ಮಂಗಳವಾರ, ಮೇ 11, 2021
20 °C

ಸಂಕ್ಷೀಪ್ತ ರಾಷ್ಟ್ರೀಯ ಸುದ್ಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಜನ ಲೋಕಪಾಲ ಕರಡು ಸಲ್ಲಿಸಿದ ಐಜೆಪಿ

ನವದೆಹಲಿ (ಪಿಟಿಐ):
ಲೋಕಪಾಲ ವ್ಯಾಪ್ತಿಯಲ್ಲಿ ಮಾಧ್ಯಮದವರು ಹಾಗೂ ಕಾರ್ಪೊರೇಟ್ ಕಂಪೆನಿಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ತರಬೇಕು ಎನ್ನುವ ಬಹುಜನ ಲೋಕಪಾಲ ಮಸೂದೆಯ ಕರಡಿನ ಪ್ರತಿಯನ್ನು ಇಂಡಿಯನ್ ಜಸ್ಟೀಸ್ ಪಾರ್ಟಿ (ಐಜೆಪಿ) ಮುಖ್ಯಸ್ಥ ಉದಿತ್ ರಾಜ್ ಅವರು ಸಂಸದೀಯ ಸ್ಥಾಯಿ ಸಮಿತಿ (ಕಾನೂನು ಮತ್ತು ನ್ಯಾಯ) ಅಧ್ಯಕ್ಷ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಸಲ್ಲಿಸಿದರು.ಉದ್ದೇಶಿತ ಲೋಕಪಾಲಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ಕೋರಿದ್ದಾರೆ.ಕ್ಷಮೆ ಕೇಳುವುದಿಲ್ಲ- ಬೇಡಿ

ನವದೆಹಲಿ (ಐಎಎನ್‌ಎಸ್):
ತಮ್ಮ ಭಾಷಣದಲ್ಲಿ ಸಂಸದರ ವಿರುದ್ಧ ಕಿಡಿ ಕಾರಿದುದಕ್ಕಾಗಿ ಸಂಸತ್‌ನಲ್ಲಿ ತಮ್ಮ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲಾಗಿದ್ದು, ತಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅಣ್ಣಾ ಹಜಾರೆ ತಂಡದ ಸದಸ್ಯೆ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ತಿಳಿಸಿದ್ದಾರೆ.`ನನ್ನ ಹಿಂದಿನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿರುವುದಾಗಿ ಹೇಳಿರುವ ಅವರು, ಸಂಸದರ ಕ್ಷಮೆ ಕೇಳುವ ಸ್ಥಿತಿಯಲ್ಲಿ ಇಲ್ಲ. ಈ ಸಂಸದರಿಂದ ಇನ್ನೂ ಹೆಚ್ಚಿನ ವಿಷಯ ತಿಳಿಸಬೇಕಾಗಿದೆ~ ಎಂದಿದ್ದಾರೆ.ಮುಲುಂದ್ ಸ್ಫೋಟ ಪ್ರಕರಣ: ಆರೋಪಿ ಸಾವು

ಮುಂಬೈ (ಪಿಟಿಐ):
ಮುಂಬೈನ ಮುಲುಂದ್‌ನಲ್ಲಿ 2003ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಸಾದಿಕ್ ಸೈಯದ್ ಹೃದಯಾಘಾತದಿಂದ ಸತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಸಾಧಿಕ್ ಅಲ್ಲದೇ ಇತರ 15 ಆರೋಪಿಗಳು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದರು. ಈಚೆಗೆ ಈತನಿಗೆ ವಿಶೇಷ ಪೋಟಾ ನ್ಯಾಯಾಲಯ ಜಾಮೀನು ನೀಡಿತ್ತು.ವಕ್ಕಂ ಪುರುಷೋತ್ತಮನ್ ಮಿಜೋರಾಂ ರಾಜ್ಯಪಾಲ

ಐಜ್ವಾಲ್ (ಪಿಟಿಐ):
ಮಿಜೋರಾಂ ರಾಜ್ಯದ ನೂತನ ರಾಜ್ಯಪಾಲರಾಗಿ ವಕ್ಕಂ ಬಿ.ಪುರುಷೋತ್ತಮನ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುವಾಹಟಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮದನ್ ಭೀಮರಾವ್ ಲೋಕೂರ್ ಪ್ರಮಾಣವಚನ ಬೋಧಿಸಿದರು.ನಟ ಚಿರಂಜೀವಿ ಮಗನಿಂದ ಪೋಲೊ ತಂಡದ ಖರೀದಿ

ಹೈದರಾಬಾದ್ (ಪಿಟಿಐ):
ಬಾಲಿವುಡ್ ತಾರೆಯರು ಐಪಿಎಲ್‌ನಲ್ಲಿ ಕ್ರಿಕೆಟ್ ತಂಡಗಳನ್ನು ಖರೀದಿಸಿದ ಮಾದರಿಯಲ್ಲಿಯೇ ನಟ ಚಿರಂಜೀವಿ ಪುತ್ರ ಹಾಗೂ ನಟ ರಾಮ್ ಚರಣ್ ಪೋಲೊ ತಂಡವನ್ನು ಖರೀದಿಸಿದ್ದಾರೆ.

