ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ತಂಡಕ್ಕೆ ಶುಭ ಹಾರೈಸಬೇಕು...

Last Updated 16 ಸೆಪ್ಟೆಂಬರ್ 2020, 13:54 IST
ಅಕ್ಷರ ಗಾತ್ರ

ಗದುಗಿನ ಬೇನು ಬಾಳು ಭಾಟ್ ಅವರಿಗೀಗ ವಯಸ್ಸು 75 ದಾಟಿದೆಯೆಂದು ಕಾಣುತ್ತದೆ. ಬಾಲ್ಯದಲ್ಲಿಯೇ ಅವರಿಗೆ ಹಿಡಿದ ಹಾಕಿ ಆಟದ ಹುಚ್ಚು ಇನ್ನೂ ಬಿಟ್ಟಿಲ್ಲ. ಒಲಿಂಪಿಕ್ಸ್‌ನಲ್ಲಿ ಆಡುವ ಅವರ ಕನಸು ದುಡ್ಡಿಲ್ಲದೇ ನನಸಾಗಲಿಲ್ಲ ಎಂಬ ಕೊರಗು ಅವರನ್ನು ಈಗಲೂ ಕಾಡುತ್ತಿದೆಯಾದರೂ ಆಟದ ಮೇಲಿನ ಮೋಹ ಮಾತ್ರ ಮರೆಯಾಗಿಲ್ಲ. ಈಗಲೂ ಹಾಕಿ ಆಡಲು ಬಯಸುವ ಹುಡುಗರಿಗೆ ಆಟದ ಕೌಶಲವನ್ನು ಹೇಳಿಕೊಡುತ್ತಾರೆ.

ಬ್ರಿಟಿಷರಿಂದ ಬಳುವಳಿಯಾಗಿ ಪಡೆದ ಹಾಕಿ ಆಟವನ್ನು ಸೆಟಲ್‌ಮೆಂಟ್ ಹುಡುಗರು ಆಡುತ್ತಿರುವರಾದರೂ ಮೊದಲಿನ ಆಸಕ್ತಿ ಉಳಿದಿಲ್ಲ. ಹಾಕಿ ಮೈದಾನದಲ್ಲಿ ಕ್ರಿಕೆಟ್ ಆಟವೇ ಹೆಚ್ಚು ಕಾಣುತ್ತದೆ. ಇದೇ ಸೆಟಲ್‌ಮೆಂಟ್‌ನಿಂದ ಬಂದ ಬೇನು ಅವರಿಗೆ ದಿನಕ್ಕೊಮ್ಮೆಯಾದರೂ ಹಾಕಿ ಸ್ಟಿಕ್ ಕೈಯಲ್ಲಿ ಹಿಡಿದುಕೊಳ್ಳದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತದೆ.

ಸರಿಯಾಗಿ 48 ವರ್ಷಗಳ ಹಿಂದೆ ಅವರ ಕಿಸೆಯಲ್ಲಿ ಏಳು ಸಾವಿರ ರೂಪಾಯಿಗಳು ಇದ್ದಿದ್ದರೆ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿರುತ್ತಿದ್ದರು. ಆದರೆ ಆಟದಲ್ಲಿ ಶ್ರೀಮಂತನಾಗಿದ್ದರೂ ಬದುಕಿನಲ್ಲಿ ಬಡವನಾಗಿದ್ದ ಬೇನು ಟೋಕಿಯೊ ವಿಮಾನ ಹತ್ತಲಿಲ್ಲ. ಆ ಬೇಸರದಲ್ಲೇ ವರುಷಗಳು ಉರುಳಿ ಹೋದವು.

