ಮಂಗಳವಾರ, ಜೂಲೈ 7, 2020
28 °C

ಹಳ್ಳಿಗಳಿಗೂ ಸೌರಬೆಳಕು

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ಹಳ್ಳಿಗಳಿಗೂ ಸೌರಬೆಳಕು

‘ಆಕಳ ಸಗಣಿಯಿಂದ ವಿದ್ಯುತ್ ಉತ್ಪಾದಿಸಬಹುದು’. ವಿಜ್ಞಾನ  ಶಿಕ್ಷಕರು ಪಾಠ ಮಾಡುತ್ತಿದ್ದರೆ 10ನೇ ತರಗತಿಯ ಈ ವಿದ್ಯಾರ್ಥಿಯ ತಲೆ ತುಂಬಾ ಇದೇ ಗುಂಗು. ಮನೆಯ ಮುಂದಿನ ಕೊಟ್ಟಿಗೆ. ಅದರೊಳಗೆ ನಿಂತಿರುವ ಆಕಳು, ಅದರ ಸಗಣಿ, ಸಗಣಿಯಿಂದ ಸೃಷ್ಟಿಯಾಗುವ ವಿದ್ಯುತ್..! ವ್ಹಾಹ್..! ಎಲ್ಲವೂ ಒಂದು ಅದ್ಭುತ ಲೋಕದಂತೆ ವಿದ್ಯಾರ್ಥಿಗೆ ಅನಿಸತೊಡಗಿತು.. ಶಾಲೆಯ  ಗಂಟೆ ಬಾರಿಸಿದ್ದೇ ತಡ.. ಮನೆಯ ಕಡೆ ಮಿಂಚಿನ ಓಟ...ಮುಂದಿನದು ವಿದ್ಯುತ್ ಉತ್ಪಾದನೆ  ಪ್ರಯೋಗ..ಹೀಗೆ ಆಡುವ ವಯಸ್ಸಿನಲ್ಲಿ ತಲೆಯ ತುಂಬಾ ವಿದ್ಯುತ್ ಉತ್ಪಾದನೆಯ ಗುಂಗನ್ನು ಹತ್ತಿಸಿಕೊಂಡಿದ್ದ ಈ ಬಾಲಕನ ಹೆಸರು ನೀಲವಣ್ಣನ್. ಚಿಕ್ಕಂದಿನಿಂದಲೂ ಕೆಟ್ಟು ಹೋದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಿಚ್ಚಿ ಜೋಡಿಸುವ     ಹವ್ಯಾಸ. ಉಪಕರಣಗಳ ಬಿಡಿಭಾಗಗಳನ್ನು ಬಿಚ್ಚುತ್ತಾ, ತನಗೆ ತಿಳಿಯದ ಮತ್ತೊಂದು ಲೋಕದ ವಿಸ್ಮಯವನ್ನು ನೋಡುತ್ತಾ ಬೆಳೆದ ಈ ಬಾಲಕ ಕೊನೆಗೂ ಸಗಣಿಯಿಂದ ವಿದ್ಯುತ್ ಕಂಡುಹಿಡಿದೇ ಬಿಟ್ಟ. ನೀಲವಣ್ಣನ್ ತಯಾರಿಸಿದ ‘ಕೌಡನ್ ಬ್ಯಾಟರಿ’ಗೆ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಮೊದಲ ಪ್ರಶಸ್ತಿ.ತಮ್ಮ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿಕೊಂಡರು ನೀಲವಣ್ಣನ್. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಎನ್‌ಜಿಒ ಹಾಲ್‌ನಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್ ಆಯೋಜಿಸಿದ್ದ ಗೃಹ ಉದ್ಯಮ ಮೇಳಕ್ಕೆ ಬಂದಿದ್ದರು.  ಎದುರಿಗಿದ್ದ  ಸೌರಶಕ್ತಿ ದೀಪ, ಫಲಕಗಳನ್ನು ತೋರಿಸಿ  ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಸೌರಶಕ್ತಿ ಉಪಕರಣಗಳನ್ನು ಪೂರೈಸುವ ತಮ್ಮ ಪುಟ್ಟ ಕನಸು ವಿವರಿಸಿದರು.