ಶುಕ್ರವಾರ, ಮೇ 20, 2022
27 °C

ಹುತಾತ್ಮ ಪೊಲೀಸರಿಗೆ ಹೃದಯಸ್ಪರ್ಶಿ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಓ ಗಾಡ್ ಅಬೈಡ್ ವಿಥ್ ಯು~ (ಓ ದೇವರೇ, ನಿನಗಿದೋ ಎನ್ನ ಮೊರೆ ಎಂಬರ್ಥದಲ್ಲಿ) ಹಾಡು ಪೊಲೀಸ್ ಬ್ಯಾಂಡ್‌ನಿಂದ ಅಲೆ-ಅಲೆಯಾಗಿ ತೇಲಿ ಬರುತ್ತಿದ್ದರೆ ವೇದಿಕೆ ಮೇಲಿದ್ದ ಅಧಿಕಾರಿಗಳೂ ಸೇರಿದಂತೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ  ಕಣ್ಣಾಲಿಗಳೆಲ್ಲ ಭಾವತೀವ್ರತೆಯಿಂದ ಹನಿಗೂಡಿದ್ದವು.ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲು ಏರ್ಪಡಿಸಿದ್ದ ಸಮಾರಂಭ ಅದು. ಪೊಲೀಸರ ಭಾವ ತಂತಿ ಮೀಟಿದ್ದ ಅದೇ ಬ್ಯಾಂಡ್, ಕೊನೆಗೆ `ಲೀಡ್ ಕೈಂಡ್ಲಿ ಲೈಟ್~ ಗೀತೆ ನುಡಿಸುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಸೇವೆಯ ಹುರುಪನ್ನು ತುಂಬಿತ್ತು.ಹುತಾತ್ಮರಿಗೆ ಒಟ್ಟಾರೆ ಮೂರು ಹಂತದಲ್ಲಿ ಗೌರವ ಸಲ್ಲಿಸಲಾಯಿತು. ಮೊದಲಿಗೆ ಜಿಲ್ಲಾಧಿಕಾರಿ ದರ್ಪಣ ಜೈನ್, ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ, ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಸೇರಿ ದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿದರು. ಆಗ ಪೊಲೀಸ್ ಬ್ಯಾಂಡ್ `ಓ ಗಾಡ್ ಹೆಲ್ಪ್ ಅಸ್~ ಗೀತೆಯನ್ನು ನುಡಿಸುತ್ತಿತ್ತು.ಎರಡನೇ ಹಂತದಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು. ಬೆನ್ನಹಿಂದೆಯೇ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಕೊನೆಗೆ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ, ಎರಡು ನಿಮಿಷ ಮೌನ ಆಚರಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಗ ಪೊಲೀಸರ ಹೃದಯ ಭಾವನೆಗಳ ಮಹಾಪೂರದಿಂದ ಒದ್ದೆ ಯಾಗಿದ್ದವು.ಈ ಸಂದರ್ಭದಲ್ಲಿ ಮಾತನಾಡಿದ ದರ್ಪಣ ಜೈನ್, `ಪೊಲೀಸರಿಗೆ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸದೃ ಢತೆ ಅತ್ಯಗತ್ಯ. ಇದರಿಂದ ಶಿಸ್ತು ಹಾಗೂ ಸಮರ್ಪಣಾ ಭಾವದಿಂದ ಅವರು ಕಾರ್ಯ ನಿರ್ವಹಿಸಲು ಸಾಧ್ಯ~ ಎಂದು ಅಭಿಪ್ರಾಯಪಟ್ಟರು. ಉಳಿದ ಎಲ್ಲ ಇಲಾಖೆ ಗಳಿಗಿಂತ ಪೊಲೀಸ್ ಇಲಾಖೆ ನೌಕರಿ ಕಷ್ಟಕರವಾಗಿದ್ದು, ಪೊಲೀಸರ ತ್ಯಾಗ, ಬಲಿದಾನ ಇತರ ಇಲಾಖೆ ಸಿಬ್ಬಂದಿಗೆ ಅನುಕರಣೀಯವಾದುದು ಎಂದು ಕೊಂಡಾಡಿದರು.