ಆದರೂ ಒಲಿಂಪಿಕ್ಸ್ ಬಂತೆಂದರೆ ಬೇನು ಯುವಕನಾಗಿಬಿಡುತ್ತಾನೆ. ಭಾರತ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಟಿವಿ ಮುಂದೆ ಕುಳಿತುಕೊಳ್ಳುತ್ತಾನೆ. ಮುಂದಿನ ತಿಂಗಳು ಲಂಡನ್‌ನಲ್ಲಿ ಆರಂಭವಾಗುವ ಒಲಿಂಪಿಕ್ಸ್‌ನ ಹಾಕಿ ಪಂದ್ಯಗಳನ್ನು ನೋಡಲು ಯಾರು ತಪ್ಪಿದರೂ ಬೇನು ಮಾತ್ರ ತಪ್ಪುವುದಿಲ್ಲ.

ಬೇನು ಅವರ ಈ ಕಥೆ ಹೊಸತೇನಲ್ಲ. ಐವತ್ತು-ಅರವತ್ತರ ದಶಕದಲ್ಲಿ ಹಲವು ವರ್ಷಗಳ ಕಾಲ ರೈಲ್ವೇ ತಂಡದಲ್ಲಿ ಆಡಿದ್ದ ಅವರು 1963-64 ರಲ್ಲಿ ಶ್ರೀಲಂಕಾ ಪ್ರವಾಸವನ್ನೂ ಕೈಕೊಂಡಿದ್ದರು. 1964 ರ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಅವರಲ್ಲಿತ್ತು. ಆದರೆ ಹಾಕಿ ಫೆಡರೇಷನ್ ಅಧಿಕಾರಿಗಳು ಏಳು ಸಾವಿರ ರೂಪಾಯಿ ಕೊಡುವಂತೆ ಕೇಳಿದರು. ಆದರೆ ಇವರ ಬಳಿ ಅಷ್ಟೊಂದು ಹಣ ಇರಲಿಲ್ಲ. ತಂಡದಲ್ಲಿ ಸ್ಥಾನ ಸಿಗಲಿಲ್ಲ.

ಭಾರತ ಫೈನಲ್‌ನಲ್ಲಿ ಪಾಕಿಸ್ತಾನವನ್ನು 1-0 ಗೋಲಿನಿಂದ ಸೋಲಿಸಿ, ಏಳನೇ ಬಾರಿಗೆ ಚಿನ್ನದ ಪದಕ ಗೆದ್ದಿತ್ತು. ಆ ತಂಡದಲ್ಲಿ ಆಡಿದ್ದ ಬೆಳಗಾವಿ ಮೂಲದ ಬಂಡು ಪಾಟೀಲ ಮತ್ತು `ರಾಕ್ ಆಫ್ ಗಿಬ್ರಾಲ್ಟರ್~ ಎಂದೇ ಹೆಸರಾಗಿದ್ದ ಗೋಲ್‌ಕೀಪರ್ ಶಂಕರ್ ಲಕ್ಷ್ಮಣ್, ಎಂಬತ್ತರ ದಶಕದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದರು.

ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಅವರನ್ನು `ಪ್ರಜಾವಾಣಿ~ಗಾಗಿ ಸಂದರ್ಶಿಸಿದಾಗ ಅವರಿಬ್ಬರೂ `ಬೇನುನಂಥ ಚುರುಕಿನ ಮುನ್ಪಡೆ ಆಟಗಾರ ತಂಡದಲ್ಲಿರಬೇಕು~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ನಾನು ಬೇನು ಅವರನ್ನು ಭೇಟಿಯಾಗಿದ್ದು 2000ನೇ ಇಸ್ವಿಯಲ್ಲಿ. ಆ ಇಬ್ಬರೂ ಹಾಕಿ ದಿಗ್ಗಜರ ಮಾತನ್ನು ಬೇನುಗೆ ಹೇಳಿದಾಗ, `ಎಲ್ಲವೂ ಮುಗಿದು ಹೋದ ಮಾತಲ್ಲವೇ~ ಎಂದು ನಗುತ್ತಲೇ ನುಡಿದಿದ್ದರು.

