ಸೋಮವಾರ, ಏಪ್ರಿಲ್ 12, 2021
23 °C

ಸಸ್ಯಕಾಶಿಯಲ್ಲಿ ಹೂಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಸ್ಯಕಾಶಿಯಲ್ಲಿ ಹೂಹಾಡು

ಮತ್ತೊಂದು ಫಲಪುಷ್ಪ ಪ್ರದರ್ಶನಕ್ಕೆ ಉದ್ಯಾನನಗರಿ ಸಜ್ಜಾಗಿದೆ. ರಸಿಕ ಕಣ್ಗಳ ಹಸಿವು ನೀಗಿಸಲು ಬಣ್ಣಬಣ್ಣದ ಹೂಗಳು ಲಾಲ್‌ಬಾಗ್ ಉದ್ಯಾನವನ್ನು ಅಲಂಕರಿಸಿವೆ.ಇಂದಿನಿಂದ ಆರಂಭವಾಗಲಿರುವ ಪ್ರದರ್ಶನಕ್ಕೆ ಭರದ ತಯಾರಿ ನಡೆದಿದ್ದು, ತೋಟಗಾರಿಕಾ ನಿರ್ದೇಶಕ ಕೆ.ಜಿ ಜಗದೀಶ್ ಖುದ್ದು ಪರಿವೀಕ್ಷಣೆ ನಡೆಸುತ್ತಿದ್ದಾರೆ.

ಡೈನೋಸಾರ್, ಮುದ್ದಾದ ಪಾಂಡಾ, ಈಜಾಡುವ ಬಾತುಕೋಳಿ ಮೊದಲಾದ ವನ್ಯಜೀವಿಗಳು ಈ ಪ್ರದರ್ಶನದ ವಿಶೇಷ. ಅಚ್ಚರಿಯೆಂದರೆ ಇವೆಲ್ಲಾ ಜೀವತಳೆದಿದ್ದು ಅರಳಿ ನಿಂತ ಹೂಗಳಿಂದಲೇ.

 

ನೀರಿನ ಸರೋವರದಲ್ಲಿ ಚಿಮ್ಮುವ ಚಿಲುಮೆ ಹಾಗೂ ವನ್ಯಜೀವಿಗಳ ನೈಜ ಕೂಗು ಗಾಜಿನ ಮನೆಯಲ್ಲಿ ಪ್ರತಿಧ್ವನಿಸಲಿವೆ. ಎಂಟು ಅಡಿ ಎತ್ತರದ ಮರದ ಮೇಲೆ ನಾಲ್ಕು ಅಡಿ ಅಗಲದ ಟ್ರೀ ಹಟ್ ನಿರ್ಮಿಸಿ ಅದನ್ನು 40,000 ಆಲ್‌ಸ್ಟ್ರೋಮೇರಿಯನ್ ಹಾಗೂ 32,000 ಕಾರ್ನೋಷನ್ ಹೂಗಳಿಂದ ಅಲಂಕರಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ಹಾಗೂ ಹೊರಗುತ್ತಿಗೆಯ ಐನೂರಕ್ಕೂ ಅಧಿಕ ಮಂದಿ ಉದ್ಯಾನದ ಸಿಂಗಾರದಲ್ಲಿ ನಿರತರಾಗಿದ್ದಾರೆ.ಕಳೆದ ಎಂಟು ವರ್ಷಗಳಿಂದ ಆರ್ಕಿಡ್ಸ್ ಮಾರಾಟಕ್ಕಾಗಿ ಕೇರಳದಿಂದ ಬರುತ್ತಿರುವ ದೇವಸ್ಯಾ ಈ ಪ್ರದರ್ಶನದ ಬಗ್ಗೆ ಭರವಸೆಯಿಂದಿದ್ದಾರೆ. `ಎರಡರಿಂದ ನಾಲ್ಕು ತಿಂಗಳವರೆಗೆ ಹಾಳಾಗದೆ ಉಳಿಯುವ ಆರ್ಕಿಡ್ಸ್‌ಗಳಿಗೆ ಬೇಡಿಕೆಯೂ ಹೆಚ್ಚಿರುತ್ತದೆ.ನವವಿನ್ಯಾಸದ ಕಂಟೇನರ್‌ಗಳಲ್ಲಿ ಬಣ್ಣಬಣ್ಣದ ಬ್ರೋಮಿಲಿಯ್ಡ್ಸ, ಡೆಂಡ್ರಾಬಿಯಮ್ಸ, ಫಲಾನೋಪ್ಸಿಸ್ (ಚಿಟ್ಟೆಯಾಕಾರದ ಹೂಗಳು) ಮೋಕರಾಸ್, ವಾಂಬಾಸ್ ಸಸ್ಯಗಳನ್ನು ಹಾಲೆಂಡ್‌ನಿಂದ ತರಿಸಲಾಗಿದೆ. ಸಿಡ್ನಿಯಿಂದ ತಂದ ಬಣ್ಣಬಣ್ಣದ ವಾಟರ್ ಲಿಲ್ಲೆಸ್ ಈ ಬಾರಿಯ ನಮ್ಮ ಪ್ರದರ್ಶನದ ವಿಶೇಷ~ ಎಂದು ವಿವರಿಸಿದರು.ಎಂಬತ್ತರ ವಯಸ್ಸಿನ ಅಜ್ಜಿ ಚಿನ್ನಮ್ಮನಿಗೆ ತರಕಾರಿ ಬೀಜ ಹಾಗೂ ನೂರೊಂದು ಬಗೆಯ ಗಿಡಗಳನ್ನು ಮಾರುವುದರ ಆಸಕ್ತಿ ಇನ್ನೂ ಕುಗ್ಗಿಲ್ಲ. `ಹತ್ತರಿಂದ ನೂರು ರೂಪಾಯಿವರೆಗಿನ ಸಸ್ಯ ವೈವಿಧ್ಯ ನಮ್ಮಲ್ಲಿವೆ.ಕೆಲವು ಗಿಡ-ಬೀಜ ನಾವೇ ಬೆಳೆದರೆ ಇನ್ನಷ್ಟು ಸಾಮಗ್ರಿಗಳನ್ನು ಹಣ ಕೊಟ್ಟು ಕೊಳ್ಳುತ್ತೇವೆ. ತುಳಸಿ, ನಂದಿಬಟ್ಟಲು ಗಿಡಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆ. ಚೆನ್ನಾಗಿ ಮಾತನಾಡಲು ಗೊತ್ತಿದ್ದರೆ ಗ್ರಾಹಕರನ್ನು ಸೆಳೆಯಬಹುದು ನೋಡಿ~ ಎಂದು ತಮ್ಮ ಕೆಂಪಾದ ದಂತಪಕ್ತಿ ಪ್ರದರ್ಶಿಸಿದರು ಚಿನ್ನಮ್ಮ.ಸಮಸ್ಯೆಗಳೇ ಹೆಚ್ಚು

