ಸೋಮವಾರ, ಜನವರಿ 27, 2020
26 °C

ಸರ್ಕಾರಿ ನೌಕರರಿಗೂ ಮೌಲ್ಯಮಾಪನ!

ಸಚ್ಚಿದಾನಂದ ಕುರಗುಂದ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಒಂದು ವರ್ಷದಲ್ಲಿ ನಿರ್ವಹಿಸಿದ ಕಡತಗಳ ಸಂಖ್ಯೆ ಎಷ್ಟು? ಒಂದೊಂದು ಕಡತ ವಿಲೇವಾರಿಗೂ ವಿನಿಯೋಗಿಸಿದ ಸಮಯ ಎಷ್ಟು? ಒಂದು ವರ್ಷದಲ್ಲಿ ಎಷ್ಟು ದಿನ ಅಧಿಕೃತ ಪ್ರವಾಸ ಮಾಡಿದ್ದೀರಿ? ಎಷ್ಟು ದಿನ ಸಭೆಗಳಿಗೆ ಹಾಜರಾಗಿದ್ದೀರಿ? ನಿಮ್ಮ ಒಟ್ಟು ದುಡಿಮೆಯ ಸಮಯ ಎಷ್ಟು?....’

-–ಇವು ಸರ್ಕಾರಿ ನೌಕರರ ಮೌಲ್ಯ ಮಾಪನ­ಕ್ಕಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ರೂಪಿಸಿರುವ ಪ್ರಶ್ನೆಗಳು.ಸರ್ಕಾರದ ಎಲ್ಲ ಇಲಾಖೆ­ಗಳಲ್ಲಿ ಎದುರಾಗಿರುವ ಸಿಬ್ಬಂದಿ ಕೊರತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವತಿಯಿಂದ ಇಂಥ­ದ್ದೊಂದು  ಮೌಲ್ಯಮಾಪನ ಕೈಗೊಳ್ಳಲಾಗಿದೆ.ಇದರ ಮೂಲಕ ಪ್ರತಿಯೊಂದು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಹೊಸದಾಗಿ ನೌಕರರನ್ನು ನೇಮಕಕ್ಕೆ ರೂಪುರೇಷೆ­ಗಳನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ ಎನ್ನುವುದು ಅಧ್ಯಯನದ ಪ್ರಮುಖ ಉದ್ದೇಶ. ಜತೆಗೆ ವಿವಿಧ ಇಲಾಖೆಗಳ ಕಾರ್ಯ ನಿರ್ವಹಣೆ­ಯಲ್ಲೂ ಬದಲಾವಣೆ ತರಲೂ ಇದು ಪೂರಕವಾಗಲಿದೆ.ಮುಖ್ಯವಾಗಿ ವಿಷಯ ನಿರ್ವಾಹಕರು, ಮೇಲ್ವಿ­ಚಾ­ರಕರು, ಕಿರಿಯ ಅಧಿಕಾರಿಗಳ ಹಂತದಲ್ಲಿ ಮೌಲ್ಯ­ಮಾಪನ ಕೈಗೊಳ್ಳಲಾಗಿದೆ. ಆಡಳಿತ ಚುರುಕು­ಗೊಳಿಸಲು ಈ ಮೌಲ್ಯಮಾಪನ ಪೂರಕ ವಾಗಲಿದೆ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ.ಮೌಲ್ಯಮಾಪನದಲ್ಲಿ ಪ್ರತಿಯೊಂದು ಇಲಾಖೆ, ಅದರ ಕಾರ್ಯಕಲಾಪಗಳು ಮತ್ತು ಸ್ವರೂಪದ ಬಗ್ಗೆ ವಿವರ ಕೇಳಲಾಗಿದೆ.