ಮುಂದೆ ರೈಲ್ವೆಯಿಂದ ನಿವೃತ್ತರಾದ ಮೇಲೆ ಗದುಗಿನ ಪೆಟ್ರೋಲ್ ಬಂಕ್ ಒಂದರಲ್ಲಿ ವಾಚ್‌ಮನ್ ಆಗಿ ದುಡಿಯುತ್ತಿದ್ದ ಇವರು ಅವಕಾಶ ಸಿಕ್ಕಾಗಲೆಲ್ಲ ಆಡುತ್ತಿದ್ದರು, ಆಸಕ್ತರಿಗೆ ಆಟ ಕಲಿಸುತ್ತಿದ್ದರು. ಅದೇ ವರ್ಷ ರಾಜ್ಯದ ಕ್ರೀಡಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಎ.ಜೆ. ಆನಂದನ್ ಗದುಗಿಗೆ ಬಂದಾಗ, ಅವರಿಗೆ ಬೇನು ಅವರ ಪರಿಚಯ ಮಾಡಿಸಿದ್ದೆ.

ಸಚಿವರು ಕೂಡಲೇ ಅವರನ್ನು ಹಾಕಿ ತರಬೇತುದಾರರಾಗಿ ಗದಗ ಕ್ರೀಡಾಂಗಣದಲ್ಲಿ ಕಾರ್ಯ ನಿರ್ವಹಿಸುವಂತೆ ನೇಮಿಸಿದ್ದರು. ಆಗ ಗೊತ್ತುಪಡಿಸಿದ್ದ ಗೌರವ ಧನ 2,000 ರೂಪಾಯಿ. ಈಗಲೂ ಅವರಿಗೆ ಅಷ್ಟೇ ಗೌರವ ಧನ ದೊರೆಯುತ್ತಿದೆ!

ಭಾರತದ ಹಾಕಿ ರಂಗ ಇನ್ನೂ ಇದೇ ಸ್ಥಿತಿಯಲ್ಲಿಯೇ ಇದೆ. ಬೇನು ಅವರಂಥ ನೂರಾರು ಮಂದಿ ಆಟಗಾರರಿದ್ದಾರೆ. ಆದರೆ ಅವರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಬ್ರಿಟಿಷರಿರುವಾಗಲೇ ಬೆಳೆದ ಹಾಕಿ ಕ್ರಮೇಣ ಹಿಂದೆ ಸರಿಯುವಂತಾಯಿತು.

ಒಲಿಂಪಿಕ್ಸ್ ಬಂದಾಗಷ್ಟೇ ಜನರು ಹಾಕಿ ತಂಡದಿಂದ ಪದಕವನ್ನು ನಿರೀಕ್ಷಿಸತೊಡಗುತ್ತಾರೆ. ಧ್ಯಾನಚಂದರನ್ನು ಮರೆತಂತೆಯೇ ಆಟವನ್ನೂ ದೂರ ಇಟ್ಟಿದ್ದಾರೆ. ಬ್ರಿಟಿಷರು ಕ್ರಿಕೆಟ್‌ಗಿಂತ ಮೊದಲು ಹಾಕಿ ಆಟವನ್ನು ಭಾರತೀಯರಿಗೆ ಪರಿಚಯಿಸಿದ್ದರು. 1885ರಲ್ಲಿ ಕೋಲ್ಕತ್ತಾದಲ್ಲಿ ಹಾಕಿ ಕ್ಲಬ್‌ಗಳನ್ನು ಆರಂಭಿಸಲಾಯಿತು.

ಭಾರತ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಯನ್ನು 1926 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿತು. 1928 ರ ಆ್ಯಮಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗಳಿಸಿತು. 22 ವರ್ಷ ವಯಸ್ಸಿನ ಧ್ಯಾನಚಂದ್ ನಾಯಕರಾಗಿದ್ದರು. 1932 ರ ಒಲಿಂಪಿಕ್ಸ್ ಲಾಸ್ ಏಂಜಲಿಸ್‌ನಲ್ಲಿ ನಡೆಯಿತು.

