ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಮೌನ: ಕೋ.ಚೆ ಕೋಪ

ಭೂಮಾತೆಯ ಮಾನರಕ್ಷಿಸಲು ಲೇಖನಿ ಬಳಸಿ
Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಚನ ಪಿತಮಹಾ ಡಾ. ಫ.ಗು.ಹಳಕಟ್ಟಿ ಪ್ರಧಾನ ವೇದಿಕೆ (ವಿಜಾಪುರ): ವಿದೇಶಿ ಕಂಪೆನಿಗಳಿಗೆ ಭೂಮಿ ನೀಡುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ, ನೈತಿಕ ಅಧಃಪತನಕ್ಕೆ ಕಳವಳ, ಜಾತೀಯತೆ- ಭ್ರಷ್ಟಾಚಾರ ಕುರಿತು ಎಚ್ಚರಿಕೆ, ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಆಗ್ರಹ, ನೆರೆ ರಾಜ್ಯಗಳೊಂದಿಗೆ ಸೌಹಾರ್ದ ಮತ್ತು ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಬೇಕು ಎಂಬ ಒತ್ತಾಯ.

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸಪ್ಪ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ಆಶಯಗಳಿವು. ಸಿದ್ಧಪಡಿಸಿದ್ದ 37 ಪುಟಗಳ ದೀರ್ಘ ಭಾಷಣವನ್ನು ಓದದ ಕೋ.ಚೆ ಅವರು ಒಟ್ಟಾರೆ ಲಿಖಿತ ಭಾಷಣದಲ್ಲಿದ್ದ ಅಂಶಗಳನ್ನು ಆಧರಿಸಿ ಮಾತನಾಡಿದರು.

`ಕೃಷಿ ಯೋಗ್ಯ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಪರದೇಶದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಧಾರೆ ಎರೆಯುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ವಿದೇಶಿ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಅಗ್ಗದ ದರದಲ್ಲಿ ಕೊಡುವ ನಮ್ಮ ರಾಜ್ಯದ ಅರ್ಥನೀತಿ ಆತ್ಮಹತ್ಯಾಕಾರಕ, ಘೋರ ಘಾತಕ. ಬೃಹತ್ ಕಾರ್ಖಾನೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಂಡು ಭೂ ಬ್ಯಾಂಕ್ ಸ್ಥಾಪಿಸುವುದು ಭೂತಾಯಿ ಮೇಲೆ ಹಗಲಿನಲ್ಲಿ ನಡೆಸುವ ಅತ್ಯಾಚಾರ. ಭೂಮಾತೆ ಮೇಲೆ ಅತ್ಯಾಚಾರ ಮಾಡಿದವರಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ' ಎಂದು ಸರ್ಕಾರದ ವಿರುದ್ಧ ಕಟುವಾಗಿ ಹರಿಹಾಯ್ದರು.

`ಮಹಿಳೆ ಮೇಲೆ ಅತ್ಯಾಚಾರ ಮಾಡಿದರೆ ಅದು ಒಬ್ಬ ಮಾಡಿದ ಅಪರಾಧವಾಗುತ್ತದೆ. ಅದಕ್ಕೆ ಆತನನ್ನು ಶಿಕ್ಷಿಸಿದರೆ ಆ ದುಷ್ಕೃತ್ಯದ ಪ್ರಕರಣ ಮುಗಿಯುತ್ತದೆ. ಆದರೆ, ಭೂಗಳ್ಳತನ ಸೂರ್ಯ-ಚಂದ್ರರು ಇರುವವರೆಗೆ ನಡೆಯುವ ಕಳವು. ಪೋಸ್ಕೊ ಕಂಪೆನಿಗೆ ಗದಗ ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಸಾವಿರಾರು ಎಕರೆ ಭೂಮಿ ಕೊಡುವುದು ಹೇಯ ಅಪರಾಧ' ಎಂದು ಗುಡುಗಿದರು.