ನೀಲವಣ್ಣನ್ ಮತ್ತು ಪತ್ನಿ ಉಮಾಮಣಿ ಇಬ್ಬರೂ ಎಲೆಕ್ಟ್ರಾನಿಕ್ಸ್ ಪದವೀಧರರು. ‘ಪ್ರಕೃತಿ ಸೋಲಾರ್ಸ್‌’ ಹೆಸರಿನಡಿ, ಸೌರಶಕ್ತಿ ಚಾಲಿತ ವಿದ್ಯುತ್ ಎಲ್‌ಇಡಿ ದೀಪ, ಕಂದೀಲು, ಸೌರಫಲಕ, ‘ಯುಪಿಎಸ್’ಗಳನ್ನು ತಯಾರಿಸಿ ಹಳ್ಳಿಗಳಿಗೆ ತೆರಳಿ  ಮಾರಾಟ ಮಾಡುತ್ತಾರೆ. ಸಾಂಪ್ರದಾಯಿಕ ವಿದ್ಯುತ್ ಹಾಗೂ ಸೌರಶಕ್ತಿ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲ ವಿದ್ಯುತ್ ಪರಿವರ್ತಕಗಳನ್ನು (inverter)  ತಯಾರಿಸಿಸುತ್ತಾರೆ. ತಾವೆ, ಅರಸೀಕೆರೆ, ಮಂಡ್ಯ, ಮದ್ದೂರು, ಹೊಸಕೋಟೆ ಮುಂತಾದ ಪ್ರದೇಶಗಳ ಗ್ರಾಮೀಣ ಭಾಗಗಳಿಗೆ ತೆರಳಿ ಜನರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ‘ಎಲ್‌ಇಡಿ’ ಸೌರ ದೀಪ, ಕಂದೀಲುಗಳಿಗೆ 3 ವರ್ಷ ದವರೆಗೆ (50 ಸಾವಿರ ಗಂಟೆ ಬೆಳಗುವ ಸಾಮರ್ಥ್ಯ) ಖಾತ್ರಿ ಕೊಡುತ್ತಾರೆ.   ಸಣ್ಣ ಪುಟ್ಟ ದುರಸ್ತಿ ಬಂದರೆ ತಾವೆ ನಿರ್ವಹಣೆ ಮಾಡುತ್ತಾರೆ. ತಾವು ಮಾರಿರುವ ಒಂದೇ ಒಂದು ಉಪಕರಣದಲ್ಲೂ ಲೋಪ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ನೀಲವಣ್ಣನ್. ಗ್ರಾಮೀಣ ಪ್ರದೇಶದ ಬಡವರಿಗೆ ವಿಶೇಷವಾಗಿ ವಿದ್ಯುತ್ ಸಮಸ್ಯೆ ಇರುವ ಹಳ್ಳಿಗಾಡಿನ  ಪ್ರದೇಶಗಳ ಜನರಿಗೆ ಸೌರಶಕ್ತಿ ಉಪಕರಣಗಳು ತುಂಬಾ ನೆರವಿಗೆ ಬರುತ್ತವೆ. ಒಮ್ಮಲೆ ದುಡ್ಡು ಕೊಟ್ಟು ಖರೀದಿಸುವ ಸಾಮರ್ಥ್ಯ ಇಲ್ಲದವರಿಗೆ ಕಂತುಗಳ ಮೂಲಕ ಪಾವತಿಸುವ ಸೌಲಭ್ಯವೂ ಇದೆ ಎನ್ನುತ್ತಾರೆ. ಇಡೀ ಮನೆ ಬಳಕೆಗೆ ಸಾಕಾಗುವ 1000 ವಾಟ್ ಸಾಮರ್ಥ್ಯದ ಸೋಲಾರ್ ಇನ್ವರ್ಟ್‌ರ್‌ಗಳನ್ನು 20 ಸಾವಿರ ವೆಚ್ಚದೊಳಗೆ ಅಳವಡಿಸಿಕೊಡುತ್ತಾರೆ. ಒಮ್ಮೆ ಈ ಉಪಕರಣಗಳಿಗೆ ಹಣಪಾವತಿಸಿದರೆ ನಂತರ ಜೀವನಪೂರ್ತಿ ವಿದ್ಯುತ್ ಬಿಲ್ ಪಾವತಿಸುವ  ಸಮಸ್ಯೆ ತಪ್ಪುತ್ತದೆ, ಎಷ್ಟೊಂದು ದೊಡ್ಡ ಪ್ರಮಾಣದ ವಿದ್ಯುತ್ ಉಳಿಸಬಹುದು ಎನ್ನುತ್ತಾರೆ ಅವರು.2020ರ ಒಳಗಾಗಿ ದೇಶದಲ್ಲಿ 20 