ಇಪ್ಪತ್ತೊಂದು ವರ್ಷಗಳಿಂದ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವ `ನಿಸರ್ಗ~ ಸಾವಯವ ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಪ್ರಭು ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. `ಕಳೆದ ನಾಲ್ಕೈದು ವರ್ಷಗಳಿಂದ ಪ್ರದರ್ಶನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಇಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದು.ಸಂಜೆ 5ಕ್ಕೆ ಒಳಪ್ರವೇಶ ನಿಲ್ಲಿಸುತ್ತಾರೆ, ಆರರ ಹೊತ್ತಿಗೆ ಎಲ್ಲಾ ದೀಪಗಳನ್ನು ಆರಿಸುತ್ತಾರೆ. ಉದ್ಯೋಗಕ್ಕೆ ತೆರಳುವವರು ಕಚೇರಿ ಕೆಲಸ ಮುಗಿಸಿ ಬಂದರೆ ಇಲ್ಲಿ ಪ್ರವೇಶವಿರುವುದಿಲ್ಲ. ದರ ಹೆಚ್ಚಿಸುವ ಬದಲು ಒಳಬರುವ ಸಮಯದ ಅವಧಿ ಹೆಚ್ಚಿಸಿದರೆ ಗ್ರಾಹಕರಿಗೂ ಒಳಿತು, ನಮಗೂ ವ್ಯಾಪಾರ ಗಿಟ್ಟುತ್ತದೆ~ ಎನ್ನುತ್ತಾರೆ.`ಭದ್ರತೆ ಸಮಸ್ಯೆ ಇಲ್ಲಿದೆ. ರಾತ್ರಿ ಮಲಗಿರುವ ವೇಳೆ ನಮ್ಮ ಉತ್ಪನ್ನಗಳನ್ನು ಕದ್ದೊಯ್ಯುತ್ತಾರೆ. ದೂರು ನೀಡಿದರೆ ಸರಿಯಾಗಿ ವಿಚಾರಿಸುವುದಿಲ್ಲ. ಕಳೆದ ಬಾರಿ ಕೆಲ ಕಿಡಿಗೇಡಿಗಳು ತಿಂಡಿ ತಿನಿಸು ವ್ಯಾಪಾರಿಯ ಎಲ್ಲಾ ವಸ್ತುಗಳನ್ನು ದೋಚಿದ್ದಲ್ಲದೆ ಮಳಿಗೆಗೆ ಬೆಂಕಿ ಹಚ್ಚಿದ್ದರು. ಅದನ್ನು ಆರಿಸಲು ಹರಸಾಹಸ ಪಡಬೇಕಾಯಿತು.