ಒಂದು ವರ್ಷದಲ್ಲಿ ನಿರ್ವಹಿಸಿದ ಕಡತ ಅಥವಾ ಪತ್ರಗಳ ಸಂಖ್ಯೆ ಹಾಗೂ ಪ್ರತಿಯೊಂದು ಪ್ರಕರಣಕ್ಕೆ ತೆಗೆದುಕೊಂಡ ಸಮಯದ ಬಗ್ಗೆ ವಿಷಯ ನಿರ್ವಾಹಕರು, ಮೇಲ್ವಿಚಾರಕರು, ಅಧಿಕಾರಿಗಳು  ನಿಖರವಾದ ಮಾಹಿತಿ ಸಲ್ಲಿಸಬೇಕು.ಸಾಮಾನ್ಯವಾಗಿ ಅಧಿಕಾರಿಗಳು ಸಭೆ ಮತ್ತು ಪ್ರವಾಸಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.ನೌಕರರ ಕಾರ್ಯವಿಧಾನದ ಜತೆಗೆ  ಪಂಚ­ವಾರ್ಷಿಕ ಯೋಜನೆಗಳ ವಿವರಗಳನ್ನೂ ಕೋರ­ಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಮಂಜೂರಾದ ಹುದ್ದೆ ಗಳ ವಿವರ ಮತ್ತು ಪ್ರಸ್ತುತ  ಯೋಜನೆಗಳ ಸ್ಥಿತಿಗತಿ ಕುರಿತು ಮಾಹಿತಿ ಸಲ್ಲಿಸಬೇಕು.ವೈಜ್ಞಾನಿಕ ವಿಧಾನ: ‘ಅಂಕಿ--ಅಂಶಗಳ ಮೂಲಕ ವೈಜ್ಞಾನಿಕವಾಗಿ ಇಲಾಖೆಗಳ ಕಾರ್ಯವೈಖರಿ­ಯನ್ನು ಅಧ್ಯಯನ ಮಾಡುವ ವಿಧಾನ ಇದು. ಆಯಾ ಇಲಾಖೆ ಮುಖ್ಯಸ್ಥರೇ ತಂತಮ್ಮ ಕಚೇರಿಗಳ ಕಾರ್ಯಭಾರದ  ವಿಶ್ಲೇಷಣೆ ಮಾಡುತ್ತಾರೆ. ಕೆಲವರು 300 ಕಡತ  ನೋಡಬಹುದು, ಇನ್ನು ಕೆಲವರು 100 ಕಡತಗಳನ್ನು ನೋಡ ಬಹುದು. ಕೆಲವರು ಕಡತ ವಿಲೇವಾರಿಗೆ ವಿಳಂಬ ಮಾಡಬಹುದು.ಇಂತಹ ಅಂಶಗಳನ್ನು ಆಯಾ ಇಲಾಖೆಯ ಮುಖ್ಯಸ್ಥರೇ ಮೇಲಿನವರ ಗಮನಕ್ಕೆ ತರಬೇಕು. ಜತೆಗೆ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ಇತ್ಯಾದಿ ಮಾಹಿತಿಯನ್ನೂ ನೀಡಬೇಕು. ಇವನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಹಾಗೂ ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಈ ರೀತಿಯ ನಿಖರವಾದ ಮಾಹಿತಿಯಿಂದ ಹೊಸ ನೇಮಕಾತಿಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ಸರ್ಕಾರದ ಪ್ರಧಾನ ಕಾರ್ಯದರ್ಶಿ  ಶಾಲಿನಿ ರಜನೀಶ್‌.ಸಂಘದಿಂದಲೂ ಸಲಹೆ

‘ನೌಕರರ ಕಾರ್ಯನಿರ್ವಹಣೆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲಿ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ಸಂಘದಿಂದಲೂ ಸಲಹೆಗಳನ್ನು ನೀಡು­ತ್ತೇವೆ. ಈಗಾಗಲೇ ‘ಸಕಾಲ’ ಸೇರಿದಂತೆ ನೂರಾರು ಯೋಜನೆಗಳನ್ನು ಸರ್ಕಾರ ಜಾರಿ ಗೊಳಿಸಿದೆ. ಆದರೆ, ನೌಕರರ ಕೊರ ತೆಯೂ ಇದೆ. ಇದರಿಂದ ಒತ್ತಡವೂ ಹೆಚ್ಚುತ್ತಿದೆ. ನೌಕರರಿಗೆ ಪೂರಕವಾಗಿ ಅಧ್ಯಯನ ಮಾಡಲಿ’.

– ಎಲ್‌.  ಭೈರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷಅಧಿಕಾರಿಗಳಿಂದ ಬಯಸಿರುವ ಮಾಹಿತಿ

*ಒಂದು ವರ್ಷದಲ್ಲಿ ಹಾಜರಾಗಿ ರುವ ಸಭೆಗಳ ಸಂಖ್ಯೆ, ಸ್ವರೂಪ, ಸಮಯ 

*ಒಂದು ವರ್ಷದಲ್ಲಿ ಪ್ರವಾಸದಲ್ಲಿ ಕಳೆದಿರುವ ದಿನಗಳು

*ಸ್ವೀಕರಿಸಿರುವ ಮತ್ತು ಮಾಡಿರುವ ದೂರವಾಣಿ ಕರೆಗಳು

*ಸರಾಸರಿ ಒಂದು ದೂರವಾಣಿ ಕರೆಗೆ ತಗುಲಿದ ಸಮಯ

*ಹೊರೆಯಾಗುವಂತಹ ಇತರೆ ಕೆಲಸಗಳು ಮತ್ತು ಅದಕ್ಕೆ ವ್ಯಯಿಸಿದ ಸಮಯ

*ಇಲಾಖೆಯಲ್ಲಿ ಮಂಜೂರಾಗಿರುವ,  ಭರ್ತಿ ಮಾಡಿರುವ ಮತ್ತು ಖಾಲಿ ಇರುವ ಹುದ್ದೆಗಳು

*ಕಾಯಂ ಹಾಗೂ ತಾತ್ಕಾಲಿಕ ಸಿಬ್ಬಂದಿ ಸಂಖ್ಯೆ

*ಇಲಾಖೆಗಳಲ್ಲಿರುವ   ಕಂಪ್ಯೂಟರ್‌, ಪ್ರಿಂಟರ್‌ ಹಾಗೂ ಸ್ಕ್ಯಾನರ್‌ಗಳು

*ಕಂಪ್ಯೂಟರೀಕರಣದಿಂದ ಉಂಟಾಗಿ ರುವ ಪ್ರಯೋಜನ ಕುರಿತು ಟಿಪ್ಪಣಿ

ಪ್ರತಿಕ್ರಿಯಿಸಿ (+)