಥಿಗಳ ‘ಜಯ ಭಾರತಿ’ ನೃತ್ಯರೂಪಕ, ಸ್ವಾತಂತ್ರ್ಯ ಉತ್ಸವದ ಮೆರಗು ಇಮ್ಮಡಿಗೊಳ್ಳುವಂತೆ ಮಾಡಿತು. ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಹಲವರ ತ್ಯಾಗವನ್ನು ನೆನಪು ಮಾಡಿತು. ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸುವ ದೃಶ್ಯ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಹೃದಯ ಬಡಿತ ಹೆಚ್ಚುವಂತೆ ಮಾಡಿತು.

 

ಕಸ್ತೂರಬಾನಗರದ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಹಲಗಲಿ ಬೇಡರ ದಂಗೆ’ಯ ರೂಪಕ, ಆಗಿನ ಮುಧೋಳ ಸಂಸ್ಥಾನದ ಹಲಗಲಿ ಬೇಡರ ಪರಾಕ್ರಮ, ಸಾಹಸವನ್ನು ಎತ್ತಿ ತೋರಿಸಿತು.ಬೇಡರ ಸ್ವಾಭಿಮಾನದ ಬದುಕಿಗೆ ಅಡ್ಡಿಯಾದ ಬ್ರಿಟಿಷ್‌ ಸರ್ಕಾರದ ನಿಶ್ಯಸ್ತ್ರೀಕರಣ ಕಾಯ್ದೆಯ ವಿರುದ್ಧದ ಹೋರಾಟ ಮಾಡಿ ಮಡಿದ ದೃಶ್ಯ ಸಭಿಕರ ಮನಕಲುಕಿತು. ಬೆಳಗಾವಿಯ ಮರಾಠ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟಿನ ಯೋಧರು ಪ್ರದರ್ಶಿಸಿದ ನೆಲಮೂಲದ ‘ಮಲ್ಲಕಂಬ’ದ ಕಸರತ್ತು ಗಮನ ಸೆಳೆಯಿತು.

ಆತ್ಮವಿಶ್ವಾಸ ಇಮ್ಮಡಿಗೊಂಡಿದೆ

ಸಾಂಸ್ಕೃತಿಕ ಕಾರ್ಯಕ್ರಮಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸವಿತಾ ಮಾತನಾಡಿ, ‘ಜಯ ಭಾರತಿ ನೃತ್ಯರೂಪಕಕ್ಕಾಗಿ ಒಂದು ತಿಂಗಳು ಅಭ್ಯಾಸ ಮಾಡಿದ್ದೆವು. ಪ್ರತಿದಿನ ಬೆಳಿಗ್ಗೆ 7ರಿಂದ 10ರವರೆಗೆ ತಾಲೀಮು ನಡೆಸಿದ್ದರಿಂದ ಈ ಸಾಧನೆ ತೋರಲು ಸಾಧ್ಯವಾಯಿತು. ಪ್ರಶಸ್ತಿ ಸಿಕ್ಕಿದ್ದು ನಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪಥಸಂಚಲನದಲ್ಲಿ ಅಮೋಘ ಪ್ರದರ್ಶನ ನೀಡಿದ ರಮಣ ಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳಿಗೆ 8ನೇ ಗುಂಪಿನಲ್ಲಿ ಪ್ರಥಮ ಬಹುಮಾನ ಸಿಕ್ಕಿತು. 46 ವಿದ್ಯಾರ್ಥಿಗಳನ್ನೊಳಗೊಂಡ ಈ ತಂಡ ಗಣರಾಜ್ಯೋತ್ಸವದಲ್ಲಿ ದ್ವಿತೀಯ ಬಹುಮಾನ ಪಡೆದಿತ್ತು. ‘ಪಥ ಸಂಚಲನಕ್ಕಾಗಿ 15 ದಿನಗಳ ಕಾಲ ಅಭ್ಯಾಸ ನಡೆಸಿದ್ದೇವೆ. ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ’ ಎಂದು ತಂಡದ ನೇತೃತ್ವ ವಹಿಸಿದ್ದ ಡಿ.ಪ್ರವೀಣ್‌ ಹೇಳಿದರು.

ಮದಿಅಳಗನ್‌ಗೆ ವಿಶೇಷ ಪ್ರಶಸ್ತಿ

ಕಳೆದ 33 ವರ್ಷಗಳಿಂದ ಮಾಣೆಕ್‌ ಷಾ ಮೈದಾನವನ್ನು ಸಮತಟ್ಟು ಮಾಡುತ್ತಾ ಬಂದಿರುವ ರೋಡ್‌ ರೋಲರ್‌ ಚಾಲಕ ಮದಿಅಳಗನ್‌ ಅವರಿಗೆ ‘ವಿಶೇಷ ಪ್ರಶಸ್ತಿ’ ನೀಡಲಾಯಿತು.

‘ನಮ್ಮ ತಂದೆ ರಾಮಸ್ವಾಮಿ ಸಹ ರೋಡ್‌ ರೋಲರ್‌ ಚಾಲಕರಾಗಿದ್ದರು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾಣೆಕ್‌ ಷಾ ಮೈದಾನವನ್ನು ಸಮತಟ್ಟು ಮಾಡುತ್ತೇನೆ. ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.