`ಕೈಚೆಲ್ಲಿ, ಕಣ್ಮುಚ್ಚಿ ಕುಳಿತರೆ ಭೂಗಳ್ಳತನಕ್ಕೆ ಕುಮ್ಮಕ್ಕು ಕೊಟ್ಟಂತಾಗಿ ಅವರೂ ಆರೋಪಿಗಳಾಗುತ್ತಾರೆ. ಸಾಹಿತಿಗಳು ಭೂ ಸಮಸ್ಯೆ ನಮ್ಮದಲ್ಲ ಎಂದು ಮೌನ ವಹಿಸಿದರೆ ಅದು ಮಹಾ ಅಪರಾಧವಾಗುತ್ತದೆ. ದುಶ್ಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡಿದಾಗ ಅದನ್ನು ತಪ್ಪು ಎಂದು ಹೇಳದ, ಅದನ್ನು ತಡೆಯದ ದ್ರೋಣಾಚಾರ್ಯರ ಮೌನ ಕೂಡ ಅಪರಾಧ. ಹಾಗಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಸಾಹಿತಿ ತನ್ನ ಲೇಖನಿಯ ಖಡ್ಗವನ್ನು ಹಿಡಿದು ಭೂಮಾತೆಯ ಮಾನ ರಕ್ಷಣೆಗೆ ಮುನ್ನುಗ್ಗಬೇಕು. ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ನಾನು ಕೊಡುವ ದಂಡನಾಯಕನ ಆಜ್ಞೆ ಇದು. ಈ ಧರ್ಮಯುದ್ಧದಲ್ಲಿ ಜೀವದ ಹಂಗು ತೊರೆದು, ಸತ್ತರೆ ಸ್ವರ್ಗ ಗೆದ್ದು ಬದುಕಿದರೆ ಭೂ ರಾಜ್ಯದ ಒಡೆತನ ಎಂದು ಹೋರಾಡಬೇಕು' ಎಂದು ಕರೆ ನೀಡಿದರು.

`ಏಕೀಕೃತ ಕರ್ನಾಟಕದ ಸಮಸ್ಯೆಗಳು ಅನೇಕ ಎನ್ನುವುದಕ್ಕಿಂತ ಅನಂತ ಎನ್ನುವುದೇ ಸರಿ. ಅದರಲ್ಲೂ ಜಲ ವಿವಾದ, ಬೃಹತ್ ಕಂಪೆನಿಗಳಿಗೆ ಭೂಮಿ ಒದಗಿಸಲು ಭೂ ಬ್ಯಾಂಕ್ ಸ್ಥಾಪನೆಯಂತಹ ಕ್ರಮ ಮರಣ ಮೃದಂಗವಾಗಲಿದೆ. ಈ ಅಪಾಯದಿಂದ ನಾವು ಪಾರಾಗದಿದ್ದರೆ ಕನ್ನಡವೂ ಉಳಿಯದು, ಕರ್ನಾಟಕವೂ ಉಳಿಯದು ಎಂದು ಕೋ.ಚೆ ಚುಚ್ಚಿದರು.

`ದೇಶ ಈಗಾಗಲೇ ಸಹಿಸಲಾದಷ್ಟು ಹದಗೆಟ್ಟಿದ್ದು ನೈತಿಕವಾಗಿ ಪಾತಾಳಕ್ಕೆ ಕುಸಿದಿದೆ. ನೈತಿಕ ಅಧಃಪತನವನ್ನು ಸರಿಪಡಿಸುವ ಶಕ್ತಿ ಆರ್ಥಿಕಾಭಿವೃದ್ಧಿಗೆ ಇಲ್ಲ. ನಮ್ಮ ಅವನತಿಗೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಘೋರ ಅಪಾಯಗಳಿವೆ.

ಭ್ರಷ್ಟಾಚಾರ ನಾಗರಹಾವಾದರೆ ಜಾತೀಯತೆ ಉರಿಮಂಡಲ. ಉರಿ ಮಂಡಲದ ವಿಷವೇ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಜಾತಿ ದ್ವೇಷದ ಅಗ್ನಿಕುಂಡದಲ್ಲಿ ಬೇಯುವುದಕ್ಕಿಂತ ಬೌದ್ಧರಾಗಿ ಬದುಕುಳಿಯುವುದು ಉತ್ತಮ. ಸನಾತನಿಗಳ ಅಗ್ನಿಕುಂಡಕ್ಕೆ ಬಲಿಯಾಗುವುದಕ್ಕಿಂತ ಮತಾಂತರದಿಂದ ಈ ದೇಶವನ್ನು ಸರ್ವಜನಾಂಗದ ತೋಟವನ್ನಾಗಿ ಮಾಡಬೇಕು' ಎಂದು ಮನವಿ ಮಾಡಿದರು.

