ಮಂಗಳವಾರ, ಮೇ 18, 2021
22 °C

ಸಚಿನ್, ದ್ರಾವಿಡ್ ವಿರುದ್ಧ ಶೋಯಬ್ ಅಖ್ತರ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ರಾವಲ್ಪಿಂಡಿ ಎಕ್ಸ್‌ಪ್ರೆಸ್~ ಖ್ಯಾತಿಯ ಶೋಯಬ್ ಅಖ್ತರ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಆದರೆ ಈ ಬಾರಿ ಕ್ರೀಡಾಂಗಣದಲ್ಲಿ ಅಲ. ಬದಲಾಗಿ ಅಕ್ಷರಗಳ ಮೂಲಕ.ಕಾರಣ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ನೈಪುಣ್ಯತೆಯನ್ನು ಪಾಕಿಸ್ತಾನದ ಮಾಜಿ ವೇಗಿ ಅಖ್ತರ್ ಪ್ರಶ್ನಿಸಿದ್ದಾರೆ.`ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಕಲೆ ಸಚಿನ್ ಹಾಗೂ ದ್ರಾವಿಡ್ ಅವರ ಬಳಿ ಇಲ್ಲ. ಅಷ್ಟು ಮಾತ್ರವಲ್ಲದೇ, 2006ರಲ್ಲಿ ಫೈಸಲಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ನನ್ನ ಎಸೆತಗಳನ್ನು ಎದುರಿಸಲು ಸಚಿನ್ ಪರದಾಡಿದ್ದರು~ ಎಂದು ಶುಕ್ರವಾರ ಬಿಡುಗಡೆ ಮಾಡಿರುವ ತಮ್ಮ ಜೀವನ ಚರಿತ್ರೆ `ಕಾಂಟ್ರೊವರ್ಷಿಯಲಿ ಯೂವರ್ಸ್‌~ ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ.`ವಿವಿಯನ್ ರಿಚರ್ಡ್ಸ್, ರಿಕಿ ಪಾಂಟಿಂಗ್, ಬ್ರಯಾನ್ ಲಾರಾ ಬ್ಯಾಟಿಂಗ್‌ನಲ್ಲಿ ಪಾರಮ್ಯ ಸಾಧಿಸುತ್ತಿದ್ದರು. ಪಂದ್ಯ ಗೆಲ್ಲಿಸಿಕೊಡುವ ಕಲೆ ಅವರಿಗೆ ಕರಗತವಾಗಿತ್ತು. ಸಚಿನ್ ಬಳಿ ದಾಖಲೆಗಳ ರಾಶಿಯೇ ಇರಬಹುದು. ಆದರೆ ಅವರಲ್ಲಿ ಈ ಕೌಶಲವೇ ಇರಲಿಲ್ಲ~ ಎಂದಿದ್ದಾರೆ.ಸಚಿನ್ ಹಾಗೂ ಅಖ್ತರ್ ಪರಸ್ಪರ 9 ಟೆಸ್ಟ್ ಹಾಗೂ 19 ಏಕದಿನ ಪಂದ್ಯ ಆಡಿದ್ದಾರೆ. ಟೆಸ್ಟ್‌ನಲ್ಲಿ ಮೂರು ಬಾರಿ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಐದು ಬಾರಿ ಸಚಿನ್ ಔಟ್ ಮಾಡಿದ್ದಾರೆ.ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರನ್ನು `ಮೋಸಗಾರ~ ಎಂದು ಕರೆದಿದ್ದಾರೆ. ಐಪಿಎಲ್‌ನಲ್ಲಿ ಶೋಯಬ್ ನೈಟ್ ರೈಡರ್ಸ್ ಪರ ಆಡಿದ್ದರು.ಹಾಗೇ, ತಾವು ಸೇರಿದಂತೆ ಪಾಕ್ ಕ್ರಿಕೆಟ್ ಪ್ರಮುಖರು ಚೆಂಡನ್ನು ವಿರೂಪಗೊಳಿಸುತ್ತಿದ್ದರು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.`ಪಾಕ್‌ನ ಹೆಚ್ಚಿನ ವೇಗದ ಬೌಲರ್‌ಗಳು ಚೆಂಡನ್ನು ವಿರೂಪಗೊಳಿಸುತ್ತಿದ್ದರು. ಇದನ್ನು ಒಪ್ಪಿಕೊಂಡ ಮೊದಲ ವ್ಯಕ್ತಿ ನಾನು. ತಮ್ಮ ದೇಶದ ಪ್ರತಿಯೊಬ್ಬರೂ ಈ ಕೃತ್ಯವನ್ನು ಮುಂದುವರಿಸಿದ್ದಾರೆ~ ಎಂದು ಅಖ್ತರ್ ಬಹಿರಂಗಪಡಿಸಿದ್ದಾರೆ.ರಿವರ್ಸ್ ಸ್ವಿಂಗ್ ಪಡೆಯುವ ಉದ್ದೇಶದಿಂದ ಪಾಕ್ ಆಟಗಾರನೊಬ್ಬ ಚೆಂಡನ್ನೇ ಬದಲಾಯಿಸಿದ್ದ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. `ಆ ಆಟಗಾರನ ಹೆಸರು ಹೇಳುವುದಿಲ್ಲ. ಒಮ್ಮೆ ಆ ಆಟಗಾರ ಅಂಪೈರ್ ಕೋಟ್‌ನ ಜೇಬಿನೊಳಗೆ ಚೆಂಡನ್ನು ಇಟ್ಟಿದ್ದ. ಭೋಜನ ವಿರಾಮದ ಸಮಯದಲ್ಲಿ ಅಂಪೈರ್‌ಗಳು ತಮ್ಮ ಕೋಟ್ ಒಳಗೆ ಪಂದ್ಯದ ಚೆಂಡು ಇಟ್ಟು ಅದನ್ನು ಗೋಡೆಗೆ ನೇತು ಹಾಕುತ್ತಾರೆ. ಆ ವೇಳೆ ಈ ಘಟನೆ ನಡೆದಿತ್ತು. ಆ ಬಳಿಕ ಅಂಪೈರ್‌ಗಳು ತಮ್ಮ ಕೋಟ್‌ಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ~ ಎಂದು ಅಖ್ತರ್ ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.