ದಲಿತ ಪದಕಥನ
ಡಾ. ಮೊಗಳ್ಳಿ ಗಣೇಶ್, ಬೆಲೆ ರೂ.260, ಪ್ರಕಾಶನ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಶಾಬ್ದಿಕ ಸಂಕೇತಗಳು ತಮ್ಮನ್ನು ಇಲ್ಲವಾಗಿಸಿಕೊಂಡು ಮತ್ತೊಂದಾಗುವ ಪರಿಯ ಬಗೆಗೆ ನಡೆದಿರುವ ಚರ್ಚೆಗೆ ದೀರ್ಘಕಾಲೀನ ಇತಿಹಾಸವಿದೆ. ಶಬ್ದ ಮತ್ತು ಆರ್ಥಗಳ ನಡುವಿನ ಸಂಬಂಧದ ಚರ್ಚೆಯನ್ನು ದಿನ್ನಾಗ, ಕುಮಾರಿಲ, ಭರ್ತೃಹರಿ ಮುಂತಾದವರು ಥೇಟ್ ಯುದ್ಧದ ರೀತಿಯಲ್ಲಿ ನಡೆಸಿದ್ದಾರೆ.

‘ಮಾತುಗಳು ಶಬ್ದ ಬ್ರಹ್ಮವನ್ನು ಅಭಿವ್ಯಂಜಿಸುವ ನಿಮಿತ್ತಗಳು. ಶಬ್ದಬ್ರಹ್ಮದಿಂದಲೇ ಜನಿಸಿದ ವಾಕ್ಯೋಚ್ಚಾರಣೆಯಿಂದ ಈ ಮಾತುಗಳು ಸ್ವಚ್ಛವಾದ ಬ್ರಹ್ಮವಸ್ತುವಿನಲ್ಲಿ ಪ್ರತಿಬಿಂಬಗಳಂತೆ ತೋರಿಬರುತ್ತವೆ. ಶಬ್ದ ಮೂಲವಾದ ಅದರ ಶುದ್ಧಸ್ವರೂಪವೇ ಪರಬ್ರಹ್ಮ’– ಹೀಗೆ ಶುರುವಾಗುತ್ತದೆ ಭರ್ತೃಹರಿಯ ಶಬ್ದಾರ್ಥ ಸಂಬಂಧದ ಮಾತುಕತೆ. ಶಬ್ದವು ಹುಟ್ಟುತ್ತದೆ, ನಾಶವಾಗುತ್ತದೆ.

ಆದುದರಿಂದ ಅದು ನಿತ್ಯವಲ್ಲವೆಂದು ಬೌದ್ಧರು ಹೇಳುತ್ತಾರೆ. ಶಬ್ದದಲ್ಲಿರುವ ವರ್ಣವು ನಿತ್ಯ. ವರ್ಣಗಳ ಜೋಡಣೆಯಾದ ಶಬ್ದ ಜಾಲವು ನಿತ್ಯವಲ್ಲ ಎನ್ನುವುದು ಮೀಮಾಂಸಕರ ಅಭಿಪ್ರಾಯ. ಬ್ರಹ್ಮಾತಿರಿಕ್ತವಾದುದೆಲ್ಲವೂ ಮಿಥ್ಯೆಯೆನ್ನುವುದು ಅದ್ವೈತವೇದಾಂತಿಗಳ ನಿಲುವು. ಕುಮಾರಿಲ ಮತ್ತು ದಿನ್ನಾಗರು ಈ ವಿಷಯದಲ್ಲಿ ಆಧುನಿಕರೆಂದರೂ ಸರಿಯೆ. ಅವರಲ್ಲಿನ ಮಹತ್ವದ ಅಂಶವೆಂದರೆ ಅರ್ಥವೆನ್ನುವುದು ಅಭಿವ್ಯಕ್ತಿಯ ಕ್ರಮದಲ್ಲಿ ಹುಟ್ಟುವ ಅಂಶ ಎಂಬ ಶೋಧ.

