ಬುಧವಾರ, ಮಾರ್ಚ್ 3, 2021
25 °C
25 ವರ್ಷಗಳ ಹಿಂದಿನ ಮಟ್ಟಕ್ಕೆ ಜಿಡಿಪಿ: ಹೂಡಿಕೆ ಇಳಿಕೆ ಸಂಭವ

ವಿಶ್ವ ಆರ್ಥಿಕತೆ: ಚೀನಾ ಪ್ರಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಆರ್ಥಿಕತೆ: ಚೀನಾ ಪ್ರಭಾವ

ಬೀಜಿಂಗ್‌ (ಪಿಟಿಐ): ಬೀಜಿಂಗ್‌ (ಪಿಟಿಐ): ವಿಶ್ವದ ಎರಡನೇ  ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಒಟ್ಟಾರೆ ಆಂತರಿಕ ಉತ್ಪಾದನೆ (ಜಿಡಿಪಿ) 25 ವರ್ಷಗಳ ಹಿಂದಿನ ಮಟ್ಟಕ್ಕೆ  ಕುಸಿದಿದೆ.

2015ರಲ್ಲಿ ಚೀನಾದ ಜಿಡಿಪಿ ಶೇ 6.9ಕ್ಕೆ ಕುಸಿದಿರುವುದು ಜಾಗತಿಕ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ.ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಚೀನಾದ ಆರ್ಥಿಕ ತಳಮಳದ ಬಿಸಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆ ಇದೆ. ರಫ್ತು ವಹಿವಾಟಿನ ಮೇಲೆ ಪೆಟ್ಟು ಬೀಳಲಿದೆ ಎಂದು  ಅಂದಾಜಿಸಲಾಗಿದೆ.ಈಗಾಗಲೇ ಭಾರತದ ರಫ್ತು–ವಹಿವಾಟು 13 ತಿಂಗಳಿನಿಂದಲೂ ಇಳಿಮುಖವಾಗಿದೆ. ಇದೀಗ ಚೀನಾದ ಜಿಡಿಪಿ 25 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿಕೆಯಾಗಿರುದರಿಂದ ಭಾರತ ರಫ್ತು ಉದ್ಯಮ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ಚೀನಾದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಶೇ 6.8ಕ್ಕಿಂತಲೂ ಕೆಳಕ್ಕಿಳಿದಲ್ಲಿ ಚೀನಾ ಸರ್ಕಾರ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಘೋಷಿಸುವುದು ಅನಿವಾರ್ಯವಾಗಲಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 

 

