ಶುಕ್ರವಾರ, ಜೂಲೈ 3, 2020
24 °C

ಹಾಳಾಗುತ್ತಿರುವ ಒಡೆಯರ್ ಮಂಟಪ

ಸಿ. ಸುರೇಶ ಅಂಬ್ಳೆ Updated:

ಅಕ್ಷರ ಗಾತ್ರ : | |

ಹಾಳಾಗುತ್ತಿರುವ ಒಡೆಯರ್ ಮಂಟಪ

ಚಾಮರಾಜನಗರ ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಪಡೆದ ಊರು. ಈಗ ಅದು ಜಿಲ್ಲಾ ಕೇಂದ್ರ. ಮೊದಲು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಮೈಸೂರು ಸಂಸ್ಥಾನದ ಆಡಳಿತದ ಕಾಲದಲ್ಲಿ ಈ ಭಾಗ ಹೆಚ್ಚಿನ ಅಭಿವೃದ್ಧಿ ಕಾಣಲಿಲ್ಲ. ಆದರೆ 1926ರಲ್ಲಿಯೇ ಮೈಸೂರಿನಿಂದ ಚಾಮರಾಜನಗರವರೆಗೆ ರೈಲು ಮಾರ್ಗ ಹಾಕಲಾಯಿತು. ಇದರಿಂದ ಈ ಭಾಗದ ಜನರು ಮೈಸೂರಿನ ಜತೆ ಹೆಚ್ಚು ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಯಿತು.ಈಗಿನ ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳೂ ಐತಿಹಾಸಿಕ ಮಹತ್ವ ಪಡೆದಿವೆ. ಇವಲ್ಲದೆ ಹೊಂಗನೂರು, ಆಲೂರು, ಅಗರಂ, ಅಮಚವಾಡಿ, ಗಾಣಿಗನೂರು, ಹರದನಹಳ್ಳಿ, ಕುದೇರು, ಮದ್ದೂರುಗಳು  ಹಲವು ಕಾರಣಗಳಿಗೆ ಮಹತ್ವ ಪಡೆದಿವೆ. ಆದರೆ ಇವೆಲ್ಲ ಉಪೇಕ್ಷೆಗೆ ಒಳಗಾಗಿವೆ. ಚಾಮರಾಜನಗರದ ಹಳೆಯ ನಿಲ್ದಾಣದ (ಖಾಸಗಿ ಬಸ್‌ಗಳ) ಬಳಿ ಖಾಸಾ ಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಸ್ಥಳದ ಮಂಟಪವಿದೆ. ಚಾಮರಾಜ ಒಡೆಯರ್ (ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆ) ಅವರು  1774 ಮಾರ್ಚ್ 1 ರಂದು ಚಾಮರಾಜನಗರದಲ್ಲಿ ಜನಿಸಿದರು.  ಚಾಮರಾಜನಗರಕ್ಕೆ ಮೊದಲು ‘ಅರಿಕುಠಾರ’ ಎಂಬ ಹೆಸರಿತ್ತು.ಚಾಮರಾಜ ಒಡೆಯರ್ ಅವರು ಹುಟ್ಟಿದ ನೆನಪಿಗಾಗಿ ಕೃಷ್ಣರಾಜ ಒಡೆಯರ್ ಅವರು 1818 ರಲ್ಲಿ ಅರಿಕುಠಾರಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಮುಮ್ಮಡಿ ಕೃಷ್ಣರಾಜೇಶ್ವರ ದೇವಾಲಯ ನಿರ್ಮಿಸಿ ಅದನ್ನು ವಿಸ್ತರಿಸಿದರು. ಜಿಲ್ಲೆಯ ಹಲವೆಡೆ ಮೈಸೂರು ಒಡೆಯರು ಮತ್ತು ಅವರ ರಾಣಿ ವಾಸದವರು ಕಟ್ಟಿಸಿದ ದೇವಾಲಯಗಳು, ಛತ್ರಗಳು ಹಾಗೂ ಅಗ್ರಹಾರಗಳಿವೆ.