ಶಬ್ದ ಮತ್ತು ಅರ್ಥಗಳ ಅವಿನಾಭಾವ ಸಂಬಂಧವನ್ನು ಇಬ್ಬರೂ ಒಪ್ಪುವುದಿಲ್ಲ. ಆದರೆ ಅರ್ಥನಿತ್ಯತೆಯ ವಿಷಯ ಬಂದಾಗ ಇಬ್ಬರೂ ಮಾರಣಾಂತಿಕವಾಗಿ ಹೋರಾಡುವವರೇ ಆಗುತ್ತಾರೆ. ಅರ್ಥವೆನ್ನುವುದು ನಿತ್ಯವಾದುದಾದರೂ ಶಬ್ದ ಮತ್ತು ಅರ್ಥಗಳು ಬೇರೆ ಬೇರೆಯೇ ಆಗಿರುತ್ತವೆನ್ನುವುದು ಕುಮಾರಿಲರ ನಿಲುವಾದರೆ, ಸಂದರ್ಭಮುಕ್ತ ಅರ್ಥವೆನ್ನುವುದು ಇರಲು ಸಾಧ್ಯವಿಲ್ಲವೆನ್ನುವುದು ಮತ್ತು ಯಾವ ಶಬ್ದವೂ ಸರಣಿಯಲ್ಲಿಲ್ಲದ ಏಕಾಕಿಯಲ್ಲ ಎನ್ನುವುದು ದಿನ್ನಾಗನ ನಿಲುವು.

ಶಬ್ದಾರ್ಥ ಸಂಬಂಧದ ಮಾತುಕತೆಯ ಸಂದರ್ಭದಲ್ಲಿ ಚರ್ಚಿತವಾಗುವ ಅನಿವಾರ್ಯ ಸಂಗತಿಯೆಂದರೆ ಆಯಾ ತತ್ವಪ್ರಸ್ಥಾನಗಳ ಲೋಕವಿವರಣೆಯ ನಿಲುವು ಮತ್ತು ಜ್ಞಾನವೆಂದರೆ ಯಾವುದು ಎನ್ನುವ ಜ್ಞಾನಮೀಮಾಂಸೆಯ ನಿಲುವುಗಳು. ಆಧುನಿಕ ಭಾಷಾವಿಜ್ಞಾನದ ನೂರಾರು ಚಿಂತನಾ ಪ್ರಸ್ಥಾನಗಳು ಈ ಚರ್ಚೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿವೆ.

ಶಬ್ದಾರ್ಥ ಸಂಬಂಧದ ಈ ಚಾರಿತ್ರಿಕ ಬೆಳವಣಿಗೆಯ ಮುಂದುವರಿಕೆಯೆಂದು ಮೊಗಳ್ಳಿ ಗಣೇಶರ ‘ದಲಿತ ಪದಕಥನ’ ಕೃತಿಯನ್ನು ನೋಡಲಾಗದು. ಅಥವಾ ಶಬ್ದ ಸಂಕೇತಗಳು ತಮ್ಮ ದೀರ್ಘಕಾಲೀನ ಯಾನದಲ್ಲಿ ಪಡೆದುಕೊಂಡ ಮತ್ತು ವಿಸರ್ಜಿಸಿದ ಅರ್ಥಗಳನ್ನು ಎದುರಿಗೆ ಇಟ್ಟುಕೊಂಡು ಸಮಾಜೋ ಸಾಂಸ್ಕೃತಿಕ ಅಧ್ಯಯನಕ್ಕೆ ತೊಡಗುವ ಶಂಬಾ ಮಾದರಿಯ ಅಧ್ಯಯನವೆಂದೂ ಇದನ್ನು ನೋಡಲು ಸಾಧ್ಯವಿಲ್ಲ.

ಬದಲಿಗೆ ಜಾತಿಗಳಿಂದಾದ ಸಮಾಜವೊಂದರಲ್ಲಿ ತೀರಾ ಕೆಳಸ್ತರವು ಭಾಷೆಯೊಡನೆ ನಡೆಸುವ ಅನುಸಂಧಾನದ ಮಾದರಿಯೊಂದನ್ನು ಈ ಕೃತಿ ಪರಿಚಯಿಸುತ್ತದೆ ಎಂದು ನೋಡುವುದು ಸರಿಯಾದುದು. ಸರಿ ಸುಮಾರು ಅರ್ಧ ಪುಸ್ತಕವು ಮಾತು ಹುಟ್ಟುವ ಆವರಣಗಳನ್ನು ಕುರಿತು ಮಾತನಾಡುತ್ತದೆ. ಇನ್ನರ್ಧವು ಶಬ್ದಗಳು ತಮ್ಮ ದೀರ್ಘ ಪ್ರಯಾಣದಲ್ಲಿ ತುಂಬಿಸಿಕೊಂಡ ಅರ್ಥಗಳನ್ನು ದಲಿತ ಕೇರಿಯಲ್ಲಿ ಹರಡಿನಿಂತಂತೆ ದಾಖಲಿಸುತ್ತದೆ. ಪ್ರತಿಯೊಂದು ಪದವೂ ಅರ್ಥದ ಒಂದು ಗಂಟನ್ನು ಹೊತ್ತು ಸಾಗುತ್ತಿರುತ್ತದೆ. ಅದನ್ನು ಮಾತನಾಡಿಸಿದರೆ ಗಂಟನ್ನು ಬಿಚ್ಚಿ ಹರಡುತ್ತದೆ. ಯಾವುದನ್ನು ಎತ್ತಿಕೊಳ್ಳಬೇಕು ಎನ್ನುವುದು ಆಯಾ ಸಂದರ್ಭಕ್ಕೆ ಮತ್ತು ವ್ಯಕ್ತಿಗೆ ಬಿಟ್ಟದ್ದು. ಆದರೆ ಉಳಿದ ಅರ್ಥಗಳ ಪಾಡೇನು?

