ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ: ಜೆಡಿಎಸ್- ಬಿಜೆಪಿ ಮೈತ್ರಿ

Last Updated 19 ಫೆಬ್ರುವರಿ 2011, 5:00 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬದ್ಧ ವೈರಿಗಳು ಎಂದೇ ಜನ ಜನಿತವಾಗಿರುವ ಜೆಡಿಎಸ್- ಬಿಜೆಪಿ ಪಕ್ಷಗಳು ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಅಚ್ಚರಿ ಮೂಡಿಸಿವೆ.

ಶುಕ್ರವಾರ ನಡೆದ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಟಿ.ಶ್ರೀಧರ್ ಹಾಗೂ ಜೆಡಿಎಸ್‌ನ ರಾಜೇಶ್ವರಿ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರ ಹಿಡಿಯಲು ಜೆಡಿಎಸ್‌ಗೆ ಒಬ್ಬ ಸದಸ್ಯರ ಕೊರತೆ ಇತ್ತು. 7 ಸದಸ್ಯರನ್ನು ಹೊಂದಿರುವ ಜೆಡಿಎಸ್ 3 ಸದಸ್ಯರಿರುವ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. 15 ಸದಸ್ಯ ಬಲದ ತಾ.ಪಂ.ನಲ್ಲಿ ಅಧಿಕಾರ ಹಿಡಿಯಲು 8 ಸದಸ್ಯರ ಅಗತ್ಯವಿತ್ತು. ಕಾಂಗ್ರೆಸ್ ಜತೆ ಮಾತುಕತೆ ವಿಫಲವಾದ ಕಾರಣ ಬಿಜೆಪಿಯ ಏಕೈಕ ಸದಸ್ಯ, ಚಂದಗಾಲು ಕ್ಷೇತ್ರದ ಟಿ.ಶ್ರೀಧರ್ ಬೆಂಬಲದೊಡನೆ ಜೆಡಿಎಸ್ ಅಧಿಕಾರ ಹಿಡಿಯಿತು. ಅದರೆ ಅಧ್ಯಕ್ಷ ಪದವಿಯನ್ನು ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಬಿಜೆಪಿಗೆ ಬಿಟ್ಟುಕೊಟ್ಟಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಟಿ.ಶ್ರೀಧರ್ ಜೆಡಿಎಸ್ ಬೆಂಬಲದೊಡನೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ಹುಲಿಕೆರೆ ಜಯರಾಂ ಹಾಗೂ ಪಕ್ಷೇತರ ಸದಸ್ಯ ಕೆ.ಸಿ.ಸೋಮಶೇಖರ್ ಕೂಡ ನಾಮಪತ್ರ ಸಲ್ಲಿಸಿದರು. ಕೈ ಎತ್ತಿಸುವ ಮೂಲಕ ಬಲಾಬಲ ಪ್ರದರ್ಶನ ನಡೆಯಿತು. ಟಿ.ಶ್ರೀಧರ್-8, ಕೆ.ಸಿ.ಸೋಮಶೇಖರ್-4 ಹಾಗೂ ಜಯರಾಂ-3 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನ ಪ/ಜಾಗೆ ಮೀಸಲಾಗಿತ್ತು. 15 ಸದಸ್ಯರಲ್ಲಿ ಕೆ.ಶೆಟ್ಟಹಳ್ಳಿ ಕ್ಷೇತ್ರದ ಜೆಡಿಎಸ್ ಸದಸ್ಯೆ ರಾಜೇಶ್ವರಿ ಮಾತ್ರ ಈ ವರ್ಗಕ್ಕೆ ಸೇರಿದ್ದು, ಅವಿರೋಧವಾಗಿ ಆಯ್ಕೆಯಾದರು. ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಚುನಾವಣಾಧಿ ಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ‘ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಹಿಡಿತ ಸಾಧಿಸಬೇಕು ಎಂಬ ನಮ್ಮ ಆಸೆ ಈಡೇರಿದೆ. ಇದರಿಂದ ನಮಗೆ ಸಹಜವಾಗಿ ಸಂತೋಷವಾಗಿದೆ. ಜೆಡಿಎಸ್ ಅಗತ್ಯ ಸಹಕಾರ ನೀಡಿದರೆ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಬಹುದು’ ಎಂದು ಹೇಳಿದರು.

ಕಾಂಗ್ರೆಸ್ ಟೀಕೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕುರಿತು ಶಾಸಕರು ಮತ್ತು ಆ ಪಕ್ಷದ ಮುಖಂಡರ ಜತೆ ಚರ್ಚೆ ನಡೆದಿತ್ತು. ಕಾಂಗ್ರೆಸ್‌ಗೆ ಕೇವಲ 3 ತಿಂಗಳು ಅಧಿಕಾರ ನೀಡುವಂತೆ ಪ್ರಸ್ತಾಪ ಮುಂದಿಡಲಾಗಿತ್ತು. ಸಮಯಾವಕಾಶ ಕೇಳಿದ್ದ ಶಾಸಕ ಮತ್ತು ಆ ಪಕ್ಷದ ಮುಖಂಡರು ಕಾಂಗ್ರೆಸ್‌ಗೆ ದ್ರೋಹ ಬಗೆದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು ಟೀಕಿಸಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಿ.ಎಚ್. ಚಂದ್ರಶೇಖರ್, ಕೆ.ಬಲರಾಂ, ಉಮಾಶಂಕರ್, ಎಸ್.ದೇವರಾಜು, ಎಸ್.ಜೆ. ಆನಂದ್, ಗ್ರಾ.ಪಂ. ಅಧ್ಯಕ್ಷ ಜೆ.ರಾಜು, ಜೆಡಿಎಸ್ ಅಧ್ಯಕ್ಷ ಎನ್.ವಿ.ಚಲುವರಾಜು ಇತರರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT