ಬುಧವಾರ, ಜೂಲೈ 8, 2020
28 °C

ಸಾಧ್ವಿ ಪ್ರಗ್ಯಾ ಸಿಂಗ್ ಸಹೋದರನ ವಿಚಾರಣೆ: ಕೇಂದ್ರ, ಎನ್‌ಐಎಗೆ ಕೋರ್ಟ್ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಐಎ) ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದೆ ಮತ್ತು ಹಿಂಸೆ ನೀಡುತ್ತಿದೆ ಎಂದು ಆರೋಪಿಸಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸಹೋದರ ಅನಂತ್ ಬಹ್ಮಚಾರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ  ಕೇಂದ್ರ ಸರ್ಕಾರ ಮತ್ತು ಎನ್‌ಐಎಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಮೂರ್ತಿ ಶಿವ ನಾರಾಯಣ ಧಿಂಗ್ರಾ ಅವರು, ಏಪ್ರಿಲ್ 6ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಎನ್‌ಐಎ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದರು.

 ತಮ್ಮ ವ್ಯಾಪ್ತಿಯಲ್ಲಿ ಬರದ ಬ್ರಹ್ಮಾಚಾರಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದಕ್ಕಾಗಿ ತನಿಖಾಧಿಕಾರಿಗೂ ನೋಟಿಸ್ ಜಾರಿ ಮಾಡಿರುವ ಧಿಂಗ್ರಾ, ಮುಂದಿನ ವಿಚಾರಣೆಯಂದು  ಪ್ರತಿಕ್ರಿಯೆ ನೀಡುವಂತೆ ಸೂಚಿದ್ದಾರೆ.

‘ನೀವು ನೀಡಿರುವ ನೋಟಿಸ್ ಕಾನೂನು ಬಾಹಿರ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಿಮ್ಮ ತನಿಖಾ ವ್ಯಾಪ್ತಿಯಲ್ಲಿ ಬರದ ವ್ಯಕ್ತಿಯೊಬ್ಬರಿಗೆ ವಿಚಾರಣೆಗೆ ಹಾಜರಾಗಿ ಎಂದು ನೀವು ಹೇಗೆ ನೋಟಿಸ್ ಜಾರಿ ಮಾಡುತ್ತೀರಿ? ಒಂದು ವೇಳೆ ಆ ವ್ಯಕ್ತಿಯನ್ನು ನೀವು ವಿಚಾರಣೆ ಮಾಡಬೇಕೆಂದಿದ್ದರೆ, ಅವರು ಇರುವಲ್ಲಿಗೆ ನೀವು ಹೋಗಬೇಕು’ ಎಂದು ಹೈಕೋರ್ಟ್ ಎನ್‌ಐಎ ಪರ ವಕೀಲರಿಗೆ ಹೇಳಿತು.

ಮುಂಬೈನಿಂದ ಹರಿಯಾಣದ ಪಂಚಕುಲ ಮತ್ತು ಜನವರಿ 4ರಂದು ಪಂಚಕುಲದಿಂದ ದೆಹಲಿಗೆ ಬರಲು ಬಹ್ಮಚಾರಿ ಮಾಡಿದ ಪ್ರಯಾಣದ ವೆಚ್ಚವನ್ನು ಭರಿಸುವಂತೆಯೂ ಎನ್‌ಐಎಗೆ  ಕೋರ್ಟ್ ಸೂಚಿಸಿತು.

ಪಂಚಕುಲ ಮತ್ತು ದೆಹಲಿ ಎರಡೂ ಕಡೆಗಳಲ್ಲಿ ಜನವರಿ 5ರಂದೇ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎಯು ತಮ್ಮ ಕಕ್ಷಿದಾರರಿಗೆ ಎರಡು ನೋಟಿಸ್ ಜಾರಿ ಮಾಡಿತ್ತು ಎಂದು ಬ್ರಹ್ಮಚಾರಿ ಪರ ವಕೀಲ ಚೇತನ್ ಶರ್ಮಾ ಹೇಳಿದರು.

ತಮ್ಮ ಕಕ್ಷಿದಾರರು ಮುಂಬೈ ಮೂಲದವರಾಗಿದ್ದು, ತನಿಖಾಧಿಕಾರಿ ತಮ್ಮ ವ್ಯಾಪ್ತಿ ಮೀರಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಎನ್‌ಐಎಯು ವಿಚಾರಣೆಯ ನೆಪದಲ್ಲಿ ತಮಗೆ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿ ಜನವರಿ 5ರಂದು ಆಗ್ನೇಯ ದೆಹಲಿಯ ಅತಿಥಿಗೃಹವೊಂದರಲ್ಲಿ ಬ್ರಹ್ಮಚಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ಸಹೋದರಿ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಕುರಿತಂತೆ ತನಿಖಾ ಸಂಸ್ಥೆ ಮಾಡುತ್ತಿರುವ ವಿಚಾರಣೆಯಿಂದ ಬ್ರಹ್ಮಚಾರಿ ಅವರು ನೊಂದಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.

ಸಾಧ್ವಿ ಪ್ರಗ್ಯಾ ಸಿಂಗ್ 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪವನ್ನು ಹೊತ್ತಿದ್ದಾರೆ. ಈ ಸ್ಫೋಟದಲ್ಲಿ ಏಳು ಜನರು ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.