ಶನಿವಾರ, ಜನವರಿ 25, 2020
15 °C

ಸವಲತ್ತು ನೀಡುವಲ್ಲಿ ವಿಳಂಬ: ಶಾಸಕಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಸರ್ಕಾರದ ಸವಲತ್ತುಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಶಾಸಕಿ ಕಲ್ಪನ ಸಿದ್ದರಾಜು ಮಂಗಳವಾರ ಎಚ್ಚರಿಕೆ ನೀಡಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ `ಭಾಗ್ಯ ಲಕ್ಷ್ಮಿ~ ಬಾಂಡ್ ವಿತರಣೆ ಸೇರಿದಂತೆ ಹಲವು ಸವಲತ್ತುಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಾರದೇ ವಿತರಿಸಲಾಗಿದ್ದು, ನಿಜವಾದ ಫಲಾನು ಭವಿಗಳಿಗೆ ಸವಲತ್ತುಗಳು ದೊರಕ ದಿರುವ ಬಗೆಗೆ ದೂರುಗಳು ಬಂದಿವೆ ಎಂದು ಸಿಡಿಪಿಓ ಸುರೇಶ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಸಾಂಕೇತಿಕವಾಗಿ ಕೆಲವು ಬಾಂಡ್ ವಿತರಿಸಲಾಗಿದೆ. ಮುಂದೆ ಸ್ಥಳೀಯ ಜನ ಪ್ರತಿನಿಧಿಗಳ ಸಮಕ್ಷಮದಲ್ಲಿ ಸವಲತ್ತು ವಿತರಿಸುವುದಾಗಿ ತಿಳಿಸಿದರು.ಪುರಸಭಾಧ್ಯಕ್ಷ ಚಂದ್ರು ಮಾತನಾಡಿ, ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ  ದಿಂದಾಗಿ ಪಟ್ಟಣದಲ್ಲಿ ನ್ಯಾಯ ಬೆಲೆ ಅಂಗಡಿಗಳು ಅನ್ಯಾಯ ಬೆಲೆ ಅಂಗಡಿಗಳಾಗಿವೆ. ದರಪಟ್ಟಿ ಪ್ರಕಟಿಸು ತ್ತಿಲ್ಲ. ನಿಗದಿತ ಅವಧಿಯಲ್ಲಿ ವಿತರಿಸದೇ ಜನರನ್ನು ವಂಚಿಸಲಾಗುತ್ತಿದೆ ಎಂದು ಆಹಾರ ಇಲಾಖೆ ನಿರೀಕ್ಷಕ ದಾಸೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಧ್ವನಿಗೂಡಿಸಿದ ಶಾಸಕಿ ಕಲ್ಪನ ಸಿದ್ದರಾಜು, ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಇದೇ ದೂರುಗಳು ಕೇಳಿ ಬಂದಿದ್ದು, ಕೂಡಲೇ ಕ್ರಮ ಜರುಗಿಸಿ ಪಡಿತರ ವಿತರಣೆ ವ್ಯವಸ್ಥೆ ಸರಿಪಡಿಸಿ ಎಂದು ದಾಸೇಗೌಡ ಅವರಿಗೆ ತಾಕೀತು ಮಾಡಿದರು.ಪಟ್ಟಣ ಒಳಚರಂಡಿ ನೀರು ಸಂಗ್ರಹ ಸ್ಥಾವರದ ಬಳಿ ಶಿಂಷಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ಹೆಚ್ಚಿದ್ದು, ಸ್ಥಾವರ ಕುಸಿಯುವ ಭೀತಿ ಕಾಡಿದೆ. ಮರಳುಕೋರರ ಹಾವಳಿ ತಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಪೊಲೀಸರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪುರಸಭಾಧ್ಯಕ್ಷ ಚಂದ್ರು ದೂರಿದರು.ಹೂತಗೆರೆ ಪ್ರೌಢಶಾಲಾ ಕಟ್ಟಡ ಕಾಮಗಾರಿ ಎಸ್‌ಡಿಎಂಸಿ ಹಾಗೂ ಪೋಷಕರು ನಡುವಿನ ವಿವಾದದಿಂದ ಆರಂಭಗೊಂಡಿಲ್ಲ. ಮುಂದಿನ ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಬೇರೆ ಏಜೆನ್ಸಿಗೆ ಕಾಮಗಾರಿ ನೀಡಿ ಕಟ್ಟಡ ಪೂರ್ಣಗೊಳಿಸಲು ಯೋಜಿಸಲಾಗಿದೆ. ಅಲ್ಲದೇ ಕೋಣಸಾಲೆ, ಕೊಪ್ಪ, ಬೊಪ್ಪಸಮುದ್ರ, ಆಬಲವಾಡಿ ಹಾಗೂ ಮರಳಿಗ ಪ್ರೌಢಶಾಲಾ ಕಟ್ಟಡಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಸಭೆಗೆ ತಿಳಿಸಿದರು.ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಲ್ಲ. ಕೂಡಲೇ ಎಇಇ ಜಯರಾಂ ನಾಲೆಗಳ ಪರಿವೀಕ್ಷಣೆ ಮಾಡಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸಲು ಅಗತ್ಯ ಕ್ರಮ ಜರುಗಿಸಿ ಎಂದು ಶಾಸಕಿ ತಾಕೀತು ಮಾಡಿದರು.ಇದಲ್ಲದೇ ಸಭೆಯಲ್ಲಿ ಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಕಲಹ, ಪಶು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ಚನ್ನೇಗೌಡನದೊಡ್ಡಿ ಬಾಲಕರ ವಿದ್ಯಾರ್ಥಿನಿಲಯದ ರಸ್ತೆ ವಿವಾದ, ಶಾಲೆಗಳಿಗೆ ಅಡುಗೆ ಅನಿಲ ಅಸಮರ್ಪಕ ಪೂರೈಕೆ, ಪಟ್ಟಣ ಸಾರಿಗೆ ಡಿಪೋ ಬಳಿ ನಾಲೆಗೆ ಸೇತುವೆ ನಿರ್ಮಾಣ, ಬೈರಾನ್ ನಾಲೆ ದುರಸ್ತಿ ಸೇರಿದಂತೆ ಹಲವರು ವಿಚಾರಗಳು ಚರ್ಚೆಗೆ ಬಂದವು. ಸಂಬಂಧಿಸಿದ ಇಲಾಖೆಗಳು ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.ಮೇಲ್ಮನೆ ಸದಸ್ಯ ಬಿ.ರಾಮಕೃಷ್ಣ, ತಾ.ಪಂ ಅಧ್ಯಕ್ಷೆ ಚೌಡಮ್ಮ, ಉಪಾಧ್ಯಕ್ಷ ರಾಮಚಂದ್ರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣೇಗೌಡ, ಇಓ ಶಮಂತಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಷ್ಮ, ಪಶು ಇಲಾಖೆ ಉಪನಿರ್ದೇಶಕ ನರಸಿಂಹಯ್ಯ, ಸಮಾಜ ಕಲ್ಯಾಣಾಧಿಕಾರಿ ನಾಗರಾಜು, ಅಕ್ಷರ ದಾಸೋಹ ಅಧಿಕಾರಿ ಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)