ಬುಧವಾರ, ಏಪ್ರಿಲ್ 21, 2021
33 °C

ಹತ್ತಿರ ಬರುತ್ತಿರುವ ಚುನಾವಣೆ: ಜನರ ಆರೋಗ್ಯದತ್ತ ದಿಢೀರ್ ಕಾಳಜಿ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಜನರ ಆರೋಗ್ಯ ರಕ್ಷಣೆ ಕುರಿತು ದಿಢೀರನೇ ಕಾಳಜಿ ವ್ಯಕ್ತವಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಜನರ ಆರೋಗ್ಯದ ಕಡೆ ಹೆಚ್ಚಿನ ಕಳಕಳಿ ಕಂಡುಬರುತ್ತಿದೆ.ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಸಹಯೋಗದಲ್ಲಿ ಸ್ಥಳೀಯ ಸೇವಾ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಹೋಬಳಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಆಯೋಜಿಸುತ್ತಿವೆ. ಚಿಕಿತ್ಸೆ ಪಡೆಯುವಂತೆ ಭಾರಿ ಪ್ರಚಾರ ಕೂಡ ಮಾಡಲಾಗುತ್ತಿದೆ.ಶಿಬಿರಕ್ಕೆ ಚಾಲನೆ ನೀಡಲು ಜಿಲ್ಲಾಮಟ್ಟದ ಮುಖಂಡರಷ್ಟೇ ಅಲ್ಲ, ರಾಜ್ಯಮಟ್ಟದ ಮುಖಂಡರು ಕೂಡ ಆಗಮಿಸುತ್ತಿದ್ದಾರೆ. `ಆರೋಗ್ಯದ ಕುರಿತು ಆತಂಕ ಬೇಡ~ ಎಂದು ಸಲಹೆ ನೀಡುವ ಇಂಥವರು, ಭಾರಿ ಸಭೆ-ಸಮಾರಂಭದೊಂದಿಗೆ ಆರೋಗ್ಯ ತಪಾಸಣೆ ಶಿಬಿರಗಳಿಗೆ ಚಾಲನೆ ನೀಡಿ ಗ್ರಾಮಸ್ಥರತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಡಾ.ಕೆ.ಸುಧಾಕರ್ ಅವರು ಈಗಾಗಲೇ ದಿಬ್ಬೂರು ಮತ್ತು ಮಂಚೇನಹಳ್ಳಿಯಲ್ಲಿ ತಪಾಸಣೆ ಶಿಬಿರಗಳನ್ನು ನಡೆಸಿದ್ದು, ಇತ್ತೀಚೆಗಷ್ಟೆ ಮಂಡಿಕಲ್ ಮತ್ತು ಪೆರೇಸಂದ್ರದಲ್ಲೂ ಶಿಬಿರ ಆಯೋಜಿಸಿದ್ದರು. ಮಂಡಿಕಲ್ ಶಿಬಿರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಚಾಲನೆ ನೀಡಿದರೆ, ಪೆರೇಸಂದ್ರದ ಶಿಬಿರವನ್ನು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಉದ್ಘಾಟಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಶಿಬಿರದ ಆಯೋಜಕರನ್ನು ಹಾಡಿ ಹೊಗಳಿದರೆ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು `ಡಾ.ಕೆ.ಸುಧಾಕರ್ ಅವರ ಸಮಾಜಸೇವೆ ಬಗ್ಗೆ ರಾಜ್ಯವಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ~ ಎಂದು ಹೇಳಿದ್ದರು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಮುಖಂಡರು ಕೂಡ ತಪಾಸಣೆ ಶಿಬಿರವನ್ನು ಸಾಧನೆ ಎಂಬಂತೆ ಶ್ಲಾಘಿಸಿದ್ದರು.ಇದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಆರೋಗ್ಯ ತಪಾಸಣಾ ಶಿಬಿರದತ್ತ ಒಲವು ತೋರಿದ್ದು, ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಟ್ಟದಲ್ಲಿ ಶಿಬಿರಗಳನ್ನು ಆರಂಭಿಸಿದೆ. ಮೊದಲ ಪ್ರಯತ್ನವಾಗಿ ತಿಪ್ಪೇನಹಳ್ಳಿಯಲ್ಲಿ ಭಾನುವಾರ ನೇತ್ರ ತಪಾಸಣೆ ಶಿಬಿರ ನಡೆಯಿತು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ಚಾಲನೆ ನೀಡಿ, ಶಿಬಿರದ ಸದ್ಬಳಕೆಗೆ ಸಲಹೆ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡ ಮುಖಂಡರು, `ಕಾಂಗ್ರೆಸ್ ವತಿಯಿಂದ ಶಿಬಿರ ನಡೆದಿರುವುದು ಸಂತಸದಾಯಕ. ಕಾಂಗ್ರೆಸ್ ಅಧ್ಯಕ್ಷರೇ ಖರ್ಚುವೆಚ್ಚ ನಿಭಾಯಿಸಿರುವುದು ಶ್ಲಾಘನೀಯ~ ಎಂದರು. `ಮೊದಲೆಲ್ಲ ಆರೋಗ್ಯ ತಪಾಸಣಾ ಶಿಬಿರಗಳು ಅಪರೂಪಕ್ಕೆ ಒಂದು ಅಥವಾ ಎರಡು ನಡೆಯುತ್ತಿದ್ದವು. ಭಾರಿ ಪ್ರಚಾರ ಇರುತ್ತಿರಲಿಲ್ಲ. ಬೃಹತ್ ಸಭೆ-ಸಮಾರಂಭಗಳು ಕೂಡ ನಡೆಯುತ್ತಿರಲಿಲ್ಲ. ನಮ್ಮ ಪಾಡಿಗೆ ನಾವು ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗಳಿಗೆ ಹೊರಡುತ್ತಿದ್ದೆವು.ಆದರೆ ಈಗ ಭಾರಿ ಪ್ರಮಾಣದಲ್ಲಿ ಶಿಬಿರಗಳು ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗೂ ರಾಜಕೀಯಕ್ಕೂ ಸಂಬಂಧವಿದೆಯೊ ಇಲ್ವೊ ಗೊತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಶಿಬಿರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮಾತ್ರ ದಿಟ~ ಎಂದು ಶಿಬಿರದಲ್ಲಿ ಪಾಲ್ಗೊಂಡ ವೃದ್ಧರೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.