ಚಾಮರಾಜ ಒಡೆಯರ್ ಅವರ ಜನ್ಮ ಮಂಟಪ ಈಗ ದುಸ್ಥಿತಿಯಲ್ಲಿದೆ. ಮಂಟಪದ ದ್ವಾರ ಉತ್ತರಾ ಭಿಮುಖವಾಗಿದೆ. ಮಂಟಪದ ಮಧ್ಯದಲ್ಲಿ ಶಿಲಾನ್ಯಾಸವಿದೆ. ಅಲ್ಲಿ ಚಾಮರಾಜೇಂದ್ರ ಒಡೆಯರ ಜನನದ ವಿವರಗಳಿವೆ. ಮಂಟಪದಲ್ಲಿ ಅತ್ಯಾಕರ್ಷವಾದ ಕಲಾತ್ಮಕ ಚಿತ್ರಗಳಿವೆ.ಬಲಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮಹಿಷಾಷುರನನ್ನು ಸಂಹರಿಸುತ್ತಿರುವ ಕಲಾತ್ಮಕ ಚಿತ್ರವಿದೆ. ಆದರೆ ಕೆಲ ಕಿಡಿಗೇಡಿಗಳು ಚಿತ್ರವನ್ನು ವಿರೂಪಗೊಳಿಸಿದ್ದಾರೆ. ಜನ್ಮ ಮಂಟಪ ಕುಡುಕರ ಆವಾಸವಾಗಿದೆ. ಅಲ್ಲಿ ಖಾಲಿ ಬಾಟಲುಗಳು, ಸುಟ್ಟ ಸಿಗರೇಟುಗಳು, ಪ್ಲಾಸ್ಟಿಕ್ ಲೋಟಗಳು, ಕಸಕಡ್ಡಿ ಬಿದ್ದಿದ್ದು ಇಡೀ ಪರಿಸರ ಹಾಳಾಗಿದೆ.ಜನ್ಮಮಂಟಪದ  ಸಮೀಪದಲ್ಲಿ ಒಂದು ಸಾರಾಯಿ ಅಂಗಡಿ ಇದೆ. ಕೆಲವರು ಅಲ್ಲಿಂದ ಸಾರಾಯಿ ತಂದು ಜನ್ಮ ಮಂಟಪದಲ್ಲಿ ಕುಡಿಯುತ್ತಾರೆ. ಕುಡಿದ ಅಮಲಿನಲ್ಲಿ ಕೂಗಾಡಿ ಬಾಟಲುಗಳನ್ನು ಒಡೆದು ಬಿಸಾಕಿ ಹೋಗುತ್ತಾರೆ ಎಂದು ಮಂಟಪದ ಸಮೀಪದಲ್ಲಿರುವ ಜನರು ಹೇಳುತ್ತಾರೆ.ಮಂಟಪದ ಸಮೀಪದಲ್ಲೇ ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಮಂಟಪದ ಬಳಿ ಹೋಗಲೂ ಸಾಧ್ಯವಾಗದಷ್ಟು ದುರ್ವಾಸನೆ ಇರುತ್ತದೆ. ಸ್ಥಳೀಯ ಆಡಳಿತ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಈ ಮಂಟಪವನ್ನು ಸುಸ್ಥಿಯಲ್ಲಿಡಲು ಗಮನಹರಿಸಬೇಕು.ಸಾಹಿತಿ, ಕಲಾವಿದರು, ರಾಜಕಾರಣಿಗಳಿಗೆ ಸ್ಮಾರಕ ನಿರ್ಮಿಸಲು ಸರ್ಕಾರ ಅಪಾರ ಹಣ ಖರ್ಚು ಮಾಡುತ್ತದೆ. ಆದರೆ ಮೈಸೂರು ಸಂಸ್ಥಾನದ ಅರಸು ಕುಟುಂಬಗಳು ನಿರ್ಮಿಸಿದ ಕಟ್ಟಡಗಳನ್ನು ಸಂರಕ್ಷಣೆ ಮಾಡುವ ವಿಷಯದಲ್ಲಿ ಅನಾದರ ತೋರುತ್ತಿರುವುದು ದುರದೃಷ್ಟಕರ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಾದರೂ  ಈ ಮಂಟಪದ ರಕ್ಷಣೆಗೆ ಮುಂದಾಗಬೇಕು. ಮಂಟಪವನ್ನು ದುರಸ್ತಿ ಮಾಡಿಸಿ ಸುತ್ತ ಗೋಡೆ ನಿರ್ಮಿಸಿ ಗೇಟಿಗೆ ಬೀಗ ಹಾಕಬೇಕು. ಮಂಟಪ ನೋಡಲು ಹೋಗುವವರಿಗೆ ಅವಕಾಶ ಇರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.