ಭಾನುವಾರ, ಮಾರ್ಚ್ 7, 2021
22 °C

​ಬೆಳಕಿನ ಸ್ವಾವಲಂಬನೆಯ ಕುಗ್ರಾಮ

ಜಕ್ಕಣಿಕ್ಕಿ ಎಂ.ದಯಾನಂದ Updated:

ಅಕ್ಷರ ಗಾತ್ರ : | |

​ಬೆಳಕಿನ ಸ್ವಾವಲಂಬನೆಯ ಕುಗ್ರಾಮ

​ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ‘ಪರದೇಶ ಪ್ಪನ ಮಠ’ ಎಂಬ ಹೆಸರಿನ ಕುಗ್ರಾಮ ವೊಂದಿದೆ. ಜಿಲ್ಲಾ ಕೇಂದ್ರದಿಂದ ಕೇವಲ 60 ಕಿ.ಮೀ. ದೂರದಲ್ಲಿರುದ ಈ ಊರಿನಲ್ಲಿ ಹೆಸರಿಗೆ ತಕ್ಕಂತೆ ಯಾವ ಮಠವೂ ಇಲ್ಲ. ಆದರೆ ಎಷ್ಟೋ ವರ್ಷಗಳ ಹಿಂದೆ ಪರದೇಶಪ್ಪ ಎಂಬ ಸ್ವಾಮಿಗಳು ಇಲ್ಲಿನ ಗುಹೆಯ ಮಠದಲ್ಲಿ ವಾಸವಿದ್ದರು ಎಂದು ಇಲ್ಲಿನ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.ಈ ಕುಗ್ರಾಮದಲ್ಲಿ 20 ರಿಂದ 22 ಮನೆಗಳಿವೆ. ಜನಸಂಖ್ಯೆ 100ರಿಂದ 110. ಈ ಊರಿಗೊಂದು ಸರಿಯಾದ ರಸ್ತೆಯಿಲ್ಲ. ಮಳೆಗಾಲದಲ್ಲಿ ಈ ಊರು ತಲುಪುವುದು ಹರಸಾಹಸ. ಶಾಲೆ ಇದ್ದರೂ ಶಿಕ್ಷಕರು ಬರಲು ಸುಲಭಕ್ಕೆ ಒಪ್ಪುವುದಿಲ್ಲ. ಏನನ್ನೂ ಕೊಂಡುಕೊಳ್ಳುವುದಿದ್ದರೂ 5 ರಿಂದ 6 ಕಿ.ಮೀ. ದೂರ ಬರಬೇಕು. ಕಾಯಿಲೆ ಬಿದ್ದರೆ ದೇವರೇ ಗತಿ.ಇಷ್ಟೆಲ್ಲ ಕೊರತೆಗಳ ಈ ಗ್ರಾಮ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ.  ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ‘Electrifying India, With sun and small loans’ ಹೆಸರಿನಲ್ಲಿ ಚಿತ್ರ ಲೇಖನ ಪ್ರಕಟಿಸಿದೆ. ಈ ಊರಿಗೆ ವಿದ್ಯುತ್‌ ಸೌಕರ್ಯ ಇಲ್ಲ. ಆದರೆ ಮನೆಗಳಲ್ಲಿ ಸೌರ ಬೆಳಕು ಇದೆ. ಇದು ಸೌರಶಕ್ತಿ ಸ್ವಾವಲಂಬನೆಯ ಕುಗ್ರಾಮ.ಭದ್ರಾ ಅಭಯಾರಣ್ಯದಲ್ಲಿದೆ

ಪರದೇಶಪ್ಪನ ಮಠ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ಅಲ್ಲದೆ ದಟ್ಟ ಕಾಡಿನ ನಡುವೆ ಇರುವುದರಿಂದ ಇಲ್ಲಿಗೆ ವಿದ್ಯುತ್‌ ಮಾರ್ಗ ಒದಗಿಸಲು ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಹೀಗಾಗಿ ವಿದ್ಯುತ್‌ ಸಂಪರ್ಕವು  ಈ ಊರಿಗೆ ಮರೀಚಿಕೆಯಾಗಿದೆ. ಈಗ ಈ ಊರಿನಲ್ಲಿ ಕತ್ತಲೆಯಾದರೆ ಬೆಳಕು ಮೂಡತೊಡಗಿದೆ. ಅದು ಸೌರ ಬೆಳಕು. ಕೆಲ ವರ್ಷದ ಹಿಂದೆ ಸರ್ಕಾರ ಸೋಲಾರ್‌ ಬೀದಿ ದೀಪ ಒದಗಿಸಿದಾಗ ಊರಿನ ಜನ ಅಚ್ಚರಿಯಿಂದ ನೋಡಿದ್ದರು. ಬೀದಿಯಲ್ಲಿ ಬೆಳಕಾಯಿತೇ ಹೊರತು ಮನೆಗಳಲ್ಲಿ ಮಾತ್ರ ‘ಸೀಮೆ ಎಣ್ಣೆ ಬುಡ್ಡಿ’ ಯ ಬೆಳಕೇ ಇತ್ತು. ಬೀದಿಯ ಸೌರಲ್ಯಾಂಪ್‌ ಹುಳು ಹುಪ್ಪಟೆ ಆಕರ್ಷಿಸುವ ಕೇಂದ್ರವಾಗಿ ಬಿಟ್ಟಿತ್ತು.ಕಣ್ಣು ತೆರೆಸಿದ ಸೆಲ್ಕೊ

