ಶುಕ್ರವಾರ, ಜೂಲೈ 3, 2020
23 °C

ಶಾಂತಿಯಿಂದ ಹೋಳಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಿಯಿಂದ ಹೋಳಿ ಆಚರಣೆ

ಹುಕ್ಕೇರಿ: ರಂಗು ರಂಗಿನ ಹಬ್ಬ ಹೋಳಿ. ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಒಳಗೊಂಡು ಪಟ್ಟಣದಲ್ಲಿ ಭಾನುವಾರ ಸಡಗರ ಸಂಭ್ರಮದ ಜೊತೆ ಶಾಂತ ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು. ವಿಶಿಷ್ಟ ಪರಂಪರೆಯ ಹಿನ್ನೆಲೆಯುಳ್ಳ ಈ ಹಬ್ಬಕ್ಕೆ ತನ್ನದೆಯಾದ ಸ್ಥಾನಮಾನವಿದೆ. ಕಾಮದಹನ ಮಾಡಲು ಯುವಕರು ಸೇರಿದಂತೆ ಚಿಕ್ಕ ಮಕ್ಕಳು ಕಟ್ಟಿಗೆ, ಕುಳ್ಳು ಮತ್ತಿತರ ಸಾಮಾನುಗಳನ್ನು ಕಳ್ಳತನ ಮಾಡಿ ಸಂಗ್ರಹಿಸಿ ಇಡುವುದು ವಾಡಿಕೆ. ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದರೆ ಮಾಲೀಕರು ನಿಂದಿಸುವಂತಿಲ್ಲ. ಒಂದು ವೇಳೆ ನಿಂದಿಸಲು ಪ್ರಾರಂಭಿಸಿದರೆ ಕಳ್ಳತನಕ್ಕೆ ಹೋದವರು ಬೊಬ್ಬೆ ಹೊಡೆಯುವ ಮೂಲಕ ವಾಗ್ವಾದಕ್ಕೆ ತಿಲಾಂಜಲಿ ಇಡುವರುಶುಕ್ರವಾರ ರಾತ್ರಿ ಕಾಮಣ್ಣನನ್ನು ಶೃಂಗರಿಸಿ ತಯಾರಿಯಲ್ಲಿರಿಸಿದ್ದರು. ಶನಿವಾರ ಬೆಳಗಿನ ಜಾವ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ನೈವೇದ್ಯ (ಬಾಣ) ಹಿಡಿದು ಕಾಮಣ್ಣನ ಗೂಡಿಗೆ ಬೆಂಕಿ ಹಚ್ಚಿ ದಹನ ಮಾಡುತ್ತ ಮಕ್ಕಳು ಬೊಬ್ಬೆ ಹೊಡೆದರು. ದಹನಗೊಂಡ ಬೆಂಕಿಯನ್ನು ಮನೆ ಮನೆಗೆ ಕೊಂಡೊಯ್ದು ಒಣ ಕಡಲೆ ಸುಟ್ಟು (ಹಲ್ಲು ಗಟ್ಟಿಯಾಗುತ್ತವೆ ಎಂಬ ನಂಬಿಕೆ) ತಿನ್ನುವರು.ಕಾಮ ದಹನದ ಮರುದಿನ ಮಹಿಳೆಯರನ್ನು ಒಳಗೊಂಡು ಪಟ್ಟಣದಲ್ಲಿ ಭಾನುವಾರ ಬಣ್ಣದೋಕುಳಿ ಆಡಲಾಯಿತು. ಪರಸ್ಪರ ವಿವಿಧ ರಂಗು ರಂಗಿನ ಬಣ್ಣ ಹಚ್ಚಿ ಎಲ್ಲರೂ ಬೆರೆತು ಆಲಿಂಗನ ಮಾಡಿದರು. ಆಡದವರಿಗೆ ಕೆಲವೊಂದು ಯುವಕರು ಮನೆಯಿಂದ ಅವರನ್ನು ಹೊರತಂದು ಬಣ್ಣ ಹಚ್ಚಿ ಸಂತೋಷಪಟ್ಟರು. ಪಟ್ಟಣದ ಕೆಲವೆಡೆ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು.