ಹೊಸ ಚಿತ್ರ, ಹಳೆ ಪಾತ್ರ!

‘ರಂಗಿತರಂಗ’ದ ಆವಂತಿಕಾ ‘ಕಲ್ಪನಾ–2’ ಚಿತ್ರದಲ್ಲೂ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡನೇ ಸಿನಿಮಾದ ವೇಳೆಗೆ ಅವರ ಕನ್ನಡ ಕಲಿಕೆ ಸಾಕಷ್ಟು ಸುಧಾರಿಸಿದೆಯಂತೆ.
ಬಣ್ಣ ಹಚ್ಚಿದ ಮೊದಲ ಚಿತ್ರವೂ ಹಾರರ್, ಎರಡನೇ ಸಿನಿಮಾ ಕೂಡ ಹಾರರ್. ಚೊಚ್ಚಿಲ ಚಿತ್ರದಲ್ಲಿಯೂ ಪತ್ರಕರ್ತೆಯ ಪಾತ್ರ, ಎರಡನೆಯ ಚಿತ್ರದಲ್ಲಿ ಸಹ ಪತ್ರಕರ್ತೆ. ಇದು ಕಾಕತಾಳೀಯವಷ್ಟೇ ಎನ್ನುವುದು ನಟಿ ಆವಂತಿಕಾ ಶೆಟ್ಟಿ ನೀಡುವ ಸ್ಪಷ್ಟನೆ. ಹೊಸಬರ ‘ರಂಗಿತರಂಗ’ದ ನಿರೀಕ್ಷೆಗೂ ಮೀರಿದ ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿ ತೇಲುತ್ತಿರುವ ಅವರ ಎರಡನೆಯ ಹೆಜ್ಜೆಗೆ ಅನುಭವಿಗಳ ಬಳಗ ಜತೆಯಾಗಿದೆ.
ಮಿಗಿಲಾಗಿ ಉಪೇಂದ್ರ ಅವರಂತಹ ನಟರ ಜತೆ ತೆರೆಹಂಚಿಕೊಳ್ಳುತ್ತಿರುವ ಖುಷಿ ಅವರಲ್ಲಿದೆ. ‘ರಂಗಿತರಂಗ’ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದ ಅವರು ಹಾರರ್–ಕಾಮಿಡಿ ‘ಕಲ್ಪನಾ–2’ದಲ್ಲಿಯೂ ಅಂಥದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿನ ಏಕರೂಪತೆ ಅವರಲ್ಲಿಯೂ ಗೊಂದಲ ಮೂಡಿಸಿತ್ತು. ಆದರೆ ಪತ್ರಕರ್ತೆಯ ಇಲ್ಲಿನ ಪಾತ್ರಕ್ಕೆ ವಿಭಿನ್ನ ಆಯಾಮವಿದೆ. ‘ರಂಗಿತರಂಗ’ ಗಂಭೀರ ಕಥನ ಹೊಂದಿದ್ದರೆ, ‘ಕಲ್ಪನಾ 2’ ನಗಿಸುತ್ತಲೇ ಹೆದರಿಸುವ ಚಿತ್ರ. ಮಿಗಿಲಾಗಿ ಇಲ್ಲಿ ವೃತ್ತಿಪರ ಅನುಭವಿಗಳ ತಂಡವಿದೆ.
ಭಾಷೆ ಕಲಿಕೆಯ ಸಾಹಸ
ಮಂಗಳೂರು ಮೂಲದವರಾದ ಆವಂತಿಕಾ ಬೆಳೆದಿದ್ದು ಮುಂಬೈನಲ್ಲಿ. ‘ರಂಗಿತರಂಗ’ದ ಜಗತ್ತಿಗೆ ಕಾಲಿಡುವವರೆಗೂ ಅವರಿಗೆ ಕನ್ನಡದ ಪರಿಚಯ ಇದ್ದದ್ದು ಅಷ್ಟಕಷ್ಟೇ. ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ನಟನೆಯ ಪಾಠ ಕಲಿತು ರಂಗಭೂಮಿಯ ಒಡನಾಟ, ಕಿರುಚಿತ್ರ, ಜಾಹೀರಾತು, ಕಾರ್ಯಕ್ರಮ ನಿರೂಪಣೆಗಳಂತಹ ಬಣ್ಣದ ನಂಟಿನೊಂದಿಗೇ ಅಂಟಿಕೊಂಡಿದ್ದವರು.
