ಗುರುವಾರ , ಮೇ 19, 2022
23 °C

ವೇತನ, ಭತ್ಯೆ ಪರಿಷ್ಕರಿಸಲು ಶಿಕ್ಷಕರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೆ ಆರನೇ ವೇತನ ಆಯೋಗದ ವೇತನ ಹಾಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದ ನೂರಾರು ನೌಕರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರಾಜ್ಯ ಸರಕಾರ 1956ರಿಂದ 2005ರ ವರೆಗೆ ಐದು ವೇತನ ಆಯೋಗಗಳು, ಒಂಬತ್ತು ಸಮಿತಿಗಳು ಹಾಗೂ ಎರಡು ಸಚಿವ ಸಂಪುಟದ ಉಪ ಸಮಿತಿಗಳನ್ನು ರಚಿಸಿ ರಾಜ್ಯ ಸರಕಾರಿ ನೌಕರರಿಗೆ ವೇತನ, ಭತ್ಯೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಪರಿಷ್ಕರಿಸುತ್ತಾ ಬಂದಿದೆ. ರಾಜ್ಯ ಸರಕಾರಿ ನೌಕರರಿಗೆ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಮತ್ತು ಭತ್ಯೆ ಪರಿಷ್ಕರಿಸುವ ಸಂಪ್ರದಾಯ ಜಾರಿಯಲ್ಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಕೇಂದ್ರ ಸರಕಾರ ನೌಕರರಿಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವ ಪರಿಪಾಠವನ್ನು ಹೊಂದಿದ್ದು 1998ರಲ್ಲಿ ಐದನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ನಂತರ ಆರನೇ ವೇತನ ಆಯೋಗವನ್ನು ರಚಿಸುವ ಪೂರ್ವದಲ್ಲಿ ತನ್ನ ನೌಕರರಿಗೆ ಶೇ 50ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ ವಿಲೀನಗೊಂಡ ಮೂಲ ವೇತನಕ್ಕನುಗುಣವಾಗಿ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿದೆ. ಆದರೆ ರಾಜ್ಯ ಸರಕಾರ ಇಂಥಹ ಯಾವುದೇ ಸೌಲಭ್ಯವನ್ನು ನೌಕರರಿಗೆ ಕಲ್ಪಿಸಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಕೇಂದ್ರ ಸರಕಾರದ ಮಾದರಿಯಲ್ಲಿ 2006ರ ಜ.1ರಿಂದ ಪೂರ್ವಾನ್ವಯವಾಗುವಂತೆ ವೇತನ ಹಾಗೂ ಭತ್ಯೆಗಳನ್ನು ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಹೋಲಿಸಿದರೆ ಶೇ 30ರಿಂದ 40ರಷ್ಟು ವ್ಯತ್ಯಾಸ ಕಂಡುಬರುತ್ತದೆ ಎಂದು ಸಂಘ ಹೇಳಿದೆ.ಕೇಂದ್ರ ಸರಕಾರ ತನ್ನ ನೌಕರರಿಗೆ 2001ರ ಜನಗಣತಿಯ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳನ್ನು ಪುನರ್‌ವಿಂಗಡಿಸಿ ಮನೆಬಾಡಿಗೆ, ನಗರ ಪರಿಹಾರ ಭತ್ಯೆ ಹಾಗೂ ಇತರೇ ಸೌಲಭ್ಯಗಳನ್ನು ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೂ ಸೌಲಭ್ಯಗಳನ್ನು ನೀಡಬೇಕು ಎಂದು ಸಂಘ ಮನವಿ ಮಾಡಿಕೊಂಡಿದೆ.

ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ನಾಯ್ಕ, ಉಪಾಧ್ಯಕ್ಷರಾದ ಉದಯ, ಸತೀಶ, ಸುರೇಶ ಶೆಟ್ಟಿ,  ಜ್ಞಾನೇಶ್ವರ ಗಾಂವಕರ್, ‘ಡಿ’ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು.  ಜೋಯಿಡಾದಲ್ಲಿ ಪ್ರತಿಭಟನೆ

 ಜೋಯಿಡಾ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪದಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ನೌಕರರು ಆರನೇ ವೇತನ ಆಯೋಗದ ವರದಿಯ ಜಾರಿಗಾಗಿ ಆಗ್ರಹಿಸಿ ಬುಧವಾರ ಜೋಯಿಡಾ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನೌಕರರಿಗೆ 6ನೇ ವೇತನ ಆಯೋಗದ ವರದಿಯಂತೆ ವೇತನ ಮತ್ತು ಭತ್ಯೆಗಳನ್ನು ಯಥಾವ್ತತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಉಪತಹಸೀಲ್ದಾರ ಬಿ.ಎಸ್. ಖಾಜಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರಿ ನೌಕರರರ ಸಂಘದ ಅಧ್ಯಕ್ಷ ಎ.ಎಸ್. ಪೋಂಡೇಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ ನಾಯ್ಕ ಹಾಗೂ ಇತರ ಇಲಾಖೆಯ ನೌಕರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.