ಬುಧವಾರ, ಜನವರಿ 29, 2020
26 °C

ಸಂಸತ್ ವಿಸರ್ಜಿಸಿದ ಶಿನವತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್ ವಿಸರ್ಜಿಸಿದ ಶಿನವತ್ರಾ

ಬ್ಯಾಂಕಾಂಕ್‌(ಪಿಟಿಐ): ಕಕಳೆದ ಹಲವು ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮಣಿದಿರುವ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲಕ್‌ ಶಿನವತ್ರಾ, ಸೋಮವಾರ ನಿರೀಕ್ಷೆಯಂತೆ ಸಂಸತ್ತನ್ನು ವಿಸರ್ಜಿಸಲು ನಿರ್ಧರಿಸಿದ್ದಾರೆ. ಅದಾಗ್ಯೂ ರಾಷ್ಟ್ರವನ್ನು ಮುನ್ನಡೆಸಲು ‘ಜನತಾ ಸಮಿತಿ’ಯನ್ನು  ನೇಮಿಸುವಂತೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.

‘ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಸಂಸತ್ತನ್ನು ವಿಸರ್ಜಿಸುವಂತೆ ‘ದೊರೆ’ಗೆ ಮನವಿ ಮಾಡಲು ನಿರ್ಧರಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಹೊಸ ಚುನಾವಣೆ ನಡೆಯಲಿದೆ’ ಎಂದು 2011ರಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದ 46 ವರ್ಷ ವಯಸ್ಸಿನ ಶಿನವತ್ರಾ ನುಡಿದಿದ್ದಾರೆ.

ಇದೇ ವೇಳೆ, ಹಂಗಾಮಿ ಸರ್ಕಾರ ಮುಖ್ಯಸ್ಥೆಯಾಗಿ ಮುಂದುವರಿಯುವುದಾಗಿಯೂ ಯಿಂಗ್ಲಕ್   ಅವರು ಸೋಮವಾರ ತಿಳಿಸಿದ್ದಾರೆ.

‘ಪ್ರಸಕ್ತ ಪರಿಸ್ಥಿತಿಯಿಂದ ಹಿಂಸಾಚಾರ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಅಧಿಕಾರವನ್ನು ಜನರಿಗೆ ಮರಳಿಸಲು ಮತ್ತು ಚುನಾವಣೆ ಮೂಲಕ ಹೊಸ ಸರ್ಕಾರ ಆಯ್ಕೆ ಮಾಡುವ ಕಾರ್ಯ ಅವರಿಗೆ ಬಿಡಲು’ ಸರ್ಕಾರ ತೀರ್ಮಾನಿಸಿದೆ’ ಎಂದೂ ಅವರು ತಿಳಿಸಿದ್ದಾರೆ.

60 ದಿನಗಳ ಒಳಗಾಗಿ ಅಥವಾ 2014ರ ಫೆಬ್ರುವರಿ 2ರ ಒಳಗಾಗಿ 500 ಸದಸ್ಯ ಬಲದ ಕೆಳಮನೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಸದಸ್ಯ ಸೊದ್‌ಸ್ರಿ ಸತ್ಯಂ ತಿಳಿಸಿದ್ದಾರೆ. ಥಾಯ್ಲೆಂಡ್‌ ಚುನಾವಣಾ ಕಾಯ್ದೆಯಡಿ, ಮುಂದಿನ 60 ದಿನಗಳಲ್ಲಿ ಹೊಸ ಚುನಾವಣೆ ನಡೆಸಲೇಬೇಕು.

ನಿಲ್ಲದ ಪ್ರತಿಭಟನೆ: ಯಿಂಗ್ಲಕ್ ಸರ್ಕಾರದ ಬದಲಿಗೆ ಆಯ್ಕೆ ರಹಿತ ‘ಜನತೆಯ ಸಮಿತಿ’ಯನ್ನು ನೇಮಿಸುವಂತೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ರ್‍ಯಾಲಿಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಯಿಂಗ್ಲಕ್  ಅವರು ತಮ್ಮ ಸಹೋದರ ಹಾಗೂ ಮಾಜಿ ಪ್ರಧಾನಿ ಥಕ್ಸಿನ್ ಶಿನವತ್ರಾ ಅವರ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)