ಶುಕ್ರವಾರ, ಮೇ 14, 2021
30 °C

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಗುಣಮಟ್ಟದ ಶಿಕ್ಷಕರು, ಕಟ್ಟಡ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿದರೂ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿಯಾದ ವಿಷಯವಾಗಿದ್ದು, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಕಿವಿಮಾತು ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಜಂಟಿಯಾಗಿ ಸೋಮವಾರ ಗುರುಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಮೂಹದಲ್ಲಿ ಮಾದರಿಯಾಗಿ ಜೀವನ ನಡೆಸಿದ ಸರ್ವಪಲ್ಲಿ ರಾಧಾಕೃಷ್ಣ ಅವರು ತಮ್ಮ ವ್ಯಕ್ತಿತ್ವದ ಮೂಲಕ ಇಡೀ ವೃಂದಕ್ಕೆ ಘನತೆ ಮತ್ತು ಗೌರವವನ್ನು ಹೆಚ್ಚಿಸಿದವರು ಎಂದು ಅವರು ತಿಳಿಸಿದರು.ಗುರು ಆದವರು ಶಿಲ್ಪಿಯ ದೃಷ್ಟಿ ಹೊಂದಿದ್ದರೆ ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ತಿದ್ದುತ್ತಾರೆ ಎಂದ ಅವರು, ಶಿಕ್ಷಣ ಕ್ಷೇತ್ರ ಬಹಳ ಮಹತ್ತರವಾದುದಾಗಿದೆ ಎಂದರು. ಶಿಕ್ಷಕರ ಮಗನಾಗಿ ಸಚಿವನಾಗಿದ್ದರೂ ಇಂದಿಗೂ ನಾನು ಶಿಕ್ಷಕರಿಗೆ ಹೆದರುತ್ತೇನೆ ಎಂದು ಅವರು ವಿನರ್ಮವಾಗಿ ಹೇಳಿದರು.ಪರಿಸರ ಜ್ಞಾನ ಬೆಳೆಸಿ: ಮಕ್ಕಳಿಗೆ ಶಿಕ್ಷಣ ಕೊಡುವುದರ ಜತೆಗೆ ಅವರಿಗೆ ಪರಿಸರ ಉಳಿಸಿ, ಬೆಳೆಸುವ ಹಾಗೂ ಅರಣ್ಯ ಸಂರಕ್ಷಣೆಗೆ ಒತ್ತು ನೀಡುವ ಪರಿಜ್ಞಾನವನ್ನು ಶಿಕ್ಷಕರು ಕಲಿಸಿಕೊಡಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ಉಳಿಸಿಕೊಂಡು ಹೋಗಲು ಶಿಕ್ಷಕರು ಕೊಡುಗೆ ನೀಡಬೇಕು ಎಂದರು.ದಕ್ಷಿಣ ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಿಕ್ಷಕರಿಗೆ ಕಡಿಮೆ ವೇತನ ದೊರೆಯುತ್ತಿದೆ ಎಂಬ ವಿಚಾರ ಗೊತ್ತಾಗಿದೆ. ಈ ಕುರಿತು ಅವಕಾಶ ದೊರೆತಾಗ ವಿಧಾನಸಭೆಯಲ್ಲಿ ಶಿಕ್ಷಕರ ಪರವಾಗಿ ಚರ್ಚಿಸುವುದಾಗಿ ಅವರು ಹೇಳಿದರು.ಜವಾಬ್ದಾರಿ ಕುಸಿತ : ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ರಾಜು ಮಾತನಾಡಿ, ಒಂದೆಡೆ ಪೋಷಕರು ಮತ್ತೊಂದೆಡೆ ಸರ್ಕಾರದಿಂದ ಶಿಕ್ಷಕರ ಜವಾಬ್ದಾರಿ ಕಡಿಮೆಯಾಗುತ್ತಿದೆ. ಮಕ್ಕಳನ್ನು ಕಲಿಕೆಗೆ ಸಂಬಂಧಿಸಿದಂತೆ ಶಿಕ್ಷಕರು ದಂಡಿಸಿದರೆ, ಘೋರ ಅಪರಾಧ ಎಂಬಂತೆ ಪೋಷಕರು ಬಿಂಬಿಸುತ್ತಿದ್ದಾರೆ.ಇನ್ನೂ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಶಿಕ್ಷಕರಿಗೆ ಅನ್ಯ ಕಾರ್ಯಗಳ ಒತ್ತಡವನ್ನು ಹೇರುತ್ತಿದೆ. ಇದರಿಂದ ಶಿಕ್ಷಕರು ಮಕ್ಕಳನ್ನು ನಿಜವಾದ ಕಾಳಜಿ ಮತ್ತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಆಗದ ವಾತಾವರಣ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.ಶಿಕ್ಷಣ ಇಲಾಖೆ ಭ್ರಷ್ಟಾಚಾರ ಮುಕ್ತವಾಗಿದೆ. ಇಲ್ಲಿ ಭ್ರಷ್ಟಾಚಾರ ಮಾಡಲು ಆಗದ ಕಾರಣ ಶಿಕ್ಷಕರು ಪರಿಶುದ್ಧವಾಗಿದ್ದಾರೆ ಎಂದ ಅವರು, ಶಿಕ್ಷಕರು ಮತ್ತು ನ್ಯಾಯಾಧೀಶರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಸ್ಥಾನಮಾನ ಇದೆ ಎಂದರು. ಆದ್ದರಿಂದ ಶಿಕ್ಷಕರು ಮತ್ತ್ತು ನ್ಯಾಯಾಧೀಶರಿಗೆ ಉತ್ತಮ ವೇತನವನ್ನು ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ, ಸದಸ್ಯರಾದ ಎಚ್.ಎಲ್.ಚಂದ್ರು, ಎಚ್.ಸಿ.ರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಶಿವಲಿಂಗಪ್ಪ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್ ಮಾತನಾಡಿದರು. ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಹ್ಲಾದ್‌ಗೌಡ ಸ್ವಾಗತಿಸಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ನಿರೂಪಿಸಿದರು. ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.