ಭಾರತ ತಂಡಕ್ಕೆ ಅಲ್ಲಿಗೆ ಹೋಗಲು ಹಣವಿರಲಿಲ್ಲ. ಆಗ ಸ್ವಾತಂತ್ರ್ಯ ಚಳವಳಿ ಜೋರಾಗಿತ್ತು. ಭಾರತ ಹಾಕಿ ಫೆಡರೇಷನ್ ಪ್ರತಿನಿಧಿಯಾಗಿದ್ದ ಪತ್ರಕರ್ತರೊಬ್ಬರು, ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾಗಿ, ಹಾಕಿ ತಂಡದ ಪ್ರಯಾಣಕ್ಕೆ ಹಣ ಸಂಗ್ರಹಿಸಲು ಜನತೆಗೊಂದು ಕರೆ ಕೊಡುವಂತೆ ಕೋರಿದರು.

ಆಗ ಗಾಂಧೀಜಿ, `ಹಾಕಿ ಎಂದರೇನು?~ ಎಂದು ಕೇಳಿದರು. ಭಾರತ ತಂಡ ಯುರೋಪ್‌ನಲ್ಲಿ ಪ್ರದರ್ಶನ ಪಂದ್ಯಗಳನ್ನಾಡಿ, ಹಣ ಸಂಗ್ರಹಿಸಿ ಒಲಿಂಪಿಕ್ಸ್‌ಗೆ ಹೋಯಿತಲ್ಲದೇ, ಚಿನ್ನವನ್ನೂ ಜಯಿಸಿತು. ಜಪಾನ್ ಮತ್ತು ಅಮೆರಿಕ ತಂಡಗಳಷ್ಟೇ ಭಾರತಕ್ಕೆ ಎದುರಾಳಿಯಾಗಿದ್ದವು.

ಭಾರತ ನಂತರ 1956ರವರೆಗೆ ಸತತವಾಗಿ ಚಿನ್ನ ಜಯಿಸಿತು. 1960 ರಲ್ಲಿ ಪಾಕಿಸ್ತಾನ ತಂಡ ಭಾರತದ ಏಕಸ್ವಾಮ್ಯಕ್ಕೆ ಪೆಟ್ಟುಕೊಟ್ಟಿತು. 1964ರಲ್ಲಿ ಭಾರತ ತಿರುಗೇಟು ನೀಡಿತಾದರೂ, ಮುಂದಿನ ಒಲಿಂಪಿಕ್ಸ್‌ಗಳಲ್ಲಿ ಭಾರತದ ಹಾಕಿ ಕಳೆಗುಂದಿತ್ತು.

1980ರ ಮಾಸ್ಕೊ ಒಲಿಂಪಿಕ್ ಕ್ರೀಡೆಗಳನ್ನು ಹಲವು ರಾಷ್ಟ್ರಗಳು ಬಹಿಷ್ಕರಿಸಿದವು. ಪ್ರಬಲ ತಂಡಗಳ ಗೈರುಹಾಜರಿಯಲ್ಲಿ ಭಾರತ ಚಿನ್ನ ಗೆದ್ದುಕೊಂಡಿತು. ಅದೇ ಕೊನೆ. ಭಾರತ ಮತ್ತೆ ಚಿನ್ನ ಗೆದ್ದಿಲ್ಲ. ಅಂದರೆ 32 ವರ್ಷಗಳಿಂದ ಭಾರತ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಪರದಾಡುತ್ತಿದೆ.