ಶಬ್ದಾರ್ಥದ ಸಂಬಂಧಸ್ವರೂಪವನ್ನು ಸಮಾಜೋ ಸಾಂಸ್ಕೃತಿಕ ಆಯಾಮದಿಂದ ಕಾಣಹೋದಾಗ ಇದಿರಾಗುವ ಸಂಗತಿಗಳೇ ಬೇರೆಯಾಗಿರುತ್ತವೆ. ‘ವಲ್ಗೇರಿ’ ಪದದ ಅರ್ಥವನ್ನು ಮೊಗಳ್ಳಿ ಕಟ್ಟಿಕೊಡುವುದು ಹೀಗೆ: ‘‘ದಲಿತರ ಕೇರಿಗಳಿಗೆ ಈಗಲೂ ಒಂದು ಸ್ಪಷ್ಟವಾದ ವಿಳಾಸವಿಲ್ಲ. ಜಾತಿಗಳ ವಿಳಾಸಗಳಿಂದಲೇ ತುಂಬಿ ಹೋಗಿರುವ ಊರು ಕೇರಿ ಕ್ರಾಸುಗಳಲ್ಲಿ, ಬೀದಿ ಬೀದಿಗಳಲ್ಲಿ ಜಾತಿಯ ಛಿದ್ರವಾದ ಕನ್ನಡಿಗಳು, ರಕ್ತಸಿಕ್ತವಾಗಿ ಎರಚಾಡಿವೆ.

ಅವನ್ನೆ ತಮ್ಮ ಅನನ್ಯತೆ, ವಿಳಾಸ, ಸ್ವಚಹರೆ ಎಂದು ಆಯಾಯ ಜಾತಿಯ ಕೇರಿಯ ಜನ ಒಪ್ಪಿದ್ದಾರೆ. ಅಖಂಡ ಮಾನವತ್ವದ ಕನ್ನಡಿಯನ್ನು ಹಿಂದೂ ಧರ್ಮ ಒಡೆದು ಹಾಕಿದೆ. ಆದರೂ ಅದು ನಾಚಿಕೆಗೆಟ್ಟು ಹಿಂದೂ ಧರ್ಮ ಎಂಬ ಕನ್ನಡಿಯನ್ನು ಹಿಡಿದಿದೆ. ಅದರಲ್ಲಿ ಮಾನವ ಮುಖ ಕಾಣದು. ಛಿದ್ರವಾದ, ಗಾಯವಾದ ಮಾನವ ಕನ್ನಡಿಯಲ್ಲಿ ಅಖಂಡ ಮಾನವ ಕಾಣಲಾರ. ವಲ್ಗೇರಿಯು ಹಿಂದೂ ತಾಣವಲ್ಲ. ಅದೊಂದು ಅಖಂಡ ಮಾನವತ್ವದ ತಾಣ. ಬುದ್ಧಗುರು ಈ ತಾಣದಿಂದಲೇ ಹಿಂದೂ ಧರ್ಮಕ್ಕೆ ತಕ್ಕ ಉತ್ತರ ನೀಡಿದ್ದು’’.