‘ರಂಗಿತರಂಗ’ದ ನಿರ್ದೇಶಕ ಅನೂಪ್ ಭಂಡಾರಿ ಕಳುಹಿಸಿದ ಚಿತ್ರದ ಸನ್ನಿವೇಶವೊಂದನ್ನು ನೋಡಿ ಆಡಿಷನ್‌ನಲ್ಲಿ ಭಾಗವಹಿಸಲು ಮುಂದಾದರು. ಒಂದೇ ದೃಶ್ಯದಲ್ಲಿ ಹಲವು ಭಾವಗಳನ್ನು ಹೊರಡಿಸಬೇಕಾದ ಸವಾಲನ್ನು ನಿಭಾಯಿಸಿದ ಬಳಿಕವೂ ತಾವು ಆಯ್ಕೆಯಾಗುವ ಬಗ್ಗೆ ಅವರಲ್ಲಿ ಅನುಮಾನವಿತ್ತು.
ಪತ್ರಕರ್ತೆಯ ಪಾತ್ರವೆಂದರೆ ಕುರ್ತಾದಂತಹ ಉಡುಪು ಧರಿಸಬೇಕು ಎಂದು ಕಲ್ಪಿಸಿಕೊಂಡಿದ್ದ ಅವರಿಗೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು ಎಂದು ಅನೂಪ್ ಹೇಳಿದ್ದು ಅಚ್ಚರಿ ಮೂಡಿಸಿತ್ತು. ಕನ್ನಡ ಬಾರದ ಅವರು ಭಾಷೆಯ ಕಲಿಕೆ ಶುರುಮಾಡಿದ್ದು ‘ರಂಗಿತರಂಗ’ ತಂಡದೊಂದಿಗೆ ಸೇರಿಕೊಂಡ ಬಳಿಕ. ಅಮ್ಮ ಹೇಳಿಕೊಟ್ಟ ಮಂಗಳೂರು ಶೈಲಿಯ ಕನ್ನಡದಿಂದ ಬೆಂಗಳೂರು ಶೈಲಿಯ ಕನ್ನಡಕ್ಕೆ ಉಚ್ಛಾರಣೆ ತಿದ್ದಲು ಅನೂಪ್ ಭಂಡಾರಿ ಸಾಕಷ್ಟು ಪ್ರಯತ್ನಿಸಿದ್ದರು.
ಕನ್ನಡದ ಸಂಭಾಷಣೆಯನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡು ಉರುಹೊಡೆದರು. ‘ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ನನಗೆ ಬೇರೆ ಯಾರೋ ದನಿ ನೀಡುವಂತೆ ಆಗಬಾರದು’ ಎನ್ನುವ ನೀತಿ ಅವರದು. ‘ರಂಗಿತರಂಗ’ದಲ್ಲಿ ಕಷ್ಟವಾದರೂ ತಾವೇ ಡಬ್ಬಿಂಗ್ ಮಾಡಿದರು. ‘ಕಲ್ಪನಾ 2’ ಒಪ್ಪಿಕೊಳ್ಳುವಾಗಲೂ ಅವರು ಮುಂದಿಟ್ಟ ಎರಡು ಷರತ್ತುಗಳೆಂದರೆ– ಸಂಪೂರ್ಣ ಸ್ಕ್ರಿಪ್ಟ್ ನೀಡಬೇಕು ಮತ್ತು ಡಬ್ಬಿಂಗ್ ನಾನೇ ಮಾಡಬೇಕು ಎನ್ನುವುದು.
ಮುಂಬೈನಲ್ಲಿದ್ದಾಗ ಕನ್ನಡ ಸಿನಿಮಾವನ್ನೇ ನೋಡದ ಅವರು ಈಗ ನಿರಂತರವಾಗಿ ಕನ್ನಡ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ಟೆಲಿವಿಷನ್ ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ. ಹೀಗಾಗಿ ಮಾತಿನಲ್ಲಿ ಕನ್ನಡ ಸಾಕಷ್ಟು ಸುಧಾರಿಸಿದೆ. ಆದರೆ ಓದು ಮತ್ತು ಬರಹ ಕಲಿಯಲು ಇನ್ನೂ ಸಾಧ್ಯವಾಗಿಲ್ಲ ಎನ್ನುತ್ತಾರೆ.