ಒಲಿಂಪಿಕ್ ಕ್ರೀಡೆಗಳಿಗೆ ಅರ್ಹತೆ ಪಡೆಯಲೂ ಒದ್ದಾಡುತ್ತಿದೆ. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಕಿ ಫೆಡರೇಷನ್ ರಾಜಕೀಯ ಆಟವನ್ನು ಪಾತಾಳಕ್ಕಿಳಿಸಿದೆ. ಯಾವುದು ರಾಷ್ಟ್ರೀಯ ಕ್ರೀಡೆಯಾಗಿ ರಾಜಮರ್ಯಾದೆ ಅನುಭವಿಸಬೇಕಿತ್ತೋ ಅದು ಈಗ ಜನರ ಪ್ರೋತ್ಸಾಹವೂ ಇಲ್ಲದೇ ಸೊರಗಿಹೋಗಿದೆ. ಭಾರತ ಚಿನ್ನ ಗೆಲ್ಲುವುದೆಂಬ ವಿಶ್ವಾಸ ಯಾರಲ್ಲೂ ಇಲ್ಲ.

ಕಾರಣ ಸ್ಪಷ್ಟ. ಹಾಕಿ ಆಟ ಬುಡದಲ್ಲೇ ಸತ್ತುಹೋಗಿದೆ. ಶಾಲೆ, ಕಾಲೇಜುಗಳಲ್ಲಿ ಇದನ್ನು ಆಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಒಬ್ಬ ಶಾಲಾ ಹುಡುಗನಿಗೆ ಹಾಕಿಯಲ್ಲಿ ಭವಿಷ್ಯ ಇದೆ ಎಂದು ಹೇಳಿದರೆ ನಂಬುವುದೇ ಇಲ್ಲ. ಆತ ಹಾಕಿ ಸ್ಟಿಕ್ ಬದಲು ಕ್ರಿಕೆಟ್ ಬ್ಯಾಟ್ ಎತ್ತಿಕೊಳ್ಳುತ್ತಾನೆ.

ಭಾರತಕ್ಕೆ ಆಡುವುದು ಬೇಡ, ಐಪಿಎಲ್‌ನಂಥ ಟೂರ್ನಿಯಲ್ಲಿ ಆಡಿದರೂ ಸಾಕು, ಕೋಟಿ ಕೋಟಿ ಗಳಿಸಬಹುದು ಎಂಬುದು ಆತನಿಗೆ ಗೊತ್ತಾಗಿದೆ. ಕಳೆದ ವರ್ಷ ಭಾರತದಲ್ಲಿ ವಿಶ್ವ ಕಪ್ ನಡೆಯಿತಷ್ಟೇ. ಎರಡು ವರ್ಷಗಳ ಕಾಲ ಅದಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಆಟಗಾರರು ಹತ್ತಾರು ಜಾಹೀರಾತುಗಳಲ್ಲಿ ಮೆರೆದರು.

ಭಾರತ ತಂಡ ಜಗತ್ತನ್ನು ಗೆಲ್ಲುವುದು ಎಂದು ತುತ್ತೂರಿ ಊದಲಾಯಿತು. ಜನ ಹೋಮ ಹವನ ಮಾಡಿಸಿದರು, ದೇವರಿಗೆ ಹರಕೆ ಹೊತ್ತರು. ಭಾರತ ವಿಶ್ವ ಕಪ್ ಜಯಿಸಿತು ಎಂಬ ಮಾತು ಬೇರೆ. ಸೋತಿದ್ದರೂ ಕ್ರಿಕೆಟ್ ಹುಚ್ಚೇನೂ ಕಡಿಮೆಯಾಗುತ್ತಿರಲಿಲ್ಲ. ಇಂಥ ಭಾಗ್ಯ ಹಾಕಿ ಆಟಗಾರರಿಗಿಲ್ಲ. ಮುಂದಿನ ವಾರವೇ ಒಲಿಂಪಿಕ್ಸ್ ಆರಂಭ.