ಸಾವಿರ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಕೇಂದ್ರ ಹೊಂದಿದೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿದೆ. ಆದರೆ, ಇದು ದೊಡ್ಡ ಪ್ರಯತ್ನ. ‘ನಾವು ಮಾಡುತ್ತಿರುವ ಸಣ್ಣ ಪ್ರಮಾಣದ ಇಂತಹ ಪ್ರಯತ್ನಗಳಿಗೆ ಹೆಚ್ಚಿನ ಬಂಡವಾಳ ಬೇಕಾಗಿಲ್ಲ ಮತ್ತು ಕಡಿಮೆ  ಮಾನವ ಶಕ್ತಿ ಸಾಕು.  ಗ್ರಾಮೀಣ ಭಾಗದಲ್ಲಿ ಆಸಕ್ತಿ ಇರುವವರಿಗೆ ಇಂತಹ ಸೌರಶಕ್ತಿ ಉಪಕರಣಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ತರಬೇತಿ ನೀಡುವ ಆಸಕ್ತಿಯೂ ಇದೆ ಎನ್ನುತ್ತಾರೆ  ಈ ದಂಪತಿ. ಭವಿಷ್ಯದ ಇಂಧನ ಸಮಸ್ಯೆ ಮತ್ತು   ಈಗಿನ ವಿದ್ಯುತ್ ವ್ಯತ್ಯಯವನ್ನು ಗಮನಿಸಿದರೆ ಸೌರಶಕ್ತಿ ಆಯ್ಕೆ ಈಗಿನ ಅಗತ್ಯ ಮತ್ತು ಅನಿವಾರ್ಯ ಎನಿಸುತ್ತದೆ. ವಿಂಡ್ ಮೋಟಾರ್: 100 ರಿಂದ 200 ಅಡಿ ಆಳವಿರುವ ಬಾವಿಯಿಂದ ನೀರೆತ್ತಲು ಸಹಾಯಕವಾಗುವಂತ  ‘ವಿಂಡ್ ಮೋಟಾರ್’ ಒಂದನ್ನು ಅಭಿವೃದ್ಧಿಪಡಿಸುವ ಯೋಜನೆ ನೀಲವಣ್ಣನ್ ಮುಂದಿದೆ. 50 ಸಾವಿರ ವೆಚ್ಚದ ಒಳಗೆ ಇಂತಹ ಮೋಟಾರ್‌ಗಳನ್ನು ಅಭಿವೃದ್ಧಿ ಪಡಿಸಿ ಕಡಿಮೆ ದರದಲ್ಲಿ ರೈತರಿಗೆ ನೀಡಬಹುದು ಎನ್ನುವ ಯೋಜನೆ ಅವರದು. ಇದರ ಜತೆಗೆ ತ್ಯಾಜ್ಯವನ್ನು ಬಳಸಿಕೊಂಡು 3ರಿಂದ 10 ಗಂಟೆಗಳ ಕಾಲ ಉರಿಯಬಲ್ಲ ಜೈವಿಕ ಗ್ಯಾಸ್ ತಯಾರಿಸುವ ಬಗ್ಗೆಯೂ ಅವರು ಚಿಂತಿಸುತ್ತಿದ್ದಾರೆ.ನಮ್ಮ ಹಳ್ಳಿಗಳ ಬೇಡಿಕೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ದಂಪತಿ ಮಾಡುತ್ತಿರುವ ಕಾರ್ಯ  ಪುಟ್ಟ ಪ್ರಯತ್ನದಂತೆ ಕಂಡರೂ, ಇದರ ಹಿಂದಿನ ಆಶಯ ಮಾತ್ರ ದೊಡ್ಡದು. ತಿಂಗಳಿಗೆ 2ರಿಂದ 3 ಲಕ್ಷ ವಹಿವಾಟು ನಡೆಸುವ ನೀಲವಣ್ಣನ್ ಸೌರಶಕ್ತಿ ಉಪಕರಣಗಳ ತಯಾರಿ, ನಿರ್ವಹಣೆ ಬಗ್ಗೆ ಕಳೆದ 20 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ. ಮಾಹಿತಿಗೆ ಪ್ರಕೃತಿ ಸೋಲಾರ್ಸ್‌: 95908 72240

     

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.