ಭಾನುವಾರ, ಜೂನ್ 20, 2021
28 °C
ನೆಲದ ನಂಟು

ಸಮಗ್ರ ಕೃಷಿಯ ನೆರಳಲ್ಲಿ...

ಮಾಲತಿ ಹೆಗಡೆ Updated:

ಅಕ್ಷರ ಗಾತ್ರ : | |

ಚಿಕ್ಕಮಲ್ಲಿಗವಾಡ ಧಾರವಾಡದಿಂದ ಒಂಬತ್ತು ಕಿಲೋಮೀಟರ್ ದೂರದ ಊರು. ಅಲ್ಲಿ ಬಸವರಾಜ ಚೆನ್ನಪ್ಪ ಎಂಬ ಅಣ್ಣ ತಮ್ಮಂದಿರ ಕಾರ್ಯಕ್ಷೇತ್ರದ ಹೆಸರು ‘ಹಸಿರೇ ಉಸಿರು’. ಎಂಟು ವರ್ಷಗಳ ಹಿಂದೆ ಊರ ಹೊರಗೆ ಪಡಾ ಬಿದ್ದ ಹೊಲದಲ್ಲಿ ಕೃಷಿ ಮಾಡಬೇಕು ಎಂದು ನಿರ್ಧರಿಸಿದ ಬಸವರಾಜ­ರಿಗೆ ಸರಕಾರಿ ನೌಕರಿ ಇತ್ತು. ತಮ್ಮ ಚನ್ನಪ್ಪನ ಕೈಯಲ್ಲಿ ಬಿ.ಎ ಪದವಿ ಇತ್ತು. ನೀರಾವರಿ ಅಲ್ಲದ, ಮಸಾರಿ ಭೂಮಿಯಲ್ಲೇನೋ ಸಾಧನೆ ಮಾಡುತ್ತೇವೆಂದು ಹೊರಟ ಅಣ್ಣ ತಮ್ಮಂದಿರ  ನಿರ್ಧಾರ ಮನೆಯವರಿಗೆ ನುಂಗಲಾರದ ತುತ್ತೇ ಆಗಿತ್ತು.ಸಮಗ್ರ ಕೃಷಿ ಅಳವಡಿಕೆ

