ಮಂಗಳವಾರ, ಮೇ 17, 2022
26 °C
ಹರಪನಹಳ್ಳಿ: ಶೌಚಾಲಯವಿಲ್ಲದ ಕಾಲೇಜು!

ಸಮಸ್ಯೆ ಸುಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಬಾಯಾರಿಕೆ ದಾಹ ತಣಿಸಲು ಹನಿ ನೀರು ಇಲ್ಲ. ದೇಹ ಬಾಧೆ ತೀರಿಸಲು ಗಿಡಗಂಟಿಗಳ ಮುಳ್ಳಿನ ಪೊದೆಯೇ ಆಸರೆ. ಕಟ್ಟಡ ನಿರ್ಮಿಸಿ ಮುಕ್ಕಾಲು ವರ್ಷದಲ್ಲಿಯೇ ಬಿರಿಕುಬಿಟ್ಟು ಬಾಯ್ತೆರೆದಿರುವ ಗೋಡೆ. ಕಮರಿಹೋಗುತ್ತಿರುವ ವಿದ್ಯಾರ್ಥಿಗಳ ಆಟೋಟ ಚಟುವಟಿಕೆ...- ಇವು ಕಳೆದ ಐದು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರಕಬೇಕೆಂಬ ಕನಸುಗಳ ಆಶಯದೊಂದಿಗೆ ಪಟ್ಟಣದಲ್ಲಿ ಆರಂಭಿಸಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸುತ್ತಿಕೊಂಡಿರುವ ಸಮಸ್ಯೆಗಳು.ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಪ್ರಥಮದರ್ಜೆ ಕಾಲೇಜನ್ನು ಪಟ್ಟಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ 2007ರಲ್ಲಿ ಆರಂಭಿಸಿತು. ಆರಂಭದಲ್ಲಿ ಕಟ್ಟಡದ ಸಮಸ್ಯೆ  ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಳೇ ತಾಲ್ಲೂಕು ಕಚೇರಿ ಹಾಗೂ ಹಳೇ ಕೋರ್ಟ್ ಹಾಲ್‌ನಲ್ಲಿ ಕೆಲ ತರಗತಿ ಆರಂಭಿಸಲಾಯಿತು. ಕಾಲೇಜು ಆರಂಭವಾದ 4 ವರ್ಷದ ತರುವಾಯ ಲೋಕೋಪಯೋಗಿ ಇಲಾಖೆ ರೂ 75 ಲಕ್ಷ ಮೊತ್ತದಲ್ಲಿ ಕಾಲೇಜು ಕಟ್ಟಡವನ್ನು 2012ರಲ್ಲಿ ನಿರ್ಮಿಸಿತು.

ನೂತನ ಕಟ್ಟಡ ಕಾಲೇಜಿಗೆ ಹಸ್ತಾಂತರಿಸಿ ಇನ್ನೂ ಆರೆಂಟು ತಿಂಗಳು ಕಳೆದಿಲ್ಲ. ಅದಾಗಲೇ ಕಾಲೇಜಿನ ಗೋಡೆಗಳು ಬಿರುಕುಬಿಟ್ಟು ಬಾಯ್ತೆರೆಯುವ ಮೂಲಕ ಅಂದಿನ ಶಾಸಕ ಜಿ. ಕರುಣಾಕರರೆಡ್ಡಿ ಅವರ ಅಧ್ಯಕ್ಷತೆಯ ಕಾಲೇಜು ಅಭಿವೃದ್ಧಿ ಮಂಡಳಿಯಲ್ಲಿ ನಿರ್ಮಾಣವಾದ ಕಳಪೆ ಕಾಮಗಾರಿ ಮುಖವಾಡ ಅನಾವರಣಗೊಂಡಿದೆ.ಕಾಲೇಜಿನ ಒಳ ಪ್ರವೇಶಿಸಿದರೆ ಸಾಕು, ವಿದ್ಯಾರ್ಥಿ ಹಾಗೂ ಸಿಬ್ಬಂದಿ ಅನುಭವಿಸುತ್ತಿರುವ ನರಕಸ್ವರೂಪ ಕಣ್ಣಿಗೆ ರಾಚುತ್ತದೆ. ರೂ 75 ಲಕ್ಷ ಮೊತ್ತದಲ್ಲಿ ಗುಡ್ಡ ನೆಲಸಮಗೊಳಿಸಿದ ಲೋಕೋಪಯೋಗಿ ಇಲಾಖೆ, ಕೇವಲ 5 ಕೊಠಡಿ ಮಾತ್ರ ನಿರ್ಮಿಸಿ ಹಸ್ತಾಂತರಿಸಿದೆ. ಅಗತ್ಯ ಮೂಲಸೌಕರ್ಯ ಪರಿಶೀಲಿಸದೆ, ತರಾತುರಿಯಲ್ಲಿ ಕಾಲೇಜು ಕಾಲೇಜು ಆಡಳಿತ ಮಂಡಳಿ ಕಟ್ಟಡವನ್ನು  ವಶಪಡಿಸಿಕೊಳ್ಳುವ ಮೂಲಕ ಕಟ್ಟಡದಲ್ಲಿ ಬಿಕಾಂ ಹಾಗೂ ಬಿಬಿಎಂ ವಿಭಾಗದ ತರಗತಿ ಆರಂಭಿಸಿದೆ. ಆಡಳಿತ ಮಂಡಳಿ ಹೊಣೆಗೇಡಿತನ ಹಾಗೂ ಕಟ್ಟಡ ನಿರ್ಮಾಣದ ಏಜೆನ್ಸಿ ನಿರ್ಲಕ್ಷ್ಯ ಪರಿಣಾಮ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸಬೇಕಾಗಿದೆ.ಬಸ್ ನಿಲ್ದಾಣದಿಂದ  ಸುಮಾರು 3 ಕಿ.ಮೀ. ದೂರದ ಅಂತರದಲ್ಲಿರುವ ಕಾಲೇಜಿಗೆ ನಿತ್ಯವೂ ನಡಿಗೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ಕೋರಿಕೆಯ ಬಸ್ ನಿಲುಗಡೆಯೂ ಇಲ್ಲದೇ ವಿದ್ಯಾರ್ಥಿಗಳು ನಿತ್ಯ ಪರದಾಡಬೇಕಿದೆ. ಸಾರ್ವಜನಿಕ ಆಸ್ಪತ್ರೆಯಿಂದ ಕಾಲೇಜಿಗೆ ಸಂಪರ್ಕ ಕಲ್ಪಿಸಲು ಕನಿಷ್ಠ ಸುಸಜ್ಜಿತವಾದ ರಸ್ತೆ ನಿರ್ಮಿಸಿಲ್ಲವಾದ್ದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿ/ ಸಿಬ್ಬಂದಿ ಸರ್ಕಸ್ ಮಾಡುತ್ತಲೇ ಕಾಲೇಜು ತಲುಪಬೇಕಾದ ಅನಿವಾರ್ಯತೆ ಸಿಲುಕಿದ್ದಾರೆ.

