ವೈದ್ಯಾಧಿಕಾರಿ ಸಂಘದಿಂದ ಪ್ರತಿಭಟನೆ

ಕೊಪ್ಪಳ: ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿಸಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಧರಣಿ ನಡೆಸಿದ ಸಂಘದ ಸದಸ್ಯರು, ನೂತನವಾಗಿ ವೈದ್ಯಕೀಯ ಕಾಲೇಜುಗಳು ಆರಂಭಗೊಳ್ಳಲಿರುವ ಜಿಲ್ಲೆಗಳಲ್ಲಿನ ಜಿಲ್ಲಾ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿಸಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯದಲ್ಲಿನ 10 ಜಿಲ್ಲಾ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿಸಲಾಗಿದೆ. ಈಗ ನೂತನವಾಗಿ ವೈದ್ಯಕೀಯ ಕಾಲೇಜುಗಳು ಆರಂಭಗೊಳ್ಳಲಿರುವ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆಯೂ ಇದೇ ಧೋರಣೆಯನ್ನು ಅನುಸರಿಸುತ್ತಿರುವುದು ಸರಿಯಲ್ಲ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಡಾ.ವಿರೂಪಾಕ್ಷಪ್ಪ ಅಳ್ಳಳ್ಳಿ ದೂರಿದರು.
ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸುವ ದೃಷ್ಟಿಯಿಂದ ಕೊಪ್ಪಳ, ಹಾವೇರಿ, ಗದಗ, ಮಡಿಕೇರಿ, ಚಿತ್ರದುರ್ಗ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಆರಂಭಿಸಲು ಉದ್ದೇಶಿಸಿರುವ ವೈದ್ಯಕೀಯ ಕಾಲೇಜುಗಳಿಗೆ ಆಯಾ ಜಿಲ್ಲೆಗಳಲ್ಲಿನ ಜಿಲ್ಲಾ ಆಸ್ಪತ್ರೆಗಳನ್ನು ಸೇರಿಸಬಾರದು ಎಂದು ಒತ್ತಾಯಿಸಿದರು.
ಸಂಘದ ಸದಸ್ಯರಾದ ಡಾ.ಲಕ್ಷ್ಮೀನಾರಾಯಣರಾವ್, ಡಾ.ಎಸ್.ಕೆ.ದೇಸಾಯಿ, ಡಾ.ವೆಂಕಟೇಶ, ಡಾ.ಇರ್ಫಾನ್, ಡಾ.ಅಬ್ದುಲ್ ಸಲಾಂ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಜುಮ್ಮನ್ನವರ, ಸುಧಾಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.