ಮೊಗಳ್ಳಿ, ‘ನಿಘಂಟುಗಳು ಪದ ಒಂದರ ಆತ್ಮವನ್ನು ತೋರಬೇಕು’ ಎನ್ನುತ್ತಾರೆ. ಆದರೆ ಪದದಲ್ಲಿ ಆತ್ಮವೆನ್ನುವುದು ಇರಲಾರದು ಎನ್ನುವುದನ್ನು ಅವರು ನೀಡುವ ಕಥನಗಳು ತೋರುತ್ತವೆ. ಶಬ್ದಸಂಕೇತಗಳು ಅರ್ಥವಾಗಿ ಪರಿಣಮಿಸುವುದೊಂದು ಪ್ರಕ್ರಿಯೆ. ಶಬ್ದ ಹುಟ್ಟುವ ಆಕರ, ಹುಟ್ಟುವ ಸಂದರ್ಭ ಮತ್ತು ಕೇಳುಗ– ಈ ಮೂರು ಸಂಗತಿಗಳ ಸಂಬಂಧದಲ್ಲಿ ಅರ್ಥವೆನ್ನುವ ತಾತ್ಕಾಲಿಕ ಪರಿಣಾಮವೊಂದು ಉಂಟಾಗುತ್ತದೆ. ಇವುಗಳಲ್ಲಿ ನಿತ್ಯವಾದುದು ಯಾವುದೂ ಇಲ್ಲ. ಶಾಶ್ವತ ಅರ್ಥವೆನ್ನುವುದು ಈ ಮೂರರಲ್ಲಿಯೂ ಇರುವುದಿಲ್ಲ. ಮತ್ತೂ ವಿಶೇಷವೆಂದರೆ ಈ ಮೂರರ ‘ಸಮಗ್ರ್ಯ’ದಲ್ಲಿಯೂ ಇರುವುದಿಲ್ಲ.

ಅದು ಸಂಬಂಧದಲ್ಲಿ ಮಾತ್ರ ಉಂಟಾಗುವಂಥದ್ದು. ಎಲ್ಲ ಅರ್ಥಗಳೂ ಸಂದರ್ಭಬಂಧಿ ಆಗಿರಲೇಬೇಕು. ಹಾಗಾಗಿ ಒಂದು ಶಬ್ದ ಒಂದು ಅರ್ಥವನ್ನು ಕೊಟ್ಟು ವಿರಮಿಸುವುದಿಲ್ಲ, ಬದಲಿಗೆ ಅದು ಕೇಳುಗನ ತುದಿಯಲ್ಲಿ ಮತ್ತೆ ಕಥನವಾಗಿ ಮುಂದುವರಿಯುತ್ತದೆ. ‘ಎಕ್ಕಡ’ವೆಂಬ ಪದ ಕಥನವಾಗಿ ಹರಿಯುವುದು ಹೀಗೆ: ‘‘ಎಕ್ಕಡ ಎನ್ನುವ ಪದವೇ ಒಂದು ದಂಡನೆ, ಬಹಿಷ್ಕಾರ, ಅಪಮಾನ, ಹಿಂಸೆ, ಅಸಹಾಯಕತೆಯನ್ನು ಮೂಡಿಸುವ ಯಾತನೆಯ ಪದ. ಏನ್ ತಿಂದಿದಿಯಾ, ನನ್ನೆಕ್ಕಡಾ ತಿಂದಿದ್ದಿಯಾ ಎಂಬ ಹಂಗಿಸುವ ದನಿಯಿಂದ ಎಕ್ಕಡಕ್ಕೆ ಯಾವ ಅರ್ಥಕೋಶಗಳಲ್ಲೂ ದಾಖಲಾಗದಷ್ಟು ವಿವರಗಳಿವೆ. ಅತ್ಯಂತ ಕೀಳಾದುದು ಎಕ್ಕಡ. ಅದರಿಂದ ಹೊಡೆಸಿಕೊಳ್ಳುವುದು ಬಹಳ ಕೀಳಾದ ಶಿಕ್ಷೆ ಎಂಬ ನಂಬಿಕೆಗಳಿದ್ದವು. ಎಕ್ಕಡದಿಂದ ಹೊಡೆಸಿಕೊಂಡವರನ್ನು ಕುಲದ ಆಚೆಗೆ ಹಾಕುವುದಿತ್ತು.

