ಬುಧವಾರ, ಜೂಲೈ 8, 2020
29 °C

ವಿಶ್ವ ಪರಂಪರೆ ತಾಣಕ್ಕೆ ವಿರೋಧ ಅನಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಪರಂಪರೆ ತಾಣಕ್ಕೆ ವಿರೋಧ ಅನಗತ್ಯ

ಪಶ್ಚಿಮಘಟ್ಟಗಳ ವೈಜ್ಞಾನಿಕವಾಗಿ ಆಯ್ದ ಪ್ರದೇಶಗಳನ್ನು ವಿಶ್ವಪರಂಪರೆ ತಾಣಗಳೆಂದು ಘೋಷಿಸುವ ಯುನೆಸ್ಕೊ ಪ್ರಸ್ತಾವವನ್ನು ವಿರೋಧಿಸಿರುವ ರಾಜ್ಯ ಸರ್ಕಾರದ ನಿಲುವು ಹೇಸಿಗೆ ಹುಟ್ಟಿಸುವಷ್ಟರ ಮಟ್ಟಿಗೆ ದೂರಾಲೋಚನೆಯಿಂದ ಕೂಡಿದೆ. ಅನೇಕ ಹಿರಿಯ ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳು ಈ ಪ್ರಸ್ತಾವವನ್ನು ವಿರೋಧಿಸಲು ವಿಚಿತ್ರವಾದ ವಾದಗಳನ್ನು ಮುಂದಿಡುತ್ತಿದ್ದಾರೆ. ಕೊಡಗಿನ ಬಿಜೆಪಿ ಶಾಸಕರು ಸಿಟ್ಟಿನಿಂದ ಯುನೆಸ್ಕೊ ಪ್ರಸ್ತಾವ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಕಲ್ಲು ಹಾಗೂ ಮರಳಿನ ಲಭ್ಯತೆಯನ್ನು ತಪ್ಪಿಸುತ್ತದೆ ಎಂದರೆ, ಮತ್ತೊಬ್ಬ ಹಿರಿಯ ಸಚಿವರು ಕುದುರೆಮುಖ ಪ್ರದೇಶದಲ್ಲಿ ಕಮಾಂಡೊ ತರಬೇತಿ ಕೇಂದ್ರ ಆರಂಭಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ.ಇಂತಹ ವಿವರಣೆಗಳು ಆಡಳಿತಗಾರರ ಪೊಳ್ಳುತನ, ವೈಜ್ಞಾನಿಕ ಮನೋಭಾವ ಮತ್ತು ದೂರದರ್ಶಿತ್ವದ ಅಭಾವವನ್ನು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ  ಜನತೆ ಈ ದುರಾದೃಷ್ಟಕಾರಿ ನಿಲುವಿನ ಹಿಂದೆ ಅಡಗಿರುವ ಕಾರಣ ಹಾಗೂ ಸತ್ಯಾಂಶಗಳನ್ನು ಅರಿಯುವುದು ಬಹಳ ಮುಖ್ಯ.ವಿಶ್ವ ಪರಂಪರೆಯ ಮಹಾಸಭೆ ಭಾರತವೂ ಸಹಿ ಹಾಕಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಇದು ಮಾನವ ಹಾಗೂ ಪ್ರಕೃತಿಯ ನಡುವಿನ ಸೂಕ್ಷ್ಮ ಸಮತೋಲನವನ್ನು ಗುರುತಿಸುವ ಮೂಲಭೂತ ಅಗತ್ಯವನ್ನು ಸಾರುತ್ತದೆ. ಪ್ರಾಕೃತಿಕ ಪರಂಪರೆಯ ತಾಣಗಳನ್ನು ವೈಜ್ಞಾನಿಕವಾಗಿ ಗುರುತಿಸುವ ಕಾರ್ಯವನ್ನು 2002ರಲ್ಲಿ ಕೇಂದ್ರ ಪರಿಸರ ಸಚಿವಾಲಯ ಆರಂಭಿಸಿತು. ಪಾರದರ್ಶಕವಾಗಿದ್ದ ಗುರುತಿಸುವಿಕೆ ಕ್ರಮಗಳನ್ನು 2004ರಲ್ಲಿ ಸಾರ್ವಜನಿಕವಾಗಿ ಚರ್ಚಿಸಲಾಗಿದೆ. ಅಂದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಈ ಕಾರ‌್ಯಕ್ಕೆ ತಮ್ಮ ಮುತ್ಸದ್ದಿತನದಿಂದ ಚಾಲನೆ ನೀಡಿದ್ದರು. ಹೀಗಿರುವಾಗ ರಾಜ್ಯ ಸರ್ಕಾರ ಮಾಡಬಹುದಾಗಿದ್ದ ಶ್ರೇಷ್ಠ ಯೋಜನೆಯನ್ನು, ತನ್ನ ಪಕ್ಷದ ನಾಯಕನ ದೂರದರ್ಶಿತ್ವದ ತೀರ್ಮಾನವನ್ನು ಆವೇಶಭರಿತವಾಗಿ ಏಕೆ ವಿರೋಧಿಸುತ್ತಿದೆ ಎಂಬ ಪ್ರಶ್ನೆ ಎದುರಾಗುತ್ತದೆ.2008ರ ಡಿಸೆಂಬರ್‌ನಲ್ಲಿ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ಕೆಲವು ಸ್ಥಳೀಯರು ಜಿಲ್ಲೆಯ ಉನ್ನತ ಅಧಿಕಾರಿಗಳ ಬೆಂಬಲದಿಂದ ಪುಷ್ಪಗಿರಿ ವನ್ಯಜೀವಿಧಾಮದ ಕೆಲ ಭಾಗವನ್ನು ರಸ್ತೆ ನಿರ್ಮಿಸಲು ವಿವೇಚನರಹಿತವಾಗಿ ಮಾಡಿದ್ದರು. ಇದು ಸುಪ್ರೀಂ ಕೋರ್ಟ್‌ನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಈ ಗಂಭೀರ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಆದೇಶಿಸಿದ್ದು, ಈ ಪ್ರಕ್ರಿಯೆ ನಿರ್ಣಾಯಕ ಹಂತದಲ್ಲಿದೆ. 2009ರಲ್ಲಿ, ಕರ್ನಾಟಕದ ಹೈಕೋರ್ಟ್ ಪಶ್ಚಿಮಘಟ್ಟದ ನೈಸರ್ಗಿಕ ಕಾಡುಗಳಿಂದ ಆವೃತವಾದ ಪ್ರದೇಶಗಳಲ್ಲಿ ಸಾವಿರಾರು ಮರಗಳನ್ನು ಕಡಿಯುವ ಕಾರ್ಯಕ್ಕೆ ತಡೆಯೊಡ್ಡಿತ್ತು. ಈ ಪ್ರದೇಶಗಳಲ್ಲಿ ಒಂದು, ಕ್ಯಾಬಿನೆಟ್ ದರ್ಜೆಯ ಪ್ರಭಾವಿ ಸಚಿವರಿಗೆ ಸೇರಿದ್ದೆಂದು ಆರೋಪಿಸಲಾಗಿದೆ.ಈ ಕಾನೂನಿನ ಕ್ರಮಗಳು ಕೆಲವು ರಾಜಕೀಯ ನಾಯಕರಿಗೆ ಅತಿದೊಡ್ಡ ತೊಡಕಾಗಿವೆ. ಯುನೆಸ್ಕೊ ಪ್ರಸ್ತಾವ ಇಂತಹ ಚಟುವಟಿಕೆಗಳನ್ನು ನಿಲ್ಲಿಸಲು ಸಂರಕ್ಷಣಾವಾದಿಗಳ ಕೈಗೆ ಮತ್ತೊಂದು ಅಸ್ತ್ರವನ್ನು ಕೊಡುತ್ತದೆ ಎಂಬ ಭಯ ಅವರಿಗಿದೆ. ಹಾಗಾಗಿ, ಯುನೆಸ್ಕೊ ಪ್ರಸ್ತಾವದ ವಿರುದ್ಧ ದೊಡ್ಡ ಅಪಪ್ರಚಾರ ನಡೆಸುವ ಆಂದೋಲನವನ್ನು ಕೆಲವು ಭ್ರಷ್ಟ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ಟಿಂಬರ್ ಲಾಬಿಯ ಹಿಂದಿರುವ ಸ್ಥಳೀಯ ರಾಜಕಾರಣಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 10, 