ಭಾನುವಾರ, ಏಪ್ರಿಲ್ 18, 2021
33 °C

ಸುಬ್ರಹ್ಮಣ್ಯಪುರದಲ್ಲಿ ನಡೆದ ಘಟನೆ:ಅತ್ತೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ತೆಯನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಸುಬ್ರಹ್ಮಣ್ಯಪುರದಲ್ಲಿ ಮಂಗಳವಾರ ನಡೆದಿದೆ. `ಬೆಳಿಗ್ಗೆ ತಲಘಟ್ಟಪುರದಲ್ಲಿ ಪತ್ನಿಯ ಪ್ರಿಯಕರ ಅನಿಲ್ ಎಂಬಾತನನ್ನೂ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದೇನೆ~ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ.ಅಮೃತನಗರ ಬಳಿಯ ನ್ಯೂಬ್ಯಾಂಕ್ ಕಾಲೊನಿಯ ನಿವಾಸಿ ಕಮಲಮ್ಮ (50) ಕೊಲೆಯಾದವರು. ಆರೋಪಿ ಲೋಕೇಶ್ (25) ಪೊಲೀಸರ ವಶದಲ್ಲಿದ್ದಾನೆ. ಮಧ್ಯಾಹ್ನ  ಮೂರು ಗಂಟೆ ಸುಮಾರಿಗೆ ಕಮಲಮ್ಮ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಲೋಕೇಶ್, ಠಾಣೆಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದನು. ಆತ ನೀಡಿದ ಮಾಹಿತಿಯಿಂದ ಆತನನ್ನು ಬಂಧಿಸಲಾಯಿತು. `ಬೆಳಿಗ್ಗೆ ತಲಘಟ್ಟಪುರದಲ್ಲಿ ಪತ್ನಿಯ ಪ್ರಿಯಕರ ಅನಿಲ್ ಎಂಬಾತನನ್ನೂ ಕೊಲೆ ಮಾಡಿದ್ದೇನೆ~ ಎಂದು ಲೋಕೇಶ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.ಆರೋಪಿ ತಾನು ಸುಬ್ರಹ್ಮಣ್ಯನಗರದ ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ವೊಬ್ಬರ ಮಗ ಎಂದು ಹೇಳಿಕೊಂಡಿದ್ದಾನೆ. ಅನಿಲ್‌ನನ್ನು ಕೊಲೆ ಮಾಡಿ, ಶವವನ್ನು ತಲಘಟ್ಟಪುರದ ತುರಹಳ್ಳಿ ಅರಣ್ಯಪ್ರದೇಶದಲ್ಲಿ ಸುಟ್ಟು ಹಾಕಿರುವುದಾಗಿ ಹೇಳಿದ್ದಾನೆ.ಆದ್ದರಿಂದ ಸುಬ್ರಹ್ಮಣ್ಯಪುರ ಮತ್ತು ತಲಘಟ್ಟಪುರ ಠಾಣೆಯ ಸಿಬ್ಬಂದಿ ಲೋಕೇಶ್‌ನನ್ನು ಕರೆದುಕೊಂಡು ಅನಿಲ್ ಶವದ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.`ಕೋಣನಕುಂಟೆಯ ಹರಿನಗರದ ನಿವಾಸಿಯಾದ ಲೋಕೇಶ್, ಐದು ವರ್ಷದ ಹಿಂದೆ ಕಮಲಮ್ಮ ಅವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಗಗನ್ ಎಂಬ ಮೂರು ವರ್ಷದ ಗಂಡು ಮಗುವಿದೆ. ಲೋಕೇಶ್ ಯಾವುದೇ ಕೆಲಸಕ್ಕೆ ಹೋಗದ ಕಾರಣ ಚಂದ್ರಿಕಾ ಮತ್ತು ಕುಟುಂಬ ಸದಸ್ಯರು ಆತನೊಂದಿಗೆ ಜಗಳವಾಡುತ್ತಿದ್ದರು. ಇದರಿಂದ ಚಂದ್ರಿಕಾ ಪತಿಯಿಂದ ವಿಚ್ಛೇದನ ಪಡೆಯುವ ಯತ್ನದಲ್ಲಿದ್ದರು~ ಎಂದು ಪೊಲೀಸರು ಹೇಳಿದ್ದಾರೆ.ಮಗಳು ಉಳಿದು ತಾಯಿ ಬಲಿ

`ಐದು ತಿಂಗಳ ಹಿಂದೆ ಚಂದ್ರಿಕಾ ಅವರನ್ನು ಕೊಲೆ ಮಾಡಲು ಯತ್ನಿಸಿದ್ದ. ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಚಂದ್ರಿಕಾ ಗಾಯಗೊಂಡಿದ್ದರು. ಇಂದು ಸಹ ಆಕೆಯನ್ನೇ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಬಂದಿರಬಹುದು. ಆದರೆ, ಆಕೆ ಮಾಗಡಿ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರಿಂದ ತಾಯಿ ಬಲಿಯಾದಳು~ ಎಂದು ಎಸ್.ಸ್ವಾಮಿ ತಿಳಿಸಿದರು.`ಲೋಕೇಶ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅಷ್ಟಕ್ಕೂ ಅನಿಲ್ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಯನ್ನು ಕೊಲೆ ಮಾಡಿದ್ದು, ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದ್ದಿದ್ದರಿಂದ ಅನಿಲ್‌ನನ್ನು ಕೊಲೆ ಮಾಡಿದ್ದಾಗಿ ಆತ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರುವಾದುದು~ ಎಂದು ಅವರು ಹೇಳಿದ್ದಾರೆ.ದಾಂಧಲೆ ಮಾಡಿದ್ದ

`ಮಧ್ಯಾಹ್ನ ನಿಮ್ಮ ಮನೆಗೆ ಬಂದು ಮನೆ ಸಾಮನುಗಳನ್ನು ಕೊಂಡೊಯ್ಯುತ್ತೇನೆ ಎಂದು ಲೋಕೇಶ್ ಕರೆ ಮಾಡಿದ್ದ. ಆತನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನ್ನ ತಾಯಿ ಎರಡು ಗಂಟೆ ಸುಮಾರಿಗೆ ಕರೆ ಮಾಡಿ ಲೋಕೇಶ್ ಮನೆಗೆ ಬಂದು ಅಲ್ಮೇರಾದ ಕೀಗಳನ್ನು ಕೇಳುತ್ತಿದ್ದಾನೆ.ಚಿನ್ನಾಭರಣ ನೀಡುವಂತೆ ದಾಂಧಲೆ ಮಾಡುತ್ತಿದ್ದಾನೆ ಎಂದು ಹೇಳಿದರು. ಆದರೆ, ಹತ್ತು ನಿಮಿಷಗಳ ನಂತರ ತಾಯಿಗೆ ಕರೆ ಮಾಡಿದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು~ ಎಂದು ಕಮಲಮ್ಮ ಅವರ ದತ್ತು ಪುತ್ರ ಎಸ್. ಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.ಮುಖ್ಯಾಂಶಗಳು

ಪತ್ನಿಯ ಪ್ರಿಯಕರ ಅನಿಲ್‌ನನ್ನೂ ಕೊಲೆ ಮಾಡಿದ್ದೇನೆ ಎಂದ ಆರೋಪಿ

ಅನಿಲ್‌ನ ಶವಕ್ಕಾಗಿ ಪೊಲೀಸರ ಶೋಧ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.