ಮೂರು ಸಾರಿ ಹೀಗೆ ಕುಲಾಚಾರ ಮಾಡಿಸಿಕೊಂಡವನಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಹೆಂಡತಿಗೆ ಯಾರಾದರೂ ಮೂರು ಬಾರಿ ಮೆಟ್ಟಿನಿಂದ ಹೊಡೆದದ್ದು ಬಹಿರಂಗವಾದದ್ದೇ ಆದ ಪಕ್ಷದಲ್ಲಿ ಆತ ಹೆಂಡತಿಗೆ ಗಂಡನಾಗುವಂತಿರಲಿಲ್ಲ. ‘ನನ್ನೆಕ್ಕಡ ಮಾಡಿವ್ನಿ ತಿನ್ನುಬಾ’ ಎಂಬ ಮಾತಂತೂ ವಿಚಿತ್ರವಾಗಿತ್ತು. ಯಾವ ಊಟನೂ ಮಾಡ್ದೆ ಹಸಿದಿದ್ದೇನೆ ಎಂಬುದನ್ನು ಉತ್ಕಟ ಸಿಟ್ಟಿನ ವಿಷಾದದಿಂದ ಧ್ವನಿಸಲು ಆಡಿದ ಮಾತಾಗಿತ್ತು. ‘ನನ್ನೆಕ್ಕಡ ಅಷ್ಟೇ ಇರೋದು ಅದ್ನೇ ತಿನ್ನುಬಾ’ ಎಂಬುದನ್ನು ವಯಸ್ಕರು ಬೇರೆಯಾಗಿ ಅರ್ಥೈಸುತ್ತಿದ್ದರು. ನನ್ನೆಕ್ಕಡ ಎನ್ನುವುದು ಅವಳ ಮರ್ಮಾಂಗವಾಗಿರುತ್ತಿತ್ತು’.

ಸಮಾಜೋ ಭಾಷಾವಿಜ್ಞಾನದ ನೆಲೆಯಿಂದ ವಿಶ್ವದಾದ್ಯಂತ ನೂರಾರು ಅಧ್ಯಯನಗಳಾಗಿದ್ದು, ಭಾರತದಂತಹ ಪ್ರಾಚೀನ ಮಾನವನೆಲೆಗಳಲ್ಲಿ ವಿಕಾಸವಾದ ಭಾಷೆಯನ್ನು ಕುರಿತಂತೆ ಮಹತ್ವದ ಪುಸ್ತಕಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಕನ್ನಡ ಭಾಷಾ ಸಮೂಹವೂ ಅಂತಹ ಪ್ರಾಚೀನ ಭಾಷಾವರ್ಗಕ್ಕೆ ಸೇರಿದ ಭಾಷೆಯಾಗಿದೆ. ಪ್ರಸ್ತುತ ಈ ಕೃತಿಯ ಹೆಚ್ಚಿನ ಅಂಶವೆಂದರೆ ಅಸ್ಪೃಶ್ಯತೆಯ ಸೋಂಕು ಭಾಷೆಯೊಂದರ ಅರ್ಥಪ್ರತೀತಿಯನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದು. ಅಸ್ಪೃಶ್ಯತೆಯೆನ್ನುವುದು ಒಂದು ಕೋಶ.

ಅದರಲ್ಲಿ ಅಪಮಾನ, ಬಡತನ, ಹಸಿವು, ಅಸಹಾಯಕತೆ ಇತ್ಯಾದಿ ಅನೇಕ ಸಂಗತಿಗಳಿವೆ. ಅವೆಲ್ಲ ಸೇರಿ ಶಬ್ದವೊಂದರ ಅರ್ಥನಿರ್ಣಯ ಮಾಡುತ್ತವೆ. ಹಾಗೆ ಮಾಡುವಾಗ ‘ಭಾಷೆ ಎಂಬ ಒಂದು ಶಾಬ್ದಿಕ ರಚನೆಯ ಆಚೆ ಹೋಗಿ ಅದರ ಮೂಲವಾದ ಮನುಷ್ಯರ ಭಾಷಿಕ ಪ್ರಜ್ಞೆ ಮತ್ತು ಅದರ ಬಳಕೆ ಹಾಗೂ ಅಲ್ಲಿ ಸಂವಹನವಾಗುವ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ.

ಪದಗಳ ನಿಜವಾದ ಭಾವನೆಗಳನ್ನು ಆಯಾಯ ಸಂದರ್ಭಗಳ ಮೂಲಕ ವಿವರಿಸಿದಾಗ ನಿಘಂಟುಗಳಿಗೆ ಜೀವ ಬರುತ್ತದೆ. ‘ದಲಿತ ಪದಕಥನ’ವನ್ನು ಈ ನೆಲೆಯಲ್ಲಿ ನಿರೂಪಿಸಿದ್ದೇನೆ’ ಎಂದು ಮೊಗಳ್ಳಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಮೂಹವೊಂದರ ಮನೋಕೋಶದಲ್ಲಿ ಸಂಗ್ರಹವಾಗಿರುವ ಅನೇಕ ನೆನೆಪುಗಳ ಮೂಲಕ ಅರ್ಥವನ್ನು ಕಟ್ಟಿಕೊಡುವ ವಿಶಿಷ್ಟ ರೀತಿಯ ಪ್ರಯತ್ನವೆನ್ನಬಹುದು.