ಪಟ್ಟಣದ ಹೃದಯ ಭಾಗವಾದ ಹಳೆ ಬಸ್‌ನಿಲ್ದಾಣ, ಹಳ್ಳದಕೇರಿ, ಅಂಬೇಡ್ಕರ್ ನಗರ, ಹೊಸ ಬಸ್‌ನಿಲ್ದಾಣ, ಆಂಜನೇಯ ನಗರ, ಗಾಂಧಿನಗರ, ಬಸವನಗರ, ಮತ್ತಿತರ ಸ್ಥಳದಲ್ಲಿ ಚಿಕ್ಕ ಮಕ್ಕಳು ಸೇರಿ ಯುವಕರು, ಮಹಿಳೆಯರು ಬಣ್ಣದಲ್ಲಿ ಮಿಂದರು. ಹಳ್ಳದಕೇರಿ ಮತ್ತು ನಾಯಿಕ ಗಲ್ಲಿಯಲ್ಲಿ ಗಡಿಗೆ ಒಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಿದರು.ಹೋಳಿಗೆ ಊಟ: ‘ಹೊಯ್ಕಿಂಡ ಬಾಯಿಗೆ ಹೋಳಿಗೆ ತುಪ್ಪ’ ಎಂಬಂತೆ ಹೋಳಿ ಹಬ್ಬದಲ್ಲಿ ಸಿಹಿ ತಿಂಡಿಯಾದ ‘ಹೋಳಿಗೆ ಊಟ’ ತಯಾರಿಸುತ್ತಾರೆ. ಮಧ್ಯಾಹ್ನದ ವೇಳೆಗೆ ಎಲ್ಲರ ಮನೆಯಲ್ಲಿ ತಯಾರಿಸಿದ ‘ಹೋಳಿಗೆ-ತುಪ್ಪದ’ ಜೊತೆ ಶಾಂಡಿಗೆ, ಹಪ್ಪಳ, ಹುರಿದ ಮಸಾಲೆ ಮೆಣಸಿನಕಾಯಿ ಮತ್ತಿತರ ಬಾಯಿ ಚಪ್ಪರಿಸುವಂತಹ ವಿಶಿಷ್ಟ ಭಕ್ಷ್ಯಗಳನ್ನು ಕುಟುಂಬದವರೆಲ್ಲ ಸೇರಿ ಸವಿದು ಆನಂದಪಟ್ಟರು.ಬಿಗಿ ಭದ್ರತೆ: ಪಟ್ಟಣದಲ್ಲಿ ಯಾವುದೆ ರೀತಿಯ ಅಹಿತಕರೆ ಘಟನೆ ಸಂಭವಿಸದಂತೆ ಸಿ.ಪಿ.ಐ. ಎಲ್. ವೇಣುಗೋಪಾಲ ನೇತೃತ್ವದಲ್ಲಿ ಬಿಗಿಪೊಲೀಸ್ ಕಾವಲು ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಬಣ್ಣದ ಓಕುಳಿ ಆಡಿ ಸಾರ್ವಜನಿಕರು ಸಂಭ್ರಮಿಸಿದರು. ಮಹಿಳೆಯರು ಪೂಜೆ ಸಲ್ಲಿಸಿ ನೈವೇದ್ಯ ಹಿಡಿದರು. ಯುವಕರು ಮತ್ತು ಮಕ್ಕಳು ಸುಡು ಬಿಸಿಲಿನಲ್ಲೂ ಹುರುಪಿನಿಂದ ಕಾಮಣ್ಣನ ಹಬ್ಬದಲ್ಲಿ ಪಾಲ್ಗೊಂಡಿದ್ದರು.ಕಿರಿ-ಕಿರಿ: ಗ್ರಾಮಗಳ ರಸ್ತೆಯಲ್ಲಿ ಮಕ್ಕಳು ಮತ್ತು ಕೆಲ ಯುವಕರು ರಸ್ತೆ ಮೇಲೆ ಅಡ್ಡ ಕಲ್ಲುಗಳನ್ನು ಹಾಕಿ ಪ್ರಯಾಣಿಕರ ವಾಹನ (ದ್ವಿ ಚಕ್ರ ವಾಹನ ಸೇರಿ) ತಡೆದು ಹಣ ವಸೂಲಿ ಮಾಡುವ ದೃಶ್ಯ ಕಂಡು ಬಂದಿತು. ಪ್ರೀತಿಯಿಂದ ಬಣ್ಣ ಹಾಕಬೇಕು. ಇಲ್ಲವಾದಲ್ಲಿ ಬಿಡಬೇಕು. ಅದು ಬಿಟ್ಟು ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪ್ರಯಾಣಿಕರು ಗೊಣಗುತ್ತಾ ಹೋದರು.ಚನ್ನಮ್ಮನ ಕಿತ್ತೂರು ವರದಿ

ಯುವಕರ ಕುಣಿತ, ಹಲಗೆ ವಾದನ, ಸಿನಿಮಾ ಹಾಡುಗಳ ಅಬ್ಬರ, ಚಿಣ್ಣರ ಅದರಲ್ಲೂ ಬಾಲಕಿಯರ ವೈವಿಧ್ಯಮಯ ಬಣ್ಣಗಳ ಎರಚಾಟ ಮಧ್ಯೆ ಸಂಭ್ರಮ, ಸಡಗರ ಹಾಗೂ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಭಾನುವಾರ ಪಟ್ಟಣದಲ್ಲಿ ಆಚರಿಸಲಾಯಿತು. ಬೆಳಗು ಹರಿಯುವುದು ತಡ ಬಣ್ಣ, ಬಣ್ಣದ ಚೀಟುಗಳನ್ನು ಹಿಡಿದುಕೊಂಡು ಪರಸ್ಪರ ಎರಚಾಡಿದ ಚಿಣ್ಣರು ಓಕುಳಿಯಾಟಕ್ಕೆ ನಾಂದಿ ಹಾಡಿದ್ದರು. ಬಾಲಕಿಯರೇನೂ ಕಮ್ಮಿಯಿರಲಿಲ್ಲ. ಅವರೂ ಹಿಂಡು ಕಟ್ಟಿಕೊಂಡು ‘ಹುಯ್’ ಎಂದರು. ಒಬ್ಬರಿಗೊಬ್ಬರು ಬಣ್ಣ ಬಳಿದುಕೊಂಡು ಖುಷಿಪಟ್ಟರು.ಯುವಕರ ಉತ್ಸಾಹವಂತೂ ಮೇರೆ ಮೀರಿತ್ತು. ಹಲಗೆ ವಾದನ, ಕೇಕೆ ಮುಗಿಲು ಮುಟ್ಟಿತ್ತು. ಯುವಕರು ದಂಡು ಕುಣಿದು ಕುಪ್ಪಳಿಸಿದರು. ತಮ್ಮದೇ ಶೈಲಿಯಲ್ಲಿ ಮಾಡುತ್ತಿದ್ದ ‘ಬ್ರೇಕ್ ಡಾನ್ಸ್’ ಮನರಂಜಿಸಿತು. ಸೋಮವಾರ ಪೇಟೆಯ ಗಣಪತಿ ಗಲ್ಲಿಯ ಯುವಕರು ಈ ಬಾರಿ ಹನ್ನೊಂದು ಅಡಿ ಎತ್ತರದ ಕಾಮನ ಪ್ರತಿಮೆ ಅನಾವರಣ ಮಾಡಿದ್ದರು. ಶಿರವೆತ್ತಿ ನೋಡುವ ಈ ಮನ್ಮಥ ಮೂರ್ತಿ ಎಲ್ಲರನ್ನು ಆಕರ್ಷಿಸಿತು.ಗುರುವಾರ ಪೇಟೆಯ ಯುವಕರೂ ಅತಿ ಉತ್ಸಾಹದಿಂದ ಬಣ್ಣದಾಟ ಆಡಿದರು. ಇದೇ ಪೇಟೆಯ ಚನ್ನಮ್ಮನಗರದ ವಡ್ಡರ ಓಣಿಯಲ್ಲಿ ಅನಾವರಣ ಮಾಡಲಾಗಿದ್ದ ಕಾಮನಮೂರ್ತಿಗೆ ರಜತ ಮಹೋತ್ಸವದ ಸಂಭ್ರಮ. ಗಂಗಪ್ಪ ಕಲ್ಲವಡ್ಡರ, ಮಾರುತಿ ಕಲ್ಲವಡ್ಡರ ಗೆಳೆಯರ ಬಳಗ ಆಕರ್ಷಕವಾಗಿ ಈ ಬಾರಿ ಮೂರ್ತಿ ಮಂಟಪ ಸಿಂಗರಿಸಿದ್ದರು. ಮಧ್ಯಾಹ್ನ ಎರಡು ಗಂಟೆಗೆ ಪಟ್ಟಣದ ಅನೇಕ ಕಡೆಗಳಲ್ಲಿ ಕೂಡ್ರಿಸಲಾಗಿದ್ದ ಕಾಮನಮೂರ್ತಿಗಳಿಗೆ ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಓಕುಳಿಯಾಟಕ್ಕೆ ತೆರೆ ಬಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.