ಯಾವುದೇ ಕೆಲಸವಾದರೂ ಶಿಸ್ತು, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಮನೋಭಾವ ಅತ್ಯಂತ ಮುಖ್ಯ ವಾದುದು. ಸಮಾಜದ ಪ್ರಗತಿಗೆ ಸರ್ಕಾರ ಹಲವು ಯೋಜನೆ ಹಾಕಿಕೊಳ್ಳುತ್ತದೆ. ಕಾನೂನು ಸುವ್ಯವಸ್ಥೆ ಇಲ್ಲದ ಯಾವುದೇ ಪ್ರಗತಿ ಅರ್ಥಹೀನ. ಕಾನೂನು ಸುವ್ಯ ವಸ್ಥೆ ಕಾಪಾಡಲು ಪೊಲೀಸರು ಹಗಲಿರುಳು ಶ್ರಮಿಸುತ್ತಾರೆ ಎಂದು ಹೇಳಿದರು.ದೇಶದ ಗಡಿಯಲ್ಲಿ ಸೈನಿಕರು ಹೊರಗಿನ ಶತ್ರುಗಳ ವಿರುದ್ಧ ಹೋರಾಡಿದರೆ, ಪೊಲೀಸರು ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುತ್ತಾರೆ. ಅವರು ದಕ್ಷತೆ ಯಿಂದ ಕರ್ತವ್ಯ ನಿರ್ವಹಿಸಲು ಬಲಿಷ್ಠವಾದ ಮಾನಸಿಕ ಸಾಮರ್ಥ್ಯ ಅಗತ್ಯವಾಗಿದೆ ಎಂದು ತಿಳಿಸಿದರು.ದೇಶ ಸೇವೆಯಲ್ಲಿ ಪ್ರಸಕ್ತ ವರ್ಷ ಮಡಿದ 636 ಜನ ಪೊಲೀಸ್ ಸಿಬ್ಬಂದಿ ಹೆಸರುಗಳನ್ನು ಡಾ. ರಾಮಚಂದ್ರ ರಾವ್ ಓದಿದರು.ಕರ್ನಾಟಕದ ಹತ್ತು ಜನ ಪೊಲೀಸರಾದ ಎಸ್.ವಿ. ಪಾಟೀಲ, ಮೊನ್ನಪ್ಪ, ಚಂದ್ರಕಾಂತ, ತಿರುಪತಿ, ಚಂದ್ರಪ್ಪ ಲಮಾಣಿ, ಮಾನದೇವ ರಾಠೋಡ, ಎನ್.ಎಂ. ಗಿರಿಜವ್ಯಗೋಳ, ಪಿ.ಗೋಪಾಲ, ಎಸ್.ರಾಜು ಹಾಗೂ ಶಾನವಾಜ್ ಈ ಅವಧಿಯಲ್ಲಿ ದೇಶಕ್ಕೆ ಪ್ರಾಣ ಅರ್ಪಿಸಿದ್ದಾರೆ ಎಂದು ಅವರು ಹೇಳಿದರು.ಡಿಸಿಪಿ (ಸಿಎಆರ್) ಎಂ.ಎನ್. ಜೋಗಳೇಕರ ಪೊಲೀಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯನ್ನು ವಿವರಿಸಿದರು. ಡಿಸಿಪಿಗಳಾದ ಎಸ್.ಎಂ. ಪ್ರತಾಪನ್, ಪಿ.ಆರ್. ಬಟಕುರ್ಕಿ, ಎಸಿಪಿಗಳಾದ ಎ.ಆರ್. ಬಡಿಗೇರ, ಎನ್.ಎಸ್ ಪಾಟೀಲ, ಸವಿಶಂಕರ ನಾಯಕ ಮತ್ತಿತರರು ಹಾಜರಿದ್ದರು.ನಿವೃತ್ತ ಪೊಲೀಸ್ ಅಧಿಕಾರಿ ವೈ.ಡಿ. ಆಲೂರ, ನಾಗರಿಕ ಬಂದೂಕು ತರಬೇತಿ ಸಂಸ್ಥೆ ಅಧ್ಯಕ್ಷ ಪ್ರಕಾಶ ರಾವ್, ಹೋಮ್ ಗಾರ್ಡ್ಸ್ ಉಪ ಕಮಾಂಡೆಂಟ್ ವಿ.ಆರ್. ಕಂದಗಲ್, ಹಿರಿಯ ನಾಗರಿಕ ಕಾಡಯ್ಯ ಸೇರಿದಂತೆ ಹಲವರು ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.