2010ರಂದು ಯುನೆಸ್ಕೊ ತಂಡವನ್ನು ಮಡಿಕೇರಿಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಘೇರಾವ್ ಮಾಡಿ ಹಿಂದಕ್ಕೆ ಕಳುಹಿಸಲಾಯಿತು. ಅಂದರೆ, ಈ ವಿರೋಧದ ಕೇಂದ್ರಬಿಂದು ಕೊಡಗು ಜಿಲ್ಲೆಯೇ ಹೊರತು ಅಲ್ಲಿನ ಜನಸಾಮಾನ್ಯರ್ಲ್ಲಲ್ಲ, ಅಭಿವೃದ್ಧಿಯನ್ನು ನೆಪವಾಗಿರಿಸಿಕೊಂಡು ಪ್ರಸ್ತಾವವನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿರುವ ಪಟ್ಟಭದ್ರ ಹಿತಾಸಕ್ತ ಸಣ್ಣ ಗುಂಪು ವಿರೋಧದ ಹಿಂದೆ ಇದೆ ಎನ್ನಬಹುದು.ಪಶ್ಚಿಮಘಟ್ಟದೊಳಗೆ ಖನಿಜದ ದೊಡ್ಡ ನಿಕ್ಷೇಪಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕುದುರೆಮುಖ, ಕೆಮ್ಮಣ್ಣುಗುಂಡಿ ಮತ್ತು ಹೊಗರೆಕಂಗಿರಿ ಪ್ರದೇಶಗಳಲ್ಲಿನ ವಿವೇಚನಾರಹಿತ ಗಣಿಗಾರಿಕೆಯನ್ನು ನ್ಯಾಯಾಲಯಗಳು ಸೂಕ್ಷ್ಮ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ತಡೆಯಿತು. ಮರುಗಣಿಗಾರಿಕೆಯ ಸಾಧ್ಯತೆ ತೀರಾ ಕಡಿಮೆಯಿದ್ದರೂ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಗಣಿಗಾರಿಕೆಯನ್ನು ಮರು ಆರಂಭಿಸುವ ಪ್ರಯತ್ನಗಳನ್ನು ಬಿಟ್ಟಿಲ್ಲ. ಆ ಕಂಪನಿ ಯುನೆಸ್ಕೊ ಪ್ರಸ್ತಾವದ ವಿರುದ್ಧ ಉತ್ಕಟವಾಗಿ ಲಾಬಿ ಮಾಡುತ್ತಿದ್ದರೆ ಆಶ್ಚರ್ಯವೇನೂ ಇ್ಲ್ಲಲ. ಇದರ ಜೊತೆಗೆ, ಕಿರು ಜಲವಿದ್ಯುತ್ ಯೋಜನೆಗಳ ಪ್ರವರ್ತಕರು ಈ ಪ್ರಸ್ತಾವ ತಿರಸ್ಕೃತವಾಗುವುದನ್ನು ಉತ್ಸುಕತೆಯಿಂದ ಕಾಯುತ್ತಿರಬಹುದು.ಹಿರಿಯ ಸಚಿವರು ಪಶ್ಚಿಮಘಟ್ಟಗಳಲ್ಲಿ ಉದ್ದೇಶಿಸಲಾಗಿರುವ ಅನೇಕ ಅಭಿವೃದ್ಧಿ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಿದ್ದಾರೆ. ಆದರೆ, ಯುನೆಸ್ಕೊ ಪ್ರಸ್ತಾವದ ವ್ಯಾಪ್ತಿಯಲ್ಲಿ ಕೊಡಗು ಕೇರಳದ ಗಡಿ ಕುಟ್ಟಾದಿಂದ ಕೆನರಾ, ಗೋವಾ ಗಡಿ ಕುಂಬಾರವಾಡದವರೆಗಿನ ಎಲ್ಲಾ ಜಿಲ್ಲೆಗಳು ಬರುವುದೇ ಇಲ್ಲ. ಈ ಅಂಶವನ್ನು ವಿರೋಧ ಮಾಡುತ್ತಿರುವವರು ಅರಿತುಕೊಳ್ಳಬೇಕು.