ಮಂಗಳವಾರ, ಮೇ 24, 2022
31 °C

ಸಮಸ್ಯೆ ನಿವಾರಣೆ: ನಿಗದಿಯಂತೇ ಸಮ್ಮೇಳನ

ಪ್ರಜಾವಾಣಿ ವಾರ್ತೆ/ ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ರಾಮನಗರ: ರೇಷ್ಮೆ ನಾಡು ಖ್ಯಾತಿಯ ರಾಮನಗರ ಜಿಲ್ಲೆಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎದುರಾಗಿದ್ದ ಸ್ಥಳದ ಸಮಸ್ಯೆ ಇದೀಗ ನಿವಾರಣೆಯಾಗಿದ್ದು, ನವೆಂಬರ್ 18 ಮತ್ತು 19ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯುವುದು ಖಚಿತವಾಗಿದೆ.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನವೆಂಬರ್ 19, 20 ಮತ್ತು 21ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾ ಔರ್ ಖೇಲ್ ಅಭಿಯಾನ ಕ್ರೀಡಾಕೂಟ ನಡೆಸಲು ಸಿದ್ಧತೆ ನಡೆಸಿತ್ತು. ಇದರಿಂದ ಕಸಾಪ ಸಮ್ಮೇಳನ ನಡೆಯುವ ದಿನಾಂಕಕ್ಕೆ ಅನಿಶ್ಚಿತತೆ ಎದುರಾಗಿತ್ತು. ಸಮ್ಮೇಳನ ನಡೆಯುವ ದಿನಾಂಕದಲ್ಲಿ ಅದಲು ಬದಲಾಗುವ ಸಂಭವಗಳು ಹೆಚ್ಚಾಗಿದ್ದವು.ಈಗಾಗಲೇ ಸಮ್ಮೇಳನದ ಉದ್ಘಾಟನೆಗೆ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರನ್ನು ಆಹ್ವಾನಿಸಲಾಗಿತ್ತು. ಅವರ ಆಗಮನವನ್ನು ಖಚಿತ ಪಡಿಸಿಕೊಂಡೇ ಜಿಲ್ಲಾ ಕಸಾಪ ಸಮ್ಮೇಳನದ ದಿನಾಂಕ ನಿಗದಿಪಡಿಸಿತ್ತು. ಅದರ ಜತೆಗೆ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಬೈರಮಂಗಲ ರಾಮೇಗೌಡ ಅವರನ್ನೂ ಕಸಾಪ ಆಯ್ಕೆ ಮಾಡಿತ್ತು. ಒಂದೆರಡು ದಿನಗಳಲ್ಲಿ ಸಮ್ಮೇಳನದ ಅಧ್ಯಕ್ಷರಿಗೆ ಸಾಂಪ್ರದಾಯಿಕವಾಗಿ ಅಧಿಕೃತ ಆಹ್ವಾನ ನೀಡಲು ಸಿದ್ಧತೆ ನಡೆಸಿತ್ತು.ಈ ಸಂದರ್ಭದಲ್ಲಿ ಸಮ್ಮೇಳನಕ್ಕೆ ತೊಡರು ಎದುರಾಗಿದ್ದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಕೆ.ರಾಜು, ಜಿಲ್ಲಾ ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.ಕನ್ನಡ ಸಮ್ಮೇಳನವನ್ನು ನವೆಂಬರ್ 18 ಮತ್ತು 19ರಂದು ವಿಜೃಂಭಣೆಯಿಂದ ನಡೆಸಲು ಶಾಸಕರ ನೇತೃತ್ವದ ಸ್ವಾಗತ ಸಮಿತಿ ನಿರ್ಧರಿಸಿತ್ತು. ಈ ಸಂಬಂಧ ಸಿದ್ಧತಾ ಕಾರ್ಯ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಿಂದ ಸಮ್ಮೇಳನದ ದಿನಾಂಕ ಬದಲಾದರೆ ಹೇಗೆ ಎಂಬ ಚಿಂತೆ ಎಲ್ಲರನ್ನು ಕಾಡತೊಡಗಿತ್ತು. ಅದರ ಜತೆಗೆ ಈಗಾಗಲೇ ದಿನಾಂಕ ಆಧರಿಸಿ ಆಹ್ವಾನ ಸ್ವೀಕರಿಸಿರುವ ಕಂಬಾರ ಮತ್ತು ರಾಮೇಗೌಡ ಅವರ ಮುಂದಿನ ಬಿಡುವಿನ ದಿನ ತಿಳಿದುಕೊಂಡು ಸಮ್ಮೇಳನ ನಡೆಸುವುದು ಕಷ್ಟ ಎಂಬುದನ್ನು ಪರಿಷತ್ತಿನ ಪದಾಧಿಕಾರಿಗಳು ಅರಿತಿದ್ದರು.ರಾಜ್ಯಮಟ್ಟದ ಕ್ರೀಡಾಕೂಟಕ್ಕೂ ಸಿದ್ಧತೆ: ರಾಮನಗರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲು ಅವಕಾಶ ದೊರೆತಿದೆ. ಅದರಂತೆ  ಹ್ಯಾಂಡ್ ಬಾಲ್, ಫುಟ್‌ಬಾಲ್, ಷೆಟಲ್ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಪಂದ್ಯಗಳು ನವೆಂಬರ್ 19ರಿಂದ 21ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು .ರಾಜ್ಯದ 30 ಜಿಲ್ಲೆಗಳಿಂದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳುವರು. ರಾಜ್ಯಮಟ್ಟದ ಕ್ರೀಡಾಪಟುಗಳನ್ನು ನೋಡಿ, ಅವರ ಆಟದ ಶೈಲಿಗಳನ್ನು ಹತ್ತಿರದಿಂದ ಗಮನಿಸಲು ರಾಮನಗರ ಜಿಲ್ಲೆಯ ಕ್ರೀಡಾಸಕ್ತರು ಮತ್ತು ನಾಗರಿಕರು ತುದಿಗಾಲಲ್ಲಿ ನಿಂತಿದ್ದಾರೆ.ಇದೇ ಸಮಯದಲ್ಲಿ ಕಸಾಪ ಸಮ್ಮೇಳನ ಮತ್ತು ಕ್ರೀಡಾಕೂಟ ಎರಡರಲ್ಲಿ ಯಾವುದು ಎಂಬ ಘರ್ಷಣೆಯಿಂದ ಯಾವುದು ಬಲಿಯಾದರೂ ನಗರದ ನಾಗರಿಕರಿಗೆ ನಷ್ಟ ಎಂಬುದನ್ನು ಅರಿತ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಅವರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಜತೆ ಮಾತನಾಡಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಕಸಾಪ ಸಮ್ಮೇಳನ ಮುಕ್ತಾಯದ ನಂತರದ ದಿನಗಳಲ್ಲಿ ನಡೆಸಲು ಸೂಚನೆ ನೀಡಿದರು. ಇದರಿಂದ ಕಸಾಪ ಸಮ್ಮೇಳನ ನಿಗದಿತ ದಿನದಂದು ನಡೆಯುವುದು ಖಚಿತವಾಗಿದೆ.ಅನುಮತಿ ಯಾರು ಪಡೆದಿದ್ದರು ?: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಶಾಸಕ ಕೆ.ರಾಜು ಅವರಾಗಿದ್ದು, ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬರುವ ಅರ್ಜಿಗಳನ್ನು ಕಾಲೇಜಿನ ಪ್ರಾಚಾರ್ಯರು ಮತ್ತು ಅಧ್ಯಕ್ಷರಾದ ಶಾಸಕರು ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ. ಆದರೆ ಶಾಸಕ ರಾಜು ಅವರು ಹೇಳುವ ಪ್ರಕಾರ, `ಕಾಲೇಜಿನ ಮೈದಾನದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವ ಸಂಬಂಧ ಯಾರೂ ಅನುಮತಿ ಕೋರಿಲ್ಲ. ಹಾಗಾಗಿ ಮೈದಾನದಲ್ಲಿ ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಅವರು ಹೇಳುವ ಪ್ರಕಾರ, `ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನವೆಂಬರ್ 19, 20, 21ರಂದು ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿತ್ತು. ಜಿಲ್ಲಾ ಕ್ರೀಡಾಂಗಣ ಮತ್ತು ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫುಟ್‌ಬಾಲ್ ಪಂದ್ಯಗಳು, ಜೂನಿಯರ್ ಕಾಲೇಜು ಮೈದಾನದಲ್ಲಿ ಹ್ಯಾಂಡ್‌ಬಾಲ್ / ಥ್ರೋ ಬಾಲ್ ಪಂದ್ಯಗಳು, ಕೆಂಗಲ್ ಹನುಮಂತಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಷೆಟಲ್ ಬ್ಯಾಡ್ಮಿಂಟನ್ ಪಂದ್ಯಗಳು ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ವಸತಿ ಶಾಲೆ ಮತ್ತು ಗೌಸಿಯಾ ಕಾಲೇಜಿನಲ್ಲಿ ಟೇಬಲ್ ಟೆನಿಸ್ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು~ ಎಂದು ತಿಳಿಸುತ್ತಾರೆ.ಈ ವಿಷಯವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌಸಿಯಾ ಕಾಲೇಜು ಮತ್ತು ಕೆಂಗಲ್ ಹನುಮಂತಯ್ಯ ಒಳಾಂಗಣ ಕ್ರೀಡಾಂಗಣದ ಸಂಬಂಧಿಸಿದ ಮುಖ್ಯಸ್ಥರಿಗೆ ತಿಳಿಸಲಾಗಿದೆ. ನವೆಂಬರ್ 10ರಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಹ್ಯಾಂಡ್‌ಬಾಲ್ ಕ್ರೀಡಾಕೂಟಕ್ಕೆ ಅಂಕಣಗಳನ್ನು ಸಿದ್ಧಪಡಿಸುವ ಕಾರ್ಯ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ರಾಜ್ಯಮಟ್ಟದ ಕ್ರೀಡಾಕೂಟವನ್ನು ಒಂದು ವಾರ ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಈ ಕುರಿತು ಜೂನಿಯರ್ ಕಾಲೇಜಿನ ಪ್ರಾಚಾರ್ಯ ಸಿರಾಜ್ ಉರ್ ರೆಹಮಾನ್ ಹೇಳುವುದೆಂದರೆ, ಕಾಲೇಜು ಮೈದಾನದಲ್ಲಿ ನಡೆಸುವ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಅಧಿಕಾರವನ್ನು ಶಾಸಕರು ಹೊಂದಿದ್ದಾರೆ. ಆದರೆ ಇಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವ ವಿಚಾರವಾಗಿ  ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಭೆ ನಡೆದು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಿರುವಾಗ ಕಸಾಪ ಮತ್ತು ರಾಜ್ಯಮಟ್ಟದ ಕ್ರೀಡಾಕೂಟ ಎರಡರಲ್ಲಿ ಯಾವುದು ನಡೆಯುತ್ತದೆ ಎಂಬುದು ಗೊತ್ತಾಗದಂತಾಗಿದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.