ಮೂರೂವರೆ ಎಕರೆ ಹೊಲದ ಸುತ್ತಲೂ ಬದು ಹಾಕಿ ೩೦೦ ಸಾಗವಾನಿ, ಹೊಂಗೆ, ಗ್ಲಿರಿಸಿಡಿಯಾ ಗಿಡಗಳ ಜೀವಂತ ಬೇಲಿ ನಿರ್ಮಿಸಿದರು. ಬೋರ್‌ವೆಲ್ ಹೊಡೆಸಿದರು. ೬೦ಮಾವಿನ ಗಿಡಗಳನ್ನು ನೆಟ್ಟರು. ಮಿಶ್ರಬೆಳೆಯಾಗಿ ಭತ್ತ, ಅವರೆ, ಹೆಸರು, ಜೋಳ, ಅಗಸಿಗಳನ್ನು ಬೆಳೆದರು. ದೀರ್ಘಾವಧಿ ಬೆಳೆಗಳನ್ನು ಅಲ್ಪಾವಧಿ ಬೆಳೆಗಳನ್ನು ನೆಚ್ಚಿದರೆ ತಕ್ಷಣಕ್ಕೆ ಲಾಭವಿಲ್ಲ ಎಂಬ ಸತ್ಯದ ಅರಿವಾದಾಗ ಉಪಕಸುಬಿನತ್ತ ಲಕ್ಷ್ಯ ಹರಿಸಿದರು.ಊರಿಗೇ ಹೊಸದು ರೇಷ್ಮೆಕೃಷಿ. ವಾರದ ತರಬೇತಿ ಪಡೆದು ಮಾವಿನ ಮರಗಳಿಗೆ ಮೋಹಕ ಬಲೆ ಅಳವಡಿಸಿ ಹಿಪ್ಪುನೇರಳೆ ಸಸಿಗಳನ್ನು ನೆಟ್ಟರು. ಇಲಾಖೆ ನೀಡಿದ ಸಾಲ­ದಿಂದ 75 ಸಾವಿರ ವೆಚ್ಚದಲ್ಲಿ ಐವತ್ತೈದು ಅಡಿ ಉದ್ದ, ಇಪ್ಪತ್ತೊಂದು ಅಡಿ ಅಗಲದ ಸ್ಥಿರವಾದ ಚಾಕಿಮನೆಯನ್ನು ಕಟ್ಟಿದರು.ತಿಂಗಳಿಗೆ ಮುನ್ನೂರರಿಂದ ಐದುನೂರು ಮೊಟ್ಟೆಗಳನ್ನು ಖರೀದಿಸಿದರು.  ಪ್ರತಿ ಬೆಳೆ ಮುಗಿದಾಗ ಸಾಕಾಣಿಕಾ ಮನೆಯನ್ನು ಬ್ಲೀಚಿಂಗ್ ಮತ್ತು ಡೆಟಾಲ್‌ ಹಾಕಿ ನಾಲ್ಕು ಸಲ ತೊಳೆಯುತ್ತಾರೆ. ಕಿಟಕಿ ಬಾಗಿಲಿಗೆ ಪೇಪರ್ ಅಂಟಿಸಿ ಮುಚ್ಚಿ, ಕೊಂಚವೂ ಗಾಳಿಯಾಡದಂತೆ ಎಚ್ಚರಿಕೆ ವಹಿಸುತ್ತಾರೆ.ಫಾರ್ಮೆಲಿನ್ ದ್ರಾವಣವನ್ನು ಸ್ಟೌವ್ ಮೇಲೆ ಕುದಿಸುತ್ತಾರೆ. ನಂತರ ಎರಡು ದಿನವಿಡೀ ರೇಷ್ಮೆ ತಯಾರಿಕಾ ಮನೆಯ ಬಾಗಿಲು ಮುಚ್ಚಿಟ್ಟಾಗ  ಆ ಸ್ಥಳ ರೋಗಮುಕ್ತವಾಗುತ್ತದೆ. ಕಾಲಕ್ಕನುಸಾರ­ವಾಗಿ ಸಿ. ಎಸ್. ಆರ್ ೨, ಬೈವೋಲ್ಟಿನ್ ತಳಿಯ ಹುಳಗಳನ್ನು ಸಾಕುತ್ತಾರೆ. ‘ಗೂಡುಗಳನ್ನು ರಾಮನಗರ ಮಾರುಕಟ್ಟೆ­ಯಲ್ಲಿ ಮಾರಿ ತಿಂಗಳಿಗೆ ಒಂದೂವರೆ ಲಕ್ಷದವರೆಗೂ ಗಳಿಸುತ್ತೇವೆ. ಇದು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಗಳಿಸುವಷ್ಟಲ್ಲವೇ?’ ಎಂದು ಪ್ರಶ್ನಿಸುತ್ತಾರೆ.ಹಿಪ್ಪು ನೇರಳೆ ಬೆಳೆ

ಉಳುಮೆ ಮಾಡಿ ಮೂರು ಅಡಿ ಉದ್ದ ಮೂರು ಅಡಿ ಅಗಲ ಸಾಲಿನಲ್ಲಿ ಹಿಪ್ಪು ನೇರಳೆ ನೆಟ್ಟಿದ್ದಾರೆ. ಕುರಿಗಳ ಹಿಕ್ಕೆ ಮತ್ತು ಮೂತ್ರದಿಂದ ಕಸುವಾದ ಮಣ್ಣಿನಲ್ಲಿ ಹಿಪ್ಪುನೇರಳೆ ಗಿಡಗಳು ಎರಡಾಳೆತ್ತರ ಬೆಳೆದಿದೆ. ತೋಟದಲ್ಲಿ ಬಯೋಡೈಜೆಸ್ಟರ್ (ಸಿಮೆಂಟಿನ ತೊಟ್ಟಿ) ನಿರ್ಮಿಸಿದ್ದಾರೆ. ಹೊಂಗೆ, ಗ್ಲಿರಿಸಿಡಿಯಾ ಯಾವುದೇ ಬಗೆಯ ಕೊಳೆಯಬಲ್ಲ ಕಳೆಸಸ್ಯಗಳನ್ನು ಗಂಜಲ, ಸ್ಲರಿ ನೀರು, ಹಾಕಿ ಮೂವತ್ತರಿಂದ ನಲವತ್ತು ದಿನ ಕೊಳೆಸುತ್ತಾರೆ. ಅದರಲ್ಲಿ ಎರೆಹುಳಗಳನ್ನು ಬಿಡುತ್ತಾರೆ.ಅಲ್ಲಿ ತಯಾರಾದ ಎರೆಜಲಮಿಶ್ರಿತ ನೀರನ್ನು ಪಕ್ಕದ ಇನ್ನೊಂದು ತೊಟ್ಟಿಗೆ ಹಾಯಿಸಿ ಅದಕ್ಕೆ ಮೂರು ಪಾಲು ನೀರು ಬೆರೆಸಿ ಮಾವು, ಹಿಪ್ಪುನೇರಳೆ ತೋಟಕ್ಕೆ ಹಾಯಿಸುತ್ತಾರೆ. ಇದು ಅತ್ಯಂತ ಸುಲಭದಲ್ಲಿ ತಯಾರಾಗುವ,  ಕೂಲಿಯ ಖರ್ಚಿಲ್ಲದೇ ಗಿಡಗಳಿಗೆ ಹಾಕಬಲ್ಲ ಸತ್ವಯುತ ಗೊಬ್ಬರ.  ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪು, ರೋಗ ಬಾರದಂತೆ ಎಚ್ಚರ ವಹಿಸುವ ಕಾರಣದಿಂದಾಗಿ ರೇಷ್ಮೆಯಲ್ಲಿ ಎಂದೂ ನಷ್ಟ ಅನುಭವಿಸಿಲ್ಲ. ನಮ್ಮ ಯಶಸ್ಸನ್ನು ಗಮನಿಸಿ ಊರಿನಲ್ಲಿ ಅನೇಕರು ರೇಷ್ಮೆಕೃಷಿ ಮಾಡುತ್ತಿ­ದ್ದಾರೆ ಎಂಬುದು ಈ ಸಹೋದರರ ಹೆಮ್ಮೆ.ಮರದಡಿಯಲ್ಲಿಯೂ ಎರೆಗೊಬ್ಬರ

