ಶನಿವಾರ, ಮೇ 21, 2022
26 °C

ಸಮಸ್ಯೆ ಸೌಕರ್ಯಗಳದ್ದು

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಸಮಸ್ಯೆ ಸೌಕರ್ಯಗಳದ್ದು

`ಅಭಿವೃದ್ಧಿಯಲ್ಲಿ ಮುಂಚೂಣಿ ಜಿಲ್ಲೆ~ ಎನ್ನುವ ಹಣೆಪಟ್ಟಿಹೊತ್ತ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲ್ಲೂಕಿನ ಒಟ್ಟು 14 ಗ್ರಾಮ ಪಂಚಾಯಿತಿಗಳು `ನಕ್ಸಲ್ ಬಾಧಿತ~ ಪ್ರದೇಶಗಳ ಪಟ್ಟಿಗೆ ಸೇರಿವೆ.ಕುಂದಾಪುರ ತಾಲ್ಲೂಕಿನ ಕೊಲ್ಲೂರು, ಹಳ್ಳಿಹೊಳೆ, ಜಡ್ಕಲ್, ಮಡಾಮಕ್ಕಿ, ಹೊಸಂಗಡಿ, ಅಮಾಸೆಬೈಲು, ಕೆರಾಡಿ ಹಾಗೆಯೇ ಕಾರ್ಕಳ ತಾಲ್ಲೂಕಿನ ಮುದ್ರಾಡಿ, ವರಂಗ, ನಾಡ್ಪಾಲು, ಶಿರ್ಲಾಲು, ಈದು, ಮಾಳ, ಹೆಬ್ರಿಯನ್ನು ಒಳಗೊಂಡ ಒಟ್ಟು 28 ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ.ಇವೆಲ್ಲ ನೆರೆಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಪ್ರದೇಶಗಳು. ಮಲೆಕುಡಿಯರೇ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2009ರಲ್ಲಿ ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿ ನಕ್ಸಲರನ್ನು ಹಿಮ್ಮೆಟ್ಟಿಸಲು ಅಮಾಸೆಬೈಲು ಮತ್ತು ಅಜೆಕಾರು ಎಂಬಲ್ಲಿ ಎರಡು ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ.

 

ನಕ್ಸಲ್ ಪ್ಯಾಕೇಜ್ ಜಾರಿಗೆ ಬಂದರೂ ಹೆಚ್ಚಿನ ಗ್ರಾಮಗಳಲ್ಲಿ ಮೂಲಸೌಕರ್ಯ ಇನ್ನೂ ದೊರಕಿಲ್ಲ. 2006ರಿಂದ 2008ರವರೆಗೆ `ನಕ್ಸಲ್ ಪ್ಯಾಕೇಜ್~ ಅಡಿಯಲ್ಲಿ ಒಟ್ಟು ರೂ.3.80 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದರಡಿ ಕೆಲವು ಗ್ರಾಮಗಳಲ್ಲಿ ಕಾಲುಸಂಕ, ಉತ್ತಮ ರಸ್ತೆ, ವಿದ್ಯುತ್ ಸಂಪರ್ಕಗಳಾಗಿವೆ.ಅಮಾಸೆಬೈಲಿನಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲಿ ಉತ್ತಮ ರಸ್ತೆ ಕೂಡಾ ಇದೆ (ಇಲ್ಲಿ ಹಿರಿಯ ರಾಜಕಾರಣಿ ಎ.ಜಿ.ಕೊಡ್ಗಿ ಅವರ ಮನೆ, ಜಮೀನು ಇದೆ). ನಾಡ್ಪಾಲು ಗ್ರಾಮದಲ್ಲಿ ಎಲ್ಲೆಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ಈ ಪ್ಯಾಕೇಜ್ ಅಡಿಯಲ್ಲಿ ಕೈಮಗ್ಗ ನೇಯ್ಗೆ ತರಬೇತಿ, ಸುಮಾರು 20 ಕಡೆ ಕಾಲುಸಂಕ, ನಾಲ್ಕು ಗ್ರಾಮದಲ್ಲಿ ಅಭಿವೃದ್ಧಿ, ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಲವೆಡೆ ತುರ್ತು ಆರೋಗ್ಯ ಸೇವೆ ಹಾಗೂ ಆಂಬುಲೆನ್ಸ್ ಸೇವೆ ಕಲ್ಪಿಸಲಾಗಿದೆ. ವಿಶೇಷವಾಗಿ ಕಾರ್ಕಳದ ನಕ್ಸಲ್ ಬಾಧಿತ ಗ್ರಾಮಗಳಲ್ಲಿ ಒಂದಿಷ್ಟು ಸೌಕರ್ಯಗಳನ್ನು ಕಲ್ಪಿಸಲಾಗಿದೆ.ಆದರೆ ಇತರೆಡೆಗಳಲ್ಲಿ ಆಗಿಲ್ಲ.  ಕುಂದಾಪುರ ವ್ಯಾಪ್ತಿಯ ನಕ್ಸಲ್ ಬಾಧಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಡಿಮೆ. ರಸ್ತೆ ಸಂಪೂರ್ಣ ಹದೆಗೆಟ್ಟಿವೆ, ವಿದ್ಯುತ್ ಸಂಪರ್ಕ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯಗಳಿಲ್ಲ, ಕಾಲುಸಂಕಗಳು ಕೆಟ್ಟಿವೆ, ಕಿರು ಸೇತುವೆಗಳು ಶಿಥಿಲಗೊಂಡಿವೆ. ಕಿರುದಾರಿಯಲ್ಲಿ ಸಾಗಬೇಕು. ಈ ಭಾಗದಲ್ಲಿ ವಾಸಿಸುವ ಮಲೆಕುಡಿಯರು ಹಕ್ಕುಪತ್ರಗಳಿಗಾಗಿ ಆಗ್ರಹಿಸುತ್ತಿದ್ದಾರೆ. `ಶರಣಾಗತಿ ಪ್ಯಾಕೇಜ್~: ಜಿಲ್ಲೆಯಲ್ಲಿ ನಕ್ಸಲ್ ಶರಣಾಗತಿ ಪ್ಯಾಕೇಜ್‌ಗೆ ಯಾವುದೇ ಸ್ಪಂದನೆ ಈವರೆಗೂ ದೊರೆತಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಮತ್ತು ಸ್ಥಳೀಯ ಜನರ ನಡುವೆ ಒಂದಿಷ್ಟು ವಿಶ್ವಾಸಾರ್ಹತೆ ಮೂಡಿದ್ದೇ ಸ್ವಲ್ಪಮಟ್ಟಿಗಿನ ಸಾಧನೆ.

 

ಆಗೊಮ್ಮೆ ಈಗೊಮ್ಮೆ ಜಿಲ್ಲಾಡಳಿತ, ಪೊಲೀಸ್, ಜಿ.ಪಂ. ಸಹಯೋಗದಲ್ಲಿ ಜನಸಂಪರ್ಕ ಸಭೆಗಳನ್ನು ಏರ್ಪಡಿಸಿ ಅಹವಾಲು ಆಲಿಸುವ ಕೆಲಸ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.