ಸೋಮವಾರ, ಮಾರ್ಚ್ 8, 2021
19 °C

ಸಿಡಿ ವಿರುದ್ಧ ಸಿಡಿದೆದ್ದ ರತ್ನಮ್ಮ

ಮಂಜುಶ್ರೀ ಎಂ. ಕಡಕೋಳ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡಿ ವಿರುದ್ಧ ಸಿಡಿದೆದ್ದ ರತ್ನಮ್ಮ

ದಾವಣಗೆರೆ: ಪ್ರತಿವರ್ಷ ಊರ ಜಾತ್ರೆ ಬಂತೆಂದರೆ ಸಾಕು ಆಕೆಗೆ ಎಲ್ಲಿಲ್ಲದ ಭಯ. ಸಾವಿರಾರು ಜನರ ಮುಂದೆ ಮೆರವಣಿಗೆಯಲ್ಲಿ ಸಾಗುವ ದೃಶ್ಯ ನೆನೆಸಿಕೊಂಡರೆ ಸಾಕು ಕಣ್ಣಾಲಿಗಳು ತುಂಬಿ, ನಾಚಿಕೆಯಿಂದ ತಲೆ ತಗ್ಗಿಸುವ ಸ್ಥಿತಿ ಆಕೆಯದು. ಇದುವರೆಗೂ ದೈವ, ಸಂಪ್ರದಾಯದ ಪಾಡಿಗೆ ಕಟ್ಟುಬಿದ್ದಿದ್ದ ಆಕೆ ಇಂದು (ಶುಕ್ರವಾರ) ನಡೆಯುವ ಊರ ಜಾತ್ರೆಯಲ್ಲಿ `ಸಿಡಿ~ ಎಂಬ ಬರಸಿಡಿಲಿಗೆ ತನ್ನನ್ನು ಒಡ್ಡಿಕೊಳ್ಳದಿರಲು ನಿರ್ಧರಿಸಿದ್ದಾಳೆ!

- ಇದು ದಾವಣಗೆರೆ ತಾಲ್ಲೂಕು ಹುಚ್ಚವ್ವನಹಳ್ಳಿ ಗ್ರಾಮದ ದೇವದಾಸಿ ರತ್ನಮ್ಮನ ಕಥೆ.ಎಸ್ಸೆಸ್ಸೆಲ್ಸಿ ತನಕ ಓದಿರುವ ಪರಿಶಿಷ್ಟ ಜಾತಿಯ ರತ್ನಮ್ಮ (29) ಬಾಲ್ಯದಲ್ಲೇ `ಮುತ್ತುಕಟ್ಟುವ~ ಅನಿಷ್ಟ ಪದ್ಧತಿಗೆ ಬಲಿಯಾದವರು. ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಒಡನಾಟಕ್ಕೆ ಬಂದ ರತ್ನಮ್ಮ ಇದೀಗ `ಸಿಡಿ~ ಪದ್ಧತಿ ವಿರುದ್ಧ ಮೆಲ್ಲಗೆ ದನಿ ಎತ್ತಿದ್ದಾರೆ.

 

