ಮಂಗಳವಾರ, ಜೂನ್ 15, 2021
26 °C

ಹೊಳಲ್ಕೆರೆ: ಬಹಿರಂಗ ಚರ್ಚೆಗೆ ಕಾದು ಕುಳಿತ ಆಂಜನೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಶಾಸಕ ಎಂ. ಚಂದ್ರಪ್ಪ ವಿರುದ್ಧ ಕಳಪೆ ಕಾಮಗಾರಿ, ಭ್ರಷ್ಟಾಚಾರ ಮತ್ತಿತರ ಆರೋಪಗಳನ್ನು ಮಾಡಿದ್ದ ಮಾಜಿ ಶಾಸಕ ಎಚ್. ಆಂಜನೇಯ ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ವೇದಿಕೆ ನಿರ್ಮಿಸಿ ಶಾಸಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧತೆ ನಡೆಸಿದ್ದರು. ಆದರೆ, ಚರ್ಚೆ ಮಾಡುವ ಅಗತ್ಯವೇ ಇಲ್ಲವೆಂದು ಶಾಸಕ ಎಂ. ಚಂದ್ರಪ್ಪ ಅಲ್ಲಿಗೆ ಬಾರದೆ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವಲ್ಲಿ ನಿರತರಾಗಿದ್ದರು.ಕಳೆದ ಒಂದು ತಿಂಗಳಿನಿಂದ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಜಟಾಪಟಿ ನಡೆಯುತ್ತಿದ್ದು, ಶಾಸಕ ಎಂ. ಚಂದ್ರಪ್ಪ ಕಾಮಗಾರಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕಾಮಗಾರಿಗಳ ಗುಣಮಟ್ಟ, ಹಂತಗಳು ಮತ್ತು ಬಿಡುಗಡೆಯಾದ ಹಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಮಾಜಿ ಶಾಸಕ ಎಚ್. ಆಂಜನೇಯ ಒತ್ತಾಯಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕರು ನನ್ನ ಕೆಲಸಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಆಂಜನೇಯ ಪಟ್ಟಣದಲ್ಲಿ ಬಹಿರಂಗ ಚರ್ಚೆಗೆ ಸಜ್ಜಾಗಿ ಕುಳಿತಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರುದ್ರಪ್ಪ, ಜಿ.ಪಂ. ಉಪಾಧ್ಯಕ್ಷೆ ಭಾರತೀ ಕಲ್ಲೇಶ್, ಸದಸ್ಯರಾದ ಎಸ್.ಜೆ. ರಂಗಸ್ವಾಮಿ, ಪಾರ್ವತಮ್ಮ, ಇಂದಿರಾ ಕಿರಣ್ ಮತ್ತು ತಾ.ಪಂ. ಪ.ಪಂ. ಸದಸ್ಯರು ಸೇರಿದ್ದರು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಶಾಸಕರು ಸಭೆಯನ್ನು ನಿರ್ಲಕ್ಷ್ಯಿಸಿದರು.ಪಲಾಯನವಾದ: ಆರೋಪ

ಶಾಸಕ ಎಂ. ಚಂದ್ರಪ್ಪ ಅವರೇ ಹೇಳಿದ್ದರಿಂದ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಿದ್ದೆ. ಕಾರ್ಯಕರ್ತರು ಮತ್ತು ಜನರನ್ನೂ ಕರೆಸಿದ್ದೆ. ಶಾಸಕರಿಗಾಗಿ ವಿಶೇಷ ಕುರ್ಚಿ, ಪೆನ್ನು, ಪ್ಯಾಡು ವ್ಯವಸ್ಥೆ ಮಾಡಲಾಗಿತ್ತು. ಆದರೆ ಚರ್ಚೆಗೆ ಬರದೆ ಅವರು ಪಲಾಯನವಾದ ಅನುಸರಿಸಿದ್ದಾರೆ. ಇದರಿಂದ ಅವರು ನೈತಿಕತೆ ಕಳೆದುಕೊಂಡಿದ್ದಾರೆ.

 

ಶಾಸಕರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರದ ಹಣ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಪಾಲಾಗಬಾರದು. ಅದು ಸದ್ವಿನಿಯೋಗ ಆಗಬೇಕು ಎನ್ನುವುದು ನಮ್ಮ ವಾದ. ಶಾಸಕರು ಸಭೆಗೆ ಬರಲಿಲ್ಲ ಎಂದ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಶಾಸಕ ಎಚ್. ಆಂಜನೇಯ ಹೇಳಿದರು.ಚರ್ಚೆ ಮಾಡುವ ಅಗತ್ಯವಿಲ್ಲ: ಎಂ. ಚಂದ್ರಪ್ಪ

ಎಚ್. ಆಂಜನೇಯ ಭರಮಸಾಗರದಲ್ಲಿ ಮಾಜಿ ಶಾಸಕರಾಗಿದ್ದರು. ಅವರು ಇಲ್ಲಿ ಸೋತ ಒಬ್ಬ ಅಭ್ಯರ್ಥಿ ಅಷ್ಟೆ. ಇವರಂತೆ ಸೋತಿರುವ ಇನ್ನೂ ಒಂಬತ್ತು ಅಭ್ಯರ್ಥಿಗಳಿದ್ದಾರೆ. ಇವರಿಗೆಲ್ಲ ಲೆಕ್ಕ ಕೊಡುತ್ತಾ ಕೂರಲು ನನಗೆ ಬೇರೆ ಕೆಲಸ ಇಲ್ಲವೆ? ನಾನು ಹೇಗೆ ಕೆಲಸ ಮಾಡಿದ್ದೇನೆ ಎಂದು ಕ್ಷೇತ್ರದ ಜನರನ್ನು ಕೇಳಿದರೆ ಹೇಳುತ್ತಾರೆ.ಯಾರೋ ಒಬ್ಬರಿಗೆ ಲೆಕ್ಕ ಕೊಡಲು ಜನ ನನ್ನನ್ನು  ಶಾಸಕನಾಗಿ ಆಯ್ಕೆ ಮಾಡಿಲ್ಲ. ನನಗೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿವೆ. ನನ್ನ ಕಾಮಗಾರಿಗಳ ಬಗ್ಗೆ ಪತ್ರಿಕೆಗಳಲ್ಲಿ ಒಂದು ಪುಟದ ಜಾಹೀರಾತು ನೀಡಿ ಅಂಕಿ ಅಂಶ ಕೊಟ್ಟಿದ್ದೇನೆ. ಅದಕ್ಕಿಂತ ಶ್ವೇತಪತ್ರ ಬೇಕಿಲ್ಲ.

 

ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕಿದರೆ ಮುಂದಿನ ಚುನಾವಣೆಯಲ್ಲಿ ಜನ ಠೇವಣಿ ಕಳೆಯುತ್ತಾರೆ. ಆಂಜನೇಯ ಶಾಸಕರಾದ ಅವಧಿಯಲ್ಲಿ ಮಾಡಿದ ಕಾಮಗಾರಿಗಳ ಬಗ್ಗೆ ಲೆಕ್ಕ ತರಲಿ. ಅವರು ಭರಮಸಾಗರದ ಮಾಜಿ ಶಾಸಕರಾಗಿರುವುದರಿಂದ ಅಲ್ಲಿಯೇ ಚರ್ಚೆ ನಡೆಯಲಿ ಎಂದು ಶಾಸಕ ಎಂ. ಚಂದ್ರಪ್ಪ ಪ್ರತಿಕ್ರಿಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.