ಇವರು ಉಳುಮೆಗೆ ಎರಡು ಎತ್ತು, ಹೈನಿಗಾಗಿ ಎರಡು ಆಕಳು, ಎರಡು ಕರುಗಳನ್ನು ಸಾಕಿದ್ದಾರೆ. ಪರಿಚಿತರೊಬ್ಬರಲ್ಲಿ ಅಮೆರಿಕನ್ ಮೂಲದ ಯುಡ್ರೆಲಿಸಸ್ ತಳಿಯ ನೂರು ಗ್ರಾಂ ಹುಳಗಳನ್ನು ತಂದಿದ್ದಾರೆ. ಎರೆಗೊಬ್ಬರ­ಕ್ಕಿರುವ ಬೇಡಿಕೆ ಗಮನಿಸಿ ತರಬೇತಿ ಪಡೆದಿದ್ದಾರೆ. ಸಾಲ ತೆಗೆದು ಎರೆಹುಳ ಸಾಕಾಣಿಕೆಗಾಗಿ ಸ್ಥಿರ ಮನೆಯೊಂದನ್ನು ನಿರ್ಮಿಸಿದ್ದಾರೆ.ಇಪ್ಪತ್ತು ಅಡಿ ಉದ್ದ, ನಾಲ್ಕು ಅಡಿ ಅಗಲ, ಎರಡೂವರೆ ಅಡಿ ಎತ್ತರದ ನಲವತ್ತು ತೊಟ್ಟಿಗಳನ್ನು ಕಟ್ಟಿಸಿದ್ದಾರೆ. ಆರಂಭದ ಮೂರು ವರ್ಷ ತೊಟ್ಟಿಗಳಲ್ಲಿ ಗೊಬ್ಬರ ತಯಾರಿಸಿದರು. ಉತ್ತಮ ಬೇಡಿಕೆ ಬಂತು. ಹುಳಗಳ ಸಂಖ್ಯೆ ಹೆಚ್ಚಾದಂತೆ ಕಾಂಪೋಸ್ಟ್‌ ಮಾದರಿಯಲ್ಲಿ ಎರೆಗೊಬ್ಬರ ತಯಾರಿಸುವ ವಿಚಾರ ಮಾಡಿದರು. ತೋಟದಲ್ಲಿ ಎರಡು ಬೃಹತ್ ಗಾತ್ರದ ಮಾವಿನ ಮರಗಳಿವೆ.ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲ, ಹತ್ತು ಅಡಿ ತಗ್ಗು ತೆಗೆದು ಕೃಷಿಯುಳಿಕೆ, ಸೆಗಣಿ, ಗಂಜಲ, ರೇಷ್ಮೆ ತ್ಯಾಜ್ಯಗಳನ್ನು ತುಂಬಿಸಿ ಕೊಳೆಯಲು ಬಿಟ್ಟರು. ಹದಿನೈದು ದಿನಗಳಲ್ಲಿ ಎರೆಹುಳು ಬಿಟ್ಟರು. ಮರದ ನೆರಳು ಸದಾ ತೇವಾಂಶ ಕಾಪಾಡ­­ಲೆಂದು ಪ್ರತಿದಿನ ನೀರುಣಿಸುವುದ­ರಿಂದ ಇಲಿ, ಹಾವು, ಇರುವೆ ಕಾಟ ಇಲ್ಲದೇ ಎರೆಗೊಬ್ಬರ ತಯಾರಿಸಲು ಸಾಧ್ಯವಾಯಿತು. ವರ್ಷಕ್ಕೆ 200 ಟನ್ ಗೊಬ್ಬರ ತಯಾರಿಸುತ್ತಾರೆ.ಸುತ್ತ ಮುತ್ತಲಿನ ರೈತರು, ಕೃಷಿ ವಿಶ್ವವಿದ್ಯಾಲಯ­ದವರು ಅಲ್ಲದೇ ಆಂಧ್ರಪ್ರದೇಶ, ಗೋವಾ, ಮಧ್ಯಪ್ರದೇಶದವರೂ ಇವರ ಎರೆಗೊಬ್ಬರಕ್ಕೆ ಗ್ರಾಹಕರು. ಗೊಬ್ಬರದಿಂದ ವರ್ಷಕ್ಕೆ ಐದು ಲಕ್ಷ ರೂಪಾಯಿ ವರಮಾನ ಎನ್ನುತ್ತಾರೆ. ನೂರು ಗ್ರಾಂ ಹುಳದಿಂದ ಆರಂಭಿಸಿದ ಗೊಬ್ಬರ ಇಂದು ಇನ್ನೂರು ಟನ್‌ಗೆ ಏರಿದೆ!