ಚೀನಾದ ಆರ್ಥಿಕ ಪ್ರಗತಿ ಬಗ್ಗೆ ಹೂಡಿಕೆದಾರರಲ್ಲಿ ಅನಿಶ್ಚಿತತೆ ಮನೆಮಾಡಿದೆ. ಮಂದ ಆರ್ಥಿಕ ಸ್ಥಿತಿಯನ್ನು ಅಲ್ಲಿನ ಸರ್ಕಾರ ನಿರ್ವಹಿಸಬಲ್ಲದೇ ಎಂಬ ಬಗ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಅನುಮಾನ ಮೂಡಲಾರಂಭಿಸಿದೆ.ಗ್ರಾಹಕರ ಆಧಾರಿತ ಮಾರುಕಟ್ಟೆಗೆ ಆದ್ಯತೆ ನೀಡಿ ಆ ಮೂಲಕ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಚೀನಾ  ಎಡವಿದೆ. ಸ್ಥಿರ ಆರ್ಥಿಕ ಪ್ರಗತಿ ಸಾಧಿಸಲು  ಚೀನಾ ಉತ್ಪಾದನೆಗೆ ಆದ್ಯತೆ ನೀಡಬೇಕಾಗಿದೆ ಎಂಬ ವಾದಗಳು ಕೇಳಿ ಬರುತ್ತಿವೆ.ಸಾಂಸ್ಥಿಕ ಪರಿವರ್ತನೆ ಪ್ರಕ್ರಿಯೆ ಇನ್ನೂ  ನಡೆಯುತ್ತಿದೆ. ಸವಾಲುಗಳನ್ನು ಎದುರಿಸಿ, ಸಮಸ್ಯೆಗಳಿಂದ ಹೊರಬರಲು ಇದು ಅತ್ಯಂತ ಸೂಕ್ತ ಸಂದರ್ಭವಾಗಿದೆ ಎಂದು ಚೀನಾ ಅಂಕಿ–ಅಂಶ ಸಂಸ್ಥೆ (ಎನ್‌ಬಿಎಸ್‌) ಹೇಳಿದೆ.ಚೀನಾದ ರಾಷ್ಟ್ರೀಯ ಅಂಕಿ–ಸಂಖ್ಯೆ  ಸಂಸ್ಥೆ(ಎನ್‌ಬಿಎಸ್‌)ಮಂಗಳವಾರ ಜಿಡಿಪಿ ಪ್ರಗತಿ ದರ ಬಿಡುಗಡೆ ಮಾಡಿದ್ದು, ನಾಲ್ಕನೇ ತ್ರೈಮಾಸಿಕದ ಪ್ರಗತಿಯನ್ನು ಶೇ 6.8ಕ್ಕೆ ತಗ್ಗಿಸಿದೆ.2009ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಇದೂ ಸಹ ತ್ರೈಮಾಸಿಕವೊಂದರ ಅತಿ ಕನಿಷ್ಠ ಮಟ್ಟದ ಪ್ರಗತಿಯಾಗಿದೆ. 2015ನೇ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಜಿಡಿಪಿ ಪ್ರಗತಿ ಸಾಧ್ಯವಾಗಲಿದೆ ಎಂದು ಕಳೆದ ವರ್ಷ ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಹೇಳಿದ್ದರು.ಆದರೆ, ಅದಕ್ಕೂ ಕಡಿಮೆ ಶೇ 6.9ರಷ್ಟು ಪ್ರಗತಿ ಕಂಡಿದೆ. ಇದರಿಂದ ಜಾಗತಿಕ ಹೂಡಿಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.ಸೇವಾ ವಲಯ ಚೇತರಿಕೆ: ಇದೇ ಮೊದಲ ಬಾರಿಗೆ ಸೇವಾ ವಲಯವು ಪ್ರಗತಿಯಲ್ಲಿ ತಯಾರಿಕಾ ವಲಯವನ್ನು ಹಿಂದಿಕ್ಕಿದೆ. 2015ರಲ್ಲಿ ಸೇವಾ ವಲಯವು ಒಟ್ಟು ಜಿಡಿಪಿ ಪ್ರಗತಿಗೆ ಶೇ 50ರಷ್ಟು ಕೊಡುಗೆ ನೀಡಿದೆ. 2014ರಲ್ಲಿ ಶೇ 48ರಷ್ಟು ಕೊಡುಗೆ ನೀಡಿತ್ತು.