ಮಂಗಳವಾರ, ಮೇ 18, 2021
31 °C
ಜಮಖಂಡಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ

ಸಮಸ್ಯೆಗಳಿಗೆ ಸ್ಪಂದಿಸಲು ಸದಸ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: `ಸಾಹೇಬ್ರ ಒಂದ ದಿನ ಕುತ್ರು ಉತಾರ ಸಿಗಂಗಿಲ್ರಿ..., ಇನ್ನೊಂದು ಜನಸ್ನೇಹಿ ಕೇಂದ್ರ ಸುರು ಮಾಡ್ರಿ..., ಸರ್ವೇಯರಗಳೇ ಇಲ್ರಿ..., ಟ್ಯಾಂಕರ್ ನೀರ್ ಬಂದ್ ಮಾಡಬ್ಯಾಡ್ರಿ..., ರಸ್ತೆ ಬಂದ್ ಮಾಡ್ಯಾರ‌್ರಿ..., ಅಧಿಕಾರಿಗಳು ಫೋನ್ ತುಗೊಳ್ಳಾಂಗಿಲ್ಲರ‌್ರಿ..., ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಗಳಲ್ಲಿ ನಡೆಯಲಿ..., ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಆಯ್ಕೆ ಸಮಿತಿಗೆ ತಾ.ಪಂ.ಅಧ್ಯಕ್ಷರು ಅಧ್ಯಕ್ಷರಾಗಲಿ...'ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸರ್ಕಾರದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಎಲ್ಲ ಇಲಾಖೆಗಳ ಯೋಜನೆಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಕುರಿತು ಬುಧವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಕೇಳಿ ಬಂದ ಮಾತುಗಳಿವು.ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಹಿಂದಿನ ಸಭೆಯಲ್ಲಿ ಕೈಗೊಂಡ ಗೊತ್ತುವಳಿಗೆ ತಹಶೀಲ್ದಾರ್ (ಪ್ರಭಾರ) ಆರ್.ವಿ. ಕಟ್ಟಿ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಸದಸ್ಯ ರವಿ ಹಾಜವ್ವಗೋಳ, `ಜಮೀನುಗಳ ಉತಾರ ಪಡೆಯಲು ದಿನಗಟ್ಟಲೇ ಸಮಯ ಕಳೆಯಬೇಕಾಗಿದೆ. ಒಂದು ದಿನ ಕುಳಿತರೂ ಉತಾರ ಸಿಗುತ್ತದೆ ಎಂಬ ಭರವಸೆ ಇಲ್ಲ' ಎಂದು ದೂರಿದರು.`ತಾಲ್ಲೂಕಿನ ಸಾವಳಗಿ ಕೇಂದ್ರದಲ್ಲಿ ಕಂಪ್ಯೂಟರ್ ಪ್ರಿಂಟರ್ ಕೊರತೆ ಇದೆ. ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಕೂಡ ಇಲ್ಲ. ಕೂಡಲೇ ಪ್ರಿಂಟರ್ ಮತ್ತು ಸಿಬ್ಬಂದಿ ಒದಗಿಸಿ' ಎಂದು ರವಿ ಒತ್ತಾಯಿಸಿದರು. ಅದೇ ವೇಳೆಗೆ `ಸರ್ವೇಯರ್‌ಗಳು ಇಲ್ಲ. ಜಮೀನುಗಳ ಸರ್ವೇ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ' ಎಂದು ಸದಸ್ಯ ಹನಮಂತ ಹಿಪ್ಪರಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಾತ್ರ ಉಪಗ್ರಹ ಆಧಾರಿತ ಉತಾರ ವಿತರಣೆ ಕೇಂದ್ರಕ್ಕೆ ಸರ್ಕಾರ ಮಂಜೂರಾತಿ ನೀಡುತ್ತದೆ. ಉಳಿದೆಡೆ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಮೂಲಕ ಉತಾರ ಪೂರೈಸುವ ಸೇವೆ ಒದಗಿಸುತ್ತದೆ. ಅಂತಹ ಕೇಂದ್ರಗಳಲ್ಲಿ ಕಂಪ್ಯೂಟರ್‌ಗಳು ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ತಹಶೀಲ್ದಾರರು ಸಮಜಾಯಿಷಿ ನೀಡಿದರು.ಇನ್ನೊಂದು ಜನಸ್ನೇಹಿ ಕೇಂದ್ರವನ್ನು ತಹಶೀಲ್ದಾರ್ ಕಾರ್ಯಾಲಯದಲ್ಲಿ ತೆರೆಯಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುತ್ತೂರದಿಂದ- ಮೈಗೂರಿಗೆ ಹೋಗುವ ಒಳದಾರಿಯೊಂದನ್ನು ರೈತರು ಮುಚ್ಚಿ ಬಂದ್ ಮಾಡಿದ್ದಾರೆ. ರಸ್ತೆಯ ಜಮೀನಿನ ಮಾಲೀಕತ್ವದ ಬಗ್ಗೆ ತೀರ್ಮಾನ ಅಗುವವರೆಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸದಸ್ಯ ಪದ್ಮಣ್ಣ ಜಕನೂರ ಆಗ್ರಹಿಸಿದರು.ಕೃಷ್ಣಾ ನದಿಗೆ ನೀರು ಬಂದೊಡನೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಆದರೆ ನದಿ ನೀರು ಕುಡಿಯಲು ಅಯೋಗ್ಯವಾಗಿದೆ. ನದಿಯ ನೀರು ಸ್ವಚ್ಛಗೊಳ್ಳುವವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮುಂದುವರಿಸಬೇಕು ಎಂದು ಹನಮಂತ ಹಿಪ್ಪರಗಿ ಒತ್ತಾಯಿಸಿದರು.ಎರಡು ರೂಪಾಯಿಗೆ 20 ಲೀಟರ್‌ನಂತೆ ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳನ್ನು ತಾಲ್ಲೂಕಿನಾದ್ಯಂತ ಸ್ಥಾಪಿಸಬೇಕು ಎಂದು ಸದಸ್ಯ ನಿಂಗಪ್ಪ ಹೆಗಡೆ ಸಲಹೆ ನೀಡಿದರು.ಆಕ್ರೋಶ: ಮಾನ್ಯತೆ ಪಡೆದ ಮೀನುಗಾರಿಕೆ ಸಹಕಾರಿ ಸಂಘಗಳಿಂದ ಲೈಸೆನ್ಸ್ ಪಡೆದ ವೃತ್ತಿನಿರತ ಮೀನುಗಾರರಿಗೆ ಮಾತ್ರ ಸೈಕಲ್ ಮತ್ತು ಮೀನುಬಲೆ ವಿತರಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದು ಮೀನುಗಾರಿಕೆ ಅಧಿಕಾರಿ ಬಿರಾದಾರ ಹೇಳಿದ್ದು, ಸದಸ್ಯರನ್ನು ಕೆರಳಿಸಿತು. ಆದರೆ ತಾ.ಪಂ.ಅಧ್ಯಕ್ಷ ರಾವಸಾಬ ಗುಬಚೆ ಅಧಿಕಾರಿ ನಿಲುವು ಬೆಂಬಲಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.ಕೈಗಾರಿಕಾ ಇಲಾಖೆ ಹೊಲಿಗೆ ಯಂತ್ರ ವಿತರಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ ಮಾಡಬೇಕು ಎಂದು ರವಿ ಹಾಜವ್ವಗೋಳ ಒತ್ತಾಯಿಸಿದರು.ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಆಯ್ಕೆ ಸಮಿತಿಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಮಾಡಬೇಕು; ಈ ಕುರಿತು ಗೊತ್ತುವಳಿ ಸ್ವೀಕರಿಸಬೇಕು ಎಂದು ಸರ್ವ ಸದಸ್ಯರು ಒಕ್ಕೊರಲಿನ ಒತ್ತಾಯ ಮಾಡಿ ಗೊತ್ತುವಳಿ ಸ್ವೀಕರಿಸುವಂತೆ ಮಾಡಿದರು. ಈ ಆಯ್ಕೆ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ, ಟಿಪಿಇಒ, ತಹಶೀಲ್ದಾರ್ ಸೇರಿದಂತೆ ಕೆಲವು ಅಧಿಕಾರಿಗಳು ಅದರ ಸದಸ್ಯರಾಗಿರುತ್ತಾರೆ ಎಂದು ಬಿಸಿಎಂ ಅಧಿಕಾರಿ ಹೇಳಿದ್ದು, ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು.ಪಡಿತರ ಚೀಟಿ ನೀಡಲು ಅಧಿಕಾರಿಯೊಬ್ಬರು ಪಡಿತರ ಚೀಟಿ ಗ್ರಾಹಕರಿಂದ ಎರಡು ಸಾವಿರ ರೂಪಾಯಿ ಕೇಳುತ್ತಾರೆ ಎಂದು ಸದಸ್ಯರು ಮಾಡಿದ್ದ ಆರೋಪ ಸಭೆಯ ಗಮನ ಸೆಳೆಯಿತು.ಮುಳುಗಡೆ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೋತ್ಸಾಹಧನ ನೀಡಬೇಕು ಎಂದು ಹನಮಂತ ಹಿಪ್ಪರಗಿ ಒತ್ತಾಯಿಸಿದರು. ಅಧಿಕಾರಿಗಳು ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸದಸ್ಯ ಮಾಯಪ್ಪ ಮಿರ್ಜಿ ಆರೋಪಿಸಿದರು.ತಾಲ್ಲೂಕು ಆರೋಗ್ಯಾಧಿಕಾರಿ (ಪ್ರಭಾರ) ಡಾ. ಸುನಿತಾ ತಾಲ್ಲೂಕಿನಲ್ಲಿ 7 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ ಎಂದರು. ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎ.ದೇಸಾಯಿ 4 ಡೆಂಗೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು. ಆದರೆ ಈವರೆಗೆ ಡೆಂಗೆ ರೋಗಕ್ಕೆ ಯಾವ ಸಾವೂ ಸಂಭವಿಸಿಲ್ಲ ಎಂದು ಸಭೆಗೆ ಮಾಹಿತಿ ನೀಡಲಾಯಿತು.ತಾ.ಪಂ. ಅಧ್ಯಕ್ಷ ರಾವಸಾಬ ಗುಬಚೆ, ಉಪಾಧ್ಯಕ್ಷೆ ನಾಗವ್ವ ವಾರದ, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಬಡಿಗೇರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಜಿ. ಬೋಸಲೆ, ಜಿ.ಪಂ. ಸದಸ್ಯ ಅರ್ಜುನ ದಳವಾಯಿ, ಜಿ.ಪಂ. ಸದಸ್ಯೆ ಪದ್ಮವ್ವ ಅಕಿವಾಟ ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.