ಮೂರು ಎಕರೆ ಇಪ್ಪತ್ತೊಂದು ಗುಂಟೆ ಪಿತ್ರಾರ್ಜಿತ ಆಸ್ತಿಯ ಸಂಗಡ ಮೂರು ಎಕರೆ ಜಮೀನನ್ನು ಖರೀದಿಸಿದ್ದಾರೆ, ಮತ್ತೆ ನಾಲ್ಕು ಎಕರೆ ಲಾವಣಿ (ಹತ್ತು ವರ್ಷಕ್ಕೆ) ಹಿಡಿದು ಜೋಡಿಸಿದ್ದಾರೆ.ಮನೆಗಾಗುವಷ್ಟು ತರಕಾರಿಗಳನ್ನು, ಮೇವಿಗೆ ಸರಗಮ್ ಹುಲ್ಲನ್ನು ಬೆಳೆದುಕೊಳ್ಳುತ್ತಾರೆ. ಮುಂಗಾರಿನಲ್ಲಿ ಕರದಡಿ, ಚಂಪಾಕಲಿ, ಹುಗ್ಗಿ ಭತ್ತಗಳನ್ನು, ಹಿಂಗಾರಿನಲ್ಲಿ ಅವರೆ, ಹೆಸರು, ಅಗಸಿಯನ್ನೂ ಬೆಳೆಯುತ್ತಾರೆ. ಬಸವರಾಜರು ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ ನೀಡಿದ ಬೆಂಬಲವನ್ನು ಸ್ಮರಿಸುತ್ತಾರೆ. 

                                      

ಸುಲಭ ವೆಚ್ಚದ ಏರ್‌ಕಂಡೀಷನ್

ತಗಡಿನ ಮೇಲ್ಛಾವಣಿ ಹೆಚ್ಚಿನ ತಾಪವನ್ನು ಒಳಗಿಳಿಸುವುದರಿಂದ ರೇಷ್ಮೆ ಹುಳಗಳಿಗೆ ಕಷ್ಟವಾಗುತ್ತದೆ. ಛಾವಣಿಯ ಮೇಲೆ ಹುಲ್ಲಿನ ಮುಚ್ಚಿಗೆ ಮಾಡಿ ಒಂದು ಸ್ಪ್ರಿಂಕ್ಲರ್ ಹಾಕಿ ಬೇಸಿಗೆಯಲ್ಲಿ ದಿನಕ್ಕೆರಡು ಬಾರಿ ನೀರುಣಿಸಿದರೆ ಇಡೀ ಮನೆ ತಂಪಾಗುತ್ತದೆ ಎನ್ನುತ್ತಾರೆ. ಸಂಪರ್ಕಕ್ಕೆ ೮೪೫೩೫೯೫೮೮೬  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.