`ಭ್ರಷ್ಟಾಚಾರ ಹಾವಿನ ವಿಷದಂತೆ ತಕ್ಷಣ ಏರುತ್ತದೆ. ತಕ್ಕ ಔಷಧ ನೀಡಿದರೆ ಉರಿಮಂಡಲದ ವಿಷಕ್ಕಿಂತ ಬೇಗನೆ ಇಳಿಸಬಹುದು. ಒಂದು ವೇಳೆ ವಿಷ ಇಳಿಯದಿದ್ದರೂ ಅವನೊಬ್ಬ ಸಾಯುತ್ತಾನೆ. ಅದರಿಂದ ಅಷ್ಟು ನಷ್ಟವಲ್ಲ. ಜಾತೀಯತೆ ಪರಮತ ದ್ವೇಷ ಎಂಬ ವಿಷ. ಅದು ಮನಸ್ಸಿನಲ್ಲಿ ಬಿತ್ತುವ ವಿಷ. ಇಂತಹ ವಿಷ ವಿತರಕ ಜನರ ಬಗ್ಗೆ ಎಚ್ಚರ ವಹಿಸಬೇಕು' ಎಂದರು.

ಸ್ಥಳೀಯರಿಗೆ ಉದ್ಯೋಗಕ್ಕೆ ಆಗ್ರಹ: `ಸ್ಥಳೀಯರಿಗೇ ರಾಜ್ಯದಲ್ಲಿ ಉದ್ಯೋಗ ದೊರೆಯಬೇಕು ಎಂಬ ಕೂಗು ರಾಜ್ಯದಲ್ಲಿ ಉಲ್ಬಣವಾಗಿದೆ. ಈ ಸಂಬಂಧ 20 ವರ್ಷಗಳ ಹಿಂದೆ ಸರೋಜಿನಿ ಮಹಿಷಿ ನೀಡಿರುವ ವರದಿಯಲ್ಲಿ ಏನಿದೆ ಎಂಬುದೇ ಈಗ ಮರೆತುಹೋಗಿದೆ. ಆ ವರದಿಯ ಶಿಫಾರಸುಗಳನ್ನು ನಮ್ಮ ಸರ್ಕಾರವೂ ಒಪ್ಪಿದೆ. ಆದರೆ ಅವು ತೃಪ್ತಿಕರವಾಗಿ, ಪೂರ್ಣವಾಗಿ ಕಾರ್ಯಗತವಾಗಿಲ್ಲ' ಎಂದು ಅವರು ವಿಷಾದಿಸಿದರು.

`ಕನ್ನಡಿಗರಿಗೆ ಇಂಗ್ಲಿಷ್ ಬಾರದ ಹಾಗೂ ಕಂಪ್ಯೂಟರ್ ಜ್ಞಾನ ಇಲ್ಲದ ಕಾರಣ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ದೊರೆಯುವುದಿಲ್ಲ ಎಂಬುದು ಸ್ವಲ್ಪ ಮಟ್ಟಿಗೆ ಸತ್ಯವಾದ ಮಾತು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಕಲಿಸಲು ಹೊರಟರೆ ಕನ್ನಡ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಅವುಗಳನ್ನು ಮುಚ್ಚದೇ ಬದುಕುವುದಕ್ಕಾಗಿ ಇಂಗ್ಲಿಷ್ ಕಲಿಸಬೇಕು. ಅದಕ್ಕಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿ ಐದನೇ ತರಗತಿಯಿಂದ ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಬೇಕು. ಸರ್ಕಾರ ಇದಕ್ಕೆ ಸ್ಪಂದಿಸಬೇಕು' ಎಂದು ಅವರು ಹೇಳಿದರು.