ಇಂತಹ ಕತ್ತಲೆಯ ಊರು ಸೆಲ್ಕೊ ಸೋಲಾರ್‌ ಕಂಪೆನಿ ಗಮನಕ್ಕೆ ಬಂತು. ಕಂಪೆನಿಯ ಹಿರಿಯ ವ್ಯವಸ್ಥಾಪಕ ಬಿ.ಪ್ರಸಾದ್ ಬಂದು ಸೋಲಾರ್ ದೀಪದ, ಸೀಮೆಎಣ್ಣೆ ಬುಡ್ಡಿಯಿಂದ ಆರೋಗ್ಯದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಗ್ರಾಮಸ್ಥರಲ್ಲಿ ಮನವರಿಕೆ ಮಾಡಿದರು. ‘ಕೇವಲ ₹12,800 ಕ್ಕೆ ಸೋಲಾರ್ ಪ್ಯಾನಲ್‌, ಬ್ಯಾಟರಿ, ಮೂರು ಬಲ್ಬ್‌ಗಳಿದ್ದರೆ ಮೂರದಿಂದ ನಾಲ್ಕು ಗಂಟೆ ವಿದ್ಯುತ್‌ ಸಿಗುತ್ತದೆ’ ಎಂದು ಪ್ರಸಾದ್‌ ಅವರು ಗ್ರಾಮಸ್ಥರ ಗಮನಕ್ಕೆ ತಂದರು. ಆದರೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವ ಶಕ್ತಿ ಗ್ರಾಮಸ್ಥರಲ್ಲಿ ಇರಲಿಲ್ಲ.ಪರದೇಶಪ್ಪನ ಮಠದ ಜನರಿಗೆ ಜಮೀನು ಇಲ್ಲ. ಅವರೆಲ್ಲ ಕೂಲಿ ಕೆಲಸಕ್ಕೆ ಬೇರೆಯವರ ತೋಟಕ್ಕೆ ಹೋಗಬೇಕು. ಮುಂಜಾನೆಯೇ ಏಳುವ ಕಾರ್ಮಿಕರು ಕಾಫಿ, ಕಾಳುಮೆಣಸು ತೋಟಗಳಿಗೆ ದುಡಿಯಲು ತೆರಳುತ್ತಾರೆ. ದುಡಿದ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಮಾಲೀ ಕರೇ ಸಾಲಕ್ಕೆ ಹಿಡಿದುಕೊಳ್ಳುತ್ತಾರೆ.ಇವರೆಲ್ಲ ಕೂಲಿ ಮುಗಿಸಿ ಮನೆಗೆ ಮರಳುವಾಗ ಕತ್ತಲಾವಸಿರುತ್ತದೆ. ಮಲೆನಾಡಿನಲ್ಲಿ ಅದರಲ್ಲೂ ಮಳೆಗಾಲದಲ್ಲಿ ಬೇಗನೇ ಕತ್ತಲಾಗುತ್ತದೆ. ಅಡುಗೆ ಕೆಲಸ, ಮಕ್ಕಳ ಓದು ಹೀಗೆ ಕತ್ತಲೆ ಓಡಿಸಲು ಅವರು ಅನಿವಾರ್ಯವಾಗಿ ಸೀಮೆಎಣ್ಣೆ ದೀಪದ ಮೊರೆ ಹೋಗಬೇಕು. ಪ್ರಸಾದ್‌ ಅವರ ಅವಿರತ ಶ್ರಮದಿಂದ ಗ್ರಾಮದ  10 ಮನೆಗಳಲ್ಲಿ ಸೋಲಾರ್ ಲ್ಯಾಂಪ್‌ ಅಳವಡಿ ಸಲು ಮೊದಲಿಗೆ ಒಪ್ಪಿ ಕೊಂಡರು.  ಶಾಲೆಗೆ ಹೋಗುತ್ತಿ ರುವ ಪ್ರತಿಮಾ, ಬುಡ್ಡಿ ದೀಪದ ಬದಲಿಗೆ ಸೋಲಾರ್‌ ಲ್ಯಾಂಪ್‌ ಬೆಳಕಲ್ಲಿ ಈಗ ಚೆನ್ನಾಗಿ ಓದುತ್ತಾಳೆ.ಸೀಮೆಎಣ್ಣೆ ದೀಪದ ದಟ್ಟ ಹೊಗೆಯಿಂದ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳಿವೆ. ಚರ್ಮಕ್ಕೆ ಹಾನಿ ಅಲ್ಲದೆ ಉಸಿರಾಟದ ತೊಂದರೆ ಸಹ ಕಾಡುತ್ತದೆ ಎಂದು ಪ್ರಸಾದ್ ಮನವರಿಕೆ ಮಾಡಿಕೊಟ್ಟಿದ್ದರು. ಊರಿಗೆ ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಮೊಬೈಲ್ ಚಾರ್ಜ್‌ ಮಾಡಲು ದೂರದ ಮನೆಗಳಿಗೆ ಹೋಗಬೇಕಿತ್ತು. ಆದರೆ ಈಗ ಎಲ್ಲವೂ ಬದ ಲಾಗಿದೆ. ಅವರದೇ ಮನೆಯಲ್ಲಿ ಮೊಬೈಲ್‌ ಚಾರ್ಜ್‌ ಆಗುತ್ತದೆ.ಬ್ಯಾಂಕ್‌ಗೆ ಗ್ರಾಮಸ್ಥರನ್ನು ಕರೆತಂದ ಸೆಲ್ಕೊ

