ಸೋಮವಾರ, ಮೇ 17, 2021
27 °C

`ವ್ಯಾಪಾರ ಯುದ್ಧ, ದೇಶಕ್ಕೆ ಅಪಾಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ವ್ಯಾಪಾರ ಯುದ್ಧ, ದೇಶಕ್ಕೆ ಅಪಾಯ'

ರಾಯಚೂರು: `ರಿಯಲ್ ಎಸ್ಟೇಟ್, ನೈಸರ್ಗಿಕ ಸಂಪತ್ತು ಲೂಟಿ ಜಾಲ ಈ ಜನತಂತ್ರ ವ್ಯವಸ್ಥೆಯನ್ನೇ ಕೊಂಡುಕೊಳ್ಳುತ್ತಿದೆ. ಭಾರತಕ್ಕೆ ಸಾಲ ಕೊಡುವ ರಾಷ್ಟ್ರಗಳೇ ಈ ದೇಶದ ನೀತಿ ರೂಪಿಸುವಂಥ ಪರಿಸ್ಥಿತಿ ಬಂದಿದೆ. ಇದು ವ್ಯಾಪಾರ ಯುದ್ಧವೇ ಆಗಿದ್ದು, ಜಾಗತೀಕರಣ ಬಲೆಯಿಂದ ತಪ್ಪಿಸಿಕೊಳ್ಳದೇ ಇದ್ದರೆ ಉಳಿಗಾಲವಿಲ್ಲ' ಎಂದು ಸಾಹಿತಿ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಪದ್ಮಶ್ರೀ ದೇವನೂರು ಮಹಾದೇವ ಕಳವಳ ವ್ಯಕ್ತಪಡಿಸಿದರು.ಗುರುವಾರ  ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಚೆನ್ನಬಸವಪ್ಪ ಬೆಟ್ಟದೂರು ಅವರ 5ನೇ ಪುಣ್ಯ ಸ್ಮರಣೆ ಅಂಗವಾಗಿ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಸಮಾನತೆ, ಸಹಬಾಳ್ವೆಯ ಕನಸು ಕಾಣುತ್ತಿರುವ ನಾವು ನೀವೆಲ್ಲರೂ  ಮನದಲ್ಲಿಯೇ ಮುಖಾಮುಖಿಯಾಗಬೇಕಿದೆ. ಮಾತುಗಳು ವಂಚನೆ ಆಗಿವೆ. ಮಾತುಗಳು ಸತ್ತಿವೆ. ಮಾತುಗಳು ಅರ್ಥ ಕಳೆದುಕೊಂಡು ವಂಚನೆಗೆ ಒಂದು ಮಾಧ್ಯಮ `ಮಾತು' ಎಂಬುವಂತಾಗಿದೆ' ಎಂದರು.`ಕೆಲ ವರ್ಷಗಳಿಂದ ಸಮಸ್ಯೆಗಳ ಬಗ್ಗೆ ಜನರು, ಸಂಘಟನೆಯವರು ಪ್ರತಿಭಟಿಸಿದರೆ ಜನತೆಯ ಸಮಸ್ಯೆ ವಿಧಾನ ಸೌಧಕ್ಕೆ ಕೇಳುತ್ತಿತ್ತು. ಜನತೆಯ ಭಯ ಜನಪ್ರತಿನಿಧಿಗಳಿಗಿತ್ತು. ಆದರೆ, ಈಗ ಜನಾಭಿಪ್ರಾಯಕ್ಕೆ ಜನಪ್ರತಿನಿಧಿಗಳು ಹೆದರುತ್ತಿಲ್ಲ. ಬಡವರ ಕಷ್ಟ, ಜನರ ಸಮಸ್ಯೆ ವಿಧಾನ ಸೌಧಕ್ಕೆ ಕೇಳಿಸುತ್ತಿಲ್ಲ. ಹಣ, ಹೆಂಡದಿಂದ ಜನ ಗೆಲ್ಲುವ ಅಹಂಭಾವ ಹೆಚ್ಚಾಗಿದೆ. ಈಗಿನ ರಾಜಕಾರಣ ಭವಿಷ್ಯದ ಕೇಡಿನ ಲಕ್ಷಣ' ಎಂದು ಆತಂಕ ವ್ಯಕ್ತಪಡಿಸಿದರು.`ಈ ದೇಶದ ಪ್ರಧಾನ ಮಂತ್ರಿಯೂ ಪರತಂತ್ರರಾಗಿದ್ದಾರೆ. ಅವರಿಗೂ ಸ್ವಾತಂತ್ರ್ಯವಿಲ್ಲ. ದೇಶವನ್ನು ಈಗ ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು  ನಮ್ಮನ್ನು ಆಳುತ್ತಿಲ್ಲ. ಸಾಲ ಕೊಡುವ ರಾಷ್ಟ್ರಗಳು ರೂಪಿಸಿದ ನೀತಿಗಳಿಗೆ ಹೆಬ್ಬೆಟ್ಟು ಒತ್ತಿ ಅನುಷ್ಠಾನ ಮಾಡುವವರಾಗಿದ್ದಾರೆ. ಸಾಲ ಕೊಡುವ ರಾಷ್ಟ್ರಗಳು ನಮ್ಮನ್ನು ಆಳುತ್ತಿವೆ' ಎಂದು ಹೇಳಿದರು.`ಜೀವನದುದ್ದಕ್ಕೂ ಸಮಾಜಕ್ಕೆ ಸೇವೆ ಸಲ್ಲಿಸಿದ ರೈತರು, ಸಾಹಿತಿ, ಹೋರಾಟಗಾರರಾಗಿದ್ದ ಚೆನ್ನಬಸವಪ್ಪ ಬೆಟ್ಟದೂರುರ ಪುಣ್ಯಸ್ಮರಣೆ ದಿನ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಕಾರ್ಯ ಒಳ್ಳೆಯ ಕಾರ್ಯ' ಎಂದು ಪ್ರಶಂಸಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಶಾಸಕ ಡಾ.ಶಿವರಾಜ ಪಾಟೀಲ, ಡಾ.ಮಲ್ಲಿಕಾ ಘಂಟಿ, ಅಬ್ಬಾಸ ಅಲಿ ಮೇಲಿನಮನಿ, ಬಡಗಲ್‌ಪುರ ನಾಗೇಂದ್ರ, ಅಮರಣ್ಣ ಗುಡಿಹಾಳ ಮತ್ತಿತರರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.