ಪ್ರಸ್ತಾವದಲ್ಲಿ ಗುರುತಿಸಲಾಗಿರುವ ಪ್ರದೇಶ ಭಾರತೀಯ ವನ್ಯಜೀವಿ ಸಂಸ್ಥೆಯ ಸಮರ್ಪಕ ವೈಜ್ಞಾನಿಕ ಮೌಲ್ಯಮಾಪನದ ಫಲವಾಗಿದ್ದು ಕೇವಲ ಜೀವಿವೈವಿಧ್ಯದ ಅತಿಮಹತ್ವವಿರುವ ಪ್ರದೇಶಗಳನ್ನು ಮಾತ್ರ ಪ್ರಸ್ತಾವದಲ್ಲಿ ಸೇರಿಸಲಾಗಿದೆ. ಇವುಗಳಲ್ಲಿ ಕೊಡಗಿನ ತಲಕಾವೇರಿ ಪ್ರದೇಶದ ಪುಷ್ಪಗಿರಿ, ಬ್ರಹ್ಮಗಿರಿ ಮತ್ತು ತಲಕಾವೇರಿ ವನ್ಯಧಾಮಗಳು, ಪದಿನಾಲ್ಕಾಡ್ ಮತ್ತು ಕೆರ‌್ತಿ ಕಾಯ್ದಿಟ್ಟ ಅರಣ್ಯಭಾಗಗಳ ಒಟ್ಟು 707 ಚದರ ಕಿಲೋ ಮೀಟರ್ ಪ್ರದೇಶ ಬರುತ್ತವೆ. ಎರಡನೆಯ ಪ್ರದೇಶವು 881 ಚದರ ಕಿಲೋ ಮೀಟರ್ ಕುದುರೆಮುಖ ಪ್ರದೇಶದ್ದಾಗಿದ್ದು, ಸದ್ಯ ಅಸ್ತಿತ್ವದಲ್ಲಿರುವ ಸೋಮೇಶ್ವರ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಆಗುಂಬೆ, ಬಾಲಹಳ್ಳಿ ಮತ್ತು ಸೋಮೇಶ್ವರ ಕಾಯ್ದಿಟ್ಟ ಅರಣ್ಯಗಳಾಗಿವೆ. ಹಾಗಾಗಿ, ಪ್ರಸ್ತಾವಿತ ಕೇವಲ 1588 ಚದುರ ಕಿಲೋ ಮೀಟರ್‌ಗಳ ಪ್ರದೇಶ ಈಗಾಗಲೇ ರಕ್ಷಿತವೆಂದು ಘೋಷಿಸಲಾಗಿರುವ ಪ್ರದೇಶ ಮತ್ತು ಇದು ರಾಜ್ಯದ ಒಟ್ಟಾರೆ ಭೂಪ್ರದೇಶದ ಶೇ ಒಂದಕ್ಕಿಂತ ಕಡಿಮೆ.ಈ ಎಲ್ಲ ಸತ್ಯಾಂಶಗಳು ಪಟ್ಟಭದ್ರ ಹಿತಾಸಕ್ತಿಗಳು ಪಠಿಸುತ್ತಿರುವ ಅಭಿವೃದ್ಧಿ ಮಂತ್ರ ತರ್ಕಹೀನವಾದುದು ಮತ್ತು ವಿಶ್ವಪರಂಪರೆ ಪ್ರಸ್ತಾವವನ್ನು ಹಿಮ್ಮೆಟ್ಟಿಸಲು ಹೂಡಿರುವ ಒಂದು ಹುನ್ನಾರ ಎಂಬುದನ್ನು ಬಹಿರಂಗಪಡಿಸುತ್ತವೆ. ಅಮೂಲ್ಯ, ಅನನ್ಯ ಜೀವಿವೈವಿಧ್ಯದ ತಾಣಗಳನ್ನು ಮತ್ತು ಜೀವನದಿಗಳಾದ ಕಾವೇರಿ, ಭದ್ರಾ, ತುಂಗಾ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಳಗಳನ್ನು ಅಭಿವೃದ್ಧಿಯಿಂದ ರಕ್ಷಿಸುವುದು ಬಹುದೊಡ್ಡ ಜನಪರ ಕಾರ್ಯವಲ್ಲವೆ? ರೈತಹಿತಕ್ಕಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎಂದು ಕೂಗಿ ಹೇಳುತ್ತಿರುವ ಸರ್ಕಾರ, ನ್ಯಾಯಾಲಯಗಳಲ್ಲಿ ಕಾನೂನು ಸಮರ ಎದುರಿಸುತ್ತಿರುವ ಕೆಲವು ನಾಯಕರು ಹೇರಿರುವ ಒತ್ತಡಕ್ಕೆ ಬಲಿಯಾಗಿ ಅನೇಕ ಜೀವನದಿಗಳ ಮೂಲ ಹಾಗೂ ಜಲಾನಯನ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುವುದು ಸರಿಯೇ?