`ಕನ್ನಡ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದಿಂದ ಕನ್ನಡ ಉಳಿದೀತೇ ಎಂಬ ಪ್ರಶ್ನೆಗೆ, ಈ ವಿಚಾರದಲ್ಲಿ ಸರ್ಕಾರವನ್ನಾಗಲಿ, ಶಿಕ್ಷಣ ಸಚಿವರನ್ನಾಗಲಿ, ಮುಖ್ಯಮಂತ್ರಿಯನ್ನಾಗಲಿ ನಿಂದಿಸಬಾರದು. ಕನ್ನಡ ಶಾಲೆಗೆ ಮಕ್ಕಳೇ ಬರುವುದಿಲ್ಲ ಎಂದರೆ ಅಂತಹ ಶಾಲೆಗಳ ಬಾಗಿಲು ತೆರೆದು ಶಿಕ್ಷಕರು ನೊಣ ಝಾಡಿಸಬೇಕೇ? ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ದೊರೆಯುತ್ತದೆ ಎಂಬ ಭ್ರಮೆ ಹೆತ್ತವರಲ್ಲಿ ಬೇರೂರಿದೆ. ಆ ಬೇರಿನ ಮೂಲವನ್ನೇ ಕಿತ್ತುಹಾಕಬೇಕು. ಇಂಗ್ಲಿಷ್ ಕಲಿತವರಿಗೆಲ್ಲಾ ನೌಕರಿ ಸಿಗುವುದಿಲ್ಲ ಎಂಬುದನ್ನು ಅಂಕಿ-ಅಂಶಗಳೊಂದಿಗೆ  ಜನರಿಗೆ ತೋರಿಸಿಕೊಡಬೇಕು. ಸರ್ಕಾರ ಬೇಕಿದ್ದರೆ ಇದಕ್ಕೊಂದು ಆಯೋಗ ರಚಿಸಲಿ' ಎಂದು ಅವರು ಅಭಿಪ್ರಾಯಪಟ್ಟರು.

ಮರಾಠಿಗರ ಬೊಬ್ಬೆ ಕೇಳುತ್ತಾ ಸುಮ್ಮನಿರಿ:  `ಮಹಾರಾಷ್ಟ್ರದ ಆಕ್ರಮಣಶೀಲ ಪ್ರವೃತ್ತಿಗೆ ನಾವು ಶರಣಾಗಬೇಕೇ? ಬೆಳಗಾವಿ ನಮ್ಮದು, ನಿಪ್ಪಾಣಿ ನಮ್ಮದು ಎಂದು ಮರಾಠಿಗರು ಬೊಬ್ಬೆ ಹಾಕುತ್ತಿರುವ ಸಂದರ್ಭದಲ್ಲಿ ನಾವು ಸುಮ್ಮನಿರುವುದು ಒಳ್ಳೆಯದು' ಎಂಬುದು ಕೋ.ಚೆ ಸಲಹೆ.

`ಮರಾಠಿಗರು ತಮ್ಮದು ಎಂದು ಬೊಬ್ಬೆ ಹಾಕುತ್ತಿರುವ ಪ್ರದೇಶಗಳು ಸಂವಿಧಾನಾತ್ಮಕವಾಗಿ ಭದ್ರವಾಗಿ ಸಹ್ಯಾದ್ರಿಯಂತೆ ಕರ್ನಾಟಕದಲ್ಲಿವೆ. ಮರಾಠಿಗರು ದೊಂಬಿ ಎಬ್ಬಿಸಿದರೆ ಶಾಂತಿ ಸುವ್ಯವಸ್ಥೆ ನೋಡಿಕೊಳ್ಳಬೇಕಾದ ಕೆಲಸ ಸರ್ಕಾರದ್ದು. ನಾವು ದೊಣ್ಣೆ ಬೀಸಬೇಕಿಲ್ಲ. ಆ ಕೆಲಸವನ್ನು ಅವರು ನಿಭಾಯಿಸದಿದ್ದರೆ ಅಂತಹ ಸರ್ಕಾರವನ್ನು ತೆಗೆದುಹಾಕುವ ಮತದಾನದ ಬ್ರಹ್ಮಾಸ್ತ್ರ ನಿಮ್ಮ ಕೈಯಲ್ಲಿದೆ. ಅದನ್ನು ಪ್ರಯೋಗಿಸಿ. ಸದ್ದುಗದ್ದಲ ಏನೂ ಬೇಡ. ಮರಾಠಿಗರನ್ನು ಪ್ರೀತಿಯಿಂದ ಗೆಲ್ಲಿ. ಅದೇ ಸಿದ್ಧೌಷಧ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT