ಬುಧವಾರ, ಮೇ 18, 2022
24 °C

ಸಿದ್ದಲಿಂಗಪ್ರಭು ಕೊಲೆ ಪ್ರಕರಣ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನೈಸ್ ರಸ್ತೆ ವಿರೋಧಿ ಹೋರಾಟಗಾರ ಸಿದ್ದಲಿಂಗಪ್ರಭು ಕೊಲೆ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಸಿದ್ದಲಿಂಗಪ್ರಭುವಿನ ರಕ್ತ ಸಂಬಂಧಿ ಚನ್ನವೀರಯ್ಯನಪಾಳ್ಯದ ಪ್ರಕಾಶ್ ಮತ್ತು ಆತನ ಸಹಚರರಾದ ಶಾಂತಕುಮಾರ್, ಹನುಮಯ್ಯ,  ರಾಜೇಶ್ ಮತ್ತು ಜನಾರ್ದನ್ ಬಂಧಿತ ಆರೋಪಿಗಳಾಗಿದ್ದಾರೆ.ಪ್ರಭು ಮತ್ತು ಪ್ರಕಾಶ್ ಅವರೊಡನೆ ಮೂರು- ನಾಲ್ಕು ವರ್ಷಗಳಿಂದ ದ್ವೇಷ ಮತ್ತು ವೈಶಮ್ಯ ಮನೆ ಮಾಡಿತ್ತು. ಅದು ವಿಕೋಪಕ್ಕೆ ತಿರುಗಿದ ಪರಿಣಾಮ ಪ್ರಕಾಶ್ ತನ್ನ ಸಹಚರರೊಡಗೂಡಿ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭುವಿನ ಹತ್ತಿರದ ಸಂಬಂಧಿಯೊಬ್ಬರು ನೈಸ್ ಕಂಪೆನಿಯ ಮಾಲೀಕರ ಅಶೋಕ ಖೇಣಿ ಮತ್ತು ಬಿಜೆಪಿ ಮುಖಂಡ ರುದ್ರೇಶ್ ಅವರ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಅವರ ನೇತೃತ್ವದಲ್ಲಿ ಸ್ಥಳೀಯ ಜನತೆ ನೈಸ್ ರಸ್ತೆ ಬಂದ್ ಮಾಡಿ ಧರಣಿ ನಡೆಸಿದ್ದರು. ಕೊಲೆಗಾರರನ್ನು ಕೂಡಲೇ ಬಂಧಿಸಿ ಶಿಕ್ಷಿಸುವಂತೆ ಆಗ್ರಹಿಸಿದ್ದರು.ಆದರೆ ಈ ಪ್ರಕರಣದ ಪ್ರಮುಖ ಆರೋಪಿಗಳು ಸಿದ್ದಲಿಂಗಪ್ರಭುವಿನ ಸಂಬಂಧಿಗಳೇ ಆಗಿದ್ದು, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಶುಕ್ರವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಸಿಕ್ಕಿದ್ದು ಹೇಗೆ: ಕೊಲೆಯಾದ ಸಿದ್ದಲಿಂಗಪ್ರಭು ಅವರು ಕೆಂಗೇರಿ ಬಳಿಯ ಶಿರ್ಕೆ ಅಪಾರ್ಟ್‌ಮೆಂಟ್ ಹತ್ತಿರದ ಬಾರ್ ವೊಂದರಲ್ಲಿ ನಿತ್ಯ ಮದ್ಯಪಾನ ಮಾಡುತ್ತಿದ್ದರು ಎಂಬು ವಿಷಯ ತಿಳಿದ ಪೊಲೀಸರು ಆ ಬಾರ್‌ಗೆ ಹೋಗಿ ವಿಚಾರಣೆ ನಡೆಸಿದ್ದಾರೆ.ಕೊಲೆಯಾದ ದಿನ ಪ್ರಭು ಬಾರ್‌ಗೆ ಬಂದಿದ್ದನ್ನು ಕ್ಯಾಷಿಯರ್ ಮತ್ತು ಸಪ್ಲೇಯರ್ ಖಚಿತಪಡಿಸಿದ್ದಾರೆ. ಅಲ್ಲದೆ ಆತನ ಸಂಬಂಧಿ ಪ್ರಕಾಶ್ ಮತ್ತು ಸಹಚರರು ಪ್ರಭು ಅವರನ್ನು ಕಾರಿನಲ್ಲಿ ಕರೆದೊಯ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದರು ಎಂದು ತಿಳಿದು ಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.