ಇನ್ನು `ಢೋಂಗಿ ಪರಿಸರವಾದಿ~ಗಳಿಗೆ ಯುನೆಸ್ಕೊದಿಂದ ಭಾರಿ ಮೊತ್ತದ ವಿದೇಶಿ ದೇಣಿಗೆ ದೊರೆಯುತ್ತದೆ ಎಂದು ಆರೋಪಿಸಲಾಗಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ವಿಷಯ. ಯುನೆಸ್ಕೊ ವಿಶ್ವಪರಂಪರೆ ಸಂಸ್ಥೆ ತಾಣಗಳ ರಕ್ಷಣೆಗೆ ಭಾರತ ಸರ್ಕಾರಕ್ಕೆ ಮಾತ್ರ ಧನಸಹಾಯ ನೀಡುವುದೇ ಹೊರತು ವ್ಯಕ್ತಿ ಅಥವಾ ಸರ್ಕಾರೇತರ ಸಂಸ್ಥೆಗಳಿಗಲ್ಲ.ಯುನೆಸ್ಕೊ ಪ್ರಸ್ತಾವದ ಅನುಷ್ಠಾನದಿಂದ ಜನರನ್ನು ಸ್ಥಳಾಂತರಗೊಳಿಸಬೇಕಾಗುತ್ತದೆ ಎಂದು ಡಂಗುರ ಹೊಡೆಯಲಾಗುತ್ತಿದೆ. ಇದು ಸಹ ಸಂಪೂರ್ಣ ಸುಳ್ಳು ಮತ್ತು ಬಲವಂತವಾಗಿ ಯಾವುದೇ ವ್ಯಕ್ತಿಯ ಕಾನೂನುಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಅವಕಾಶ ಇಲ್ಲವೇ ಇಲ್ಲ. ಜೊತೆಗೆ, ಯುನೆಸ್ಕೊ ಸ್ಥಳೀಯರ ಕಾನೂನುಬದ್ಧ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುವಂತಹ ಕಾನೂನುಗಳನ್ನು ಜಾರಿಗೆ ತರುತ್ತದೆ ಎಂದೂ ಬಿಂಬಿಸಲಾಗುತ್ತಿದೆ. ಇದೂ ಹಸೀ ಸುಳ್ಳುಗಳಲ್ಲಿ ಒಂದು ಮತ್ತು ಪ್ರಸ್ತಾವವನ್ನು ತಡೆಯಲು ಪ್ರಚಾರಮಾಡುತ್ತಿರುವ ದುರುದ್ದೇಶಪೂರಿತ ಸಂಗತಿ.ಬಿಜೆಪಿ ಸರ್ಕಾರ ಪದೇ ಪದೇ ಗುಜರಾತ್ ಸರ್ಕಾರವೇ ಮಾದರಿ ಎಂದು ಹೇಳುತ್ತಿದೆ. ಗುಜರಾತ್ ಸರ್ಕಾರ ಕೂಡ ರಣ್ ಆಫ್ ಕಛನ 4954 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಂಪರ ತಾಣಕ್ಕೆ ನಾಮಕರಣ ಮಾಡಲು ಕೋರಿದೆ.ಮುಖ್ಯಮಂತ್ರಿಗಳು ಕೆಲವು ನಾಯಕರ ಕುಟಿಲ ತಂತ್ರಗಾರಿಕೆಗಳನ್ನು ಮೀರಿ ಪಶ್ಚಿಮಘಟ್ಟಗಳ ಪರಂಪರೆ ತಾಣವೆಂದು ಗುರುತಿಸಲಾಗಿರುವ ಪ್ರದೇಶಗಳ ಸಂರಕ್ಷಣೆಯ ಜವಾಬ್ದಾರಿ ಹೊರುತ್ತಾರೆ ಎಂದು ದೊಡ್ಡ ಆಶಾಭಾವನೆಯಿಂದ ನಿರೀಕ್ಷಿಸಲಾಗುತ್ತಿದೆ. ಯುನೆಸ್ಕೊ ಪರಂಪರೆ ತಾಣ ಎಂಬುದು ರಾಜ್ಯಕ್ಕೆ ಒಂದು ಗೌರವವೇ ಹೊರತು ಈಗ ಪ್ರತಿಪಾದಿಸುತ್ತಿರುವಂತೆ ಶಾಪವಲ್ಲ.

(ಲೇಖಕರು ವೈಲ್ಡ್‌ಲೈಫ್ ಫಸ್ಟ್‌ನ ಟ್ರಸ್ಟಿಗಳು ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.