ಅಕ್ಷರ, ಅನ್ನ, ಅನ್ಯಾಯ, ಆಳು, ಆಚೆ, ಆಸೆ, ಇಂಗ್ಲೀಸು, ಉಪ್ಸಾರು, ಉರಿಗದ್ದಿಗೆ, ಉಪಾಸ, ಎಂಡ, ಎಂಜಲು, ಎಕ್ಕಡ, ಕಣ್ಣೀರು, ಕಳ್ಳತನ, ಗೌರ್ಮೆಂಟು, ಜೀತ, ತಮಟೆ, ತಿಪ್ಪೆ, ತಿರುಪೆ, ಭೂಮಿ, ಬಾಡು, ಬರ ಮುಂತಾದ ಅನೇಕ ಪದಗಳನ್ನು ಅರ್ಥೈಸಲು ಬಳಸಿಕೊಳ್ಳಲಾಗಿದೆ. ಈ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳನ್ನಾಗಲೀ, ಭಾಷಾವಿಜ್ಞಾನದ ಶಿಸ್ತುಗಳನ್ನಾಗಲೀ ಬಳಸಿಕೊಂಡಂತಿಲ್ಲ. ಪದವೊಂದರ ಅರ್ಥಕೋಶವನ್ನು ಸಾಮಾಜಿಕ ಅಪಮಾನದ ನೆಲೆಯಿಂದ ಕಟ್ಟಲಾಗಿದೆ.

‘ಅಕ್ಷರ’ ಪದದ ಕಥನವನ್ನು ಉದಾಹರಣೆಯಾಗಿ ನೀಡಬಹುದು: ‘‘ಬಹಳ ಕಾಲದಿಂದ ನಮ್ಮ ಪಾಲಿಗೆ ದಕ್ಕದೇ ಇದ್ದ ಒಂದು ಹಕ್ಕು ಈ ಅಕ್ಷರ. ನಾಲ್ಕು ಅಕ್ಷರ ಕಲಿತರೆ ಈ ನರಕದಿಂದ ಪಾರಾಗುತ್ತೇವೆ ಎಂದು ಹಿರಿಯರು ಹೇಳುವುದಿತ್ತು. ಅಕ್ಷರವು ಬಿಡುಗಡೆಯನ್ನು ಧ್ವನಿಸುವ ಪದ. ಜ್ಞಾನ ಎಂಬ ಅರ್ಥದಿಂದ ನಾವು ಈ ಪದವನ್ನು ಬಳಸುತ್ತಿರಲಿಲ್ಲ.

ಕೀಳು ಎಂಬ ಹಣೆಪಟ್ಟಿಯ ಜಾತಿಯನ್ನು ಅಳಿಸಲು ಈ ಅಕ್ಷರ ಸಹಾಯ ಮಾಡುತ್ತದೆ ಎಂದು ಕೇರಿಯು ಬಲವಾಗಿ ನಂಬಿತ್ತು. ಓದಲು ಬರೆಯಲು ಬರದ ಈ ದಂಡ ಪಿಂಡ ಹೊಲಗೇರಿಯ ಹೈಕಳಿಂದ ಶಾಲೆಯೇ ಒಂದು ಹೊಲಗೇರಿಯಾಗಿಬಿಟ್ಟಿದೆ ಎಂದು ಮಾಸ್ತರು ಕಿಡಿಕಾರಿ ದನಾಕಾಯೋಕೆ ಲಾಯಕ್ಕಾಗಿದ್ದೀರಿ ಎಂದು ಹಂಗಿಸುತ್ತಿದ್ದರು’’.

ಇಲ್ಲಿ ಅಕ್ಷರ, ಹೋರಾಟ, ಬಲ ಮತ್ತು ಸಾಂಸ್ಕೃತಿಕ ರಾಜಕಾರಣ ಇವು ದಲಿತರಿಗೆ ಬಿಡುಗಡೆಯ ಸಾಧನಗಳಾಗಬೇಕು ಎಂದು ಅಂಬೇಡ್ಕರ್ ಕೂಡ ಹೇಳಿದ್ದಾರೆ ಎಂಬುದು ನೆನಪಿಗೆ ಬಾರದೆ ಇರಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.