ಸೌರ ಬೆಳಕು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದ ಸೆಲ್ಕೊ ಕಂಪೆನಿ ಗ್ರಾಮಸ್ಥರನ್ನು ಬ್ಯಾಂಕ್ ಕಡೆಗೆ ಕರೆತಂದಿತು. ಅಲ್ಲಿಯವರೆಗೆ ಬ್ಯಾಂಕ್, ಅಕೌಂಟ್‌, ಸಾಲ ಮುಂತಾದ ಪದಗಳನ್ನು ಕೇಳದ ಹಳ್ಳಿಯ ಜನರಿಗೆ ಹೊಸ ವ್ಯವಹಾರದ ಪರಿಚಯವಾಗ ತೊಡಗಿತು. ಚಿಕ್ಕಮಗಳೂರು ತಾಲ್ಲೂಕಿನ ಕಡಬಗೆರೆ ಎಂಬಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‌ಗೆ ಪರದೇಶಪ್ಪನ ಮಠದ ಗ್ರಾಮಸ್ಥರನ್ನು ಸೆಲ್ಕೊ ಕಂಪೆನಿ ಕರೆದೊಯ್ದು ಉಳಿತಾಯ ಖಾತೆ ಮಾಡಿ ಸೋಲಾರ್‌ ಲ್ಯಾಂಪ್‌ಗೆ ಸಾಲ ಕೊಡಿಸಿತು. ₹12,800 ರಲ್ಲಿ 2 ಸಾವಿರವನ್ನು ಸೆಲ್ಕೊ ಕಂಪೆನಿಯೇ ಭರಿಸಿತು. ಇದೆಲ್ಲದರಿಂದ ಉತ್ತೇಜಿತರಾದ ಇನ್ನಷ್ಟು ಗ್ರಾಮಸ್ಥರು ಈ ಬ್ಯಾಂಕ್‌ಗೆ ಬಂದು ಖಾತೆ ತೆರೆದು ಸಾಲ ಪಡೆದು ಸೋಲಾರ್‌ ಪರಿಕರ ಪಡೆದಿದ್ದಾರೆ. ಒಂದು ತಿಂಗಳು ಸೀಮೆಎಣ್ಣೆಗೆ ಕೊಡುವ ಹಣವನ್ನು ಬ್ಯಾಂಕ್‌ ಸಾಲಕ್ಕೆ ಜಮಾ ಮಾಡಿದರೆ ಅದರಿಂದ ಒಂದಷ್ಟು ತಿಂಗಳಲ್ಲಿ ಸೋಲಾರ್ ಪರಿಕರ ಸ್ವಂತದ್ದಾಗಿರುತ್ತದೆ.

*

2022ರೊಳಗೆ ವಿದ್ಯುದ್ದೀಕರಣ

2022ರೊಳಗೆ ದೇಶದ ಎಲ್ಲ ಗ್ರಾಮಗಳು ವಿದ್ಯುದ್ದೀಕರಣ ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಅಲ್ಲದೆ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚಿನ ಬಂಡವಾಳ ಹೂಡಿಕೆಯಾಗಬೇಕು ಎಂದು ಹೇಳಿದ್ದಾರೆ. ಸದ್ಯ ದೇಶದಲ್ಲಿ ಶೇ 1 ರಷ್ಟು ಸೋಲಾರ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.

*

ವಿದ್ಯುತ್‌ ಬೆಳಕು ಇಲ್ಲದೆ ನಾವು ಕತ್ತಲೆಯಲ್ಲಿದ್ದೆವು. ನನ್ನ ತಂಗಿಯರು ಓದಲು ಆಗುತ್ತಿರಲಿಲ್ಲ. ಈಗ ರಾತ್ರಿ 10 ರವರೆಗೆ ಸೋಲಾರ್ ಬೆಳಕು ಇರುತ್ತೆ. ಟೇಪ್ ರೇಕಾರ್ಡರ್‌, ಡಿವಿಡಿ ಪ್ಲೇಯರ್‌ ಬಂದಿವೆ.

–ಶಶಿಕುಮಾರ್‌, ಗ್ರಾಮಸ್ಥಪೂರಕ ಮಾಹಿತಿ/ ಚಿತ್ರ, ನ್ಯೂಯಾರ್ಕ್‌ ಟೈಮ್ಸ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.