ಹಾಕಿ ಆಟಗಾರರ ಯಾವುದಾದರೂ ಜಾಹೀರಾತು ನೋಡಿದ್ದೀರಾ? ಭಾರತ ತಂಡದ ವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳನ್ನು ಕಂಡಿದ್ದೀರಾ? ಭಾರತ ಗೆಲ್ಲಲಿ ಎಂದು ಯಾರಾದರೂ ಹರಕೆ ಹೊತ್ತಿದ್ದಾರಾ? ಇಲ್ಲ, ಖಂಡಿತವಾಗಿಯೂ ಇಲ್ಲ. ತಂಡದ ನಾಯಕ ಯಾರು ಎಂದು ಕೇಳಿದರೆ, `ಯಾರು?~ ಎಂಬ ಮರುಪ್ರಶ್ನೆ ಎದುರಾಗುತ್ತದೆ.

ಐಪಿಎಲ್ ಕ್ರಿಕೆಟ್ ಸಂದರ್ಭದಲ್ಲಿ, ಮಾಜಿ ಆಟಗಾರರಿಗೆ ಕ್ರಿಕೆಟ್ ಮಂಡಳಿ ಲಕ್ಷಾಂತರ ರೂಪಾಯಿಗಳನ್ನು ಪೆನ್ಶನ್ ರೂಪದಲ್ಲಿ ನೀಡಿತು. ರಣಜಿ ಟ್ರೋಫಿಯಲ್ಲಿ ಆಡಿದ ಆಟಗಾರರಿಗೂ ಉತ್ತಮ ಆರ್ಥಿಕ ನೆರವು ದೊರೆಯುತ್ತದೆ.

ಹಾಕಿ ಫೆಡರೇಷನ್ ಕೂಡ ಇದೇ ಮೊದಲ ಬಾರಿಗೆ ಮಾಜಿ ಒಲಿಂಪಿಕ್ ಆಟಗಾರರಿಗೆ ಕೆಲವು ಲಕ್ಷ ರೂಪಾಯಿಗಳನ್ನು ನೀಡಿತು. ಅದೊಂದು ಉತ್ತಮ ನಿರ್ಧಾರ. ಆದರೆ ಬೇರೆ ಬೇರೆ ಕಾರಣಗಳಿಂದ ಒಲಿಂಪಿಕ್ಸ್‌ಗೆ ಹೋಗದಿದ್ದರೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಆಟಗಾರರನ್ನೂ ಫೆಡರೇಷನ್ ಗುರುತಿಸಬೇಕಿತ್ತು.

ಬೇನು ಅವರಂಥ ಹಾಕಿ ಹುಚ್ಚು ಹಿಡಿದ ಆಟಗಾರರು ಇನ್ನೂ ಇದ್ದಾರೆ. ಅವರು ದೇಶಕ್ಕಾಗಿ ಬಹಳ ಪ್ರೀತಿಯಿಂದ ಆಡಿದವರು. ಒಂದಲ್ಲ ಒಂದು ದಿನ ಗತವೈಭವ ಮರಳುವುದೆಂಬ ಕನಸು ಕಾಣುತ್ತಾರೆ. ಆದರೆ ಇಳಿ ವಯಸ್ಸಿನಲ್ಲಿ ಅವರೇನೂ ಮಾಡುವ ಹಾಗಿರುವುದಿಲ್ಲ.

ಬೇನು ಈಗ ಗದುಗಿನಲ್ಲಿ ಹೆಂಡತಿ ಮತ್ತು ಐವರು ಮಕ್ಕಳೊಂದಿಗೆ (ಅವರಿಗೆ ಒಟ್ಟು ಹತ್ತು ಮಂದಿ ಮಕ್ಕಳು.) ಜೀವನ ನಡೆಸುತ್ತಿದ್ದಾರೆ. ಮಕ್ಕಳೆಲ್ಲ ಇನ್ನೂ ಓದುತ್ತಿದ್ದಾರೆ. ಬೇರೆ ಆದಾಯವಿಲ್ಲ. ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಥವಾ ರಾಜ್ಯ ಹಾಕಿ ಸಂಸ್ಥೆಯಿಂದ ಏನಾದರೂ ನೆರವು ಸಿಗುವುದೆಂಬ ನಿರೀಕ್ಷೆ ಅವರದು.

