ಗುರುವಾರ , ಮೇ 6, 2021
21 °C

ಶೇ 8ರಷ್ಟು ಆರ್ಥಿಕ ವೃದ್ಧಿ ದರ ನಿರೀಕ್ಷೆ: ರಂಗರಾಜನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಆಹಾರ ಹಣದುಬ್ಬರ ದರವು ಇನ್ನೂ 3-4 ತಿಂಗಳವರೆಗೆ ಗರಿಷ್ಠ ಮಟ್ಟದಲ್ಲಿ ಮುಂದುವರೆಯಲಿದ್ದು, ವರ್ಷಾಂತ್ಯಕ್ಕೆ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8ಕ್ಕೆ ಸ್ಥಿರವಾಗಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.ಈ ಮೊದಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 8.2ರಷ್ಟು `ಜಿಡಿಪಿ~ ಇರಲಿದೆ ಎಂದು `ಪಿಎಂಇಎಸಿ~ ಅಂದಾಜಿಸಿತ್ತು. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ದೇಶೀಯ ಸಂಗತಿಗಳು ವೃದ್ಧಿ ದರದ ಗುರಿಯ ಮೇಲೆ ನಿರಂತರ ಪರಿಣಾಮ ಬೀರುತ್ತಿವೆ ಎಂದು ರಂಗರಾಜನ್ ಹೇಳಿದ್ದಾರೆ.ಉತ್ತಮ ಮುಂಗಾರು ಲಭಿಸಿದರೆ ಕೃಷಿ ಕ್ಷೇತ್ರದ ಗರಿಷ್ಠ ಪ್ರಗತಿ ನಿರೀಕ್ಷಿಸಲಾಗಿದೆ. ಆಹಾರ ಪದಾರ್ಥಗಳ ಪೂರೈಕೆ ಹೆಚ್ಚಿದರೆ, ಸಹಜವಾಗಿಯೇ  ಆಹಾರ ಹಣದುಬ್ಬರ ಇಳಿಕೆಯಾಗಲಿದೆ.   ತಯಾರಿಕೆ ಕ್ಷೇತ್ರ ಚೇತರಿಸಿಕೊಂಡರೆ ವರ್ಷಾಂತ್ಯಕ್ಕೆ ವೃದ್ಧಿ ದರ ಶೇ 8ಕ್ಕೆ ಸ್ಥಿರಗೊಳ್ಳಲಿದೆ ಎಂದು ಇಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯಪಟ್ಟರು.ಕಳೆದ ವರ್ಷ ಶೇ 8.8ರಷ್ಟಿದ್ದ ಆರ್ಥಿಕ ವೃದ್ಧಿ ದರ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ 7.7ಕ್ಕೆ ಇಳಿಕೆ ಕಂಡಿದೆ.  ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕೂಡ ಇತ್ತೀಚೆಗೆ ದೇಶದ ವೃದ್ಧಿ ದರವನ್ನು   ಶೇ 8.2ರಿಂದ ಶೇ 7.9ಕ್ಕೆ ತಗ್ಗಿಸಿದೆ.ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಆಗಸ್ಟ್ ತಿಂಗಳಲ್ಲಿ ಶೇ 9.78ರಷ್ಟಾಗಿದೆ. ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸತತ 12ನೇ ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ. ಆದರೂ, ಮುಂದಿನ 3-4 ತಿಂಗಳವರೆಗೆ ಆಹಾರ ಹಣದುಬ್ಬರ ಗರಿಷ್ಠ ಮಟ್ಟದಲ್ಲಿಯೇ ಮುಂದುವರೆಯಲಿದ್ದು, ಜನವರಿ ನಂತರ ಗಣನೀಯ ಇಳಿಕೆ ಕಾಣಲಿದೆ  ಎಂದು ರಂಗರಾಜನ್ ಹೇಳಿದ್ದಾರೆ.  ಗರಿಷ್ಠ ಬಡ್ಡಿ ದರವು ಕೈಗಾರಿಕೆ ಮತ್ತು ಚಿಲ್ಲರೆ ವಹಿವಾಟು ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಆದರೆ, ಗರಿಷ್ಠ ಹಣದುಬ್ಬರದ ಹಿನ್ನೆಲೆಯಲ್ಲಿ ಏರಿಕೆ ಅನಿವಾರ್ಯವಾಗಿತ್ತು. ಮುಂದಿನ ಆರು ತಿಂಗಳಲ್ಲಿ ಬಡ್ಡಿ ದರವೂ ಇಳಿಕೆಯಾಗಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.