ಶುಕ್ರವಾರ, ಜೂಲೈ 3, 2020
22 °C

ಸೈಬರ್ ಅಪರಾಧ: ಪ್ರತ್ಯೇಕ ನ್ಯಾಯಮಂಡಳಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಬರ್ ಅಪರಾಧ: ಪ್ರತ್ಯೇಕ ನ್ಯಾಯಮಂಡಳಿ ಅಗತ್ಯ

ಬೆಂಗಳೂರು: ‘ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಐಟಿ ನಗರಿ ಬೆಂಗಳೂರಿನಲ್ಲಿ ಪ್ರತ್ಯೇಕ ನ್ಯಾಯಮಂಡಳಿ ಪೀಠವನ್ನು ಸ್ಥಾಪಿಸುವ ಅಗತ್ಯವಿದೆ. ಇದು ಸಾಧ್ಯವಾದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸೈಬರ್ ಅಪರಾಧ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಅನುಕೂಲವಾಗುತ್ತದೆ’ ಎಂದು ಕೇಂದ್ರ ಸೈಬರ್ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ರಾಜೇಶ್ ಟಂಡನ್ ಅಭಿಪ್ರಾಯಪಟ್ಟರು.ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಂಗಳೂರು ಸೈಬರ್ ಭದ್ರತಾ ಶೃಂಗಸಭೆಯ 2ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.‘ಪ್ರತಿಯೊಂದು ಸಣ್ಣಪುಟ್ಟ ಸೈಬರ್ ಅಪರಾಧ ಪ್ರಕರಣಗಳ ಇತ್ಯರ್ಥಕ್ಕಾಗಿ ದಕ್ಷಿಣ ಭಾಗದಲ್ಲಿರುವ ಜನರು ದೆಹಲಿಗೆ ಹೋಗಬೇಕಿದೆ. ಹಾಗಾಗಿ ಬೆಂಗಳೂರಿನಲ್ಲೇ ನ್ಯಾಯಮಂಡಳಿ ಸ್ಥಾಪಿಸಿದರೆ ಈ ಭಾಗದ ಜನರಿಗೆ ಉಪಯುಕ್ತವಾಗಲಿದೆ.ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಧೀಕರಣ ಅಧಿಕಾರಿಗೆ ಹೆಚ್ಚಿನ ಅಧಿಕಾರಿ ನೀಡಿ, ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾದ ಅಗತ್ಯವಿದೆ’ ಎಂದರು.‘ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಪರಿಣಾಮ ಸೈಬರ್ ಭಯೋತ್ಪಾದನೆ, ಅಪರಾಧಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಹಣದ ವಹಿವಾಟು ನಡೆಸುವ ಜನರನ್ನು ವಂಚಿಸಿ ಕಿಡಿಗೇಡಿಗಳು ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಇದನ್ನು ತಡೆಯಲು ಜನರು ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ತಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶಿವಕುಮಾರ್ ಮಾತನಾಡಿ, ‘ಹ್ಯಾಕಿಂಗ್ ಮೂಲಕ ದುಷ್ಕರ್ಮಿಗಳು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಟ್ಟಿರುವ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಅಲ್ಲದೇ ವೈರಸ್ ಮೂಲಕ ಪ್ರಮುಖ ದಾಖಲೆಗಳನ್ನು ನಾಶ ಪಡಿಸುವ ಕೃತ್ಯವನ್ನೂ ಎಸಗುತ್ತಿದ್ದಾರೆ. ಆದ ಕಾರಣ ಸೈಬರ್ ಕಾನೂನನ್ನು ಬಲಪಡಿಸಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.