ವಾಚ್‌ಮನ್ ಆಗಿ ದುಡಿಯುವಷ್ಟು ದೈಹಿಕ ಶಕ್ತಿ ಅವರಲ್ಲಿ ಉಳಿದಿಲ್ಲ. ಅವರೇನೂ ಲಕ್ಷಗಟ್ಟಲೆ ಹಣ ಕೊಡಿ ಎಂದು ಕೇಳುವುದಿಲ್ಲ. ತಮ್ಮ ಗೌರವಧನವನ್ನು ಒಂದೆರಡು ಸಾವಿರ ಹೆಚ್ಚಿಸಿದರೆ ಅಷ್ಟರಲ್ಲೇ ತೃಪ್ತಿಪಡುತ್ತೇನೆ ಎನ್ನುತ್ತಾರೆ.

ಆಟವನ್ನು ಈ ಕೆಟ್ಟ ಸ್ಥಿತಿಯಿಂದ ಮೇಲಕ್ಕೆತ್ತುವುದು ಭಾರತದಂಥ ದೊಡ್ಡ ದೇಶಕ್ಕೆ ಕಷ್ಟವೇನಲ್ಲ. ಆಟಗಾರರಿಂದಲೇ ಆಟ ಬೆಳೆಯುವುದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಸಾಕು. ಮೂಲ ಸೌಕರ್ಯಗಳ ಜೊತೆ ಆರ್ಥಿಕ ಪ್ರೋತ್ಸಾಹ ಆಟಗಾರರನ್ನು ಆಕರ್ಷಿಸುತ್ತದೆ.

2020 ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲೇಬೇಕು ಎಂಬ ಪಕ್ಕಾ ಕಾರ್ಯಕ್ರಮವೊಂದನ್ನು ಹಾಕಿಕೊಂಡು, ಅದರಲ್ಲಿ ಯಾವುದೇ ರಾಜಕೀಯ ಮಾಡದೇ ಪ್ರಯತ್ನಪಟ್ಟರೇ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಭಾರತ ಅಂತರರಾಷ್ಟ್ರೀಯ ರಂಗದಲ್ಲಿ ಗೆಲ್ಲತೊಡಗಿದರೆ ಜನರೂ ಸಹಜವಾಗಿಯೇ ಅದನ್ನು ಗಮನಿಸತೊಡಗುತ್ತಾರೆ.

ಮಹೇಂದ್ರ ಸಿಂಗ್ ದೋನಿ, ಸಚಿನ್ ತೆಂಡೂಲ್ಕರ್ ಅವರಂತೆಯೇ ಭರತ್ ಚೆಟ್ರಿ, ಎಸ್.ಕೆ. ಉತ್ತಪ್ಪ, ವಿ.ಎಸ್. ರಘುನಾಥ್, ಎಸ್.ವಿ. ಸುನೀಲ್ ಅವರ ಹೆಸರುಗಳು ಜನರ ನಾಲಿಗೆಯ ಮೇಲೆ ಹರಿದಾಡತೊಡಗುತ್ತವೆ.

ಭಾರತ ಹಾಕಿ ತಂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ಭರತ್ ಚೆಟ್ರಿ ನಾಯಕತ್ವದಲ್ಲಿ ಆಡಲಿದೆ. ಉತ್ತಪ್ಪ, ರಘುನಾಥ್ ಮತ್ತು ಸುನೀಲ್ ತಂಡದಲ್ಲಿರುವ ಕೊಡಗಿನ ಕಲಿಗಳು. ಇವರ ಜೊತೆ ತಂಡದ ಎಲ್ಲ ಆಟಗಾರರಿಗೆ ನಾವೆಲ್ಲ ಶುಭ ಹಾರೈಸಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT