ಶುಕ್ರವಾರ, ಮೇ 14, 2021
21 °C

ಸಾಣೂರು: ವಿದ್ಯುತ್ ವೈಫಲ್ಯ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 20ದಿನಗಳಿಂದ ನಿರಂತರ ವಿದ್ಯುತ್ ವೈಫಲ್ಯ ನಡೆಯುತ್ತಿರುವುದನ್ನು ವಿರೋಧಿಸಿ ಕಾರ್ಕಳ ಮೆಸ್ಕಾಂ ವಿರುದ್ಧ ಸೋಮವಾರ ಸಾಣೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಸಾಣೂರು ಗ್ರಾಮಕ್ಕೆ ಸಮೀಪದ ಕಾಂತಾವರ ಗ್ರಾಮದ ಫೀಡರ್‌ನಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಮಳೆಗಾಲ ಪ್ರಾರಂಭ ವಾದ ನಂತರ ವಿದ್ಯುತ್ ಕಣ್ಣುಮುಚ್ಚಾಲೆ ಯಾಗತೊಡಗಿದೆ. ಇದರಿಂದ ಸಾಣೂರಿನ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.ಸಾಣೂರಿನಲ್ಲಿ 40ಕ್ಕೂ ಹೆಚ್ಚು ಸಣ್ಣಕೈಗಾರಿಕೆಗಳು, ಕೃಷಿಕರು, ವಿದ್ಯಾರ್ಥಿಗಳು, ವಾಣಿಜ್ಯ-ವ್ಯವಹಾರ ಸಂಸ್ಥೆಗಳು ಮತ್ತು ಸಾಮಾನ್ಯ ಗೃಹಬಳಕೆಯ ವಿದ್ಯುತ್ ಗ್ರಾಹಕರು ಇದ್ದಾರೆ. ಇವರೆಲ್ಲರಿಗೂ ಮೆಸ್ಕಾಂನ ವಿಳಂಬ ಮತ್ತು ಉದಾಸೀನ ಪ್ರವೃತ್ತಿಯಿಂದ ಹಲವು ವರ್ಷಗಳಿಂದ ತೊಂದರೆ ಅನುಭವಿಸಬೇಕಾಗಿದೆ ಎಂದು ಆರೋಪಿಸಿದರು.ಇಲಾಖಾಧಿಕಾರಿಗಳು ವರ್ಷಕ್ಕೆರಡು ಗ್ರಾಮಸಭೆ ಮತ್ತು ಎರಡು ತಿಂಗಳಿಗೊಮ್ಮೆ ವಿದ್ಯುತ್ ಬಳಕೆದಾರರ ಸಭೆ ಕರೆದು ಗ್ರಾಹಕರ ಸಮಸ್ಯೆಗಳನ್ನು ಚರ್ಚಿಸಬೇಕು, ತನ್ಮೂಲಕ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆಯನ್ನು ತರಬೇಕು. ಸಾಣೂರಿಗೆ ಪ್ರತ್ಯೇಕ ಲೈನ್‌ಮ್ಯಾನ್ ನೇಮಿಸಬೇಕು. ಜೆ.ಇ ಮತ್ತು ಸಾಣೂರು ಲೈನ್‌ಮ್ಯಾನ್ ಮಧ್ಯೆ ಸಂವಹನದ ಕೊರತೆಯಿಂದ ವಿದ್ಯುತ್ ಲೈನ್ ಸರಿಪಡಿಸಲಾಗುತ್ತಿದೆ. ಇದರಿಂದ ಗ್ರಾಹಕರು ಅನಾವಶ್ಯಕವಾಗಿ ತೊಂದರೆ ಪಡುವಂತಾಗಿದೆ ಎಂದರು.ಲೈನ್‌ಮ್ಯಾನ್ ಖಾಸಗಿಯವರ ವಿದ್ಯುತ್ ಸಂಪರ್ಕ, ಲೈನ್ ಅಳವಡಿಕೆ, ಕಂಬಗಳ ಅಳವಡಿಕೆ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ವಿದ್ಯುತ್ ಲೈನ್ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಸಾಣೂರಿಗೆ ಪ್ರತ್ಯೇಕವಾದ ಫೀಡರ್‌ನಿಂದ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರವನ್ನು ಕಂಡುಕೋಳ್ಳಬೇಕು ಎಂದು ಅವರು ತಿಳಿಸಿದರು. ಮೆಸ್ಕಾಂ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.

 

  ಪ್ರತಿಭಟನೆಯಲ್ಲಿ ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್, ಉದ್ಯಮಿಗಳಾದ ಗಣೇಶ್ ಕಾಮತ್, ಬೋಳ ವೆಂಕಟೇಶ್ ಕಾಮತ್, ಜಾನ್ ಡಿ.ಸಿಲ್ವಾ, ಅಶೋಕ್ ಶೆಟ್ಟಿ, ಸುಭಾಸ್ ಶೆಣೈ, ಕೇಶವ ಆಚಾರ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.