ಹೆಚ್ಚಿದ ಜವಾಬ್ದಾರಿ
‘ರಂಗಿತರಂಗ’ಕ್ಕಿಂತ ‘ಕಲ್ಪನಾ 2’ ಚಿತ್ರದ ಅನುಭವ ವಿಭಿನ್ನ ಎನ್ನುತ್ತಾರೆ ಅವರು. ‘ರಂಗಿತರಂಗ’ ಚಿತ್ರಕ್ಕಾಗಿ ಚಿತ್ರತಂಡ ತಿಂಗಳುಗಟ್ಟಲೆ ತಾಲೀಮು, ಕಾರ್ಯಾಗಾರ ನಡೆಸಿತ್ತು. ಹೊಸಬರೇ ಹೆಚ್ಚಾಗಿದ್ದರಿಂದ ಕುತೂಹಲ, ಸಣ್ಣನೆಯ ಭಯವಿತ್ತು. ಜತೆಗೆ ಅತೀವ ಎಚ್ಚರಿಕೆಯೂ ಇತ್ತು. ಕಥೆ ಓದಿದ್ದಾಗಲೇ ಈ ಚಿತ್ರ ಜನರಿಗೆ ಇಷ್ಟವಾಗುತ್ತದೆ ಎಂದೂ ಅವರಿಗೆ ಅನಿಸಿತ್ತು.
ಆದರೆ ಇಷ್ಟುದೊಡ್ಡ ಯಶಸ್ಸನ್ನು ಅವರು ನಿರೀಕ್ಷಿಸಿರಲಿಲ್ಲ. ಒಂದು ದೊಡ್ಡ ಗೆಲುವು ನೀಡಿದ ಪ್ರೇಕ್ಷಕರು ತಮ್ಮಿಂದ ಮುಂದೆ ಅಷ್ಟೇ ಉತ್ತಮವಾದುದ್ದನ್ನು ನಿರೀಕ್ಷಿಸುತ್ತಾರೆ. ಎರಡನೇ ಹೆಜ್ಜೆಯಲ್ಲಿಯೇ ಎಡವಿದರೆ, ಅದು ದೊಡ್ಡ ಸೋಲಾಗುತ್ತದೆ ಎಂಬುದರ ಅರಿವು ಅಟವರಲ್ಲಿದೆ. ‘ಕಲ್ಪನಾ 2’ ಚಿತ್ರದಲ್ಲಿ ಅನುಭವಿಗಳ ಒಡನಾಟ ಅವರಿಗೆ ಹೊಸ ಕಲಿಕೆಗೆ ಅನುವು ಮಾಡಿಕೊಟ್ಟಿದೆ.
ಸಂಪೂರ್ಣ ಕನ್ನಡದಲ್ಲಿಯೇ ಇದ್ದ ಕಥೆಯನ್ನು, ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಂಡು ತಯಾರಿ ನಡೆಸಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಸನ್ನಿವೇಶಕ್ಕೆ ಸಿದ್ಧಳಾಗುವುದು ವೃತ್ತಿಪರತೆಯಲ್ಲ ಎನ್ನುವ ಆವಂತಿಕಾ, ಮನೆಯಿಂದ ಹೊರಡುವಾಗಲೇ ಆ ದಿನದ ಸನ್ನಿವೇಶಕ್ಕೆ ಅಗತ್ಯವಾದ ಮೇಕಪ್, ಉಡುಪನ್ನು ಧರಿಸಿಕೊಂಡೇ ಹೊರಡುತ್ತಾರಂತೆ.
ಪರಭಾಷಾ ನಟಿಯರಿಗೆ ಉಚ್ಚಾರಣೆಗಳಲ್ಲಿ ನೀಡುವ ವಿನಾಯಿತಿ ನನಗೆ ಬೇಡ ಎನ್ನುವ ಧೋರಣೆ ಅವರದು. ಆವಂತಿಕಾ ಅವರಿಗೆ ರಫ್ ಆ್ಯಂಡ್ ಟಫ್ ಪಾತ್ರಗಳೆಂದರೆ ಅಚ್ಚುಮೆಚ್ಚು. ಕನ್ನಡದ ಜತೆಗೆ ಹಿಂದಿ ಚಿತ್ರಗಳಿಂದಲೂ ಆಹ್ವಾನ ಬರುತ್ತಿದೆ. ಹಿಂದಿ ಚಿತ್ರಕ್ಕಿಂತಲೂ ಇಷ್ಟವಾಗುವ ಕನ್ನಡದ ಕಥೆ ಸಿಕ್ಕರೆ ಕನ್ನಡ ಚಿತ್ರಕ್ಕೇ ಆದ್ಯತೆ ನೀಡುತ್ತೇನೆ ಎನ್ನುತ್ತಾರೆ ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.