11 ವರ್ಷಗಳಿಂದ ನೋವು-ಅವಮಾನದಿಂದ ನಲುಗಿರುವ ಅವರು, ಇಂದು ತನ್ನ ಶೋಷಣೆ ವಿರುದ್ಧ ಮೊದಲ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಇದುವರೆಗೂ ತಾನು ಅನುಭವಿಸಿದ ನೋವಿನ ಜೀವನ ಕುರಿತು `ಪ್ರಜಾವಾಣಿ~ ಮುಂದೆ ರತ್ನಮ್ಮ ಮನಬಿಚ್ಚಿ ಮಾತನಾಡಿದ್ದು ಹೀಗೆ...`ಮೇಡಂ, ಪ್ರತಿವರ್ಷ ಜಾತ್ರೆಯಲ್ಲಿ `ಸಿಡಿ~ ಆಡಲು ನನಗೆ ಕರೆದುಕೊಂಡು ಹೋಗಲು ಮನೆ ಹತ್ರ ಜನ ಬಂದಾಗ ತುಂಬಾ ಅಳು, ದುಃಖ ಬರುತ್ತೆ. ಊರಲ್ಲಿ ಎಷ್ಟೊಂದು ಹೆಣ್ಣುಮಕ್ಕಳು ಇದ್ದಾರೆ. ಆದ್ರೆ, ಎಲ್ಲಾ ಬಿಟ್ಟು ನನಗೇ ಏಕೆ ಈ ಥರ ಮಾಡ್ತಾರೆ ಅಂತ ನೋವಾಗುತ್ತೆ. `ಸಿಡಿ~ ಆಡುವಾಗ ಕರೆಂಟಿನ ಕಂಬಕ್ಕಿಂತ ಎತ್ತರದ ಕಂಬಕ್ಕೆ ನನ್ನನ್ನು ಕಟ್ತಾರೆ. ಮೊಣಕಾಲಿನ ತನಕ ಮಾತ್ರ ಸೀರೆ ಉಡ್ಬೇಕು. ಹಿಂದಿನ ದಿವಸದಿಂದಲೇ ಉಪವಾಸ ಮಾಡ್ಬೇಕು.ನನ್ನನ್ನು `ಸಿಡಿ~ ಕಂಬಕ್ಕೆ ಗಂಡಸರೇ ಕಟ್ಟುತ್ತಾರೆ. ಕಬ್ಬಿಣದ ಕೊಕ್ಕೆ ಸೊಂಟದ ಹಿಂಬದಿಗೆ ಚುಚ್ಚಿ, (ಹಾಗೆ ಚುಚ್ಚಿದಾಗ ರಕ್ತ ಹರಿದು, ತುಂಬಾ ನೋವಾಗುತ್ತೆ) ಮೈಗೆ ಬಿಗಿಯಾದ ಹಗ್ಗ ಕಟ್ತಾರೆ. ಒಂದು ಸಲವಂತೂ ಎದೆಯ ಭಾಗದಲ್ಲಿ ಬಿಗಿಯಾಗಿ ಕಟ್ಟಿಬಿಟ್ಟಿದ್ರು. ಉಸಿರೇ ನಿಂತ ಹಾಗಾಗಿತ್ತು. ಈ ನೋವು ಇಲ್ಲಿಗೇ ಸಾಕು. ಇನ್ಮೇಲೆ ನಾನು `ಸಿಡಿ~ ಆಡಲ್ಲ~ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು ರತ್ನಮ್ಮ.`ಬಾಲ್ಯದಲ್ಲೇ ದೇವರ ಹೆಸರಲ್ಲಿ ಮುತ್ತುಕಟ್ಟಿ ದೇವದಾಸಿ ಮಾಡಿದ್ರು. ಆಗ ಎಸ್ಸೆಸ್ಸೆಲ್ಸಿ ಓದಿದ್ರೂ ಪ್ರಶ್ನಿಸುವ ಧೈರ್ಯ ಇರಲಿಲ್ಲ. ನಾಯಕರ ಹುಡುಗನೊಬ್ಬ ನನ್ನ ಜತೆ ಇದ್ದ. ಮೂರು ಮಕ್ಕಳ ನಂತರ ನನ್ನನ್ನು ಬಿಟ್ಟು ಬೇರೆ ಮದ್ವೆಯಾದ. ಮಕ್ಕಳು ಅಪ್ಪ ಎಲ್ಲಮ್ಮಾ ಅಂತ ಕೇಳಿದಾಗ, ಕರುಳು ಹಿಂಡಿ ಬರುತ್ತೆ. ಹಾಗಾಗಿ, ಯಾವುದೇ ಮುಚ್ಚುಮರೆ ಇಲ್ಲದೇ ಮಕ್ಕಳಿಗೆ ನಾನು `ದೇವದಾಸಿ~ ಎಂದು ಹೇಳಿಬಿಟ್ಟಿದ್ದೇನೆ.ಅವರೂ ಈಗೀಗ ನನ್ನ ಅರ್ಥಮಾಡಿಕೊಳ್ಳುತ್ತಿದ್ದಾರೆ. ಬಿಸಿಯೂಟದ ಕಾರ್ಯಕರ್ತೆಯಾಗಿ ಗೌರವದಿಂದ ಜೀವನ ಮಾಡುತ್ತಿದ್ದೇನೆ. ಇನ್ನಾದರೂ ನನ್ನಂತಹವರ ಮೇಲೆ ನಡೆಯುವ ಶೋಷಣೆಗೆ ನಾನು ದನಿಯಾಗ್ಬೇಕು ಅಂತ ಮನಸ್ಸು ಮಾಡೀನಿ ಮೇಡಂ. ಹಾಗಾಗಿ, ಇವತ್ತು ನಾನು `ಸಿಡಿ~ಯಲ್ಲಿ ಭಾಗವಹಿಸಬಾರದು ಎಂದು ನಿರ್ಧರಿಸಿದ್ದೇನೆ~ ಎಂದರು.ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಉಪಾಧ್ಯಕ್ಷೆ ಟಿ. ಪದ್ಮಾವತಿ, ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ ನೇರ‌್ಲಿಗೆ ಅವರ ಮಾತಿನಿಂದ ಜಾಗೃತವಾಗಿರುವ ರತ್ನಮ್ಮ, `ಮೇಲ್ಜಾತಿಯ ಹೆಣ್ಣುಮಕ್ಕಳನ್ನು ಎಷ್ಟೊಂದು ಗೌರವದಿಂದ ಕಾಣ್ತಾರೆ. ನಾನೂ ಅವರಂತೆ ಜೀವನ ಮಾಡ್ಬೇಕು. ಈ ಪದ್ಧತಿ ನನಗೇ ನಿಲ್ಲಲಿ. ನನ್ನ ಮಕ್ಕಳನ್ನು ಓದಿಸಿ, ದೊಡ್ಡ ಅಧಿಕಾರಿ ಮಾಡ್ತೀನಿ~ ಎನ್ನುತ್ತಾ ನಾಳಿನ ಹೊಸ ಬದುಕಿನ ಕನಸು ತುಂಬಿಕೊಂಡು ಮಾತು ಮುಗಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.