ಪಟ್ಟಣದ ಹೊರವಲಯದಲ್ಲಿ ಕಾಲೇಜು ನಿರ್ಮಿಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಬಾಯಾರಿದಾಗ ಕುಡಿಯುವ ಹನಿ ನೀರು ಇಲ್ಲ. ಇನ್ನೂ ಶೌಚಾಲಯವನ್ನು ನಿರ್ಮಿಸದ ಪರಿಣಾಮ ಮುಳ್ಳು ಗಿಡಗಂಟಿ ಪೊದೆಯ ಮೊರೆಯಲ್ಲಿಯೇ ದೇಹ ಬಾಧೆ ತೀರಿಸಿ ಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿ ಗಿರೀಶ್.ಬಿಎ, ಬಿಕಾಂ, ಬಿಎಸ್ಸಿ ಹಾಗೂ ಬಿಬಿಎಂಗಳಂತ ಪ್ರತಿಷ್ಠಿತ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಲಾಗಿದೆ. ನಾಲ್ಕು ವಿಭಾಗದಲ್ಲಿಯೂ ಸುಮಾರು 790 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ನೂತನ ಕಟ್ಟಡದಲ್ಲಿ ಎರಡು ಕೋರ್ಸ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕನಿಷ್ಠ ಇನ್ನೂ 20 ಕೊಠಡಿಗಳ ಅಗತ್ಯ ಇದೆ. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ ರೂ  1 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಗೆ ರೂ 35 ಲಕ್ಷ ಬಿಡುಗಡೆಯಾಗಿದೆ. ಆದರೆ, ಎರಡು ಏಜೆನ್ಸಿಗಳ ತಿಕ್ಕಾಟದಲ್ಲಿ ಉದ್ದೇಶಿತ ಕಟ್ಟಡ ನಿರ್ಮಾಣ ಕಾರ್ಯ ಮಾತ್ರ ನನೆಗುದಿಗೆ ಬಿದ್ದಿದೆ ಎನ್ನಲಾಗಿದೆ.ಕಾಲೇಜಿನ 4 ವಿಭಾಗಗಳಲ್ಲಿ ಪ್ರಾಂಶುಪಾಲರು ಸೇರಿದಂತೆ ಕೇವಲ 12 ಮಂದಿ ಮಾತ್ರ ಕಾಯಂ ಬೋಧಕ ಸಿಬ್ಬಂದಿ ಇದೆ. 34 ಮಂದಿ ಅತಿಥಿ ಉಪನ್ಯಾಸಕರ ಸೇವೆಯಲ್ಲಿ ಕಾಲೇಜಿನ ಪಾಠ- ಪ್ರವಚನ ನಡೆಯುತ್ತಿವೆ. ಬಿಎಸ್ಸಿ ತರಗತಿಗೆ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಆಟದ ಮೈದಾನ ಸೇರಿದಂತೆ ಹಲವು ಮೂಲಸೌಕರ್ಯ ಕೊರತೆ ಕಾಲೇನಲ್ಲಿದೆ. ಹೀಗಾಗಿ, ವಿದ್ಯಾರ್ಥಿಗಳ ಪ್ರತಿಭೆ ಕಾಲೇಜು ಶಿಕ್ಷಣ ಇಲಾಖೆ ನೇತೃತ್ವದಲ್ಲಿಯೇ ಕಮರಿ ಹೋಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.