ಇದು ವಾಣಿಜ್ಯ ಉದ್ದೇಶಕ್ಕೆ ಅಲ್ಲ ಎಂದಿರುವ ಚರಣ್, ತನ್ನ ಹವ್ಯಾಸವಾದ ಕುದುರೆ ಸವಾರಿಗೆ ಬಳಸಿಕೊಳ್ಳುವ ಉದ್ದೇಶವೇ ಮುಖ್ಯ ಎಂದಿದ್ದಾರೆ. ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಕಡೆ ನಡೆಯುವ ಪೋಲೊ ಟೂರ್ನಿಗಳಲ್ಲಿ ಈ ತಂಡ ಪಾಲ್ಗೊಳ್ಳಲಿದೆ ಎಂದು ಚರಣ್ ತಿಳಿಸಿದ್ದಾರೆ.ರಿಕ್ಷಾಗೆ ರೈಲು ಡಿಕ್ಕಿ: ಏಳು ಸಾವು

ಚಾಪ್ರಾ (ಬಿಹಾರ) (ಪಿಟಿಐ):
ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೊರಿಕ್ಷಾವೊಂದು ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದು ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ.

ಸರನ್ ಜಿಲ್ಲೆಯ ದಿಘಿದಾಲ ಗ್ರಾಮದ ಬಳಿ ರೈಲ್ವೆ ಕ್ರಾಸಿಂಗ್ ಬಳಿ ಈ ಅಪಘಾತ ಸಂಭವಿಸಿದ್ದು, ಅಜ್ಮೀರ್- ಕಿಶನ್‌ಗಂಜ್ ಗರೀಬ್‌ನವಾಜ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉತ್ತರ ಮಹಾರಾಷ್ಟ್ರ: ಭಾರಿ ಮಳೆಗೆ ಆರು ಬಲಿ

ನಾಸಿಕ್ (ಪಿಟಿಐ):
ಬಿರುಗಾಳಿಯಿಂದ ಕೂಡಿದ ಭಾರಿ ಮಳೆಯಿಂದಾಗಿ ಉತ್ತರ ಮಹಾರಾಷ್ಟ್ರದಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ.ಜಲಗಾಂವ್ ಮತ್ತು ಧೂಲೆ ಜಿಲ್ಲೆಯಲ್ಲಿ ಸಾವುನೋವು ಸಂಭವಿಸಿದೆ. ನಾಲ್ಕು ಪ್ರಮುಖ ನದಿಗಳಾದ ನಾಗಝರಿ, ರತ್ನಾವತಿ, ತಿತೂರ್ ಮತ್ತು ದೋಂಗ್ರಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.  ಗುರುವಾರ ಜಲಗಾಂವ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು.ಸೋಮವಾರ ಲೋಕಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ

ನವದೆಹಲಿ (ಐಎಎನ್‌ಎಸ್):
ಕೋಲ್ಕತ್ತ ಹೈಕೋರ್ಟಿನ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರು ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರೂ, ಸೋಮವಾರ ಲೋಕಸಭೆಯಲ್ಲಿ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಅಟಾರ್ಜಿ ಜನರಲ್ ಜಿ.ಇ.ವಹನ್ವತಿ ಅವರು ಈ ಸಂಬಂಧ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.ಲೋಕಸಭೆ ಕಲಾಪದಲ್ಲಿ ಈಗಾಗಲೇ ಸೆನ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಸೇರಿದೆ. ಆದರೂ ಸಹ ಅದನ್ನು ಮುಂದುವರೆಸುವುದು ಸೂಕ್ತ ಎಂದು ವಹನ್ವತಿ ಶಿಫಾರಸು ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಂಡ್ಯ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯ

ಅಹಮದಾಬಾದ್ (ಪಿಟಿಐ):
ಗುಜರಾತ್ ಮಾಜಿ ಸಚಿವ ಹರೇನ್ ಪಾಂಡ್ಯ ಅವರ ಕೊಲೆ ಪ್ರಕರಣ ಮರು ತನಿಖೆ ನಡೆಸಬೇಕು ಎಂದು ಅವರ ಸಹೋದರಿ ಒತ್ತಾಯ ಮಾಡಿದ್ದಾರೆ.ಇದೊಂದು ರಾಜಕೀಯ ಪ್ರೇರಿತ ಕೊಲೆಯಾಗಿದ್ದು, ನಿಜವಾದ ಕೊಲೆಗಾರರು ರಾಜಾರೋಷವಾಗಿ ಓಡಾಡಿಕೊಂಡಿದ್ದು, ಅವರನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪಾಂಡ್ಯ ಸಹೋದರಿ ಛಾಯಾ ಅವರು ಆಗ್ರಹ ಮಾಡಿದ್ದಾರೆ.ಚಿತ್ರಕಲಾವಿದ ಜಹಾಂಗೀರ್ ಸಬಾವಾಲ ನಿಧನ

ಮುಂಬೈ (ಪಿಟಿಐ):
ಖ್ಯಾತ ವರ್ಣಚಿತ್ರ ಕಲಾವಿದ ಜಹಾಂಗೀರ್ ಸಬಾವಾಲ (89) ಶುಕ್ರವಾರ ಇಲ್ಲಿ ನಿಧನರಾದರು.ಅವರು ಪತ್ನಿ ಶಿರೀನ್, ಮಗಳು ಅಫ್ರೀದಾ ಅವರನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ವ್ಯಾಸಂಗ ಮಾಡಿದ ಅವರು, ತಮ್ಮ ಚಿತ್ರಕಲೆಯಿಂದ ಭಾರತವಲ್ಲದೇ ವಿದೇಶದಲ್ಲಿಯೂ ಹೆಸರು ಮಾಡಿದ್ದರು. 1977ರಲ್ಲೇ ಇವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.