 

ಅವರು ನಿಗದಿಪಡಿಸಿದಷ್ಟು ಹಣ ಕೊಟ್ಟು ಮಳಿಗೆಗೆ ಸ್ಥಳಾವಕಾಶ ಪಡೆಯುವ ನಮಗಿಂತ ಸಂಜೆ ವೇಳೆ ನಮ್ಮೆದುರಲ್ಲೇ ನೆಲದ ಮೇಲೆ ಬಟ್ಟೆ ಹಾಸಿ ವ್ಯಾಪಾರ ನಡೆಸುವವರೇ ಹೆಚ್ಚು ಲಾಭ ಗಳಿಸುತ್ತಾರೆ. ಅನಧಿಕೃತ ವ್ಯಾಪಾರಿಗಳನ್ನು ಹೊರಗೋಡಿಸುವ ಕ್ರಮವನ್ನೂ ಇವರು ಅನುಸರಿಸಿಲ್ಲ. ಪೊಲೀಸರು ದಿಢೀರ್ ದಾಳಿ ನಡೆಸಿದರೆ ಅವರು ಕೈಗೆ ಸಿಗದೆ ಓಡುತ್ತಾರೆ, ಇಲ್ಲವೇ ಅವರ ಕೈಗೆ ನೂರಿನ್ನೂರು ತುರುಕಿ ಸುಮ್ಮನಾಗಿಸುತ್ತಾರೆ~ ಎಂಬ ದೂರು ಇನ್ನೊಬ್ಬ ವ್ಯಾಪಾರಿಯದ್ದು.`ಅಂಗಡಿ ಎದುರೇ ಕೈಯಲ್ಲಿ ಉತ್ಪನ್ನ ಹಿಡಿದು ಮಾರುವ ಈ ಮಂದಿಯನ್ನು ಗದರಿದರೆ ಕತ್ತಲು ಕವಿದ ಮೇಲೆ ಅಂಗಡಿಗೆ ಆಕ್ರಮಣ ನಡೆಸುತ್ತಾರೆ. ದಿನಪೂರ್ತಿ ವ್ಯಾಪಾರ ನಡೆಸಿ ನಾವು ಗಳಿಸಿದ ಲಾಭವನ್ನು ದೋಚಿ ಪರಾರಿಯಾಗುತ್ತಾರೆ. ಆಹಾರ ಪದಾರ್ಥಗಳ ಮಳಿಗೆಗಳು ಅತಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಸಂಜೆ ವೇಳೆ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುವವರು ಒಂದಕ್ಕೆರಡು ಹಣ ಕೇಳುತ್ತಾರೆ.

 

5 ರೂ ಐಸ್ ಕ್ರೀಂಗೆ 25 ರೂಪಾಯಿ, 12ರ ಬೋಂಡಾಗೆ ಮೂವತ್ತು ರೂಪಾಯಿ ಕೇಳುತ್ತಾರೆ. ವಾರಾಂತ್ಯದಲ್ಲಿ ಸ್ವಚ್ಛತೆಗೂ ಗಮನ ಕೊಡುವುದಿಲ್ಲ. ಇಲಾಖೆ ಮಂದಿ ಇದರತ್ತ ಸ್ಪಲ್ಪ ಗಮನಹರಿಸುವುದು ಒಳಿತು~ ಎಂಬುದು ಇನ್ನೊಬ್ಬ ವ್ಯಾಪಾರಿಯ ಸಲಹೆ.ಕೊರತೆಗಳೇನೇ ಇದ್ದರೂ ಸಸ್ಯಕಾಶಿ ಲಾಲ್‌ಬಾಗ್ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರದರ್ಶನದಿಂದ ಗಮನ ಸೆಳೆಯುತ್ತಿದೆ. ನಾಜೂಕಾಗಿ ಅಲಂಕಾರ ಮಾಡುವ ಕೈ ಮನಸ್ಸುಗಳಿಗೆ ಈಗ ಬಿಡುವಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.