ಶನಿವಾರ, ಜನವರಿ 25, 2020
16 °C

ಸಚಿವ ರವೀಂದ್ರನಾಥ್ ವಜಾಗೊಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲಾ ಬಿಜೆಪಿ ಮುಸುಕಿನ ಗುದ್ದಾಟ ಬೀದಿಗೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯರು ಹಾಗೂ ಮಾಯಕೊಂಡ ಶಾಸಕರ ವಿರುದ್ಧ ಪಕ್ಷದ ಹಳೇ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು.ಉತ್ಸಾಹಿ ಯುವಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನೇತೃತ್ವದಲ್ಲಿ ನಗರದ ಸಾಯಿ ಇಂಟರ್‌ನ್ಯಾಷನಲ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯಡಿಯೂರಪ್ಪ ಬೆಂಬಲಿಗರಾದ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಜ. 21ರಂದು ನಗರಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆಗಮಿಸಲಿದ್ದು, ಜಿಲ್ಲೆಯಲ್ಲಿನ ಪಕ್ಷದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಇತರೆ ಮುಖಂಡರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.ಸಂಸತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ನಾಣ್ಯದ ಎರಡು ಮುಖಗಳು. ಹೊಸಬರಿಗೆ ಮಣೆಹಾಕುತ್ತಾ ಈ ಇಬ್ಬರೂ ಹಳೇ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಹಿಂದಿನಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಯಾವುದೇ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ನಾಮನಿರ್ದೇಶನವನ್ನೂ ಮಾಡಿಲ್ಲ. ಕೊನೆ ಪಕ್ಷ ಸ್ವಾಭಿಮಾನದಿಂದ ರಾಜಕೀಯ ಮಾಡಲು ಬಿಡುತ್ತಿಲ್ಲ ಎಂದು ಬಹುತೇಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು ಸಣ್ಣಪುಟ್ಟ ಕೆಲಸಕ್ಕಾಗಿ ಹೋದ ಕಾರ್ಯಕರ್ತರನ್ನು ಅವಮಾನ ಮಾಡಿ ಕಳುಹಿಸುತ್ತಾರೆ. ಮುಖಕೊಟ್ಟು ಮಾತನಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತಿಲ್ಲ. ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಯಕೊಂಡ ಶಾಸಕ ಎಂ. ಬಸವರಾಜನಾಯ್ಕ ಅವರ ಧೋರಣೆಯೂ ಹಾಗೆಯೇ ಇದೆ. ಮೂವರೂ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ, ಭಟ್ಟಂಗಿಗಳಿಗೆ ಮಣೆಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು, ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮ ಆದ್ಯತೆ. ಜಿಲ್ಲೆಗೆ ಯಡಿಯೂರಪ್ಪ ಸಾಕಷ್ಟು ಅನುದಾನ ನೀಡಿದ್ದಾರೆ. ಹೊನ್ನಾಳಿ-ಹರಿಹರದಲ್ಲಿ ತುಂಗಭದ್ರಾ ಸೇತುವೆ ನಿರ್ಮಾಣಕ್ಕೆ ಚಾಲನೆ, ನಗರಕ್ಕೆ 250 ಕೋಟಿ ಸೇರಿದಂತೆ ಸಾವಿರಾರು ಕೋಟಿ ಜಿಲ್ಲೆಗೆ ನೀಡಿದ್ದಾರೆ. ಅಂತಹ ನಾಯಕರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಬಹುತೇಕ ಕಾರ್ಯಕರ್ತರು ಆಶಯ ವ್ಯಕ್ತಪಡಿಸಿದ್ದಾರೆ.ಏಪ್ರಿಲ್‌ನಲ್ಲಿ ಬೃಹತ್ ಸಮಾವೇಶ: ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಮಾವೇಶವನ್ನು ನಗರದಲ್ಲಿ ಏಪ್ರಿಲ್‌ನಲ್ಲಿ ನಡೆಸಲು ಸಭೆ ನಿರ್ಧರಿಸಿದೆ. ಪಕ್ಷದ ನಿಷ್ಠಾವಂತರ ಕಡೆಗಣನೆ ವಿರುದ್ಧ ಸಮಾವೇಶದ ಮೂಲಕ ಉತ್ತರ ನೀಡುವ ಜತೆಗೆ, ತಮ್ಮ ಶಕ್ತಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ.

ಪ್ರತಿಕ್ರಿಯಿಸಿ (+)