ತಯಾರಿಕಾ ವಲಯದ ಪ್ರಗತಿ ಕುಂಠಿತವಾಗಿದ್ದರಿಂದ ಕಳೆದ ಮೂರು ದಶಕಗಳಿಂದ ಚೀನಾ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಆದರೆ, ಇದೀಗ ಸೇವಾ ವಲಯದ ಚೇತರಿಕೆಯಿಂದ ಅಲ್ಪ ಮಟ್ಟಿನ ಚೇತರಿಕೆ ಸಾಧ್ಯವಾಗಿದೆ.ಚೀನಾ ಸರ್ಕಾರ ಹೂಡಿಕೆ ಆಧಾರಿತ ಪ್ರಗತಿಗಿಂತಲೂ ಸಂಶೋಧನೆ ಆಧಾರಿತ ವಿಸ್ತರಣೆಗೆ ಹೆಚ್ಚು ಒತ್ತು ನೀಡಿದ್ದರಿಂದ ಸೇವಾ ವಲಯಕ್ಕೆ ಹೋಲಿಸಿದರೆ ತಯಾರಿಕಾ ವಲಯದ ಕೊಡುಗೆ 2015ರಲ್ಲಿ ಒಟ್ಟು ಜಿಡಿಪಿಯಲ್ಲಿಶೇ 10ರಷ್ಟು ಕಡಿಮೆಯಾಗಿದೆ ಎಂದು ಎನ್‌ಬಿಎಸ್‌ ತಿಳಿಸಿದೆ. ಆರ್ಥಿಕ ಚೇತರಿಕೆಗಾಗಿ ಸರ್ಕಾರ  ‘ಯುವಾನ್‌’ ಅಪಮೌಲ್ಯ ಮಾಡಿದೆಶಾಂಘೈ ಸೂಚ್ಯಂಕ ಚೇತರಿಕೆ: ಜಿಡಿಪಿ ದರ 25 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದ ಪರಿಣಾಮ ಶಾಂಘೈ ಷೇರು ಮಾರುಕಟ್ಟೆ ಸೂಚ್ಯಂಕ ಪಾತಾಳಕ್ಕೆ ಕುಸಿದಿತ್ತು. ಹೊಸ ವರ್ಷದಲ್ಲಿ ಈವರೆಗೆ ಸೂಚ್ಯಂಕ ಶೇ 20ರಷ್ಟು ಹಾನಿ ಅನುಭವಿಸಿತ್ತು. ಮಧ್ಯಾಹ್ನದ ನಂತರ ಚೇತರಿಕ ಕಂಡು ಶೇ 3ರಷ್ಟು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಂಡಿದೆ. ಚೀನಾದ ಮಂದ ಆರ್ಥಿಕ ಪ್ರಗತಿಯಿಂದ ಅಲ್ಲಿನ ಶಾಂಘೈ ಷೇರುಪೇಟೆ ವಹಿವಾಟು ಕಳೆದ ವರ್ಷದಿಂದ ಅಸ್ಥಿರವಾಗಿದೆ.  ಮಾತ್ರವಲ್ಲ ವಿಶ್ವ ಮಾರುಕಟ್ಟೆಯ ಮೇಲೂ ಋಣಾತ್ಮಕ ಪ್ರಭಾವ ಬೀರಿದೆ.ಕಳೆದ ವರ್ಷ ಚೀನಾದ ಷೇರುಪೇಟೆ 3 ಲಕ್ಷ ಕೋಟಿ ಡಾಲರ್‌ಗಳಷ್ಟು ನಷ್ಟ ಅನುಭವಿಸಿತ್ತು. ಆ ನಂತರ ಸಾಕಷ್ಟು ಏರಿಳಿತಕ್ಕೆ ಒಳಗಾಗಿದೆ. 200 ಲಕ್ಷಕ್ಕೂ ಸಣ್ಣ ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿತ್ತು.* ಜಿಡಿಪಿ ಕುಸಿತದ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ. ಚೀನಾದ ಆರ್ಥಿಕತೆ ಪ್ರಗತಿ ಪಥದಿಂದ ಹೊರಹೋಗಿಲ್ಲ. ಚೇತರಿಸಿಕೊಳ್ಳುವ ಆಶಾವಾದವಿದೆ.

-ವಾಂಗ್‌ ಬವೂನ್‌, ಮುಖ್ಯಸ್ಥ

ಚೀನಾದ ರಾಷ್ಟ್ರೀಯ  ಅಂಕಿ–ಸಂಖ್ಯೆ  ಸಂಸ್ಥೆಕಾರಣಗಳು

* ಕೈಗಾರಿಕಾ ಪ್ರಗತಿ ಶೇ 8.3 ರಿಂದ ಶೇ 6.1ಕ್ಕೆ ಕುಸಿತ

* ಶೇ 12 ರಿಂದ ಶೇ 10.7ಕ್ಕೆ ತಗ್ಗಿದ ಚಿಲ್ಲರೆ ಮಾರಾಟ

* ಹೊಸ ಗೃಹ ನಿರ್ಮಾಣ ಶೇ 14.6 – ಶೇ 14ಕ್ಕೆ ಇಳಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.