ಭಾನುವಾರ, ಜೂಲೈ 12, 2020
25 °C

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಬೀದರ್: ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಅವಿರೋಧ ಆಯ್ಕೆ ನಡೆಯಿತು.ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕೋಹಿನೂರ ಕ್ಷೇತ್ರದ ಸದಸ್ಯೆ ಸಂಗೀತಾ ಮಾಧವರಾವ ಪಾಟೀಲ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ದಾಬಕಾ ಕ್ಷೇತ್ರದ ರಾಜಶ್ರೀ ಸತೀಶ ಪಾಟೀಲ್ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಬೇಮಳಖೇಡ ಕ್ಷೇತ್ರದ ಪ್ರಭುಶೆಟ್ಟಿ ಮೆಂಗಾ ಆಯ್ಕೆಯಾದರು.ಜಿಲ್ಲಾ ಪಂಚಾಯಿತಿಯಲ್ಲಿ 31 ಸ್ಥಾನಗಳ ಪೈಕಿ 18 ಸ್ಥಾನಗಳೊಂದಿಗೆ ಬಿಜೆಪಿ ಆಡಳಿತದ ಸೂತ್ರ ಹಿಡಿದಿದೆ. ಸ್ಥಾಯಿ ಸಮಿತಿಯ ಚುನಾವಣೆಯಲ್ಲಿ ನಾಲ್ವರು ಪಕ್ಷೇತರರು ಕೂಡ ಬೆಂಬಲಿಸಿದ್ದರಿಂದ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.ಪಕ್ಷಕ್ಕೆ ಬೆಂಬಲಿಸಿದ ಪಕ್ಷೇತರ ಸದಸ್ಯ ರವೀಂದ್ರ ರೆಡ್ಡಿ, ವೀರಣ್ಣ ಪಾಟೀಲ್, ಮಹಾಂತಯ್ಯ ತೀರ್ಥಾ ಹಾಗೂ ಚಂದ್ರಮ್ಮ ದುಬಲಗುಂಡಿ ಅವರನ್ನು ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಚುನಾವಣೆ ಅಧಿಕಾರಿಯಾಗಿದ್ದರು.ಪಕ್ಷದ ಕಚೇರಿಯಲ್ಲಿ ಮೂವರು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಸತ್ಕರಿಸಲಾಯಿತು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಘುನಾಥ ಮಲ್ಕಾಪುರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಉಪಾಧ್ಯಕ್ಷ ತಾನಾಜಿ ರಾಠೋಡ್, ಔರಾದ್ ಶಾಸಕ ಪ್ರಭು ಚವ್ಹಾಣ್, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ವಕ್ತಾರ ಬಸವರಾಜ ಪವಾರ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಮದಕಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ. ಶೈಲೇಂದ್ರ ಬೆಲ್ದಾಳೆ, ಚಂದ್ರಶೇಖರ ಪಾಟೀಲ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಣಪತಿ ರಾಠೋಡ್  ಇದ್ದರು.

ಪಕ್ಷೇತರ ಸದಸ್ಯ ಬಿಜೆಪಿಗೆ: ನಾರಾಯಣಪುರ ಕ್ಷೇತ್ರದ ಪಕ್ಷೇತರ ಸದಸ್ಯ ರವೀಂದ್ರ ರೆಡ್ಡಿ  ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.